ಅನಾರೋಗ್ಯ ಪೀಡಿತ ಪ್ರಜ್ಞಾ ಸಿಂಗ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ, ಕೋರ್ಟ್​​ಗೆ ಹಾಜರಾಗುತ್ತಿಲ್ಲ ಎಂದು ಎನ್ಐಎಗೆ ತಕರಾರು ಅರ್ಜಿ

ಭೋಪಾಲ್: ಲೋಕಸಭಾ ಚುನಾವಣೆಯಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸ್ಪರ್ಧೆ ವಿರೋಧಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾದ ಬೆನ್ನಲ್ಲೇ ಇದೀಗ ಮತ್ತೆ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ)ಗೆ ಮಾಲೇಗಾಂವ್‌ ಸ್ಫೋಟದಲ್ಲಿ ಮೃತಪಟ್ಟ ಸಂತ್ರಸ್ತನ ತಂದೆ ದೂರು ಸಲ್ಲಿಸಿ ಪ್ರಜ್ಞಾ ಸಿಂಗ್‌ ಸ್ಪರ್ಧೆಗೆ ತಡೆ ನೀಡಬೇಕು ಎಂದು ಕೋರಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್‌ ಘೋಷಣೆಯಾದ ಎರಡೇ ದಿನಗಳಲ್ಲಿ ಮಾಲೇಗಾಂವ್‌ ಸ್ಫೋಟದಲ್ಲಿ ಮಗನನ್ನು ಕಳೆದುಕೊಂಡ ತಂದೆ ನಿಸಾರ್‌ ಸಯೀದ್‌ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಜಾಮೀನಿನ ಮೇಲೆ ಹೊರಗಿರುವ ಸಾಧ್ವಿ ಮುಂಬೈ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಬೇಕು ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯನ್ನು ನಿರ್ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ.

ಸಾಧ್ವಿ ಪ್ರಜ್ಞಾ ಅವರು ಅನಾರೋಗ್ಯ ಮತ್ತು ಸ್ತನ ಕ್ಯಾನ್ಸರ್‌ನ ರೋಗಿ ಎಂಬ ನೆಪವೊಡ್ಡಿ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗುತ್ತಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿಯಾಗಿರುವ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಜೈಲಿನಿಂದ ಬಿಡುಗಡೆಯಾದಂದಿನಿಂದಲೂ “ಆಕ್ಷೇಪಾರ್ಹ ಮತ್ತು ಪ್ರಚೋದನಾಕಾರಿ ಭಾಷಣಗಳನ್ನು” ಮಾಡುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ಇಷ್ಟೊಂದು ದುರ್ಬರವಾದ ಬೇಸಿಗೆಯಲ್ಲೂ ಚುನಾವಣೆಯಲ್ಲಿ ಪಾಲ್ಗೊಳ್ಳಲು ಉತ್ತಮ ಆರೋಗ್ಯ ಹೊಂದಿದ್ದಾರೆ. ಹೀಗಿದ್ದರೂ ನ್ಯಾಯಾಲಯವನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಮತ್ತು ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಬೇಕು ಎಂದು ಸಯೀದ್‌ ಒತ್ತಾಯಿಸಿದ್ದಾರೆ.

ನಿನ್ನೆಯಷ್ಟೇ ದೇಶ ವಿರೋಧಿ ಹಾಗೂ ಭಯೋತ್ಪಾದನೆ ಚಟುವಟಿಕೆಯ ಆರೋಪಿಗೆ ಟಿಕೆಟ್ ನೀಡಿರುವುದು ಸರಿಯಲ್ಲ. ಹೀಗಾಗಿ ಸ್ಪರ್ಧೆಯಿಂದ ಅವರನ್ನು ವಜಾಗೊಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ತೆಹ್ಸೀನ್ ಪೂನಾವಾಲಾ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಹಿರಿಯ ಬಿಜೆಪಿ ನಾಯಕ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ರಾಮ್‌ಲಾಲ್‌ ಅವರನ್ನು ಭೇಟಿ ಮಾಡಿ ಬಿಜೆಪಿಗೆ ಸೇರ್ಪಡೆಯಾದ ಸಾಧ್ವಿ ಪ್ರಜ್ಞಾ ಸಿಂಗ್‌, ಮಧ್ಯಪ್ರದೇಶದ ರಾಜಧಾನಿ ಭೂಪಾಲ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಎದುರಾಳಿಯಾಗಿ ಸ್ಪರ್ಧಿಸುವುದಾಗಿ ಬಿಜೆಪಿ ನಾಯಕರು ತಿಳಿಸಿದ್ದರು.

2008ರಲ್ಲಿ ಮಹಾರಾಷ್ಟ್ರದ ಮಲೇಗಾಂವ್‌ನಲ್ಲಿ ಎರಡು ಸೈಕಲ್‌ಗಳಲ್ಲಿ ಅಳವಡಿಸಲಾಗಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಏಳು ಜನರು ಮೃತಪಟ್ಟು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸಾಧ್ವಿ ಪ್ರಜ್ಞಾ ಮತ್ತು ಲೆ. ಕರ್ನಲ್‌ ಪ್ರಸಾದ್‌ ಶ್ರೀಕಾಂತ್‌ ಪುರೋಹಿತ್‌ ಇಬ್ಬರು ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು, 9 ವರ್ಷ ಜೈಲುವಾಸವನ್ನು ಅನುಭವಿಸಿದ ಬಳಿಕ ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ. (ಏಜೆನ್ಸೀಸ್)