More

    ಅರ್ಥಾಗ್ದಿದ್ರು ಸಿಕ್ದಂಗ್ ಅನ್ನಾದ್ ಚಂದ್ರನ್ ಮಕ್ ಉಗ್ದಂಗೆ: ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯರ ಅಂಕಣ

    ಅರ್ಥಾಗ್ದಿದ್ರು ಸಿಕ್ದಂಗ್ ಅನ್ನಾದ್ ಚಂದ್ರನ್ ಮಕ್ ಉಗ್ದಂಗೆ: ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯರ ಅಂಕಣಸಾಹಿತ್ಯದ ಓದುಗನಿಗೆ ಭಾರತೀಯ ಚಿಂತನೆಯಲ್ಲಿ ದೊರೆತಿರುವಷ್ಟು ಪ್ರಾಧಾನ್ಯ ಬೇರೆಲ್ಲಿಯೂ ದೊರೆತಿಲ್ಲ. ಸಾಹಿತ್ಯಪ್ರಕ್ರಿಯೆಯ ಒಂದು ತುದಿಯಲ್ಲಿ ಕವಿಯಿದ್ದರೆ ಮತ್ತೊಂದು ತುದಿಯಲ್ಲಿ ಸಹೃದಯನಿರುತ್ತಾನೆ. ಕವಿ ಭಾಷೆಯಲ್ಲಿ ಸೃಷ್ಟಿಸಿದ ಅನುಭವ, ಚಿಂತನೆಯನ್ನು ಸಹೃದಯ ಮತ್ತೆ ತನ್ನ ಮನೋಜಗತ್ತಿನಲ್ಲಿ ಮರುಸೃಷ್ಟಿಸಿಕೊಳ್ಳುತ್ತಾನೆ. ಆದ್ದರಿಂದಲೇ ಅಭಿನವಗುಪ್ತನು ‘ಸರಸ್ವತ್ಯಾಸ್ತತ್ವಂ ಕವಿಸಹೃದಯಾಖ್ಯಂ ವಿಜಯತೇ’ ಎಂದು ಹೇಳಿ ಕವಿ-ಸಹೃದಯರಿಬ್ಬರೂ ಒಂದೇ ಸಾರಸ್ವತ ತತ್ತ್ವದ ಅಂಗಗಳೆಂದೂ, ಇಬ್ಬರೂ ಒಂದುಗೂಡಿಯೇ ಕಾವ್ಯವಾಗುವುದೆಂದೂ ಅಭಿಪ್ರಾಯ ಪಡುತ್ತಾನೆ. ಮಾತ್ರವಲ್ಲ, ‘ಯೇಷಾಂ ಕಾವ್ಯಾನುಶೀಲನವಶಾತ್ ವಿಶದೀಭೂತೇ ಮನೋಮುಕುರೇ ವರ್ಣನೀಯ ತನ್ಮಯೀಭವನಯೋಗ್ಯತಾತೇ ಹೃದಯ ಸಂವಾದಭಾಜಃ ಸಹೃದಯಾ’-‘ಕಾವ್ಯಗಳನ್ನು ಪರಿಶೀಲಿಸಿ, ಮನಸ್ಸೆಂಬ ಕನ್ನಡಿ ನಿರ್ಮಲವಾಗಿರುವುದರಿಂದ, ವರ್ಣಿತ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗುಂಟೋ ಅವನೇ ಸಹೃದಯ; ಆತ ಕವಿಹೃದಯಕ್ಕೆ ಸಮಾನವಾದ ಹೃದಯವುಳ್ಳವನು; ಕವಿಯ ಅನುಭವದಲ್ಲಿ ಈತನೂ ಪಾಲುದಾರನಾಗಿ, ಆತನ ಆಶಯವನ್ನು, ಇಂಗಿತವನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳುವಂಥವನು.’ (ಭಾರತೀಯ ಕಾವ್ಯಮೀಮಾಂಸೆ, ತೀನಂಶ್ರೀ, ಪುಟ 161) ಇಂತಹ ಸಹೃದಯನಿಗಾಗಿ ಎಲ್ಲರೂ ಹಂಬಲಿಸಿದ್ದಾರೆ. ಸಹೃದಯ ಅಥವಾ ರಸಿಕನೊಡನೆ ಸಂವಾದ ಸಾಧ್ಯ. ಆದರೆ ಅರಸಿಕನ ಜೊತೆ? ಆ ಹಿಂಸೆ ಯಾರಿಗೂ ಬೇಡ.

