ಶಬರಿಮಲೆ ದೇಗುಲಕ್ಕೆ ಪ್ರವೇಶಿಸುತ್ತೇನೆ ಎಂದು ಫೇಸ್​ಬುಕ್​ ಪೋಸ್ಟ್ ಹಾಕಿದ್ದ ಶಿಕ್ಷಕಿಗೆ ಬೆದರಿಕೆ

ಕಣ್ಣೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಪ್ರವೇಶಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ಕೇರಳದ ಶಿಕ್ಷಕಿಗೆ ಬೆದರಿಕೆ ಬಂದಿದೆ. ಅಲ್ಲದೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ತಿರುಗಿಬಿದ್ದಿದ್ದಾರೆ.

ಕಣ್ಣೂರು ಜಿಲ್ಲೆಯ 32 ವರ್ಷದ ಶಿಕ್ಷಕಿ ರೇಷ್ಮ ನಿಶಾಂತ್​ ಅವರು ದೇಗುಲ ಪ್ರವೇಶಿಸಲು ಮುಂದಾಗಿದ್ದಾರೆ. ಶಬರಿಮಲೆ ದೇವಾಲಯಕ್ಕೆ ತೆರಳುವ ಮುಂಚೆ ಕೈಗೊಳ್ಳುವ 41 ದಿನಗಳ ವ್ರತ ಕೈಗೊಂಡಿದ್ದು ದೇಗುಲಕ್ಕೆ ಹೋಗುತ್ತೇನೆ ಎಂದು ಫೇಸ್​ಬುಕ್​ನಲ್ಲಿ ಬರೆದಿದ್ದಾರೆ.
ಇದರಲ್ಲಿ ಯಾವುದೇ ಕ್ರಾಂತಿಕಾರಿ ಉದ್ದೇಶವಿಲ್ಲ. ದೇವರನ್ನು ನಂಬಿರುವ ನಾನು ಈಗ ತೆಗೆದುಕೊಂಡಿರುವ ನಿರ್ಧಾರ ಭವಿಷ್ಯದಲ್ಲಿ ಹೆಚ್ಚಿನ ಜನರಿಗೆ ಪವಿತ್ರ ದೇವಾಲಯ ಪ್ರವೇಶಿಸಲು ಧೈರ್ಯ ತುಂಬಬಹುದು ಎಂದು ಫೇಸ್​ಬುಕ್​ನಲ್ಲಿ ಹಾಕಿದ್ದಾರೆ.

ಇದಾದ ಬಳಿಕ ಹಲವು ಹಿಂದು ಸಂಘಟನೆಗಳು, ಅಯ್ಯಪ್ಪ ಭಕ್ತರು ಆಕೆಯ ಮನೆಯನ್ನು ಸುತ್ತುವರಿದು ಶಿಕ್ಷಕಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ಬೆದರಿಕೆಗಳನ್ನು ಬರುತ್ತಿವೆ ಎನ್ನಲಾಗಿದೆ.
ಶಬರಿಮಲೆ ದೇವಾಲಯ ಅಕ್ಟೋಬರ್​ 17ಕ್ಕೆ ತೆರೆಯಲಿದ್ದು, ಈ ವೇಳೆ ಮಹಿಳೆಯರೂ ಪ್ರವೇಶಿಸಬಹುದು ಎಂದು ಸೆ.28ರಂದು ಸುಪ್ರೀಂಕೋರ್ಟ್​ ತೀರ್ಪು ನೀಡಿತ್ತು.