ಗುರುವಿನ ಪಾರ್ಥಿವ ಶರೀರದ ಮೆರವಣಿಗೆಗೆ ಹೆಗಲುಕೊಟ್ಟ ಸಚಿನ್​ ತೆಂಡೂಲ್ಕರ್​

ನವದೆಹಲಿ: ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಅವರ ಬಾಲ್ಯದ ಗುರು ರಮಾಕಾಂತ್​ ಅಚ್ರೇಕರ್​ (88) ಅವರ ಅಂತ್ಯಕ್ರಿಯೆ ಗುರುವಾರ ನಡೆಯಿತು.

ಗುರುವನ್ನು ಕಳೆದುಕೊಂಡು ದುಃಖತಪ್ತರಾಗಿರುವ ಸಚಿನ್​ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಗುರುವಿನ ಪಾರ್ಥಿವ ಶರೀರದ ಮೆರವಣಿಗೆಗೆ ಸಚಿನ್​ ಹೆಗಲು ಕೊಟ್ಟು ನಡೆದರು. ವಿನೋದ್​ ಕಾಂಬ್ಳಿ, ಬಲ್ವಿಂದರ್​ ಸಿಂಗ್​ ಸಂಧು, ಚಂದ್ರಕಾಂತ್​ ಪಂಡಿತ್​ ಮತ್ತಿತರರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಇದ್ದ ಅವರ ಶಿಷ್ಯಂದಿರು, ಯುವಕರು ಅಮರ್​ ರಹೇ ಎನ್ನುತ್ತಾ ಸಾಗಿದರು.

ರಮಾಕಾಂತ್​ ಅಚ್ರೇಕರ್​ ಅವರ ಅಂತಿಮ ದರ್ಶನಕ್ಕೆ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ರಮಾಕಾಂತ್​ ಅಚ್ರೇಕರ್​ ಅವರಿಂದ ಕ್ರಿಕೆಟ್​ ತರಬೇತಿ ಕೋಚಿಂಗ್​ ಪಡೆದ ಅತುಲ್​ ರಣಡೆ, ಅಮೋಲ್​ ಮಝುಂದರ್​, ರಮೇಶ್​ ಪವಾರ್​, ರಣಜಿ ಕೋಚ್​ ವಿನಾಯಕ್​ ಸಮಂತ್​, ನೀಲೇಶ್​ ಕುಲಕರ್ಣಿ, ವಿನೋದ್​ ರಾಘವನ್ ಮತ್ತಿತರರು ಅಂತ್ಯಕ್ರಿಯೆ ವೇಳೆ ಹಾಜರಿದ್ದರು.

ಅಲ್ಲದೆ, ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್​ ಠಾಕ್ರೆ, ಶಾಸಕ ಅಶೀಶ್​ ಶೇಲಾರ್​, ಮೇಯರ್​ ವಿಶ್ವನಾಥ್​ ಮಹದೇಶ್ವರ್​ ಕೂಡ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ರಮಾಕಾಂತ್​ ಅಚ್ರೇಕರ್​ ಅವರು ನಿನ್ನೆ ನಿಧನರಾಗಿದ್ದರು.

ಗುರು ಪರಂಪರೆಯಲ್ಲಿ ರಮಾಕಾಂತ್ ಆಚ್ರೇಕರ್ ದಿವ್ಯಬೆಳಕು. ಹಲವಾರು ಕ್ರಿಕೆಟ್ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ ಮತ್ತು ದೇಶಕ್ಕೆ ಹೆಮ್ಮೆ ತರುವಂತೆ ಅವರಿಗೆ ತರಬೇತಿ ನೀಡಿದ್ದಾರೆ. ಅವರ ನಿಧನ ಕ್ರೀಡಾ ಜಗತ್ತಿಗೆ ದೊಡ್ಡ ನಷ್ಟ.

| ನರೇಂದ್ರ ಮೋದಿ, ಪ್ರಧಾನಿ

One Reply to “ಗುರುವಿನ ಪಾರ್ಥಿವ ಶರೀರದ ಮೆರವಣಿಗೆಗೆ ಹೆಗಲುಕೊಟ್ಟ ಸಚಿನ್​ ತೆಂಡೂಲ್ಕರ್​”

  1. ಹುಟ್ಟು ಸಾವು ಸರ್ವೇಸಾಮಾನ್ಯ. ಇರುವವರ ಬದುಕು ಮುಂದುವರೆಯಲೇಬೇಕು. ಇದುವೆ ಜೀವ – ಇದು ಜೀವನ!

Comments are closed.