    ಇತರ ಕರ್ಮಫಲಾನಿ ಯದೃಚ್ಛ ಯಾ/ವಿತರ ತಾನಿ ಸಹೇ ಚತುರಾನನ!/ಅರಸಿಕೇಷು ಕವಿತ್ವ ನಿವೇದನಂ/ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ; (ಉಳಿದೆಲ್ಲ ಕರ್ಮಫಲಗಳನು ಮನಬಂದಂತೆ/ ಕಳುಹು; ಸಹಿಸುವೆನಯ್ಯ ನಾನದನು ವಿಧಿಯೆ,/ಅರಸಿಕರ ಮುಂದೆ ಕವಿತೆಯನೊಪ್ಪಿಸುವುದೊಂದ /ಬರೆಯದಿರು ಬರೆಯದಿರು ಬರೆಯದಿರು ಶಿರದಿ- ಅನುವಾದ ತೀನಂಶ್ರೀ)

    ಸಮರ್ಥ ಕವಿ ತನ್ನ ಕಾಲದ ಟೀಕೆಗಳಿಗೆ ಸೊಪ್ಪು ಹಾಕದೆ ಕೃತಿ ರಚಿಸಿದರೂ, ಆತನೂ ಮುಂದೆ ಎಂದಾದರೂ ಸಹೃದಯ ಓದುಗ ದೊರೆಯಬಹುದೆಂಬ ನಿರೀಕ್ಷೆಯಲ್ಲಿರುತ್ತಾನೆ. ಭವಭೂತಿಯ ಈ ಮಾತುಗಳನ್ನು ಗಮನಿಸಿ: ‘ಯೇ ನಾಮ ಕೇಚಿದಿಹ ನಃ ಪ್ರಥಯಂತ್ಯವಜ್ಞಾಂ/ಜಾನಂತಿ ತೇ ಕಿಮಪಿ ತಾನ್ ಪ್ರತಿ ನೈಷ ಯತ್ನಃ/ಉತ್ಪತ್ಸ್ಯತೇಸ್ತಿ ಮಮ ಕೋಪಿ ಸಮಾನಧರ್ವ/ಕಾಲೋಹ್ಯಯಂ ನಿರವಧಿರ್ವಿಪುಲಾ ಚ ಪೃಥ್ವಿ (ಇಲ್ಲಿ ಕೆಲರಾರುಂಟೋ ನಮ್ಮನವಗಣಿಸುವವರು/ ಬಲ್ಲವರವರೇನನೋ ಈ ಯತ್ನವವರಿಗಲ್ಲ/ಜನಿಸಲಿಹನು ತಾನಾರೋ ಸಮಧರ್ವಿು ನನಗೆ; ಕೊನೆಯುಂಟೆ ಕಾಲಕ್ಕೆ, ಮತ್ತೆ ಪರಿಮಿತವೆ ಪೃಥಿವಿ’- ಅನುವಾದ; ತೀನಂಶ್ರೀ). ಜಿ.ಎಸ್. ಶಿವರುದ್ರಪ್ಪನವರು ಹೇಳುವಂತೆ ‘ಕವಿಯು ತನ್ನ ಭಾವಕ್ಕೆ ಅಭಿವ್ಯಕ್ತಿ ನೀಡುವುದರಲ್ಲಿ ತುಷ್ಟ; ಆ ನಂತರ ಅದನ್ನು ಹತ್ತೂ ಜನರೊಡನೆ ಹಂಚಿಕೊಂಡು ಸುಖಿಸುವುದು ಆತನಿಗೆ ಇಷ್ಟ.’ ಬೇಂದ್ರೆ ಹೇಳುತ್ತಾರೆ; ‘ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ/ನೀಡುವೆನು ರಸಿಕ ನಿನಗೆ/ಕಲ್ಲುಸಕ್ಕರೆಯಂಥ ನಿನ್ನ ಮನ ಕರಗಿದರೆ/ಆ ಸವಿಯ ಹಣಿಸು ನನಗೆ.’

