ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ನೀಡಲಾಗಿದ್ದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿ ವಿಚಾರಣೆಯನ್ನು ಏಳು ಸದಸ್ಯರ ವಿಸ್ತೃತ ಪೀಠಕ್ಕೆ ವರ್ಗಾಯಿಸಿ ಇಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶ ಮಾಡಬಹುದು ಎಂದು ಹಿಂದಿನ ಸುಪ್ರೀಂಕೋರ್ಟ್ ಸಿಜೆಐ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠ ನೀಡಿದ್ದ ತೀರ್ಪಿನ ವಿರುದ್ಧ 65 ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಇಂದಿನ ಸಿಜೆಐ ರಂಜನ್ ಗೊಗೊಯ್ ಅವರ ನೇತೃತ್ವದ ಪಂಚಪೀಠ ಸದ್ಯಕ್ಕೆ ಯಾವುದೇ ತೀರ್ಪು ನೀಡಿಲ್ಲ. ಬದಲಿಗೆ ಅರ್ಜಿ ವಿಚಾರಣೆಯನ್ನು ಏಳು ಸದಸ್ಯರ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
ಧಾರ್ಮಿಕ ಆಚರಣೆಗಳಿಗೆ ಅವರದ್ದೇ ಆದ ಹಕ್ಕು ಇದೆ. ದೇವಸ್ಥಾನ ಪ್ರವೇಶಕ್ಕೆ ಎಲ್ಲರಿಗೂ ಹಕ್ಕು ಇದೆ. ಇತರೆ ಧರ್ಮಗಳ ಮಸೀದಿ, ಪಾರ್ಸಿ ಮಂದಿರಗಳಿಗೂ ಇದು ಅನ್ವಯವಾಗುತ್ತದೆ. ಹಾಗಾಗಿ ಶಬರಿಮಲೆ ದೇವಾಲಯಕ್ಕೂ ಮಹಿಳೆಯರು ಪ್ರವೇಶ ಮಾಡಬಹುದು ಎಂದು ತೀರ್ಪು ಓದುವ ವೇಳೆ ಸಿಜೆಐ ರಂಜನ್ ಗೊಗೊಯ್ ಹೇಳಿದ್ದಾರೆ.
ಪಂಚಪೀಠದ್ದಲ್ಲಿದ್ದ ನ್ಯಾ.ನಾರಿಮನ್ ಹಾಗೂ ನ್ಯಾ.ಚಂದ್ರಚೂಡ್ ಎಂಬುವರು ವಿಭಿನ್ನವಾಗಿ ತೀರ್ಪು ನೀಡಿದ್ದರಿಂದ ಏಳು ಸದಸ್ಯರ ಪೀಠಕ್ಕೆ ಅರ್ಜಿ ವಿಚಾರಣೆಯನ್ನು ವರ್ಗಾಯಿಸಲಾಗಿದೆ.
ಕೇರಳದ ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೂ ಪ್ರವೇಶಕ್ಕೆ ಅನುಮತಿ ನೀಡಿ 2018ರ ಸೆಪ್ಟೆಂಬರ್ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆದರೆ ಆ ತೀರ್ಪಿನಿಂದ ಅನೇಕ ಗಲಾಟೆಗಳೂ ಆಗಿದ್ದವು. ಪರ, ವಿರೋಧ ಪ್ರತಿಭಟನೆಗಳೂ ನಡೆದಿದ್ದವು. ಕೆಲವು ಮಹಿಳೆಯರು ದೇಗುಲವನ್ನು ಪ್ರವೇಶಿಸಲು ಪ್ರಯತ್ನಿಸಿದ್ದು ಇನ್ನೂ ಗಲಾಟೆ ಹೆಚ್ಚಲು ಕಾರಣವಾಗಿತ್ತು.
ತೀರ್ಪನ್ನು ಮರುಪರಿಶೀಲನೆ ಮಾಡುವಂತೆ 65 ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಚಾರಣೆ ನಡೆಸಿದ್ದ ರಂಜನ್ ಗೊಗೊಯ್ ನೇತೃತ್ವದ ಪಂಚಪೀಠ ಫೆಬ್ರವರಿಯಲ್ಲಿ ತೀರ್ಪು ಕಾಯ್ದಿರಿಸಿತ್ತು.