ಶಾಂತಿ ಶರಣಂ ಅಯ್ಯಪ್ಪ

>

ಕಾಸರಗೋಡು: ಕೋಟ್ಯಂತರ ಅಯ್ಯಪ್ಪ ಭಕ್ತರು ಹಾಗೂ ಕೇರಳ ಸರ್ಕಾರದ ನಡುವಿನ ಹಗ್ಗಜಗ್ಗಾಟದ ನಡುವೆಯೇ ಬುಧವಾರ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮಾಸಿಕ ದರ್ಶನ ಆರಂಭವಾಗುತ್ತಿದೆ. ಒಂದೆಡೆ, ಕ್ಷೇತ್ರಕ್ಕೆ ಆಗಮಿಸುತ್ತಿರುವ ಮಹಿಳೆಯರನ್ನು ಅಯ್ಯಪ್ಪ ಭಕ್ತರ ತಂಡ ಬಲವಂತವಾಗಿ ಹಿಂದಕ್ಕೆ ಕಳುಹಿಸುತ್ತಿದ್ದರೆ, ಎಲ್ಲ ವಯೋಮಾನದ ಮಹಿಳೆಯರಿಗೂ ದೇಗುಲ ಪ್ರವೇಶದ ಅವಕಾಶ ನೀಡುವ ಸುಪ್ರೀಂಕೋರ್ಟ್ ಆದೇಶ ಪಾಲಿಸುವುದಾಗಿ ಸರ್ಕಾರ ಪಟ್ಟು ಹಿಡಿದಿರುವುದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಕ್ಷೇತ್ರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

10ರಿಂದ 50 ವಯೋಮಾನದ ಮಹಿಳೆ ಯರು ದೇವಸ್ಥಾನ ಪ್ರವೇಶಿಸಲು ಬಿಡುವುದಿಲ್ಲ ಎಂದು 30ಕ್ಕೂ ಅಧಿಕ ಸಂಘಟನೆಗಳು ಬಹಿರಂಗವಾಗಿ ಎಚ್ಚರಿಕೆ ನೀಡಿವೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ಇದು ಮೊದಲ ಮಾಸಿಕ ದರ್ಶನವಾಗಿದೆ. ಬುಧವಾರ ಬೆಳಗಿನ ಜಾವ 3 ಗಂಟೆಯಿಂದ ಅಕ್ಟೋಬರ್ ತಿಂಗಳಿನ ದರ್ಶನ ಹಾಗೂ ಪೂಜೆ ಆರಂಭವಾಗಲಿದೆ. ಈ ಮಧ್ಯೆ, ಮಂಗಳವಾರ ನಡೆದ ಸಂಧಾನ ಸಭೆ ವಿಫಲವಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಭಕ್ತೆ

ಶಬರಿಮಲೆ ಆಚಾರ ಅನುಷ್ಠಾನಗಳಿಗೆ ಸರ್ಕಾರ ಧಕ್ಕೆ ತಂದೊಡ್ಡುತ್ತಿರುವುದನ್ನು ಪ್ರತಿಭಟಿಸಿ ಮಹಿಳಾ ಭಕ್ತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ ಒಂದು ವಾರದಿಂದ ನಾಮಜಪ ಯಜ್ಞ ನಡೆಯುತ್ತಿರುವ ನೀಲಕ್ಕಲ್​ನಲ್ಲಿ ರಬ್ಬರ್ ಟ್ಯಾಪಿಂಗ್ ಕಾರ್ವಿುಕಳಾದ ರತ್ನಮ್ಮ ಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೆ ಮುಂದಾಗಿದ್ದರು. ತಕ್ಷಣ ಪೊಲೀಸರು ರಕ್ಷಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ.

