ಶಬರಿಮಲೆ ತೀರ್ಪು ಮರುಪರಿಶೀಲನಾ ಅರ್ಜಿ ವಿಚಾರಣೆಯ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್​

ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರು ಶಬರಿಮಲೆಯನ್ನು ಪ್ರವೇಶಿಸಬಹುದೆಂದು ಈ ಹಿಂದೆ ನೀಡಿದ್ದ ತೀರ್ಪಿನ ಮರುಪರಿಶೀಲನೆಗಾಗಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಬುಧವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಕಳೆದ ಸೆಪ್ಟೆಂಬರ್​ನಲ್ಲಿ ಸುಪ್ರೀಂ ಕೋರ್ಟ್​ ಎಲ್ಲ ವಯೋಮಾನದ ಮಹಿಳೆಯರು ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಪ್ರವೇಶಿಸಬಹುದೆಂದು ತೀರ್ಪು ನೀಡಿತ್ತು. ಬಳಿಕ ತೀರ್ಪಿನ ಮರುಪರಿಶೀಲನೆಗಾಗಿ ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಬುಧವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ವಾದ-ಪ್ರತಿವಾದವನ್ನು ಆಲಿಸಿ, ತೀರ್ಪನ್ನು ಕಾಯ್ದಿರಿಸಿದೆ.

ಇಂದು ನಡೆದ ವಿಚಾರಣೆ ವೇಳೆ ಅರ್ಜಿದಾರರೊಬ್ಬ ಸುಪ್ರೀಂ ಕೋರ್ಟ್​ ತಮ್ಮ ನಿಲುವನ್ನು ಕೇರಳದ ಜನತೆಯ ಮೇಲೆ ಏರಬಾರದು. ನಾವು ತೀರ್ಪನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದು, ನಿಮ್ಮ ತೀರ್ಪಿನಿಂದಾಗಿ ರಾಜ್ಯಾದ್ಯಂತ ಸಾಮಾಜಿಕ ಶಾಂತಿಗೆ ಭಂಗ ಉಂಟಾಗಿದೆ ಎಂದು ಸಾಂವಿಧಾನಿಕ ಪೀಠದ ಮುಂದೆ ಹೇಳಿದ್ದಾರೆ.

ದೇವಸ್ಥಾನದ ತಂತ್ರಿ ಹಾಗೂ ನಾಯರ್​ ಸೇವಾ ಸಮಾಜ(ಎನ್​ಎಸ್​ಎಸ್​) ಸೇರಿದಂತೆ ಹಲವಾರು ಸಂಘಟನೆಗಳು ಸುಪ್ರೀಂ ಕೋರ್ಟ್​ ಮುಂದೆ ತಮ್ಮ ವಾದವನ್ನು ಮಂಡಿಸಿ ತೀರ್ಪಿನ ಮರುಪರಿಶೀಲನೆಗಾಗಿ ಯತ್ನಿಸಿದ್ದರು.

ಈ ಮಧ್ಯೆ ದೇವಸ್ವಂ ಮಂಡಳಿಯು ಎಲ್ಲ ವಯೋಮಾನದ ಮಹಿಳೆಯರ ದೇವಸ್ಥಾನ ಪ್ರವೇಶಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ನಾವು ಸಂತೋಷವಾಗಿ ಸುಪ್ರೀಂ ಕೋರ್ಟ್​ ನೀಡಿದ ತೀರ್ಪಿಗೆ ಬದ್ಧರಾಗಿರುತ್ತೇವೆ ಎಂದು ಯೂ ಟರ್ನ್​ ಹೊಡೆದಿದೆ.

ಮರು ಪರಿಶೀಲನೆ ಅಗತ್ಯವಿಲ್ಲವೆಂದ ಕೇರಳ ಸರ್ಕಾರ
ಕಳೆದ ಸೆಪ್ಟೆಂಬರ್‌ನಲ್ಲಿ ಎಲ್ಲ ಮಹಿಳೆಯರಿಗೂ ಪ್ರವೇಶ ಕಲ್ಪಿಸಿ ನೀಡಿದ್ದ ತೀರ್ಪಿನ ಮರುಪರಿಶೀಲನೆ ಅಗತ್ಯವಿಲ್ಲ ಎಂದು ಕೇರಳ ಸರ್ಕಾರ ಕೂಡ ಇಂದು ಸುಪ್ರೀಂಕೋರ್ಟ್​ಗೆ ಹೇಳಿಕೆ ನೀಡಿದೆ. (ಏಜೆನ್ಸೀಸ್​)