ಸದಲಗಾದಲ್ಲಿ ಕೆರೆ ಮಾಯ

ಬೆಂಗಳೂರು: ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆಯೊಂದು ಸಂಪೂರ್ಣ ಮಾಯವಾಗಿದೆ. ಅಲ್ಲಿ ಸ್ಥಳೀಯರು, ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೂಡಲೇ ಅವುಗಳನ್ನು ತೆರವುಗೊಳಿಸಿ, ಕೆರೆಯನ್ನು ಸಂರಕ್ಷಿಸಬೇಕು ಎಂದು ಮೇಲ್ಮನೆಯ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು.

ಮಂಗಳವಾರ ಮೇಲ್ಮನೆಯಲ್ಲಿ ನಿಯಮ 72ರಡಿಯಲ್ಲಿ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಮಂಡಿಸಿದ ಗಮನ ಸೆಳೆಯುವ ಸೂಚನೆಯ ವೇಳೆಯಲ್ಲಿ ಕವಟಗಿಮಠ ಅವರು, ಈ ವಿಷಯ ಪ್ರಸ್ತಾಪಿಸಿದರು. ಮೊದಲು ಸದಲಗಾ ಗ್ರಾಮ ಪಂಚಾಯಿತಿ ಆಗಿತ್ತು. ಈಗ ಅದು ಪಟ್ಟಣ ಪಂಚಾಯಿತಿ ಆಗಿರುವುದರಿಂದ ಅಲ್ಲಿ ಭೂಮಿ ಬೆಲೆ ಜಾಸ್ತಿಯಾಗಿದೆ. ಅದಕ್ಕಾಗಿ ಕೆರೆ ಒತ್ತುವರಿ ಮಾಡಿ, ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಈ ವಿಷಯದ ಕುರಿತು ಸಂಬಂಧಪಟ್ಟ ಸಚಿವರಿಗೆ ಲಿಖಿತ ಪತ್ರವೊಂದನ್ನು ಕೊಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.