ವಿರಾಟ್‌ ಕೊಹ್ಲಿ ರನ್‌ಗಳಿಗಾಗಿ ಹಸಿವನ್ನು ಉಳಿಸಿಕೊಳ್ಳಲಿ ಎಂದ್ರು ಸಚಿನ್‌!

ಮುಂಬೈ: ಕಳೆದ ವಾರ ಎಡ್ಜ್‌ಬಾಸ್ಟನ್ ನಡೆದ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ಒಂದು ಸಲಹೆ ನೀಡಿದ್ದಾರೆ.

31 ರನ್‌ಗಳಿಂದ ಇಗ್ಲೆಂಡ್‌ ವಿರುದ್ಧ ಭಾರತ ಸೋತಿದ್ದರೂ, ಕೂಡ ವಿರಾಟ್‌ ಕೊಹ್ಲಿಯ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೆಂಡುಲ್ಕರ್‌ ಅವರ ಗಮನ ಸೆಳೆದಿದ್ದು, ಕೊಹ್ಲಿ ಅವರು ಅದ್ಭುತವಾಗಿ ಆಟವಾಡುತ್ತಿದ್ದಾರೆ. ಅದರಂತೆ ಮುಂದುವರಿಯಲಿ ಎಂದು ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ನಿಮ್ಮ ಸುತ್ತ ಏನಾಗುತ್ತಿದೆ ಎಂಬುದರ ಕುರಿತು ಚಿಂತಿಸಬೇಡಿ. ನಿಮ್ಮ ಸಾಧನೆಗೆ ಏನು ಬೇಕೆಂಬುದನ್ನು ಮಾತ್ರ ಗಮನಿಸಿ. ನಿಮ್ಮ ಹೃದಯಕ್ಕೆ ನಿಮಗೆ ಮಾರ್ಗದರ್ಶನ ಮಾಡಲು ಅವಕಾಶ ಕಲ್ಪಿಸಿ. ನಿಮ್ಮ ದಾರಿಯಲ್ಲಿ ಸಾಕಷ್ಟು ಸಂಗತಿಗಳು ಎದುರಾಗುತ್ತವೆ ಮತ್ತು ನಡೆಯುತ್ತವೆ. ಆದರೆ, ಅಂತಿಮವಾಗಿ ನಿಮ್ಮ ಜೀವನದಲ್ಲಿ ಏನನ್ನು ಬಯಸುತ್ತೀರಿ ಎಂಬುದರ ಮೇಲೆ ಫಲಿತಾಂಶಗಳು ಹೊರಬರುತ್ತವೆ ಎಂದು ಸಚಿನ್‌ ಕೊಹ್ಲಿಗೆ ಹೇಳಿದ್ದಾರೆ.

ಎಡ್‌ಬಾಸ್ಟನ್‌ನಲ್ಲಿ ತಂಡದ ನಿರಾಶಾದಾಯಕ ಸೋಲಿನ ನಡುವೆಯೂ ಕೊಹ್ಲಿ ಅವರು ತಮ್ಮ ವೈಯಕ್ತಿಕ ಸಾಧನೆಯ ಬಗ್ಗೆ ಹೆಮ್ಮೆ ಪಡಬೇಕು. ಅಲ್ಲದೆ, ನನ್ನ ವೈಯಕ್ತಿಕ ಅನುಭವದಿಂದ ಒಂದು ಮಾತನ್ನು ಹೇಳುತ್ತೇನೆ. ಎಷ್ಟು ರನ್‌ಗಳನ್ನು ಪಡೆದಿದ್ದೇವೆ ಎನ್ನುವುದನ್ನು ಪಕ್ಕಕ್ಕಿಟ್ಟು ಸದಾ ರನ್‌ಗಳಿಗಾಗಿ ಹಸಿವನ್ನು ಹೊಂದಿರಬೇಕು. ಬ್ಯಾಟ್ಸ್‌ಮನ್‌ ಆಗಿ ತೃಪ್ತಿಯನ್ನು ಕಂಡಿದ್ದೇ ಆದರೆ ಅವನ ಅವನತಿಯೂ ಅಲ್ಲಿಂದಲೇ ಆರಂಭವಾಗುತ್ತದೆ. ಹಾಗಾಗಿ ನೀವು ತೃಪ್ತಿಯನ್ನು ಕಾಣಬೇಡಿ. ಬದಲಿಗೆ ಕೇವಲ ಸಂತೋಷದಿಂದಿರಿ ಎಂದಿದ್ದಾರೆ.

5 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯವನ್ನು ಗುರುವಾರ ಲಾರ್ಡ್ಸ್‌ನಲ್ಲಿ ಆಡಲಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *