ಮಹಿಳೆಯರಿಗೆ ಶಬರಿಮಾಲೆ?

ನವದೆಹಲಿ: ಶಬರಿಮಲೆಯ ಐತಿಹಾಸಿಕ ಅಯ್ಯಪ್ಪ ದೇಗುಲ ಮಹಿಳೆಯರ ಪ್ರವೇಶಕ್ಕೂ ಮುಕ್ತವಾಗುವ ಕಾಲ ಸಮೀಪಿಸಿದಂತಿದೆ. 10ರಿಂದ 50 ವರ್ಷದೊಳಗಿನ ಮಹಿಳೆಯರ ದೇಗುಲ ಪ್ರವೇಶ ನಿಷೇಧ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪುರುಷರಂತೆ ಮಹಿಳೆಯರಿಗೂ ಸಮಾನವಾಗಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಪ್ರತಿಪಾದಿಸಿದೆ. ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ನಿರ್ಬಂಧ ಹೇರಿರುವುದು ಸಂವಿಧಾನಬಾಹಿರ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಬುಧವಾರ ಅಭಿಪ್ರಾಯಪಟ್ಟಿದೆ.

ಪ್ರತಿ ದೇವಸ್ಥಾನದಲ್ಲೂ ಭಕ್ತರು ಎಲ್ಲಿಯವರೆಗೆ ಹೋಗಬಹುದೆನ್ನುವುದಿದೆ. ಬಹುತೇಕ ದೇವಸ್ಥಾನಗಳಲ್ಲಿ ಭಕ್ತರಿಗೆ ಗರ್ಭಗುಡಿಗೆ ಪ್ರವೇಶ ಇರುವುದಿಲ್ಲ. ಇದು ಒಪ್ಪಿಕೊಳ್ಳುವ ವಿಚಾರ. ಆದರೆ ದೇವಸ್ಥಾನಕ್ಕೇ ಹೋಗುವಂತಿಲ್ಲ ಎಂದು ಹೇಗೆ ಹೇಳುತ್ತೀರಿ ಎಂದು ಅಯ್ಯಪ್ಪ ದೇವಸ್ಥಾನ ಆಡಳಿತ ಮಂಡಳಿಯನ್ನು ಕೋರ್ಟ್ ಪ್ರಶ್ನಿಸಿದೆ.

ಹಕ್ಕು ಕಸಿತ: ದೇಗುಲದ ನಿಯಮಗಳು ಪೂಜಿಸುವ ಹಕ್ಕಿನಲ್ಲಿ ರಚನೆಯಾಗಿವೆ ಎಂಬ ಕೇರಳ ಸರ್ಕಾರದ ಸಮಜಾಯಿಷಿಯನ್ನು ನ್ಯಾಯಾಲಯ ಒಪ್ಪಲಿಲ್ಲ. ಸಂವಿಧಾನದಲ್ಲಿ ಮಹಿಳೆ ಹಾಗೂ ಪುರುಷರಿಗೆ ಸಮಾನ ಹಕ್ಕು ನೀಡಲಾಗಿದೆ. ಆದರೆ ನಿರ್ಬಂಧದ ಮೂಲಕ ಮಹಿಳೆಯ ಹಕ್ಕನ್ನು ಕಿತ್ತುಕೊಂಡಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿತು.

ಏನಿದು ವಿವಾದ?

ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ದೇವಸ್ಥಾನ ಆಡಳಿತ ಮಂಡಳಿ ನಿಷೇಧಿಸಿದೆ. ಋತುಮತಿಯರಾದ ಮಹಿಳೆಯರ ಪ್ರವೇಶದಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎನ್ನುವುದು ದೇವಸ್ಥಾನದ ವಾದ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಇದನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದೆ. ಬುಧವಾರದಿಂದ ನಿತ್ಯ ವಿಚಾರಣೆಗೆ ನ್ಯಾಯಪೀಠ ತೆಗೆದುಕೊಂಡಿದೆ.

ಕೋರ್ಟ್ ಪರಿಗಣಿಸಲ್ಪಟ್ಟ ಅಂಶ

* ಜೈವಿಕ ಅಂಶಗಳನ್ನು ಆಧರಿಸಿ ಮಹಿಳೆಗೆ ದೇವಸ್ಥಾನ ಪ್ರವೇಶ ನಿಷೇಧಿಸುವುದು ಸಂವಿಧಾನದ 14, 15 ಹಾಗೂ 17ನೇ ಪರಿಚ್ಛೇದದ ಉಲ್ಲಂಘನೆಯಾಗುತ್ತದೆಯೇ?

* ಧಾರ್ವಿುಕ ಸ್ವಾತಂತ್ರ್ಯದ ನೆಪ ಹೇಳಿಕೊಂಡು ಸಂಸ್ಥೆಗಳು ನಿಷೇಧ ಹೇರಲು ಸಾಧ್ಯವೇ?

* ಒಂದೊಮ್ಮೆ ಅಯ್ಯಪ್ಪ ದೇವಸ್ಥಾನ ಮಂಡಳಿಗೆ ಅಂತಹ ವಿಶೇಷ ಅಧಿಕಾರವಿದ್ದರೆ ಅದು ಸಂವಿಧಾನದ ಆಶಯಕ್ಕೆ ಪೂರಕವೇ?

*ಲಿಂಗ ಆಧಾರದ ಮೇಲೆ ನಿಷೇಧ ಹೇರಲು ಕೇರಳ ಹಿಂದು ಧಾರ್ವಿುಕ ಕಾಯ್ದೆಯಲ್ಲಿ ಅವಕಾಶವಿದೆ, ಇದು ಸಂವಿಧಾನ ಬಾಹಿರವೇ?

* ನಿಷೇಧ ಹೇರುವುದು ಒಂದೊಮ್ಮೆ ಸಮರ್ಪಕವಾಗಿದ್ದರೆ ಸಂವಿಧಾನದ 3ನೇ ಪರಿಚ್ಛೇದಕ್ಕೆ ವೈರುಧ್ಯವಲ್ಲವೇ?

ಕೇರಳ ಸರ್ಕಾರ ಹೇಳಿದ್ದೇನು?

ಸುಪ್ರೀಂಕೋರ್ಟ್​ನ ಅಭಿಪ್ರಾಯದ ಬಳಿಕ ವಾದ ಬದಲಿಸಿದ ಕೇರಳ ಸರ್ಕಾರ, ಮಹಿಳೆಯರ ದೇಗುಲ ಪ್ರವೇಶಕ್ಕೆ ಅನುಮತಿ ನೀಡಲು ಬದ್ಧ ಎಂದು ಹೇಳಿತು. 2015ರಲ್ಲಿ ಒಮ್ಮೆ ಅನುಮತಿ ನೀಡಿದ್ದನ್ನು ಕೋರ್ಟ್​ಗೆ ಮನವರಿಕೆ ಮಾಡಿಕೊಟ್ಟಿತು.

ಕೋರ್ಟ್ ಹೇಳಿದ್ದೇನು?

ಯಾವ ಆಧಾರದ ಮೇಲೆ ಮಹಿಳೆಯರಿಗೆ ದೇಗುಲ ಪ್ರವೇಶ ನಿಷೇಧಿಸಲಾಗಿದೆ? ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಒಮ್ಮೆ ದೇವಸ್ಥಾನವನ್ನು ಸಾರ್ವಜನಿಕರಿಗೆ ತೆರೆದರೆ ಯಾರು ಬೇಕಾದರೂ ಪ್ರವೇಶಿಸಬಹುದು. ಅಷ್ಟಕ್ಕೂ ದೇವಸ್ಥಾನಗಳಲ್ಲಿ ವೈಯಕ್ತಿಕ ದೇವಸ್ಥಾನ ಎಂಬುದಿರುವುದಿಲ್ಲ. ದೇವಾಲಯ ಎಂಬುದು ಸಾರ್ವಜನಿಕ ಸ್ಥಳ, ಎಲ್ಲರೂ ಹೋಗಬಹುದು. ಹಾಗೆಯೇ ಪುರುಷ ಭಕ್ತ ಪ್ರವೇಶಿಸಲು ಅವಕಾಶವಿದ್ದರೆ, ಮಹಿಳೆಯರು ಕೂಡ ಹೋಗಬಹುದು ಎಂದು ಸಂವಿಧಾನ ಪೀಠದ ಮೌಖಿಕ ಅಭಿಪ್ರಾಯ ತಿಳಿಸಿದೆ.