ಶಬರಿಮಲೆ ಯುವತಿಯರ ಪ್ರವೇಶಕ್ಕೆ ಮತ್ತೆ ತಡೆ

ವಿಜಯವಾಣಿ ಸುದ್ದಿಜಾಲ ಕಾಸರಗೊಡು
ಚೆನ್ನೈ ಮೂಲದ ಮನಿದಿ ಸಂಘಟನೆಯ 11 ಯುವತಿಯರು ಭಾನುವಾರ ಶಬರಿಮಲೆ ಪ್ರವೇಶಿಲು ವಿಫಲ ಯತ್ನ ನಡೆಸಿದ ಬೆನ್ನಿಗೆ ಸೋಮವಾರ ಆಗಮಿಸಿದ ಕೇರಳದ ಮತ್ತಿಬ್ಬರು ಯುವತಿಯರನ್ನು ಭಕ್ತರು ಹಿಮ್ಮೆಟ್ಟಿಸಿದ್ದಾರೆ.

ಮಲಪ್ಪುರಂ ಅಂಗಾಡಿಪುರಂ ನಿವಾಸಿ ಕನಕದುರ್ಗ ಹಾಗೂ ಕೋಯಿಕ್ಕೋಡ್ ಕೊಯಿಲಾಂಡಿ ನಿವಾಸಿ ಬಿಂದು ಅಯ್ಯಪ್ಪನ ದರ್ಶನಕ್ಕೆಂದು ಆಗಮಿಸಿದ್ದರು. ಸೋಮವಾರ ನಸುಕಿಗೆ ಅಪ್ಪಾಚಿಮೇಡು (ಸನ್ನಿಧಾನಕ್ಕೆ ಸುಮಾರು 3 ಕಿ.ಮೀ. ದೂರ) ತಲುಪುತ್ತಿದ್ದಂತೆ ಭಕ್ತರಿಂದ ಭಾರಿ ಪ್ರತಿಭಟನೆ ಎದುರಾಯಿತು. ಈ ಸಂದರ್ಭ ಕುಸಿದುಬಿದ್ದ ಕನಕದುರ್ಗಳನ್ನು ಪೊಲೀಸರು ಪಂಪೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರು. ಯುವತಿಯರು ತಾವು ಅಯ್ಯಪ್ಪನ ದರ್ಶನ ಪಡೆಯದೆ ವಾಪಸಾಗುವುದಿಲ್ಲ ಎಂದು ದಾರಿಯಲ್ಲೇ ಧರಣಿ ಕುಳಿತುಕೊಳ್ಳಲು ಯತ್ನಿಸಿದ್ದರು. ತಮ್ಮನ್ನು ಒತ್ತಾಯಪೂರ್ವಕವಾಗಿ ವಾಪಸ್ ಕಳುಹಿಸಲು ಪೊಲೀಸರು ಯತ್ನಿಸಿದ್ದಾರೆ ಎಂದು ಬಿಂದು ಆರೋಪಿಸಿದ್ದಾಳೆ. ಬಿಂದು ತಲಶ್ಯೇರಿಯ ಸ್ಕೂಲ್ ಆಫ್ ಸ್ಟಡೀಸ್‌ನಲ್ಲಿ ಪ್ರಾಧ್ಯಾಪಕಿ. ಕನಕದುರ್ಗ ಸಪ್ಲೈಕೋ ಉದ್ಯೋಗಿ. ಪೊಲೀಸರ ಮಾತುಕತೆ ನಂತರ ಯಾತ್ರೆ ಮೊಟಕುಗೊಳಿಸಿ ವಾಪಸಾಗಿದ್ದಾರೆ.

