ಅಯ್ಯಪ್ಪನಿಗೆ ಸರ್ಕಾರ ಶರಣು

ಕಾಸರಗೋಡು: ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಎಲ್ಲ ವಯೋಮಾನದ ಮಹಿಳೆಯರಿಗೂ ಅವಕಾಶ ಕಲ್ಪಿಸಿಯೇ ತೀರುವ ಹಠಕ್ಕೆ ಬಿದ್ದಿದ್ದ ಕೇರಳ ಸರ್ಕಾರ ಕೊನೆಗೂ ಭಕ್ತರ ಒಗ್ಗಟ್ಟು, ಭಕ್ತಿಗೆ ಮಣಿದಿದೆ. ಸವೋಚ್ಚ ನ್ಯಾಯಾಲಯದ ತೀರ್ಪು ಜಾರಿಗೆ ಕಾಲಾವಕಾಶ ಕೋರಲು ದೇವಸ್ವಂ ಮಂಡಳಿಗೆ ಅವಕಾಶವಿದೆ ಎನ್ನುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಮಹಿಳಾ ದರ್ಶನ ತಡೆಯಲು ಭಕ್ತರಿಗೆ ದಾರಿ ತೋರಿಸಿದ್ದಾರೆ. ಬದಲಾದ ಸರ್ಕಾರದ ಈ ನಡೆ ಬೆನ್ನಲ್ಲೇ ಮಂಡಲ ಪೂಜಾ ಮಹೋತ್ಸವಕ್ಕಾಗಿ ಅಯ್ಯಪ್ಪ ಗರ್ಭಗುಡಿ ಶುಕ್ರವಾರ ಬಾಗಿಲು ತೆರೆಯಲಿದೆ. ಅಯ್ಯಪ್ಪ ದರ್ಶನಕ್ಕೆ 800 ಮಹಿಳೆಯರು ಆನ್​ಲೈನ್ ಬುಕಿಂಗ್ ಮಾಡಿರುವುದರಿಂದ ಕ್ಷೇತ್ರದಲ್ಲಿ ಮತ್ತೆ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.

ಮೆದುವಾದ ಪಿಣರಾಯಿ: ಶಬರಿಮಲೆ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಐಕ್ಯರಂಗ, ಬಿಜೆಪಿ ನೇತೃತ್ವದ ಎನ್​ಡಿಎ ನಿಲುವು ಬಿಗಿಗೊಳ್ಳುತ್ತಿದ್ದಂತೆಯೇ ಕೇರಳ ಸರ್ಕಾರ ಹಠಮಾರಿ ಧೋರಣೆಯಿಂದ ಹಿಂದೆ ಸರಿಯಲಾರಂಭಿಸಿದೆ.

ಗುರುವಾರ ರಾಜಕುಟುಂಬ ಹಾಗೂ ತಂತ್ರಿ ಮನೆತನದೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಹಿಳೆಯರ ಪ್ರವೇಶ ವಿಷಯದಲ್ಲಿ ಸುಪ್ರೀಂಕೋರ್ಟು ತೀರ್ಪು ಜಾರಿಗೊಳಿಸಲು ದೇವಸ್ವಂ ಮಂಡಳಿಗೆ ಕಾಲಾವಕಾಶ ಕೋರಲು ಅವಕಾಶವಿರುವುದಾಗಿ ತಿಳಿಸಿದರು.

ಇಂದಿನಿಂದ ಮಂಡಲ ಪೂಜೆ

ಮಂಡಲ ಪೂಜಾ ಮಹೋತ್ಸವಕ್ಕಾಗಿ ಶುಕ್ರವಾರ ಅಯ್ಯಪ್ಪ ಗರ್ಭಗುಡಿ ಬಾಗಿಲು ತೆರೆದುಕೊಳ್ಳಲಿದೆ. ಅನ್ಯರಾಜ್ಯ ಭಕ್ತರು ಈಗಾಗಲೇ ನೀಲಕ್ಕಲ್ ತಲುಪಿದ್ದು, ಭದ್ರತೆ ದೃಷ್ಟಿಯಿಂದ ಪೊಲೀಸರು ಇವರನ್ನು ಪಂಪೆಗೆ ಮುಂದುವರಿಯದಂತೆ ತಡೆಹಿಡಿದಿದ್ದಾರೆ. ಮಾಧ್ಯಮ ಪ್ರತಿನಿಧಿಗಳನ್ನೂ 16ರ ಬೆಳಗ್ಗೆಯೇ ಸನ್ನಿಧಾನಕ್ಕೆ ಬಿಡಲು ತೀರ್ವನಿಸಿದ್ದಾರೆ. ಮಂಡಲಪೂಜೆ ಬಳಿಕ ಡಿ. 27ರಂದು ಗರ್ಭಗುಡಿ ಬಾಗಿಲು ಮುಚ್ಚಲಿದೆ. ಅನಂತರ ಮಕರಜ್ಯೋತಿ ಮಹೋತ್ಸವಕ್ಕಾಗಿ ಡಿ.30ರಂದು ಬಾಗಿಲು ತೆರೆದು 2019 ಜ.20ರಂದು ಮುಚ್ಚಲಿದೆ. ಜನವರಿ 14ರಂದು ಮಕರಜ್ಯೋತಿ ದರ್ಶನವಾಗಲಿದೆ.