    ಆದರೆ ಅನೇಕ ವೇಳೆ ಇಂತಹ ಸಹೃದಯರ ಬದಲಿಗೆ ಆರ್ನಾಲ್ಡ್ ಹೇಳುವ ‘ಫಿಲಿಸ್ಟಿನ್’ ಎಂದರೆ ‘ಅರಸಿಕ’ ಮಹಾಶಯರೆ ಹೆಚ್ಚಾಗಿ ಕಾಣಿಸುವುದುಂಟು. ಎಲ್ಲ ಕಾಲದಲ್ಲೂ ಇಂತಹವರು ಇದ್ದರೂ ಈಗ ಇವರ ಸಂಖ್ಯೆ ಜಾಸ್ತಿಯಾಗಿರುವಂತೆ ತೋರುತ್ತದೆ. ತಾವು ಮಹತ್ವದ್ದನ್ನು ಬರೆಯದಿದ್ದರೂ ಎಲ್ಲವನ್ನೂ, ಎಲ್ಲರನ್ನೂ ಟೀಕಿಸುವುದರಲ್ಲೇ ಇವರು ತೃಪ್ತರು; ಬಹುಶಃ ತಮಗೆ ಸಾಧ್ಯವಾಗದ್ದನ್ನು ಬೇರೆಯವರು ಮಾಡಿದರೆ ಸಹಿಸಲಾಗದ ಮನಃಸ್ಥಿತಿಯೂ ಇವರದ್ದಿರಬಹುದು. ಕೈಲಾಗದವ ಮೈ ಪರಚಿಕೊಂಡ ಎಂಬಂತೆ ಇವರು ಅವರಿವರನ್ನು ಅರಿವುಗೆಟ್ಟು ನಿಂದಿಸುವುದರಲ್ಲೇ ಪರಮಸಂತೋಷ ಪಡೆಯುತ್ತಾರೆ. ಸಿನಿಕ ಮನೋಭಾವದ ಇಂಥವರು ಸದಭಿರುಚಿಯ ಪರಿಸರದಲ್ಲಿ ದ್ವೇಷ ಅಸಹನೆಗಳನ್ನು ಹುಟ್ಟುಹಾಕಿ, ಸಾಮಾಜಿಕವಾಗಿ ಅನಾರೋಗ್ಯಕರ ವಾತಾವರಣ ಸೃಷ್ಟಿಗೆ ಕಾರಣರಾಗುತ್ತಾರೆ.

    ವಾಮನ ತನ್ನ ‘ಕಾವ್ಯಾಲಂಕಾರ ಸೂತ್ರ’ದಲ್ಲಿ ಓದುಗರಲ್ಲಿ ಎರಡು ಬಗೆಯನ್ನು ಗುರ್ತಿಸುತ್ತಾನೆ. ಮೊದಲನೆಯವರನ್ನು ಆತ ‘ಸತೃಣಾಭ್ಯ ವ್ಯವಹಾರಿಗಳು’ ಎಂದು ಕರೆಯುತ್ತಾನೆ. ಇವರು ಸಿಕ್ಕಿದ್ದನ್ನೆಲ್ಲಾ ಮೇದು, ಅದೂ ಚೆನ್ನ, ಇದೂ ಚೆನ್ನ ಎಂದು ತಲೆದೂಗುವ ಕೋಲೆಬಸವನ ರೀತಿಯವರು. ಇವರಿಗೆ ಓದಿನಲ್ಲಿ ಯಾವ ಬಗೆಯ ಆಯ್ಕೆಯಾಗಲೀ, ವಿವೇಚನೆಯಾಗಲೀ ಇರುವುದಿಲ್ಲ. ಇಂಥವರಿಂದ ಸದಭಿರುಚಿ ನಿರ್ಮಾಣದಲ್ಲಿ ಅಂತಹ ಪ್ರಯೋಜನವಿಲ್ಲದಿದ್ದರೂ ಇವರು ನಿರಪಾಯಿಗಳು. ಮತ್ತೊಂದು ಬಗೆಯನ್ನು ವಾಮನ ‘ಅರೋಚಿಗಳು’ ಎಂದು ಕರೆಯುತ್ತಾನೆ. ಸತೃಣಾಭ್ಯ ವ್ಯವಹಾರಿಗಳು ಒಂದು ತುದಿಯಾದರೆ ಇವರು ಇನ್ನೊಂದು ತುದಿ. ಅವರು ಎಲ್ಲವನ್ನೂ ಸ್ವೀಕರಿಸಿದರೆ, ಇವರು ಯಾವುದನ್ನೂ ಒಪ್ಪರು. ಎಲ್ಲವೂ ಇವರಿಗೆ ತಿರಸ್ಕಾರಯೋಗ್ಯ. ಆಡೆನ್ ಇಂತಹ ಅರೋಚಿಗಳನ್ನು ‘ಪ್ರಿಗ್’ ಎಂದು ಕರೆಯುತ್ತಾನೆ. ಪ್ರಿಗ್​ಗಳ ಪ್ರಕಾರ ತಮ್ಮ ಕಾಲದ ಯಾವುದೂ ಅವರಿಗೆ ಚಂದಿಲ್ಲ. ಏನಾದರೂ ಚಂದ ಬರೆಯುವುದಿದ್ದರೆ ಅದನ್ನು ಅವರೇ ಬರೆಯಬೇಕು. ಆದರೆ ಅವರಿಗೆ ಬರೆಯಲಾಗುತ್ತಿಲ್ಲ. ನೂರು ಒಳ್ಳೆಯ ಗುಣವಿದ್ದರೂ ಅದನ್ನು ಗಮನಿಸದೆ, ಎಲ್ಲೋ ಸಿಕ್ಕಿದ ಒಂದು ದೋಷವನ್ನು ಎತ್ತಿ ಹಿಡಿದು ಹೀಗಳೆಯುವುದು ಇಂಥವರ ಚಾಳಿ; ಇವರಿಗೆ ತಾವೇ ಬುದ್ಧಿವಂತರು ಎಂಬ ಅಹಂಕಾರ; ಕನ್ನಡ ಪರಂಪರೆಯ ಅರಿವಿಲ್ಲದೆಯೇ ಸಿನಿಕತನದಿಂದ ಮಾತನಾಡುತ್ತ, ಕನ್ನಡ ಪರಿಸರಕ್ಕೆ ಅನಾಥಶಿಶುಗಳಂತಿದ್ದು, ನಿರಂತರ ಟೀಕೆ ಮಾಡುವ ಕೆಲವರನ್ನು ಇಂತಹ ಅರೋಚಿಗಳ ಗುಂಪಿಗೆ ಸೇರಿಸಬಹುದು. ಇವರದು ಒಂದು ರೀತಿಯಲ್ಲಿ ವಿಕೃತಪ್ರತಿಭೆ.

