ಶಬರಿಮಲೆ ಪ್ರತಿಭಟನೆ: 48 ಗಂಟೆಯೊಳಗೆ 266 ಮಂದಿಯನ್ನು ಬಂಧಿಸಿದ ಕೇರಳ ಪೊಲೀಸರು

ತಿರುವನಂತಪುರ: ಮಧ್ಯ ವಯಸ್ಸಿನ ಮಹಿಳೆಯರಿಬ್ಬರು ಶಬರಿಮಲೆ ಪ್ರವೇಶಿಸಿದ ನಂತರ ಕೇರಳ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಕೇವಲ 48 ಗಂಟೆಗಳಲ್ಲೇ ಸುಮಾರು 266 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುಮಾರು 334 ಮಂದಿ ಒಂದು ಗುಂಪನ್ನು ಯಾವುದೇ ಮುಂಜಾಗ್ರತ ಕ್ರಮವಾಗಿ ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ಹಿಂದು ವಿರೋಧಿ ಧೋರಣೆ ಎಂದು ಕೂಗಿ ಕೇರಳದಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಹಿಂಸಾತ್ಮಕವಾಗಿ ಪ್ರತಿಭಟಿಸುತ್ತಿರುವವರನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಹಿಂಸಾಚಾರದಲ್ಲಿ ತೊಡಗಿರುವವರನ್ನು ವಿಶೇಷ ಪೊಲೀಸ್​ ತಂಡ ಪಟ್ಟಿ ಮಾಡಿಕೊಂಡಿದ್ದು ಅದನ್ನು ಜಿಲ್ಲಾ ಪೊಲೀಸ್​ ಮುಖ್ಯಸ್ಥರಿಗೆ ರವಾನಿಸಿ, ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಹಿಂಸಾಚಾರದಲ್ಲಿ ಭಾಗಿಯಾದ ದುಷ್ಕರ್ಮಿಗಳ ಫೋಟೋ ಆಲ್ಬಮ್​ ಅನ್ನು ತಯಾರಿಸಿದೆ.

ಶಂಕಿತ ವ್ಯಕ್ತಿಗಳ ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದನ್ನು ಡಿಜಿಟಲ್​ ಪರೀಕ್ಷೆಗೆ ಒಳಪಡಿಸಲು ಕಳುಹಿಸಲಾಗಿದೆ. ಅಲ್ಲದೆ, ದುಷ್ಕರ್ಮಿಗಳ ಮನೆಯ ಮೇಲೆಯೂ ದಾಳಿ ಮಾಡಿ ವಿಶೇಷ ಪೊಲೀಸ್​ ತಂಡ ಮಾಹಿತಿ ಕಲೆಹಾಕಿದೆ. ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ದೂರು ಕೂಡ ದಾಖಲಾಗಿದೆ.

ಬುಧವಾರ ಬಿಂದು ಹಾಗೂ ಕನಕದುರ್ಗ ಎಂಬ ಮಹಿಳೆಯರಿಬ್ಬರು ಅಯ್ಯಪ್ಪ ದೇವಸ್ಥಾನವನ್ನು ಪ್ರವೇಶಿಸಿದ್ದರು. ಇದು ಎಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡುವುದರ ಜತೆಗೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. (ಏಜೆನ್ಸೀಸ್​)