ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ

ಶಬರಿಮಲೆ: ಕೇರಳದ ಅಯ್ಯಪ್ಪನ ಸನ್ನಿಧಿ ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಇಂದು ಮಕರ ಜ್ಯೋತಿ ದರ್ಶನವಾಗಿದೆ.

ಸಂಕ್ರಾಂತಿಯ ಮುನ್ನಾದಿನ ಶಬರಿಮಲೆಯಲ್ಲಿ ಮಕರವಿಳಕ್ಕು (ಮಕರ ಜ್ಯೋತಿ) ಎಂಬ ವಿಶೇಷ ವಿದ್ಯಮಾನ ಅನಾದಿಕಾಲದಿಂದಲೂ ಜರಗುತ್ತಿದೆ. ಅದರಂತೆ ಇಂದೂ ಕೂಡ ನಡೆಯಿತು.

ಪಂದಳರಾಜ ಮನೆತನದಿಂದ ಆಭರಣಗಳನ್ನು ತಂದು ದೇವರ ಮೂರ್ತಿಗೆ ಅಲಂಕಾರ ಮಾಡಿ, ಸಂಜೆ 6.30ರ ಹೊತ್ತಿಗೆ ಮಹಾ ಮಂಗಳಾರತಿ ಬೆಳಗಿದ ನಂತರ ದೇಗುಲದ ಎದುರಿನ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ (ಮಕರವಿಳಕ್ಕು) ದರ್ಶನವಾಯಿತು.

ಈ ಅಪೂರ್ವ ಕ್ಷಣವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಜ್ಯೋತಿ ದರ್ಶನವಾಗುತ್ತಲೇ ಮಾಲಾಧಾರಿಗಳು ಸ್ವಾಮಿಯೇ ಶರಣಮ್​ ಆಯ್ಯಪ್ಪ ಎಂದು ಘೋಷ ಕೂಗಿದರು.
ಮಕರಜ್ಯೋತಿಯ ದರ್ಶನಕ್ಕಾಗಿಯೇ ದೇಶದ ಹಲವು ರಾಜ್ಯಗಳಿಂದ ಭಕ್ತರು ಕೇರಳದ ಶಬರಿಮಲೆಗೆ ಆಗಮಿಸಿದ್ದರು.

ಮಹಿಳೆಯರಿಗೂ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್​ ತೀರ್ಪಿತ್ತ ನಂತರ ಶಬರಿಗಿರಿ ಮತ್ತು ಕೇರಳಾದ್ಯಂತ ಘರ್ಷಣೆಗಳು ನಡೆದಿವೆ. ಮಹಿಳೆಯರು ದರ್ಶನ ಪಡೆದ ಐತಿಹಾಸಿಕ ಘಟನೆಗಳು ನಡೆದಿವೆ. ಅಲ್ಲದೆ, ಈ ಘಟನೆಗಳು ಕೇರಳವನ್ನು ಅಶಾಂತಿಗೂ ತಳ್ಳಿದೆ. ಆದರೆ, ಇದ್ಯಾವುದೂ ನೆನಪಿಗೆ ಬಾರದ ರೀತಿಯಲ್ಲಿ ಇಂದಿನ ಮಕರಜ್ಯೋತಿ ವಿದ್ಯಮಾನದಲ್ಲಿ ಜರುಗಿದ್ದು ವಿಶೇಷ.

Leave a Reply

Your email address will not be published. Required fields are marked *