ಎಚ್‌ ಡಿ ಕುಮಾರಸ್ವಾಮಿ ನಾಳೆವರೆಗೆ ಮಾತ್ರ ಸಿಎಂ ಆಗಿರುತ್ತಾರೆ, ಹೊಸ ಸರ್ಕಾರ ರಚನೆಯಾಗಲಿದೆ!

ಬೆಂಗಳೂರು: ಸಿಎಂ ಕುಮಾರಸ್ವಾಮಿ ನಾಳೆ ಸಂಜೆ ಅಥವಾ ನಾಡಿದ್ದು ಬೆಳಗ್ಗೆ ತನಕ ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ. ಬಳಿಕ ಹೊಸ ಸರ್ಕಾರ ರಚನೆ ಆಗಲಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೊಸ ಬಾಂಬ್‌ ಸಿಡಿಸಿದ್ದಾರೆ.

ದೇವೇಗೌಡರು, ಚಂದ್ರಬಾಬು ನಾಯ್ಡು ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ್ಯಾವ ರಾಜ್ಯದಲ್ಲಿ ಫಲಿತಾಂಶ ಪ್ರಕಟವಾದ ಬಳಿಕ ಸಿಎಂಗಳು ಅಧಿಕಾರ ಕಳೆದುಕೊಳ್ಳುತ್ತಾರೋ ಅವರು ತಿರುಗಾಡಲೇಬೇಕು. ಚಂದ್ರಬಾಬು ನಾಯ್ಡು ಅವರಿಗೆ ಬೇರೆ ಕೆಲಸ ಇಲ್ಲ. ಅವರ ಮನಸ್ಥಿತಿಯೇ ಕುಮಾರಸ್ವಾಮಿ ಅವರಲ್ಲೂ ಇದೆ. ನಾಯ್ಡು ಇಮೇಜ್ ಕಳೆದುಕೊಂಡಿದ್ದಾರೆ. ಅಧಿಕಾರ ಕಳೆದುಕೊಳ್ಳುತ್ತಿರುವವರು ಒಂದೆಡೆ ಸೇರುತ್ತಿದ್ದಾರೆ. ನಾಳೆ ಸಂಜೆವರೆಗೆ ಮಾತ್ರ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ. ನಾಡಿದ್ದು ಕುಮಾರಸ್ವಾಮಿ ರಾಜೀನಾಮೆ ಕೊಡುತ್ತಾರೆ. ಹೊಸ ಸರ್ಕಾರಕ್ಕೆ ವೇದಿಕೆ ಸಿದ್ಧ ಆಗುತ್ತದೆ ಎಂದು ಹೇಳಿದರು.

ರೋಷನ್ ಬೇಗ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸತ್ಯವನ್ನು ಬಹಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಇವರಿಗೂ ಸಹಿಸಿಕೊಂಡು ಸಾಕಾಗಿದೆ. ರಾಜ್ಯ ಕಂಡ ಅತ್ಯಂತ ದುರಹಂಕಾರಿ ಮಾಜಿ ಸಿಎಂ ಅಂದರೆ ಸಿದ್ದರಾಮಯ್ಯ ಎಂದು ದೂರಿದರು.

ನನ್ನ ಕ್ಷೇತ್ರದಲ್ಲಿ ನನ್ನ ಪಕ್ಷದ ಒಬ್ಬ ಶಾಸಕರು ಮಾತ್ರ ಇದ್ದರು. ಉಳಿದ ಏಳು ಜನರು ನನ್ನ ವಿರೋಧಿ ಶಾಸಕರು. ನನಗೆ ಪೂರ್ಣ ಗೆಲುವಿನ ವಿಶ್ವಾಸವಿದೆ. ಚುನಾವಣೆಯ ಕೊನೆಯ ಎರಡು ದಿನ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರು ತಮ್ಮ ಎಲ್ಲ ಚಟುವಟಿಕೆಗಳನ್ನು ನಡೆಸಿದ್ದಾರೆ. ಕಳೆದ ಬಾರಿಗಿಂತ ಗೆಲುವಿನ‌ ಅಂತರದಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು ಎಂದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *