ಶಬರಿಮಲೆ ದೇಗುಲ ಪ್ರವೇಶ: ಮರುಪರಿಶೀಲನೆ ಅರ್ಜಿ ಸುಪ್ರೀಂನಲ್ಲಿ ವಿಚಾರಣೆ

ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ನೀಡಿರುವ ತೀರ್ಪಿನ ಮರುಪರಿಶೀಲನೆಗೆ 46 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಇಂದು ಕೈಗೆತ್ತಿಕೊಳ್ಳಲಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೋಯ್​ ನೇತೃತ್ವದ ಪಂಚ ಸದಸ್ಯರ ಪೀಠ ಈ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ರಿಟ್​ ಅರ್ಜಿಗಳೂ ಸಲ್ಲಿಕೆಯಾಗಿವೆ.

ಇದಕ್ಕೂ ಮುಂಚೆ ಇಂದು ಬೆಳಗ್ಗೆ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ತೆರೆದ ನ್ಯಾಯಾಲಯದಲ್ಲಿ ಮಾಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಗೊಗೋಯ್ ವಜಾಗೊಳಿಸಿದ್ದರು.

ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಂತರ ರಿಟ್​ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಪಂಚಪೀಠ ತಿಳಿಸಿದೆ.

ಸೆಪ್ಟೆಂಬರ್​ 28ರಂದು ಸುಪ್ರಿಂಕೋರ್ಟ್​​ ಶಬರಿಮಲೆ ಪ್ರವೇಶಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ ಮಹತ್ವದ ತೀರ್ಪು ಪ್ರಕಟಿಸಿತ್ತು. ಆದರೆ, ಸುಪ್ರಿಂಕೋರ್ಟ್​ನ ಈ ತೀರ್ಪಿನಿಂದ ಕೇರಳದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ, ಹಿಂದೂಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ದೇವಸ್ಥಾನದ ಬಾಗಿಲು ತೆಗೆದಾಗ ಕೆಲ ಮಹಿಳೆಯರು ಸುಪ್ರೀಂಕೋರ್ಟ್​ ತೀರ್ಪಿನಂತೆ ಪ್ರವೇಶಕ್ಕೆ ಯತ್ನಿಸಿದಾಗ ದೇವಸ್ಥಾನದ ಆಡಳಿತ ಮಂಡಳಿ ಅವರನ್ನು ಅರ್ಧ ದಾರಿಯಲ್ಲೇ ತಡೆದಿತ್ತು. ಅಲ್ಲದೇ, ಸುಪ್ರೀಂ ತೀರ್ಪು ಮರುಪರಿಶೀಲನೆಯಾಗಬೇಕು ಎಂದು ಆಗ್ರಹಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. (ಏಜೆನ್ಸೀಸ್)