ದುಃಖದಲ್ಲೂ ಮಾನವೀಯತೆ ಮೆರೆದ ಪಾಲಕರು

ಶಿವಮೊಗ್ಗ: ಪ್ರೀತಿಯಿಂದ ಸಾಕಿ ಬೆಳೆಸಿದ್ದ ಮುದ್ದಿನ ಮಗಳು ಅವಳು… ತಂದೆ-ತಾಯಿಗೆ ಆಕೆಯೇ ಸರ್ವಸ್ವ… ಇನ್ನೇನು ಭವಿಷ್ಯದ ಕನಸು ಕಟ್ಟಿಕೊಳ್ಳುತ್ತಿದ್ದ ಹದಿಹರೆಯದ ಬಾಲೆ… ಆದರೆ ಶನಿವಾರ ಬೆಳಗ್ಗೆ ಪ್ರವಾಸಕ್ಕೆ ಹೊರಟಿದ್ದ ಶಾಲಾ ಬಸ್ ಪಲ್ಟಿಯಾಗಿ ವಿಧಿಯಾಟಕ್ಕೆ ಬಲಿಯಾಗಿದ್ದಾಳೆ. ಈ ದುಃಖದಲ್ಲೂ ಪಾಲಕರು ಮಗಳ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದು ಭದ್ರಾವತಿ ಪೂರ್ಣಪ್ರಜ್ಞ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ದಿಯಾ ಶೇಖಾವತ್(16), ಹೆತ್ತವರಾದ ರಾಜೇಂದ್ರ ಸಿಂಗ್ ಶೇಖಾವತ್ ಮತ್ತು ವನಿತಾ ದಂಪತಿಯ ಕಣ್ಣೀರಿನ ಕಥೆ.

ರಾಜಸ್ಥಾನ ಮೂಲದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ರಾಜೇಂದ್ರ ಸಿಂಗ್ ಭದ್ರಾವತಿ ವಿಐಎಸ್​ಎಲ್ ಕಾರ್ಖಾನೆಯಲ್ಲಿ ಭದ್ರತಾ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ವಿಐಎಸ್​ಎಲ್ ಕ್ವಾರ್ಟ್ರಸ್​ನಲ್ಲಿ ವಾಸವಾಗಿದ್ದಾರೆ. ಶನಿವಾರ ಬೆಳಗಿನ ಜಾವ ಪ್ರವಾಸಕ್ಕೆಂದು ಮನೆಯಿಂದ ತೆರಳಿದ್ದ ಮಗಳು ಅಪಘಾತದಲ್ಲಿ ಮತ್ತೆ ಬಾರದ ಲೋಕಕ್ಕೆ ಹೋಗಿದ್ದರಿಂದ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಗಳ ಭವಿಷ್ಯದ ನೂರಾರು ಕನಸು ಕಟ್ಟಿಕೊಂಡಿದ್ದ ಪಾಲಕರಿಗೆ ಆಕೆಯ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದ್ದರೂ ಎದೆಗುಂದದೆ ಆಕೆಯ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ವಿದ್ಯಾರ್ಥಿನಿಯ ಎರಡು ಕಣ್ಣುಗಳನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಗಿದೆ. ಕಿಡ್ನಿಗಳನ್ನು ದಾನ ಮಾಡಲು ಮುಂದಾದರೂ ಅಪಘಾತದಲ್ಲಿ ಎರಡೂ ಕಿಡ್ನಿಗಳು ಹಾನಿಗೀಡಾಗಿದ್ದರಿಂದ ವೈದ್ಯರು ನಿರಾಕರಿಸಿದರು ಎಂದು ತಿಳಿದುಬಂದಿದೆ.

