ಪ್ರಧಾನಿ ಮೋದಿಯ ಕ್ರಿಕೆಟ್​ ರಾಜತಾಂತ್ರಿಕ ನಡೆಗೆ ಸಚಿನ್​ ತೆಂಡೂಲ್ಕರ್​ ಅಭಿನಂದನೆ

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ ಟೀಂ ಇಂಡಿಯಾ ಆಟಗಾರರ ಹಸ್ತಾಕ್ಷರ ಇರುವ ಬ್ಯಾಟ್​​ ಅನ್ನು ಮಾಲ್ಡೀವ್ಸ್​ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿ ಕ್ರಿಕೆಟ್​ಗೆ ಉತ್ತೇಜನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಅವರು ಶ್ಲಾಘಿಸಿದ್ದಾರೆ.

ಮಂಗಳವಾರ ರಾತ್ರಿ ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿರುವ ಸಚಿನ್​, ವಿಶ್ವಕಪ್​ ಸಮಯದಲ್ಲಿ ಪ್ರಧಾನಿ ಅವರ ‘ಕ್ರಿಕೆಟ್​ ರಾಜತಾಂತ್ರಿಕ’ ನಡೆ ಒಂದು ಉತ್ತಮ ಉದಾಹರಣೆಯಾಗಿದೆ. ಶ್ರೀಘ್ರದಲ್ಲೇ ಕ್ರಿಕೆಟ್​ ಮ್ಯಾಪ್​ನಲ್ಲಿ ಮಾಲ್ಡೀವ್ಸ್​ ಸೇರುವುದನ್ನು ಎದುರು ನೋಡುತ್ತಿದ್ದೇನೆ ಎಂದು ಸಚಿನ್​ ತಿಳಿಸಿದ್ದಾರೆ.

ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡ ಪ್ರಧಾನಿ ಮೋದಿ ಅವರು ಶನಿವಾರ ದ್ವೀಪ ರಾಷ್ಟ್ರ ಮಾಲ್ಡೀವ್ಸ್​ಗೆ ಭೇಟಿ ನೀಡಿ, ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್​ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಟೀಂ ಇಂಡಿಯಾ ಆಟಗಾರರ ಹಸ್ತಾಕ್ಷರವಿರುವ ಬ್ಯಾಟ್​ ಅನ್ನು ಮಾಲ್ಡೀವ್ಸ್​ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿ, ಕ್ರೀಡಾ ಉತ್ತೇಜನಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಬಗ್ಗೆ ಟ್ವೀಟ್​ ಮಾಡಿದ್ದ ಪ್ರಧಾನಿ, ನನ್ನ ಸ್ನೇಹಿತ ಸೊಲಿಹ್ ಅವರು ಬಹುದೊಡ್ಡ ಕ್ರಿಕೆಟ್​ ಅಭಿಮಾನಿಯಾಗಿದ್ದು, ಪ್ರಸ್ತುತ ವಿಶ್ವಕಪ್ ಆಡುತ್ತಿರುವ​ ಟೀಂ ಇಂಡಿಯಾ ಆಟಗಾರರ ಹಸ್ತಾಕ್ಷರ ಇರುವ ಬ್ಯಾಟ್​ ಅನ್ನು ಈ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು. (ಏಜೆನ್ಸೀಸ್​)

https://twitter.com/sachin_rt/status/1138483310466916352

Leave a Reply

Your email address will not be published. Required fields are marked *