ಬಿಜೆಪಿ ಹೋರಾಟ

ದೇವಸ್ವಂ ಮಂಡಳಿಯೊಂದಿಗಿನ ಚರ್ಚೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿಸಲು ಬಿಜೆಪಿ ತೀರ್ವನಿಸಿದೆ. ಶಬರಿಮಲೆ ವಿಷಯದಲ್ಲಿ ಸರ್ಕಾರ ಮತ್ತು ದೇವಸ್ವಂ ಮಂಡಳಿ ನಿಲುವು ಒಂದೇ ಆಗಿದ್ದು, ಕ್ಷೇತ್ರದ ಆಚಾರಾನು ಷ್ಠಾನಗಳನ್ನು ಸಂರಕ್ಷಿಸುವಲ್ಲಿ ಮಂಡಳಿ ವಿಫಲವಾಗಿದೆ. ಮಹಿಳಾ ಸಮಾನತೆ ಖಚಿತಪಡಿಸಲು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ್ದರೂ, ಕೇರಳದ ಶೇ.95 ಮಹಿಳೆಯರು ತೀರ್ಪು ವಿರೋಧಿಸುತ್ತಿದ್ದಾರೆ. ಕೇರಳದ ಜನತೆಯ ಈ ವಿರೋಧದ ನಡುವೆ ತೀರ್ಪು ಜಾರಿಗೆ ಸರ್ಕಾರ ಆಸಕ್ತಿ ತೋರುತ್ತಿರುವುದು ದುರುದ್ದೇಶಪೂರಿತ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಸರ್ಕಾರ V/s ಭಕ್ತರು

  • ಮಹಿಳೆಯರಿಗೆ ವಿಶೇಷ ಭದ್ರತೆ ಒದಗಿಸಲು ಮಹಿಳಾ ಪೊಲೀಸರೂ ಸೇರಿ ಇತರ ಭದ್ರತಾ ಪಡೆ ನಿಯೋಜನೆ
  • ಮಹಿಳೆಯರು ಅಂಜಿಕೆ ಇಲ್ಲದೆ ಕ್ಷೇತ್ರಕ್ಕೆ ಆಗಮಿಸಬಹುದೆಂದು ಪ್ರಕಟಣೆ ಹೊರಡಿಸಿದ ಸರ್ಕಾರ
  • ಮಹಿಳಾ ಭಕ್ತರ ತಡೆಗೆ 30ಕ್ಕೂ ಅಧಿಕ ಹಿಂದು ಸಂಘಟನೆಗಳಿಂದ ವಿಶೇಷ ಪಡೆ ರಚನೆ
  • ಸರ್ಕಾರ ಹಾಗೂ ಭಕ್ತರ ನಡುವಿನ ವಿವಾದ ಬುಧವಾರ ಚಳವಳಿ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಗೋಚರ
  • ಶಿವಸೇನೆಯಿಂದ ಆತ್ಮಾಹುತಿ ಪಡೆ ರಚನೆ, ಮಹಿಳೆಯರು ಪ್ರವೇಶಿಸಿದರೆ ಸಾವಿಗೆ ಶರಣಾಗುವ ಎಚ್ಚರಿಕೆ

 

ರಕ್ಷಣೆಗೆ ಸರ್ಕಾರ ಬದ್ಧ

ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಇರಾದೆ ಸರ್ಕಾರಕ್ಕಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ನ್ಯಾಯಾಲಯದ ಯಥಾವತ್ ತೀರ್ಪು ಪಾಲಿಸಲು ಸರ್ಕಾರ ಬದ್ಧವಾಗಿದೆ. ಭಕ್ತರ ನಂಬಿಕೆಗೆ ಧಕ್ಕೆ ತರುವ ಕೆಲಸ ಕೆಲವು ಸಂಘಟನೆಗಳಿಂದ ನಡೆಯುತ್ತಿದ್ದು, ಇದಕ್ಕೆ ಆಸ್ಪದ ನೀಡುವುದಿಲ್ಲ. ಯಾವುದೇ ಭಯವಿಲ್ಲದೆ ಅಯ್ಯಪ್ಪನ ದರ್ಶನ ಮಾಡಿಸಲು ಸರ್ಕಾರ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಸ್ತ್ರೀಪಡೆಯಿಂದಲೇ ತಡೆ

