ಶಬರಿಮಲೆ ಪೂಜೆಯ ವರದಿಗೆ ಪತ್ರಕರ್ತೆಯರನ್ನು ನೇಮಿಸಬೇಡಿ ಎಂದು ಮಾಧ್ಯಮಗಳಿಗೆ ಪತ್ರ ಬರೆದ ದೇಗುಲ ಸಮಿತಿ

ಕೇರಳ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ನ.5ರಂದು ನಿತ್ಯಪೂಜೆಗಾಗಿ ಬಾಗಿಲು ತೆರೆಯುತ್ತಿದ್ದು, ಈ ವೇಳೆ ವರದಿ ಮಾಡಲು ಯಾವುದೇ ಮಹಿಳಾ ಪತ್ರಕರ್ತರನ್ನು ನೇಮಿಸಬೇಡಿ ಎಂದು ದೇವಾಲಯದ ಸಮಿತಿ ಮಾಧ್ಯಮದವರನ್ನು ಒತ್ತಾಯಿಸಿದೆ.

ಎಲ್ಲ ವಯಸ್ಸಿನ ಮಹಿಳೆಯರಿಗೂ ದೇಗುಲಕ್ಕೆ ಪ್ರವೇಶ ಇದೆ ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ ಎರಡನೇ ಬಾರಿಗೆ ಬಾಗಿಲು ತೆರೆಯುತ್ತಿದ್ದು, ಕಳೆದ ಬಾರಿ ವರದಿ ಮಾಡಲು ತೆರಳಿದ್ದ ಪತ್ರಕರ್ತೆಯರ ಮೇಲೆಯೂ ಹಲ್ಲೆಯಾಗಿತ್ತು. ಇದೀಗ ಶಬರಿಮಲೆ ಕರ್ಮಾ ಸಮಿತಿ, ವಿಶ್ವ ಹಿಂದು ಪರಿಷತ್​ ಹಾಗೂ ಹಿಂದು ಐಕ್ಯವೇದಿ ಸಂಘಟನೆಗಳು ಸೇರಿ ಈ ಮನವಿಯನ್ನು ಸಲ್ಲಿಸಿವೆ.

ಮಾಧ್ಯಮಗಳ ಮುಖ್ಯ ಸಂಪಾದಕರಿಗೆ ಪತ್ರ ಬರೆದಿರುವ ಸಮಿತಿ, ನೀವೇನಾದರೂ 50 ವರ್ಷ ಒಳಗಿನ ಪತ್ರಕರ್ತೆಯರನ್ನು ವರದಿ ಮಾಡಲು ಶಬರಿಮಲೆಗೆ ಕಳಿಸಿದರೆ ಇಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿ ಇನ್ನೂ ಉಲ್ಬಣಗೊಳ್ಳುತ್ತದೆ. ಈ ವಿಚಾರದಲ್ಲಿ ನೀವು ಭಕ್ತರ ಭಾವನೆಗಳನ್ನು ಗೌರವಿಸುತ್ತೀರೋ, ವಿರೋಧಿಸುತ್ತೀರೋ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ. ಪ್ರತಿಭಟನೆ, ಹಿಂಸಾಚಾರಕ್ಕೆ ಪೂರಕವಾದ ಸ್ಥಿತಿ ನಿರ್ಮಾಣಗೊಳ್ಳಲು ನೀವು ಬಿಡುವುದಿಲ್ಲ ಎಂದು ನಂಬುತ್ತೇವೆ ಎಂದು ಹೇಳಿದೆ.

ನವೆಂಬರ್​ 5ರಂದು ಬೆಳಗ್ಗೆ ಬಾಗಿಲು ತೆರೆಯಲಿದ್ದು, ರಾತ್ರಿ 10ಕ್ಕೆ ಮುಚ್ಚಲಿದೆ. ಮತ್ತೆ ನವೆಂಬರ್​ 17ರಂದು ಮೂರು ತಿಂಗಳ ವಾರ್ಷಿಕ ಪೂಜೆಗಾಗಿ ದೇಗುಲ ತೆರೆದುಕೊಳ್ಳಲಿದೆ.