    ಕೇವಲ ದೋಷವನ್ನೇ ಹುಡುಕುವ ಇಂಥವರ ಬಗ್ಗೆ ರನ್ನ ‘ಸಾರಣೆಯಂತಿರೆ ಕಸಮನೆ ಪಿಡಿವರ್ ಕೆಲರ್ ಮಹಾಪುರುಷರ್ಕಳ್’ (ಅಜಿತನಾಥ ಪುರಾಣ 1-91)ಎಂದು ವ್ಯಂಗ್ಯವಾಡುತ್ತಾನೆ. ಪಂಪ ‘ಧಿಷಣರ ಕೃತಿಗಳೊಳೆಸೆವಭಿ/ಲಷಿತ ಗುಣಂಗಳನೆ ಬಿಸುಟು ಮಾತ್ಸರ್ಯಮಹಾ/ವಿಷಮಮತಿಯಿಂದೆ ದೋಷಾ/ವಿಷಮನೆ ಪೊರ್ದಿರ್ಪವಲ್ತೆ ಕುಕವಿಬಕಂಗಳ್’ (ಕುಕವಿಗಳಾದ ಬಕಪಕ್ಷಿಯಂಥವರು ಧೀಮಂತರ ಕೃತಿಗಳಲ್ಲಿ ಪ್ರಕಟವಾಗುವ ಅಪೇಕ್ಷಣೀಯ ಗುಣಗಳನ್ನು ನಿರ್ಲಕ್ಷಿಸಿ, ಮಾತ್ಸರ್ಯದಿಂದ, ನೀಚಬುದ್ಧಿಯಿಂದ ದೋಷವನ್ನೇ ಕಾಣುತ್ತಾರಲ್ಲವೇ!’ ಆದಿಪುರಾಣ 1-22) ಎನ್ನುತ್ತಾನೆ.

