ಸಂಸತ್​ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸುವಾಗಲೂ ಸಾಧ್ವಿ ಪ್ರಜ್ಞಾ ಸಿಂಗ್​ ವಿವಾದ, ಆಗಿದ್ದಾದರೂ ಏನು?

ನವದೆಹಲಿ: ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಮತ್ತು ವಿವಾದಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭೋಪಾಲ್​ ಸಂಸದೆಯಾಗಿ ಸಂಸತ್​ ಭವನದಲ್ಲಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲೂ ಅವರು ತಮ್ಮ ಈ ಗುಣವನ್ನು ಮುಂದುವರಿಸಿದ್ದಾರೆ.

ಆಗಿದ್ದೇನೆಂದರೆ, ಲೋಕಸಭೆಯ ಹಂಗಾಮಿ ಅಧ್ಯಕ್ಷ ವೀರೇಂದ್ರ ಕುಮಾರ್​ ಪ್ರಮಾಣವಚನ ಸ್ವೀಕರಿಸಲು ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಅವರನ್ನು ಆಹ್ವಾನಿಸಿದರು. ತಮ್ಮ ಹೆಸರಿನೊಂದಿಗೆ ತಮ್ಮ ಧಾರ್ಮಿಕ ಗುರು ಸ್ವಾಮಿ ಪೂರ್ಣ ಚೇತನಾನಂದ ಅವಧೇಶಾನಂದ ಗಿರಿ ಅವರ ಹೆಸರನ್ನು ಸೇರಿಸಿಕೊಂಡು, ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಪ್ರತಿಪಕ್ಷಗಳಿಗೆ ಸಹ್ಯವಾಗಲಿಲ್ಲ. ಹಾಗಾಗಿ ಪ್ರತಿಪಕ್ಷಗಳ ಸದಸ್ಯರು ಇದನ್ನು ಆಕ್ಷೇಪಿಸಿ, ಸಾಧ್ವಿ ಅವರನ್ನು ಟೀಕಿಸಲಾರಂಭಿಸಿದರು. ಈ ಹಿನ್ನೆಲೆಯಲ್ಲಿ ಹಂಗಾಮಿ ಸಭಾಧ್ಯಕ್ಷರು ಸಾಧ್ವಿ ಅವರ ನಿಜ ಹೆಸರು ಏನೆಂಬುದನ್ನು ಕೇಳಿ ತಿಳಿಯಲು ಮುಂದಾದರು. ಆದರೆ, ಸದನದಲ್ಲಿ ಭಾರಿ ಗಲಾಟೆ ಮುಂದುವರಿದಿದ್ದರಿಂದ, ಚುನಾವಣಾ ಆಯೋಗ ನೀಡಿರುವ ವಿಜಯ ಪತ್ರದಲ್ಲಿರುವ ಹೆಸರನ್ನು ಮಾತ್ರವೇ ದಾಖಲಿಸಿಕೊಳ್ಳುವಂತೆ ಲೋಕಸಭಾ ಅಧಿಕಾರಿಗಳಿಗೆ ಸೂಚಿಸಿದರು.

ಭೋಪಾಲ್​ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಂದರ್ಭದಲ್ಲಿ ತಾವು ಕೊಟ್ಟ ಶಾಪದಿಂದಲೇ ಮುಂಬೈ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್​ ಕರ್ಕರೆ ಉಗ್ರನ ಗುಂಡಿಗೆ ಬಲಿಯಾಗಿದ್ದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ, ಮಹಾತ್ಮಾ ಗಾಂಧಿ ಅವರನ್ನು ಕೊಂದ ನಾಥೂರಾಂ ಗೋಡ್ಸೆ ಒಬ್ಬ ದೇಶಭಕ್ತ ಎಂದು ಅವರು ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *