ನಮ್ಮ ಕನಸು ಈಡೇರಿತೆಂದು ಸಂತಸ ವ್ಯಕ್ತಪಡಿಸಿದ ಶಬರಿಮಲೆ ಪ್ರವೇಶ ಮಾಡಿದ ಮಹಿಳೆ ಬಿಂದು

ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ ಇಂದು ಮುಂಜಾನೆ ಇಬ್ಬರು 40 ವರ್ಷ ವಯಸ್ಸಿನ ಮಹಿಳೆಯರು ದೇಗುಲ ಪ್ರವೇಶ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಲ್ಲದೆ, ವಿವಾದವನ್ನೂ ಸೃಷ್ಟಿ ಮಾಡಿದ್ದಾರೆ.

ಅತಿಥಿ ಉಪನ್ಯಾಸಕಿ ಬಿಂದು ಅಮ್ಮಿನಿ ಹಾಗೂ ಹೋರಾಟಗಾರ್ತಿ ಕನಕದುರ್ಗಾ ಎಂಬುವರು ಶಬರಿಮಲೆ ಪ್ರವೇಶ ಮಾಡಿದವರು. ಈ ಬಗ್ಗೆ ಮಾತನಾಡಿದ ಬಿಂದು, ನಮ್ಮ ಕನಸು ನನಸಾಗಿದೆ ಎಂದು ಹೇಳಿದ್ದಾರೆ. ನಾವು ಹೋರಾಟಗಾರರಾಗಿ ಬಂದವರಲ್ಲ, ಯಾತ್ರಾರ್ಥಿಗಳಾಗಿ ಆಗಮಿಸಿದ್ದೆವು ಎಂದು ತಿಳಿಸಿದ್ದಾರೆ.

ಖಾಸಗಿ ವೆಬ್​ಪೋರ್ಟಲ್​ಗೆ ಸಂದರ್ಶನ ನೀಡಿದ ಬಿಂದು, ನಾವು ಮೂರು ತಿಂಗಳಿಂದ ವ್ರತ ಕೈಗೊಂಡಿದ್ದೆವು. ಡಿ.24 ರಂದು ದೇವಸ್ಥಾನ ಪ್ರವೇಶ ಮಾಡಲು ಮುಂದಾದಾಗ ಅಲ್ಲಿನ ಪ್ರತಿಭಟನಾಕಾರರು ನಮ್ಮನ್ನು ತಡೆದಿದ್ದರು. ಈ ಬಾರಿ ಪೊಲೀಸರು ನಮಗೆ ಭದ್ರತೆ ನೀಡುವುದಾಗಿ ಹೇಳಿದ್ದರು. ಅಲ್ಲದೆ ಕೊಟ್ಟಾಯಂ ಎಸ್​ಪಿ ಜತೆ ಸಂಪರ್ಕದಲ್ಲಿ ಇದ್ದೆವು. ಮಧ್ಯರಾತ್ರಿ ಹೊತ್ತಿನಲ್ಲಿ ಪಂಬಾಕ್ಕೆ ತಲುಪಿದೆವು. ತಡಮಾಡದೆ ಬೆಟ್ಟ ಹತ್ತಲು ಶುರುಮಾಡಿದೆವು. ನಮ್ಮ ಜತೆ ಮುಫ್ತಿಯಲ್ಲಿದ್ದ ಸುಮಾರು 24 ಜನ ಪೊಲೀಸರು ಇದ್ದರು. ಅವರ ಭದ್ರತೆಯಲ್ಲಿ ಮುಂಜಾನೆ 3.45ರಷ್ಟರಲ್ಲಿ ದೇವಾಲಯ ತಲುಪಿದ್ದೇವೆ. ಅಲ್ಲಿ ಸ್ವಲ್ಪ ಹೊತ್ತು ಇದ್ದು, ಪ್ರಾರ್ಥನೆ ಸಲ್ಲಿಸಿದ ಬಳಿಕ ವಾಪಸ್​ ಬಂದಿದ್ದೇವೆ ಎಂದು ವಿವರಿಸಿದರು.

ಈ ಮಹಿಳೆಯರು ಪುರುಷರ ಉಡುಪು ಧರಿಸಿ ಬಂದಿದ್ದರು ಎಂದು ಹಬ್ಬಿದ್ದ ವದಂತಿಗೆ ತೆರೆ ಎಳೆದ ಬಿಂದು, ಅದು ಸುಳ್ಳು. ನಾವು ಸಡಿಲ ಉಡುಪುಗಳನ್ನು ಧರಿಸಿದ್ದೆವು. ಕೆಲವು ಭಕ್ತರು ನಮ್ಮನ್ನು ಗುರುತಿಸಿದರು. ಆದರೆ ಏನೂ ತೊಂದರೆ ಮಾಡಲಿಲ್ಲ. ಇದರಲ್ಲೇ ತಿಳಿಯುತ್ತದೆ ನಿಜವಾದ ಭಕ್ತರು ಯಾರೂ ಮಹಿಳೆಯರ ಪ್ರವೇಶವನ್ನು ವಿರೋಧಿಸುತ್ತಿಲ್ಲ ಎಂಬುದು. ಇಲ್ಲಿ ನಡೆಯುವ ಹಿಂಸಾಚಾರ, ಪ್ರತಿಭಟನೆಯ ಹಿಂದೆ ಕಾಣದ ಕೈಗಳಿದ್ದು ಲಾಭ ಪಡೆಯುತ್ತಿವೆ ಎಂದು ಆರೋಪಿಸಿದರು.

ನಾವು ಕಾನೂನನ್ನು ಮುರಿದಿಲ್ಲ. ನಮಗೆ ಪೊಲೀಸರು, ಜಿಲ್ಲಾಡಳಿತದ ಬೆಂಬಲವಿತ್ತು. ನಾವು ಯಾತ್ರಾರ್ಥಿಗಳಾಗಿ ಬಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಇನ್ನೂ ಹೆಚ್ಚಿನ ಮಹಿಳೆಯರು ಬಂದು ಪೂಜೆ ಸಲ್ಲಿಸಲಿ ಎಂಬುದು ನಮ್ಮ ಆಶಯ. ಶಬರಿಮಲೆಗೆ ಪ್ರವೇಶಿಸುವುದು ನಮ್ಮ ಹಕ್ಕು. ಇದಕ್ಕೆ ಸುಪ್ರೀಂಕೋರ್ಟ್ ಕೂಡ ಗ್ರೀನ್​ಸಿಗ್ನಲ್​ ಕೊಟ್ಟಿದೆ. ನಮ್ಮ ವಾಸಸ್ಥಳ ಸೇರಿ ಉಳಿದ ಮಾಹಿತಿಗಳನ್ನು ಹಂಚಿಕೊಳ್ಳದೆ ಇರಲು ಪೊಲೀಸರು ನಮಗೆ ತಿಳಿಸಿದ್ದಾರೆ. ಹಾಗೇ ನಡೆದುಕೊಳ್ಳುತ್ತೇವೆ ಎಂದರು.