ರೊಕ್ಕದಿಂದ ದುಃಖ!

ಜೀವನ ನಿರ್ವಹಣೆಗೆ ದುಡ್ಡು ಬೇಕು; ಆದರೆ ಅದು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಜಮೆಗೊಂಡುಬಿಟ್ಟರೆ ಜೀವಕ್ಕೇ ಸಂಚಕಾರ ಎಂಬುದೊಂದು ಗ್ರಹಿಕೆಯಿದೆ. ಇದಕ್ಕೆ ಪುಷ್ಟಿನೀಡುವ ಸಂಗತಿಯೊಂದು ಜಮೈಕಾದಿಂದ ವರದಿಯಾಗಿದೆ. ಆತನ ಹೆಸರು ಕ್ಯಾಂಪ್​ಬೆಲ್. 158 ದಶಲಕ್ಷ ಜಮೈಕನ್ ಡಾಲರ್ ಮೊತ್ತದ ಲಾಟರಿ ಬಹುಮಾನವಾಗಿ ಅವನಿಗೆ ಸಂದಿತು. ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ ಆತ, ಬಹುಮಾನದ ಚೆಕ್ ಸ್ವೀಕರಿಸುವ ಹೊತ್ತಿಗಾಗಲೇ ತಲ್ಲಣದಲ್ಲಿ ತಡವರಿಸುತ್ತಿದ್ದ. ಕಾರಣ, ತನಗೆ ಭಾರಿ ಹಣ ಬಂದಿರುವುದನ್ನು ಕಂಡವರ ಪೈಕಿ ಯಾರಾದರೂ ದುರುಳರು ಹಲ್ಲೆಮಾಡಿ ಜೀವಬೆದರಿಕೆ ಒಡ್ಡಿ ದುಡ್ಡುಪೀಕುವಂತೆ ಪೀಡಿಸಿದರೆ ಎಂಬ ಭಯ ಅವನನ್ನು ಆವರಿಸಿತ್ತು. ಹಾಗಂತ ಬಹುಮಾನದ ಚೆಕ್ ಬಿಡೋಕ್ಕಾಗುತ್ಯೇ? ಸರಿ, ಆತ ಒಂದು ಉಪಾಯ ಮಾಡಿದ. ‘ಹಾರರ್’ ಚಿತ್ರಗಳಲ್ಲಿ ಕಾಣಬರುವಂಥ ಮುಖವಾಡ ಧರಿಸಿ, ತನ್ನ ವಾಸ್ತವಿಕ ಚಹರೆಯನ್ನು ಮರೆಮಾಡಿಕೊಂಡು ಚೆಕ್ ಸ್ವೀಕರಿಸಿದ. ಈ ಹಣದಲ್ಲಿ ಮನೆಯನ್ನು ಖರೀದಿಸುವುದರ ಜತೆಗೆ, ತನ್ನ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವ ಬಯಕೆಯೂ ಅವನಿಗಿದೆಯಂತೆ. ಸರಿಬಿಡಿ. ಅವನಿಗೆ ‘ಆಲ್ ದಿ ಬೆಸ್ಟ್’ ಅನ್ನೋದ್ರಿಂದ ನಾವು ಕಳಕೊಳ್ಳೋದಾದ್ರೂ ಏನು?!