    ಹರಿಹರ ‘ಒಳಗರಿಯದೆ ಸತ್ಕಾವ್ಯದ/ಕಳೆಯರಿಯದೆ ಲಘುತರತ್ವದಿಂ ನಾಲ್ಕೆರಡಾ/ಯ್ಕುಳಿ ಮಾತಾಡಿಯುರೆ ಹೆ/ಕ್ಕಳಮಿಕ್ಕಿದೊಡೊಲ್ವರೇ ಕವೀಂದ್ರಾಭರಣರ್’ ಗಿರಿಜಾಕಲ್ಯಾಣ 1- 27; (ಒಳ್ಳೆಯ ಕಾವ್ಯದ ತಿರುಳನ್ನು ಅರಿಯದೆ, ಅದರ ಸತ್ವವನ್ನು ಪರಿಶೀಲಿಸದೆ, ಲಘುವಾಗಿ ನಾಲ್ಕು ಮಾತುಗಳನ್ನಾಡಿದರೆ ಸತ್ಕವಿ ಅದನ್ನು ಲೆಕ್ಕಿಸುವನೇ?) ಎಂದು ಇಂತಹವರ ಮಾತುಗಳನ್ನು ನಿರ್ಲಕ್ಷಿಸಬೇಕೆನ್ನುತ್ತಾನೆ.

    ರಾಘವಾಂಕ ‘ರೋಗಿ ಹಳಿದೊಡೆ ಹಾಲು ಹುಳಿಯಪ್ಪುದೇ ಹಗಲ/ಗೂಗೆ ಕಾಣದೊಡೆ ರವಿ ಕಂದುವನೆ ಕಂಗುರುಡ/ನೇಗೈದುವುಂ ಕಾಣದೊಡೆ ಮುಕುರ ಕೆಡುವುದೇ ದುರ್ಜನರು ಮೆಚ್ಚದಿರಲು/ನಾಗಭೂಷಣನ ಕಾವ್ಯಂ ಕೆಡುವುದೇ ಮರುಳೆ…’ (ಹರಿಶ್ಚಂದ್ರಕಾವ್ಯಂ 1-27) ಎಂದು ಹೇಳಿ ಅರೋಚಿಗಳನ್ನು ದುರ್ಜನರೆಂದು ತಿರಸ್ಕರಿಸುತ್ತಾನೆ.

    ‘ತತ್ವವಿದರಾದೊಡಂ ಸರ/ ಸತ್ವಕ್ಕೆಡೆ ಗುಡದ ಜಡರದೆಂತರಿದಪರೋ /ಸತ್ವಾಲೋಕರೊಳೇಕೆ ಕ/ ವಿತ್ವದ ಮಾತೇಕೆ ಕೇಳಿಸಲ್ವೇಡವರಂ’ (ಜನ್ನ, ಅನಂತನಾಥ ಪುರಾಣ 1-44). ಕೆಲವರು ಪಂಡಿತರಾಗಿರುತ್ತಾರೆ, ಆದರೆ ಅವರಿಗೆ ಸೂಕ್ಷ್ಮಸಂವೇದನೆಯೇ ಇರುವುದಿಲ್ಲ, ಅಂಥವರಿಗೂ ಕಾವ್ಯ ಅರ್ಥವಾಗುವುದು ಕಷ್ಟ. ಸಾಕಷ್ಟು ಓದಿಕೊಂಡಿದ್ದರೂ ಜಡಮನಸ್ಸಿನವರಾಗಿದ್ದರೆ ಅಂಥವರಿಗೆ ಕಾವ್ಯದ ಅಂತರಾರ್ಥ ತಿಳಿಯುವುದಿಲ್ಲ. ಚಾಮರಸ ಹೇಳುವ ಹಾಗೆ ‘ಕುರಿಗಳೋಪಾದಿಯಲಿ ಕಬ್ಬಿನ/ಹೊರಗಣೆಲೆಯನೆ ಮೇದಕಟ ಮೆಲ/ಕಿರಿವುತಲ್ಪ ಸುಖಕ್ಕೆ ಸೋಲದೆ ಕಬ್ಬಿನೊಳು ರಸವ/ನೆರೆ ಸವಿವ ಗಜದಂತೆ ಭಕ್ತಿಯ/ತೆರನ ತಿಳಿದಾಚರಿಸಬೇಕೆಂ/ದರಿವವರು ಲಾಲಿಸುವುದೀ ಪ್ರಭುಲಿಂಗಲೀಲೆಯನು’ (ಪ್ರಭುಲಿಂಗಲೀಲೆ, 1-14). ಕುರಿಗಳನ್ನು ಕಬ್ಬಿನ ಗದ್ದೆಗೆ ಬಿಟ್ಟರೂ ಅವು ಕಬ್ಬಿನ ಹೊರಗರಿಗಳನ್ನು ಮೇಯುತ್ತವೆಯೇ ಹೊರತು ಕಬ್ಬಿನ ರಸ ಸವಿಯಲಾರವು.

