ಶಬರಿಮಲೆಗೆ ಮಹಿಳೆಯರ ಪ್ರವೇಶ: ಸರ್ಕಾರದ ಜತೆ ಮಾತುಕತೆ ಸಾಧ್ಯವಿಲ್ಲವೆಂದ ತಂತ್ರಿಗಳು

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿದ ಸುಪ್ರೀಂಕೋರ್ಟ್​ ಆದೇಶಕ್ಕೆ ಸಂಬಂಧಪಟ್ಟಂತೆ ಎದ್ದಿರುವ ವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ದೇಗುಲದ ತಂತ್ರಿ( ಮುಖ್ಯ ಪುರೋಹಿತರು)ಗಳನ್ನು ಮಾತುಕತೆಗೆ ಆಹ್ವಾನಿಸಿದ್ದರು. ಆದರೆ ಮುಖ್ಯಮಂತ್ರಿಯ ಆಹ್ವಾನವನ್ನು ಪುರೋಹಿತರು ನಿರಾಕರಿಸಿದ್ದಾರೆ.

‘ಮೊದಲು ಕೇರಳ ಸರ್ಕಾರ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಬೇಕು. ನಂತರ ನಾವು ಮಾತನಾಡಲು ಬರುತ್ತೇವೆ ಎಂದು ದೇಗುಲ ಮುಖ್ಯ ತಂತ್ರಿ ಮೋಹಾನಾರು ಕಂದಾರಾರು ಹೇಳಿದ್ದು, ದೇವಸ್ಥಾನ ವಿಚಾರದಲ್ಲಿ ಅವರ ಮಾತನ್ನೇ ಅಂತಿಮ ನಿರ್ಧಾರ ಎಂದು ಪರಿಗಣಿಸಲಾಗಿದೆ.

ಅಯ್ಯಪ್ಪ ದೇವಸ್ಥಾನಕ್ಕೆಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದರಿಂದ ಅಲ್ಲಿನ ದೈವತ್ವಕ್ಕೆ ಹಾನಿಯಾಗುತ್ತದೆ. ಇಲ್ಲಿನ ಸಂಪ್ರದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಅದಕ್ಕೆ ರಾಜಿಯಾಗಲು ಆಗುವುದಿಲ್ಲ ಎಂದಿದ್ದಾರೆ.

ಅಯ್ಯಪ್ಪ ದೇಗುಲಕ್ಕೆ 600 ಮಹಿಳಾ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುವುದು ಎಂದು ರಾಜ್ಯ ಪೊಲೀಸ್​ ಮುಖ್ಯಸ್ಥ ಲೋಕನಾಥ್​ ಬೆಹರಾ ತಿಳಿಸಿದ್ದರು. ಅದನ್ನು ವಿರೋಧಿಸಿರುವ ಮೋಹಾನಾರು ಕಂದಾರಾರು, ಮಹಿಳಾ ಪೋಲಿಸರಿಂದ ದೇಗುಲದ ಸಂಪ್ರದಾಯಗಳಿಗೆ ಧಕ್ಕೆಯಾಗುತ್ತದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್​ ತೀರ್ಪಿನ ಅನ್ವಯ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಹೋಗಲು ಬಯಸುವ ಮಹಿಳೆಯನ್ನು ತಡೆಯಲು ಸಾಧ್ಯವಿಲ್ಲ. ಕೇರಳ ಸರ್ಕಾರ ಸುಪ್ರೀಂ ಕೋರ್ಟ್​ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ಇತ್ತೀಚೆಗೆ ಸ್ಪಷ್ಟಪಡಿಸಿದ್ದರು.