ಡಿ.10ಕ್ಕೆ ಭಕ್ತರ ಸಮಾವೇಶ

ಮಂಗಳೂರು: ಹಿಂದು ಸಂಘಟನೆಗಳ ನೇತೃತ್ವದಲ್ಲಿ ಡಿ.10ರಂದು ಶಬರಿಮಲೆಯ ಪಂಪೆಯಲ್ಲಿ ಗುರುಸ್ವಾಮಿಗಳ ಹಾಗೂ 1 ಲಕ್ಷಕ್ಕೂ ಅಧಿಕ ಅಯ್ಯಪ್ಪ ಭಕ್ತರ ಬೃಹತ್ ಸಮಾವೇಶ ಆಯೋಜಿಸಲು ಮಂಗಳೂರಿನಲ್ಲಿ ನಡೆದ ಬೈಠಕ್​ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಸರ್ವಪಕ್ಷ ಸಭೆ ವಿಫಲ

ಶಬರಿಮಲೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಸರ್ವಪಕ್ಷ ಸಭೆ ಯಾವುದೇ ಸ್ಪಷ್ಟ ತೀರ್ವನಕೈಗೊಳ್ಳಲಾಗದೆ ಪ್ರತಿಪಕ್ಷಗಳ ಬಹಿಷ್ಕಾರದೊಂದಿಗೆ ಕೊನೆಗೊಂಡಿದೆ. ಶಬರಿಮಲೆಗೆ ಯುವತಿಯರ ಪ್ರವೇಶವನ್ನು ಯಾವುದೇ ಕಾರಣಕ್ಕೂ ತಡೆಯಲಾಗದೆಂಬ ಸಿಎಂ ನಿಲುವನ್ನು ಖಂಡಿಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಶಬರಿಮಲೆ ವಿಷಯದಲ್ಲಿ ಮುಖ್ಯಮಂತ್ರಿಗೆ ಶಾಂತಿ ಕಾಪಾಡುವುದು ಬೇಕಾಗಿಲ್ಲ. ಯುವತಿಯರ ಪ್ರವೇಶಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ಸರ್ಕಾರದ ಹಠಮಾರಿ ಧೋರಣೆ ಸರ್ವಪಕ್ಷ ಸಭೆಯಲ್ಲೂ ಪ್ರಕಟಗೊಂಡಿದೆ ಎಂದು ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. ಶಬರಿಮಲೆ ಭಕ್ತರನ್ನು ಶತ್ರುಗಳಂತೆ ಕಾಣುವ ಸಿಎಂ ಧೋರಣೆ ಬದಲಾಗಬೇಕು. ಸರ್ವಪಕ್ಷ ಸಭೆಯಲ್ಲಿ ಪಿಣರಾಯಿ ವಿಜಯನ್ ಏಕಪಕ್ಷೀಯವಾಗಿ ವರ್ತಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್ ಶ್ರೀಧರನ್ ಪಿಳ್ಳೆ ಆರೋಪಿಸಿದ್ದಾರೆ.

ಮುಂದಿನ ಸಾಧ್ಯತೆ?

ತೀರ್ಪು ಜಾರಿಗೆ ಕಾಲಾವಕಾಶ ಕೋರುವ ಸಂಬಂಧ ದೇವಸ್ವಂ ಮಂಡಳಿಗೆ ಮುಖ್ಯಮಂತ್ರಿ ಆದೇಶ ನೀಡಿದಲ್ಲಿ ಮಂಡಳಿ ತಕ್ಷಣ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಂದೊಮ್ಮೆ ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದರೆ 64 ದಿನಗಳ ಶಬರಿಮಲೆ ಮಹೋತ್ಸವದಿಂದ ಯುವತಿಯರು ದೂರ ಉಳಿಯುವ ಸಾಧ್ಯತೆಯಿದೆ.

ತೃಪ್ತಿಗಿಲ್ಲ ಅವಕಾಶ

ಶಬರಿಮಲೆಗೆ ತೆರಳುವ ಮಹಿಳೆಯರ ಪ್ರಯತ್ನವನ್ನು ಭಕ್ತರು ವಿಫಲಗೊಳಿಸಲಿ ದ್ದಾರೆಂದು ಶಬರಿಮಲೆ ಹೋರಾಟಗಾರ ರಾಹುಲ್ ಈಶ್ವರ್ ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಎಚ್ಚರಿಕೆ ನೀಡಿದ್ದಾರೆ.

ಮಹಿಳೆಯರ ದರ್ಶನಕ್ಕಾಗಿಯೇ ಪ್ರತ್ಯೇಕವಾಗಿ 1 ದಿನವನ್ನು ಪರಿಗಣಿಸಬೇಕಾದ ಅಗತ್ಯದ ಬಗ್ಗೆ ರ್ಚಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದೆ.

| ಪಿಣರಾಯಿ ವಿಜಯನ್ ಸಿಎಂ