ಈ ಮಧ್ಯೆ, ಆಚಾರಾನುಷ್ಠಾನ ಉಲ್ಲಂಘನೆಯಾದಲ್ಲಿ ಗರ್ಭಗುಡಿ ಬಾಗಿಲು ಮುಚ್ಚುವಂತೆ ಪಂದಳಂ ಅರಮನೆಯ ರಾಜ ಕುಟುಂಬವು ಶಬರಿಮಲೆ ತಂತ್ರಿ ಕಂಠಾರರ್ ರಾಜೀವರ್ ಅವರಿಗೆ ನಿರ್ದೇಶಿಸಿದೆ. ಚೆನ್ನೈ ಮೂಲದ ಮನಿದಿ ಸಂಘಟನೆ ಸದಸ್ಯರು ಶಬರಿಮಲೆ ದರ್ಶನಕ್ಕೆ ಆಗಮಿಸುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪಂದಳ ರಾಜ ಕುಟುಂಬ ಈ ನಿರ್ದೇಶ ರವಾನಿಸಿತ್ತು.

ಗುಪ್ತಚರ ವರದಿ: ಮಕರ ಜ್ಯೋತಿಗೆ ಮೊದಲು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಇನ್ನೂ ಹಲವು ಯುವತಿಯರು ಆಗಮಿಸುವ ಸಾಧ್ಯತೆಯಿದ್ದು, ಇವರಿಗೆ ರಾಜಕೀಯ ಪಕ್ಷಗಳ ಸಂಪರ್ಕವಿದೆ. ಇತರ ರಾಜ್ಯದ ಕೆಲ ಸಣ್ಣ ಸಂಘಟನೆಗಳು ಇದರ ಹಿಂದಿದ್ದು, ಕೇರಳದ ಕೆಲವು ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಮಾಹಿತಿಯಿದೆ ಎಂದು ರಾಜ್ಯ ಗುಪ್ತಚರ ವರದಿ ತಿಳಿಸಿದೆ.

ಭಕ್ತರ ಸೋಗಿನಲ್ಲಿ ನಕ್ಸಲರು?: ಭಕ್ತರ ಸೋಗಿನಲ್ಲಿ ಶಬರಿಮಲೆಗೆ ನಕ್ಸಲ್ ಮನೋಭಾವದವರು ಆಗಮಿಸಿ, ಶಬರಿಮಲೆಯ ಆಚಾರ, ಅನುಷ್ಠಾನಗಳಿಗೆ ಭಂಗವುಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ ಆರೋಪಿಸಿದರು. ತಿರುವನಂತಪುರ ಸೆಕ್ರೆಟೆರಿಯೆಟ್ ಎದುರು ಶೋಭಾ ಸುರೇಂದ್ರನ್ ನಡೆಸುತ್ತಿರುವ ನಿರಾಹಾರ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು. ನಕ್ಸಲ್ ಹಾಗೂ ಭೂಗತ ಲೋಕದ ಸಂಪರ್ಕವುಳ್ಳವರು ಭಕ್ತರ ಸೋಗಲ್ಲಿ ಆಗಮಿಸುತ್ತಿದ್ದು, ಇದಕ್ಕೆ ಎಡರಂಗ ಸರ್ಕಾರ ಬೆಂಬಲಿಸುತ್ತಿದೆ. ಶಬರಿಮಲೆ ಆಚಾರ, ಅನುಷ್ಠಾನಗಳನ್ನು ಬುಡಮೇಲುಗೊಳಿಸಲು ಪ್ರತಿಬಾರಿ ಶಬರಿಮಲೆಗೆ ಇಂಥ ಸೋಗಿನಲ್ಲಿ ಭಕ್ತರನ್ನು ಕಳುಹಿಸಿಕೊಡುತ್ತಿದೆ. ಸರ್ಕಾರದ ಇಂಥ ನಡೆ ವಿರುದ್ಧ ಎನ್‌ಐಎ ಅಥವಾ ಸಿಬಿಐ ತನಿಖೆ ನಡೆಸುವ ಅನಿವಾರ್ಯತೆಯಿದೆ. ಶಬರಿಮಲೆ ವಿಷಯದಲ್ಲಿ ಬಿಜೆಪಿ ನಡೆಸಿಕೊಂಡು ಬರುತ್ತಿರುವುದು ಧರ್ಮಯುದ್ಧ. ಸರ್ಕಾರ ಭಕ್ತರ ಆಚಾರ, ಅನುಷ್ಠಾನ ಸಂರಕ್ಷಿಸುವಲ್ಲಿವರೆಗೆ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.