    ಕುಮಾರವ್ಯಾಸ ಇಂತಹ ಅರೋಚಿಗಳನ್ನು ಕುರಿತು ‘ಚೋರ ನಿಂದಿಸಿ ಶಶಿಯ ಬೈದಡೆ/ಕ್ಷೀರವನು ಕ್ಷಯರೋಗಿ ಹಳಿದರೆ/ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು/ಭಾರತದ ಕಥನ ಪ್ರಸಂಗವ/ಕ್ರೂರ ಕರ್ವಿುಗಳೆತ್ತ ಬಲ್ಲರು/ ಘೊರರೌರವವನ್ನು ಕೆಡಿಸುಗು ಕೇಳ್ದ ಸಜ್ಜನರ’ ಎಂದು ರೋಗಿಷ್ಠ ಮನಸ್ಸಿನ ಓದುಗರನ್ನು ನಿರ್ಲಕ್ಷಿಸಬೇಕೆಂದು ಹೇಳುತ್ತಾನೆ. ಲಕ್ಷ್ಮೀಶ ಸಹೃದಯನ ಸ್ವಭಾವವನ್ನು, ಮತ್ಸರದ ಮನಸ್ಸಿನ ಕುಹಕಿಗಳನ್ನು ಕುರಿತು ಅರ್ಥಪೂರ್ಣವಾಗಿ ಹೇಳಿದ್ದಾನೆ: ‘ಕೆನೆವಾಲ ಕಡೆದು ನವನೀತಮಂ ತೆಗೆದು ಬಾ/ಯ್ಗಿನಿದಾಗಿ ಸವಿಯದದರೊಳಗೆ ಪುಳಿವಿಡಿದು ರಸ/ವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ/ಜನಿಸಿದ ಪದಾರ್ಥವಂ ತಿಳಿದು ನೋಡದೆ ವಿನೂ/ತನ ಕವಿತೆಯೆಂದು ಕುಂದಿಟ್ಟು ಜರೆದೊಡೆ ಪೇಳ್ದ/ ವನೊಳಾವುದೂಣೆಯಂ ಜಾಣರಿದನರಿದು ಮತ್ಸರವನುಳಿದಾಲಿಸುವುದು’ (ಜೈಮಿನಿ ಭಾರತ 1-7). ಕೆನೆಹಾಲನ್ನು ಹೆಪ್ಪುಹಾಕಿ, ಮೊಸರನ್ನು ಕಡೆದು, ಬೆಣ್ಣೆ ತೆಗೆದು ತುಪ್ಪ ಸವಿಯದೆ, ಹಾಲಿಗೆ ಹುಳಿಹಿಂಡಿ ಕೆಡಿಸಿದರೆ ಹಾಲು ನೀಡಿದ ಹಸುವಿಗೇನು ಕುಂದು? ಕಾವ್ಯವನ್ನು ಸಾವಧಾನವಾಗಿ ಆಸ್ವಾದಿಸಿ, ಸವಿದು ಸಂತೋಷಪಡದೆ, ಸುಖಾಸುಮ್ಮನೆ ನಿಂದಿಸುವ ಮಂದಿ ಮತ್ಸರ ಬಿಟ್ಟು ಕಾವ್ಯಾಸ್ವಾದ ಮಾಡಬಾರದೇ?

    ಕನ್ನಡ ಪರಂಪರೆಯಲ್ಲಿ ಹೀಗೆ ಅರಸಿಕರನ್ನು ಕುರಿತ ಇಂತಹ ಅನೇಕ ಮಾತುಗಳಿವೆ. ಇದನ್ನು ಇಷ್ಟು ವಿಸ್ತಾರವಾಗಿ ಪ್ರಸ್ತಾಪಿಸಿದ ಉದ್ದೇಶವೆಂದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ, ವೇದಿಕೆಗಳಲ್ಲಿ, ವಿಮರ್ಶೆಯ ಹೆಸರಿನಲ್ಲಿ ಬರುತ್ತಿರುವ ಬರಹಗಳಲ್ಲಿ ಅಟ್ಯಾಕ್ ಮಾಡುವುದೇ ಅಭ್ಯಾಸವಾಗಿಬಿಟ್ಟಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಅನೇಕ ವರ್ಷಗಳ ಸಾಧನೆಯ ಫಲವಾಗಿ ಮೂಡಿದ ಕೃತಿಗಳನ್ನೂ ಸರಿಯಾಗಿ ಓದಿ ಗ್ರಹಿಸದೆ ಸಾರಾಸಗಟಾಗಿ ನಿರಾಕರಿಸುವ ಮನೋಭಾವ ಕಾಣಿಸುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಇಂತಹ ವಿಕೃತ ಮನಸ್ಸಿನವರ ಸಂತತಿ ಜಾಸ್ತಿಯಾಗುತ್ತಿದೆ. ಇದು ಸೃಜನಶೀಲತೆಗೆ ಮಾರಕ; ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಂಟಕ.