ತುಂಡಾದ ವಿದ್ಯಾರ್ಥಿನಿ ಬಲಗೈ

ದೇ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿನಿ ನಂದಿನಿ (16) ಬಲಗೈ ತುಂಡಾಗಿದೆ. ಭದ್ರಾವತಿ ಹೊಸಮನೆ ನಿವಾಸಿ, ಶಿಕ್ಷಕ ಸೋಮಶೇಖರ್ ಎಂಬುವರ ಪುತ್ರಿ ನಂದಿನಿ ಕೂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾಗಿದ್ದು, ಅಪಫಾತದಲ್ಲಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಪ್ರಾಣಾಪಾಯದಿಂದ ಪಾರಾಗಿದ್ದರೂ ತುಂಡಾಗಿರುವ ಕೈ ಜೋಡಿಸುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ

ಗಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಎನ್.ಆರ್.ಪುರ ಆಸ್ಪತ್ರೆಯಲ್ಲಿ ಮೃತ ದಿಯಾಳ ಮರಣೋತ್ತರ ಪರೀಕ್ಷೆ ಮಾಡಿದ ನಂತರ ಭದ್ರಾವತಿಯ ವಿಐಎಸ್​ಎಲ್ ಕ್ವಾಟ್ರಸ್​ಗೆ ಮೃತದೇಹ ತರಲಾಯಿತು. ಮೃತಳ ಪಾಲಕರು, ಸಂಬಂಧಿಕರು, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಕಂಬನಿ ಮಿಡಿದರು. ಇದೇ ವೇಳೆ ಗಾಯಾಳುಗಳನ್ನು ದಾಖಲು ಮಾಡಿರುವ ಖಾಸಗಿ ಆಸ್ಪತ್ರೆಯಲ್ಲಿ ದಿನವಿಡೀ ಪಾಲಕರು ಆತಂಕಗೊಂಡಿದ್ದರು. ಬಲಗೈ ಕಳೆದುಕೊಂಡಿರುವ ನಂದಿನಿ ಪಾಲಕರು ಪುತ್ರಿಯ ಸ್ಥಿತಿ ನೋಡಿ ರೋದಿಸುತ್ತಿದ್ದರು.

ಅಚ್ಚುಮೆಚ್ಚಿನ ವಿದ್ಯಾರ್ಥಿನಿ

ದಿಯಾ ಶಾಲೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಳು. ಪ್ರತಿಭಾವಂತೆಯಾಗಿದ್ದ ಅವಳು ಚರ್ಚಾ ಸ್ಪರ್ಧೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಳು. ಹಲವು ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಳು. ರಾಜಸ್ಥಾನ ಮೂಲದವಳಾಗಿದ್ದರೂ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಿದ್ದಳು. 4ನೇ ತರಗತಿಯಿಂದ ಪೂರ್ಣಪ್ರಜ್ಞ ಶಾಲೆಯಲ್ಲೇ ವ್ಯಾಸಂಗ ಮಾಡುತ್ತಿದ್ದಳು ಎಂದು ದಿಯಾಳ ಸಹಪಾಠಿಗಳು ‘ವಿಜಯವಾಣಿ’ಗೆ ತಿಳಿಸಿದರು.

ಬ್ಬಳೇ ಮಗಳು ದಿಯಾ. ಮುದ್ದು ಮಗಳು ಇಲ್ಲದಂತಾಗಿದ್ದಾಳೆ. ಈ ಹಿಂದೆಯೇ ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಅವಳು ಬರೆದುಕೊಟ್ಟಿದ್ದಳು. ದಿಯಾ ಇನ್ನು ನಮಗೆ ನೆನಪು ಮಾತ್ರ. ಅವಳ ಅಂಗಾಂಗಗಳನ್ನೂ ದಾನ ಮಾಡುತ್ತೇವೆ.

| ರಾಜೇಂದ್ರಸಿಂಗ್ ಶೇಖಾವತ್, ದಿಯಾಳ ತಂದೆ

ಪ್ರವಾಸಕ್ಕೆ ತೆರಳುತ್ತಿದ್ದ ಬಸ್‌ ಪಲ್ಟಿಯಾಗಿ ವಿದ್ಯಾರ್ಥಿನಿ ಸಾವು, 20 ಮಕ್ಕಳಿಗೆ ಗಾಯ