ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​ಗೆ ಜನ್ಮದಿನದ ಸಂಭ್ರಮ: 46ಕ್ಕೆ ಕಾಲಿಟ್ಟ ಕ್ರಿಕೆಟ್​ ದೇವರು

ಮುಂಬೈ: ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಅವರಿಗೆ ಇಂದು 46ನೇ ಜನ್ಮದಿನದ ಸಂಭ್ರಮ.
ಕ್ರಿಕೆಟ್​ನಲ್ಲಿ ಅದ್ಭುತ ಸಾಧನೆಗೈದ, ಹಲವು ದಾಖಲೆಗಳನ್ನು ಸೃಷ್ಟಿಸಿ ಇವರನ್ನು ಕ್ರಿಕೆಟ್​ ದೇವರು ಎಂದೇ ಕರೆಯಲಾಗುತ್ತದೆ. 16ನೇ ವರ್ಷಕ್ಕೆ ಕ್ರಿಕೆಟ್​ ಲೋಕಕ್ಕೆ ಕಾಲಿಟ್ಟ ಅವರು ಸುಮಾರು ಎರಡು ದಶಕಗಳ ಕಾಲ ಅಬ್ಬರದಿಂದ ಮಿಂಚಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕ ಬಾರಿಸಿ, ಬರೋಬ್ಬರಿ 34,357 ರನ್​ಗಳನ್ನು ಪೇರಿಸಿದ ಖ್ಯಾತಿ ಇವರದ್ದು.

ಸಚಿನ್​ ತೆಂಡೂಲ್ಕರ್​ ಅವರ ತಂದೆ ಮರಾಠಿ ಕಾದಂಬರಿಕಾರ. ಅವರಿಗೆ ಸಂಗೀತ ಮಾಂತ್ರಿಕ ಸಚಿನ್​ ದೇವ್​ ಬರ್ಮನ್​ ಅವರ ದೊಡ್ಡ ಅಭಿಮಾನಿಯಾಗಿದ್ದರು. ಇದೇ ಕಾರಣಕ್ಕೆ ತಮ್ಮ ಮಗನಿಗೂ ಸಚಿನ್​ ಎಂದೇ ಹೆಸರಿಟ್ಟಿದ್ದಾರೆ.

ಲಿಟ್ಲ್​ ಮಾಸ್ಟರ್​ ಎಂದೇ ಪ್ರಸಿದ್ಧರಾಗಿದ್ದ ಸಚಿನ್​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ. ಅಂತಾರಾಷ್ಟ್ರೀಯ ಏಕದಿನ ಪಂದ್ಯಾವಳಿಯಲ್ಲಿ ಅಜೇಯ 200 ರನ್​ ಗಳಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ 2010ರಲ್ಲೇ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯಾವಳಿಯಲ್ಲಿ ಕೇವಲ 147 ಬಾಲ್​ಗಳಿಗೆ ದ್ವಿಶತಕ ಬಾರಿಸಿದ್ದರು.

ಒಟ್ಟು ಆರು ವಿಶ್ವಕಪ್​ ಪಂದ್ಯಾವಳಿಗಳಲ್ಲಿ ಆಡಿ ದಾಖಲೆ ಮಾಡಿದ್ದಾರೆ. 2011ರ ವಿಶ್ವಕಪ್​ ಫೈನಲ್​ನಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸಿ ಕಪ್​ ಮುಡಿಗೇರಿಸಿಕೊಂಡಿತ್ತು. 2013ರ ನವೆಂಬರ್​ನಲ್ಲಿ ವಾಂಖಡೆ ಕ್ರೀಡಾಂಗಣದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ತಮ್ಮ 200ನೇ ಟೆಸ್ಟ್​ ಪಂದ್ಯ ಆಡಿದ ಬಳಿಕ ಕ್ರಿಕೆಟ್​ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಚಿನ್​ ತೆಂಡೂಲ್ಕರ್​ ಅವರು ಕ್ರಿಕೆಟ್​ಗೆ ವಿದಾಯ ಹೇಳಿ 6 ವರ್ಷಗಳೇ ಕಳೆದಿವೆ. ಆದರೂ ಅವರ ಸಾಧನೆ ಸದಾ ನೆನಪಿನಲ್ಲಿ ಉಳಿಯುವಂಥದ್ದು ಎಂಬುದು ಮಾತ್ರ ಸುಳ್ಳಲ್ಲ.

ತೆಂಡೂಲ್ಕರ್​ ಐಪಿಎಲ್​ನ ಮುಂಬೈ ಇಂಡಿಯನ್ಸ್​ ಪರ ಕೂಡ 78 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್​ನಲ್ಲಿ 2334 ರನ್​ಗಳಿಸಿದ್ದು ಅದರಲ್ಲಿ ಒಂದು ಶತಕ, 13 ಅರ್ಧಶತಕಗಳನ್ನು ಗಳಿಸಿದ್ದಾರೆ. ಸಚಿನ್​ ತೆಂಡೂಲ್ಕರ್​ಗೆ ಬಿಸಿಸಿಐ, ವೀರೇಂದ್ರ ಸೆಹವಾಗ್​ ಸೇರಿ ಹಲವು ಗಣ್ಯರು ಸೇರಿ ಅಭಿಮಾನಿಗಳು ವಿಶ್​ ಮಾಡಿದ್ದಾರೆ.

One Reply to “ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​ಗೆ ಜನ್ಮದಿನದ ಸಂಭ್ರಮ: 46ಕ್ಕೆ ಕಾಲಿಟ್ಟ ಕ್ರಿಕೆಟ್​ ದೇವರು”

Comments are closed.