    ತನಗೆ ತಿಳಿಯುವುದಿಲ್ಲ, ತಿಳಿದವರ ಮಾತು ಕೇಳುವುದಿಲ್ಲ ಎಂಬುದೊಂದು ಜನಪ್ರಿಯ ನಾಣ್ಣುಡಿ. ಇಂತಹವರು ರಚನಾತ್ಮಕವಾಗಿ ಏನನ್ನೂ ಮಾಡುವುದಿಲ್ಲ, ಮಾಡುವವರನ್ನೂ ಅವಹೇಳನ ಮಾಡಿ ಅವರಲ್ಲಿ ನಿರುತ್ಸಾಹ ಮೂಡಿಸುವ ಪ್ರಯತ್ನ ಮಾಡುತ್ತಾರೆ. ವಿವೇಕಿಗಳು ಇಂಥವರ ನಿಂದನೆಯ ಮಾತುಗಳನ್ನು ಲೆಕ್ಕಿಸುವುದಿಲ್ಲ ಎಂಬುದು ಸತ್ಯವಾದರೂ, ಅನೇಕ ವೇಳೆ ಇದರ ಪರಿಣಾಮವಾಗಿ ವಾತಾವರಣ ಮಲಿನಗೊಂಡು ಸಮಾಜದ ಕ್ರಿಯಾಶೀಲತೆಯ ವೇಗ ಕುಂಠಿತಗೊಳ್ಳಬಹುದು.

    ಸಾಹಿತ್ಯದ ಅಲ್ಪಸ್ವಲ್ಪ ಜ್ಞಾನವಿರುವ, ನನ್ನ ಪರಿಚಿತ ಸ್ವಯಂಘೊಷಿತ ಸಾಹಿತಿಯೊಬ್ಬರು ಇತ್ತೀಚಿನ ಕೃತಿಯೊಂದನ್ನು ಹಿಗ್ಗಾಮುಗ್ಗಾ ನಿಂದಿಸುತ್ತಿದ್ದರು. ‘ನೀವು ಆ ಕೃತಿಯನ್ನು ಓದಿದ್ದೀರಾ?’ ಎಂದೆ. ಅವರು ‘ಅಂತಹ ಕೃತಿಯನ್ನು ಓದಿ ಸಮಯ ವ್ಯರ್ಥಮಾಡಲು ನನಗಿಷ್ಟವಿಲ್ಲ’ ಎಂದರು. ಹಾಗಿದ್ದರೆ ಓದದೆ ಯಾಕೆ ಮಾತನಾಡುತ್ತೀರಿ ಎಂದಾಗ ‘ಆತ ಏನು ಬರೆದಿರುತ್ತಾನೆ ಎಂದು ನನಗೆ ಗೊತ್ತಿಲ್ಲವೇ?’ ಎಂದು ದೇವಮಾನವನ ರೀತಿ ಉತ್ತರಿಸಿ, ‘ಪ್ರಸಿದ್ಧರಾಗಿರುವವರನ್ನು ನಿಂದಿಸಿದರೇ ನಾವು ಮುಖ್ಯರಾಗುವುದು’ ಎಂದು ವ್ಯಂಗ್ಯವಾಗಿ ನಕ್ಕಾಗ ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ಹೀಗೆ ಓದದೇ ಮನಬಂದಂತೆ ನಿಂದಿಸಿ ಮಾತನಾಡುವವರು ಅನೇಕರಿದ್ದಾರೆ. ಆಶ್ಚರ್ಯವೆಂದರೆ ಈ ಗುಂಪಿಗೆ ಪ್ರಜ್ಞಾವಂತರೆನ್ನಿಸಿಕೊಂಡವರೂ ಸೇರಿಕೊಳ್ಳುತ್ತಿದ್ದಾರೆ.

