ಶಬರಿಮಲೆ ವಿವಾದ, ಭಕ್ತ ಆತ್ಮಾಹುತಿ

«ಸತ್ಯಾಗ್ರಹ ಸ್ಥಳದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಆಟೋ ಚಾಲಕ»

ಕಾಸರಗೋಡು: ಶಬರಿಮಲೆ ಆಚಾರ, ಅನುಷ್ಠಾನ ಸಂರಕ್ಷಣೆಗಾಗಿ ಬಿಜೆಪಿ ಮುಖಂಡ ಸಿ.ಕೆ ಪದ್ಮನಾಭನ್ ತಿರುವನಂತಪುರದಲ್ಲಿ ನಿರಾಹಾರ ಸತ್ಯಾಗ್ರಹ ನಡೆಸುತ್ತಿರುವ ಚಪ್ಪರದ ಬಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಭಕ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಿರುವನಂತಪುರ ಮಟ್ಟಡಂ ನಿವಾಸಿ, ಆಟೋರಿಕ್ಷಾ ಚಾಲಕ ವೇಣುಗೋಪಾಲ್(49) ಮೃತರು. ಗುರುವಾರ ನಸುಕಿಗೆ ಸತ್ಯಾಗ್ರಹ ಚಪ್ಪದ ಬಳಿ ಆಗಮಿಸಿದ ಅವರು ಏಕಾಏಕಿ ಪೆಟ್ರೋಲ್ ಸುರಿದು ಮೈಗೆ ಬೆಂಕಿ ಹಚ್ಚಿಕೊಂಡಿದ್ದರು. ತಕ್ಷಣ ಸತ್ಯಾಗ್ರಹ ನಿರತ ಸಿ.ಕೆ ಪದ್ಮನಾಭನ್ ತನ್ನ ಗನ್‌ಮ್ಯಾನ್, ಇತರ ಮುಖಂಡರ ಜತೆ ಧಾವಿಸಿ ನೀರು ಹಾಯಿಸಿ, ಬೆಂಕಿ ನಂದಿಸಿದ ನಂತರ ಸ್ಥಳದಲ್ಲಿದ್ದ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾಯಂಕಾಲ ಮೃತಪಟ್ಟಿದ್ದಾರೆ.

ಬೆಂಕಿ ಹಚ್ಚಿಕೊಂಡು ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷಣೆಯೊಂದಿಗೆ ಆಗಮಿಸಿದ ವ್ಯಕ್ತಿ ‘ಅಯ್ಯಪ್ಪನಿಗಾಗಿ ನನ್ನಿಂದ ಇಷ್ಟು ಮಾತ್ರ ಮಾಡಲು ಸಾಧ್ಯ’ ಎಂದು ತಿಳಿಸಿ ಕುಸಿದು ಬಿದ್ದಿದ್ದರು ಎಂದು ಪದ್ಮನಾಭನ್ ತಿಳಿಸಿದ್ದಾರೆ. ಅಯ್ಯಪ್ಪ ಭಕ್ತನಾಗಿರುವ ವೇಣುಗೋಪಾಲ್ ಶಬರಿಮಲೆ ವಿವಾದ ಹುಟ್ಟಿಕೊಂಡ ನಂತರ ಖಿನ್ನತೆಗೊಳಗಾಗಿದ್ದರು ಎಂದು ವೇಣುಗೋಪಾಲ್ ಮನೆಯವರು ತಿಳಿಸಿದ್ದಾರೆ.

ಸಾವಿನ ಹೊಣೆ ಸಂಪೂರ್ಣವಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊರಬೇಕು. ಗಂಭೀರ ಸುಟ್ಟಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದರೂ, ಯಾವೊಬ್ಬ ಅಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಸಾವಿನ ಬಗ್ಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯಧೋರಣೆ ತಳೆದಿದ್ದು, ಇದು ಅಯ್ಯಪ್ಪ ಭಕ್ತರನ್ನು ಕೇರಳ ಸರ್ಕಾರ ನಡೆಸಿಕೊಳ್ಳುವ ರೀತಿಯನ್ನು ಸೂಚಿಸುತ್ತಿದೆ ಎಂದು ಪದ್ಮನಾಭನ್ ಆರೋಪಿಸಿದ್ದಾರೆ.

ಇಂದು ಕೇರಳಾದ್ಯಂತ ಹರತಾಳ: ಅಯ್ಯಪ್ಪ ಭಕ್ತ ವೇಣುಗೋಪಾಲನ್ ನಾಯರ್(49) ಆತ್ಮಾಹುತಿ ಹಿನ್ನೆಲೆಯಲ್ಲಿ ಡಿ.14ರಂದು ಬೆಳಗ್ಗೆ 6ರಿಂದ ಸಾಯಂಕಾಲ 6ರವರೆಗೆ ಕೇರಳ ರಾಜ್ಯಾದ್ಯಂತ ಬಿಜೆಪಿ ಹರತಾಳ ಘೋಷಿಸಿದೆ.

ಜ್ಯೋತಿ ಅಭಿಯಾನ: ಶಬರಿಮಲೆ ಆಚಾರ ಅನುಷ್ಠಾನಗಳನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಡಿ.26ರಂದು ಕಾಸರಗೋಡು ಜಿಲ್ಲೆಯ ಮಂಜೇಶ್ವರದಿಂದ ತಿರುವನಂತಪುರದ ಪಾರ ಶಾಲೆವರೆಗೆ ಅಯ್ಯಪ್ಪ ಜ್ಯೋತಿ ಅಭಿಯಾನ ನಡೆಯಲಿದೆ. ಶಬರಿಮಲೆ ಕ್ರಿಯಾ ಸಮಿತಿ ವತಿಯಿಂದ ಸುಮಾರು 700 ಕಿ.ಮೀ.ವರೆಗೆ ಲಕ್ಷಾಂತರ ಮಂದಿ ಒಟ್ಟು ಸೇರಿ ಎಳ್ಳೆಣ್ಣೆ ದೀಪ ಬೆಳಗುವ ಕಾರ್ಯಕ್ರಮ ಇದಾಗಿದೆ.

ನಿಷೇಧಾಜ್ಞೆ ಮುಂದುವರಿಕೆ: ಶಬರಿಮಲೆಯಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಸನ್ನಿಧಾನದಿಂದ ಇಲವುಂಗಾಲ್ ತನಕ ಡಿ.16ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. 2019ರ ಜನವರಿ 14ರವರೆಗೆ ನಿಷೇಧಾಜ್ಞೆ ಮುಂದುವರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ನಿಷೇಧಾಜ್ಞೆ ಹಿಂಪಡೆಯುವಂತೆ ಆಗ್ರಹಿಸಿ ನೀಲಕ್ಕಲ್‌ನಲ್ಲಿ ಭಕ್ತರ ತಂಡವೊಂದು ಆದೇಶ ಉಲ್ಲಂಘಿಸಲು ಮುಂದಾದಾಗ ಪೊಲೀಸರು ಬಂಧಿಸಿದ್ದಾರೆ.