ಹಿಂದೊಮ್ಮೆ ಪಾಕಿಸ್ತಾನದ ಪರ ಆಡಿದ್ದರು ಭಾರತದ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​

ಮುಂಬೈ: ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಭಾರತದ ಕ್ರಿಕೆಟ್​ ಅಸ್ಮಿತೆ. ಇಂಥ ಮಹಾನ್​ ಆಟಗಾರನೇ ಒಂದೊಮ್ಮೆ ಪಾಕಿಸ್ತಾನದ ಪರ ಆಟವಾಡಿದ್ದರು. ಆಶ್ಚರ್ಯ ಎನಿಸಿದರೂ ಈ ಪ್ರಸಂಗ ನಡೆದದ್ದಂತೂ ಸತ್ಯ ಎನ್ನುತ್ತಿದೆ ಕ್ರಿಕೆಟ್​ ಇತಿಹಾಸ.

ಸಚಿನ್​ ತೆಂಡೂಲ್ಕರ್​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನ ಫೀಲ್ಡರ್​ ಆಗಿ ಪದಾರ್ಪಣೆ ಮಾಡಿದಾಗ ಅವರಿಗೆ ಕೇವಲ 13 ವರ್ಷ ವಯಸ್ಸಾಗಿತ್ತು. 1987ರ ಜನವರಿ 20ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಮುಂಬೈನ ಬ್ರಬೌರ್ನ್​ನಲ್ಲಿ ಪಂದ್ಯವೊಂದು ನಡೆಯುತ್ತಿತ್ತು. ಆಗ ಸಚಿನ್​ ಅವರು ಪಾಕಿಸ್ತಾನದ ಪರ ಫೀಲ್ಡರ್​ ಆಗಿ ಕಣಕ್ಕಿಳಿದಿದ್ದರು. ಭಾರತೀಯ ಕ್ರಿಕೆಟ್​ ಕ್ಲಬ್ ಸ್ವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿದ್ದುದರ ಅಂಗವಾಗಿ ಕೇವಲ ಸಾಂಕೇತಿಕವಾಗಿ ಈ ಪಂದ್ಯ ನಡೆಯುತ್ತಿತ್ತು. ಆ ಪಂದ್ಯದಲ್ಲಿ ಇತ್ತಂಡಗಳಿಗೆ 40-40 ಓವರ್​ ನಿಗದಿಯಾಗಿತ್ತು. ಈ ಪಂದ್ಯಕ್ಕೂ ಮೂರು ತಿಂಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸಚಿನ್​ ಅವರು, ಇಮ್ರಾನ್​ ಖಾನ್​ ಅವರಿಗೆ ಬದಲಿಯಾಗಿ ಫೀಲ್ಡಿಂಗ್​ ಮಾಡಲು ಕ್ರೀಡಾಂಗಣಕ್ಕಿಳಿದಿದ್ದರು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದ ಸಚಿನ್​ ಅಂದು ಪುಳಕಿತಗೊಂಡಿದ್ದರು.

ಈ ಸಾಂಕೇತಿಕ ಪಂದ್ಯಕ್ಕೂ ಹಿಂದೆ ಭಾರತ ಪಾಕಿಸ್ತಾನ ಟೆಸ್ಟ್​ ಸರಣಿಯನ್ನು ಆಡಿದ್ದವು. ಈ ಸರಣಿಯಲ್ಲಿ ಸುನಿಲ್​ ಗವಾಸ್ಕರ್​ ಅವರು ನಿವೃತ್ತಿಯನ್ನೂ ಘೋಷಿಸಿದ್ದರು.