ನನಗೀಗ 9 ವರ್ಷ, 50 ವರ್ಷವಾದ ನಂತರ ಅಯ್ಯಪ್ಪನ ದರ್ಶನಕ್ಕೆ ಮತ್ತೆ ಬರುತ್ತೇನೆ!

ತಿರುವನಂತಪುರಂ: ಎಲ್ಲ ವಯೋಮಾನದ ಮಹಿಳೆಯರಿಗೂ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ಕಲ್ಪಿಸಬೇಕು ಎಂಬ ಸುಪ್ರೀಂ ತೀರ್ಪಿದ್ದರೂ ಕೂಡ ದೇಗುಲ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡದ ಅಯ್ಯಪ್ಪ ಭಕ್ತರ ಪ್ರತಿಭಟನೆ ಮಧ್ಯೆ 9 ವರ್ಷದ ಬಾಲಕಿಯು ತನ್ನ ಪಾಲಕರೊಂದಿಗೆ ಶಬರಿಮಲೆಗೆ ಭೇಟಿ ನೀಡಿದ್ದಾಳೆ.

ಈ ವೇಳೆ ಪ್ಲೇಕಾರ್ಡ್‌ ಹಿಡಿದುಕೊಂಡಿದ್ದ ಆಕೆ, ನನಗೆ 50 ವರ್ಷ ತುಂಬಿದ ನಂತರ ಮತ್ತೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬಂದು ದರ್ಶನ ಪಡೆಯುತ್ತೇನೆ ಎಂದು ಎಲ್ಲರ ಗಮನ ಸೆಳೆದಿದ್ದಾಳೆ.

ತಮಿಳುನಾಡಿನ ಮಧುರೈ ಮೂಲದ 9 ವರ್ಷದ ಜನನಿ ನಿನ್ನೆ ತನ್ನ ಪಾಲಕರೊಂದಿಗೆ ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಳು.

ನಮಗೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಬಗ್ಗೆ ತಿಳಿದಿಲ್ಲ. ನನ್ನ ಮಗಳು 10 ವರ್ಷವನ್ನು ದಾಟಿದಳೆಂದರೆ ಮತ್ತೆ ಅಯ್ಯಪ್ಪ ದೇಗುಲಕ್ಕೆ ಬರಲು 50 ವರ್ಷ ಕಾಯುತ್ತಾಳೆ. 50 ವರ್ಷ ತುಂಬುವ ಮೊದಲೇ ಅವಳು ಮತ್ತೆ ದೇವಸ್ಥಾನಕ್ಕೆ ಬರುವುದು ನನಗೆ ಇಷ್ಟವಿಲ್ಲ ಎಂದು ಜನನಿ ತಂದೆ ಆರ್‌. ಸತೀಶ್‌ ಕುಮಾರ್‌ ತಿಳಿಸಿದ್ದಾರೆ.

ಶಬರಿಮಲೆ ದೇವಸ್ಥಾನಕ್ಕೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕಿದ್ದ ನಿಷೇಧವನ್ನು ಸುಪ್ರೀಂ ತೆರವುಗೊಳಿಸಿದ್ದರು ಆದೇಶವನ್ನು ಲೆಕ್ಕಿಸದೆ ನೂರಾರು ಭಕ್ತರು ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸದಂತೆ ತಡೆಯುತ್ತಿದ್ದಾರೆ. (ಏಜೆನ್ಸೀಸ್)