ಈಗಾಗಲೇ ಶಬರಿಮಲೆಯತ್ತ ಮಹಿಳಾ ಭಕ್ತರು ಆಗಮಿಸುತ್ತಿದ್ದು, ಇವರನ್ನು ಶಬರಿಮಲೆ ಪ್ರಾಥಮಿಕ ಶಿಬಿರ ಹಾಗೂ ಪಂಬನ್ ಭಾಗದಲ್ಲಿ ತಡೆಯಲಾಗುತ್ತಿದೆ. ಬಸ್, ಕಾರುಗಳನ್ನು ನಿಲ್ಲಿಸಿ ಅದರಲ್ಲಿರುವ ಮಹಿಳೆಯರನ್ನು ಕೆಳಕ್ಕಿಳಿಸಿ ವಾಪಸ್ ಕಳುಹಿಸಲಾಗುತ್ತಿದೆ. ಸ್ಥಳೀಯ ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ಬುಡಕಟ್ಟುವಾಸಿಗಳು ಹಾಗೂ ಮಹಿಳಾ ಭಕ್ತರ ಪಡೆ ಈ ಕಾರ್ಯ ಮಾಡುತ್ತಿದೆ.

ಸಂಧಾನ ಸಭೆ ವಿಫಲ:

ಮಹಿಳಾ ಭಕ್ತರ ಪ್ರವೇಶ ವಿಚಾರವಾಗಿ ಸುಪ್ರೀಂನಲ್ಲಿ ತಕ್ಷಣಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸದಿರಲು ದೇವಸ್ವಂ ಮಂಡಳಿ ತೀರ್ವನಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ದೇವಸ್ವಂ ಮಂಡಳಿ ಆಯೋಜಿಸಿದ್ದ ಸಭೆ ವಿಫಲವಾಗಿದೆ. ಮರುಪರಿಶೀಲನಾ ಅರ್ಜಿ ಸಲ್ಲಿಸುವ ಬೇಡಿಕೆಗಳ ಬಗ್ಗೆ ದೇವಸ್ವಂ ಮಂಡಳಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳದೆ ಅ.19ರಂದು ಸಭೆ ನಡೆಸಿ ರ್ಚಚಿಸಿದ ನಂತರ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ. ಇದರಿಂದ ಚರ್ಚೆ ಮುಂದುವರಿಸುವುದು ಅಸಾಧ್ಯವಾಗಿದೆ. ಮರುಪರಿಶೀಲನಾ ಅರ್ಜಿ ಸಲ್ಲಿಸುವ ಜತೆಗೆ ಇದರ ತೀರ್ಪು ಬರುವವರೆಗೆ ಶಬರಿಮಲೆಯಲ್ಲಿ ಹಿಂದಿನಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಾಡಿಕೊಂಡ ಮನವಿಗೂ ಮಂಡಳಿ ಸ್ಪಂದಿಸಿಲ್ಲ ಎಂದು ಪಂದಳಂ ರಾಜಕುಟುಂಬ ಪ್ರತಿನಿಧಿ ಶಶಿಕುಮಾರ್ ವರ್ಮ ತಿಳಿಸಿದ್ದಾರೆ.

ಮಧ್ಯಂತರ ಅರ್ಜಿ?

ಭಕ್ತರ ಹೋರಾಟಕ್ಕೆ ಮನ್ನಣೆ ನೀಡುವ ಸಲುವಾಗಿ ದೇವಸ್ಥಾನ ಮಂಡಳಿಯಿಂದ ಸುಪ್ರೀಂಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಆದೇಶ ಪಾಲನೆಗೆ ಕಾಲಾವಕಾಶ ಕೇಳುವ ಸಾಧ್ಯತೆಯಿದೆ. ವಿವಾದವನ್ನು ತಣ್ಣಗಾಗಿಸುವ ಉದ್ದೇಶದಿಂದ ಈ ಪ್ರಯತ್ನವೂ ಸಾಗಿದೆ. ಕೇರಳ ಪ್ರವಾಹದ ಹಿನ್ನೆಲೆಯಲ್ಲಿ ಮೂಲಸೌಕರ್ಯ ಹದಗೆಟ್ಟಿದೆ. ಮಹಿಳೆಯರಿಗೆ ವಿಶೇಷ ಭದ್ರತೆ ಹಾಗೂ ಸೌಕರ್ಯ ಒದಗಿಸಲು ಆಗುತ್ತಿಲ್ಲ ಎಂದು ಅರ್ಜಿಯಲ್ಲಿ ದಾಖಲಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.