ಹಿಂದುಗಳ ಭಾವನೆಗೆ ಧಕ್ಕೆ: ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಳನ್ನು ಅಮಾನತು ಮಾಡಿದ ಬಿಎಸ್​ಎನ್​ಎಲ್​

ಪಂಥನಂತಿಟ್ಟ: ಹಿಂದುಗಳ ಭಾವನೆಗೆ ಧಕ್ಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮಹಿಳಾ ಕಾರ್ಯಕರ್ತೆ, ರೂಪದರ್ಶಿ ರೆಹಾನಾ ಫಾತಿಮಾ ಅವರನ್ನು ಭಾರತ್​ ಸಂಚಾರ್ ನಿಗಮ ಲಿಮಿಟೆಡ್​ (ಬಿಎಸ್​ಎನ್​ಎಲ್​) ಮಂಗಳವಾರ ಹುದ್ದೆಯಿಂದ ಅಮಾನತು ಮಾಡಿದೆ.

ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ ಸೆ.30 ರಂದು ರೆಹಾನಾ ಫಾತಿಮಾ ಅಯ್ಯಪ್ಪ ಸ್ವಾಮಿ ಭಕ್ತರಂತೆ ಉಡುಪು ಧರಿಸಿದ ಫೋಟೋವನ್ನು ಫೇಸ್​ಬುಕ್​ನಲ್ಲಿ ಹಾಕಿದ್ದರು. ಅದಕ್ಕೆ ತತ್ವಮಸಿ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದರು.

ರೆಹಾನಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕುವ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾಳೆ ಎಂದು ಶಬರಿಮಲೆ ಸಂರಕ್ಷಣಾ ಸಮಿತಿ ದೂರು ನೀಡಿದ ಬಳಿಕ ಅಕ್ಟೋಬರ್​ 30ರಂದು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಂತರ ಆಕೆಯನ್ನು ಬಂಧಿಸಲಾಗಿತ್ತು. ಹೈಕೋರ್ಟ್​ ಕೂಡ ನಿರೀಕ್ಷಣಾ ಜಾಮೀನು ನೀಡಲು ನಿರಾಕರಣೆ ಮಾಡಿತ್ತು.

ರೆಹಾನಾ ಫಾತಿಮಾ ಬಿಎಸ್​ಎನ್​ಎಲ್​ನ ಪಳರಿವತ್ತಮ್ ಟೆಲಿಫೋನ್​ ಎಕ್ಸ್​ಚೇಂಜ್​ನಲ್ಲಿ ಟೆಲಿಕಾಂ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು ಕೊಚ್ಚಿ ಶಾಖೆಯಲ್ಲಿ ಇದ್ದ ಅವರನ್ನು ಶಬರಿಮಲೆ ವಿಚಾರದಲ್ಲಿ ಗಲಾಟೆಯಾದ ಬಳಿಕ ಪಳರಿವತ್ತಮ್ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿತ್ತು.