ತೆಂಡುಲ್ಕರ್​ ಬಳಿ ಇದ್ದ ಅಪರೂಪದ ಬಿಎಂಡಬ್ಲ್ಯೂ ಕಾರು ಮಾರಾಟಕ್ಕಿದೆಯಂತೆ

ನವದೆಹಲಿ: ಭಾರತೀಯ ಕ್ರಿಕೆಟ್​ ರಂಗದ ದಂತಕತೆ ಸಚಿನ್​ ತೆಂಡುಲ್ಕರ್​ ಅವರಿಂದ ಬಳಸಲ್ಪಟ್ಟ ಕಾರೊಂದು ಮಾರಾಟಕ್ಕಿದೆ. ಅತಿ ಅಪರೂಪದ ‘ಬಿಎಂಡಬ್ಲ್ಯೂ ಎಕ್ಸ್​​5 ಎಂ’ ಆವೃತ್ತಿಯ ದುಬಾರಿ, ಐಷಾರಾಮಿ ಮತ್ತು ಅತ್ಯಂತ ಶಕ್ತಿಶಾಲಿ ಕಾರನ್ನು ಸದ್ಯ ಮಾರಾಟ ಮಾಡಲಾಗುತ್ತಿದೆ.

ಜಗತ್ತಿನ ಐಷಾರಾಮಿ ಮತ್ತು ದುಬಾರಿ ವಿದೇಶಿ ಕಾರುಗಳೇ ಇರುವ ಗ್ಯಾರೇಜು ಹೊಂದಿರುವ ಕಾರು ಪ್ರಿಯ ಸಚಿನ್​ ತೆಂಡುಲ್ಕರ್​ ಪ್ರಖ್ಯಾತ ಕಾರು ತಯಾರಕಾ ಸಂಸ್ಥೆ ಬಿಎಂಡಬ್ಲ್ಯೂಗೆ 2012ರಿಂದ ಬ್ರ್ಯಾಂಡ್​ ಅಂಬಾಸಿಡರ್. ಆದರೆ ಅದಕ್ಕೂ ಮೊದಲೇ, ಅಂದರೆ, 2002ರಿಂದಲೇ ಬಿಎಂಡಬ್ಲ್ಯೂಕಾರುಗಳನ್ನು ಬಳಸುತ್ತಿದ್ದಾರೆ. ಹೀಗೆ 2002ರಲ್ಲಿ ಅವರು ಖರೀದಿಸಿದ್ದ ನೀಲಿ ಬಣ್ಣದ ಬಿಎಂಡಬ್ಲ್ಯೂ ಎಕ್ಸ್​​5 ಎಂ ಅವೃತ್ತಿಯ ಕಾರನ್ನು ಈಗ ಮಾರಾಟಕ್ಕಿಡಲಾಗಿದೆ.

ಸದ್ಯ ಮಾರಾಟವಾಗುತ್ತಿರುವ ಈ ಕಾರು ಭಾರತದಲ್ಲೇ ಅತ್ಯಂತ ಅಪರೂಪದ್ದು ಎನ್ನಲಾಗಿದೆ. ಅಲ್ಲದೆ, ಈಗ ಬಳಕೆಯಲ್ಲಿರುವ ಬಿಎಂಡಬ್ಲ್ಯೂ ಕಾರುಗಳಿಗಿಂತಲೂ ಈ ಆವೃತ್ತಿ ಅತ್ಯಂತ ಶಕ್ತಿಶಾಲಿಯೂ ಹೌದು. ಕಾರು ಮಾರಾಟಕ್ಕೆ ನೀಡಲಾಗಿರುವ ಜಾಹೀರಾತಿನ ಪ್ರಕಾರ ಈ ಕಾರು ಈಗಾಗಲೇ ನಾಲ್ಕು ಮಾಲೀಕರನ್ನು ಕಂಡಿದೆ! ಅಂದರೆ, ಸಚಿನ್​ ಅವರನ್ನೂ ಒಳಗೊಂಡಂತೆ ಈ ಕಾರನ್ನು ನಾಲ್ವರು ಮಾಲೀಕರು ಈಗಾಗಲೇ ಮೂರು ಬಾರಿ ಮಾರಾಟ ಮಾಡಿದ್ದಾರೆ. ಸದ್ಯ ಇದರ ಬೆಲೆ 21 ಲಕ್ಷ ರೂಪಾಯಿಗಳಾಗಿದ್ದು, 72,000 ಕಿ.ಮೀಗಳನ್ನು ಈಗಾಗಲೇ ಪೂರೈಸಿದಿದೆ.

2002ರಲ್ಲಿ ಈ ಕಾರನ್ನು ಖರೀದಿಸಿದ್ದ ಸಚಿನ್​ ತೆಂಡುಲ್ಕರ್​ ಅವರು ನಿತ್ಯವೂ ಬಳಸುತ್ತಿದ್ದರು. ಹಲವು ಬಾರಿ ಅವರು ಇದೇ ಕಾರಿನಲ್ಲೇ ಮಾಧ್ಯಮಗಳಿಗೂ ಕಾಣಿಸಿಕೊಂಡಿದ್ದರು.