    ಈ ಪಿಡುಗು ಪ್ರಬಲವಾಗಿರುವುದು ರಾಜಕೀಯ ವಲಯದಲ್ಲಿ: ಬೇರೆಯವರನ್ನು ಬಗ್ಗುಬಡಿಯದೆ ತಾನು ಮುಂದೆ ಬರಲು ಸಾಧ್ಯವಿಲ್ಲ ಎಂಬುದು ಅಲ್ಲಿಯ ನೀತಿ. ಹೀಗಾಗಿಯೇ ಅಲ್ಲಿ ತಮ್ಮ ಸಾಧನೆಗಿಂತ ಎದುರಾಳಿಗಳನ್ನು ನಿಂದಿಸುವುದೇ ಅವರ ಪ್ರಮುಖ ಅಸ್ತ್ರ. ಈ ನಿಂದನೆಯ ವ್ಯಾಧಿ ಈಗ ಸಮೂಹಮಾಧ್ಯಮ, ಅದರಲ್ಲೂ ದೃಶ್ಯಮಾಧ್ಯಮವನ್ನು ವಿಶೇಷವಾಗಿ ವ್ಯಾಪಿಸಿದೆ. ಅವರ ಭಾಷಾಬಳಕೆಯೂ ಸಾಮಾಜಿಕ ಘನತೆಯನ್ನು ಕಾಪಾಡುವಂತಿರುವುದಿಲ್ಲ. ಈ ಪಿಡುಗಿನ ಮತ್ತೊಂದು ಹುಲುಸಾದ ಕ್ಷೇತ್ರವೆಂದರೆ ಸಾಮಾಜಿಕ ಜಾಲತಾಣಗಳು. ಅಲ್ಲಿ ಯಾವ ಬಗೆಯ ನಿಯಂತ್ರಣವೂ ಇದ್ದಂತಿಲ್ಲ.

    ಸಮಾಜದ ಬೆಳವಣಿಗೆಯಲ್ಲಿ ವಿಮರ್ಶೆಯ ಪಾತ್ರ ಅತ್ಯಂತ ಮಹತ್ವದ್ದು. ನಮ್ಮ ದೌರ್ಬಲ್ಯವನ್ನು ಗುರ್ತಿಸಿ ಹೇಳಿದಾಗ ಅದನ್ನು ತಿದ್ದಿಕೊಳ್ಳಬಹುದು; ಶಕ್ತಿಯನ್ನು ತೋರಿಸಿಕೊಟ್ಟಾಗ ಅದನ್ನು ವೃದ್ಧಿಪಡಿಸಿಕೊಳ್ಳಲು ಸಾಧ್ಯ. ಸಮಚಿತ್ತದ ವಿಮರ್ಶೆ ಎಲ್ಲ ಕ್ಷೇತ್ರಗಳಲ್ಲೂ ಅತ್ಯಗತ್ಯ. ಆದರೆ ಅವಿವೇಕಿಗಳ ಅನಗತ್ಯ ನಿಂದನೆ ಸಾಮಾಜಿಕ ಸಮತೋಲನವನ್ನು ಹದಗೆಡಿಸುತ್ತದೆ; ಅನಾರೋಗ್ಯಕರ ಪರಿಸರವನ್ನು ಸೃಷ್ಟಿಸಿ ಸೃಜನಶೀಲತೆಯನ್ನು ಹತ್ತಿಕ್ಕುತ್ತದೆ; ಹಿಂಸೆ, ಕ್ರೌರ್ಯಕ್ಕೆ ಕಾರಣವಾಗುತ್ತದೆ. ಇಂಥದನ್ನು ಉದಾಸೀನದಿಂದ ಕಂಡು, ನಿರ್ಲಕ್ಷಿಸುವ ಮನೋಭಾವವನ್ನು ಸಮಾಜ ಬೆಳೆಸಿಕೊಳ್ಳುವುದೊಂದೇ ಇದಕ್ಕೆ ಸೂಕ್ತ ಪರಿಹಾರವೆನ್ನಿಸುತ್ತದೆ.

    ‘ಅರ್ಥ ಮಾಡ್ಕಂಡ್ ಅಂಗಲ್ ಇಂಗೆ/ಅನ್ನೋರ್ ಮಾತು ಗಂಗೆ/ಅರ್ಥಾಗ್ದಿದ್ರು ಸಿಕ್ದಂಗ್ ಅನ್ನಾದ್/ಚಂದ್ರನ್ ಮಕ್ ಉಗ್ದಂಗೆ’- ಜಿ ಪಿ ರಾಜರತ್ನಂ

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts