Thursday, 13th December 2018  

Vijayavani

Breaking News

ವಿಚಾರ ಸಾಹಿತ್ಯಕ್ಕೆ ಮಹತ್ವದ ಕೊಡುಗೆ

Sunday, 05.08.2018, 3:05 AM       No Comments

ಭಿನವ ಚಾತುರ್ವಸಿಕ ಎಲ್ಲ ಪತ್ರಿಕೆಗಳಂತಲ್ಲ. ಜಗತ್ತಿನ ಜ್ಞಾನ ಕನ್ನಡದಲ್ಲಿ ಒದಗಬೇಕೆಂಬ ಮಹದಾಸೆಯ ಹಂಬಲವಿರುವ ವಿಚಾರಪ್ರಧಾನ ಪತ್ರಿಕೆ. ಒಂದೊಂದು ಸಂಚಿಕೆಯೂ ಯಾವುದಾದರೂ ಸಮಕಾಲೀನ ಪ್ರಮುಖ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ರ್ಚಚಿಸುತ್ತದೆ. ಆ ವಿಷಯದ ಬಗ್ಗೆ ತಜ್ಞರ ಆಳ ಅಧ್ಯಯನ ಅಲ್ಲಿರುತ್ತದೆ. ಪ್ರತಿ ಸಂಚಿಕೆಯೂ ಒಂದು ಆಕರಗ್ರಂಥವಾಗುವ ರೀತಿಯಲ್ಲಿ ರೂಪಿಸಲ್ಪಟ್ಟಿರುತ್ತದೆ.

ಇತ್ತೀಚೆಗೆ ನನ್ನ ಕೈಸೇರಿದ ಅಭಿನವ ಚಾತುರ್ವಸಿಕದ ಸಂಚಿಕೆ ‘ಮಾತು ತಲೆ ಎತ್ತಿದ ಬಗೆ’ ಓದುವಾಗ ಸಹಜವಾಗಿಯೇ 107 ವರ್ಷಗಳ ಹಿಂದೆ ಅಂದರೆ 1911ರಲ್ಲಿ ಬಿ.ಎಂ. ಶ್ರೀಕಂಠಯ್ಯನವರು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮಾಡಿದ ಭಾಷಣ ‘ಕನ್ನಡ ಮಾತು ತಲೆ ಎತ್ತುವ ಬಗೆ’ ಕಣ್ಮುಂದೆ ಬಂದಿತು. ತಕ್ಷಣ ಅಭಿನವದ ಹಿಂದಿನ ಒಂದು ಸಂಚಿಕೆ ನೆನಪಾಯಿತು. ‘ನಮಗೆ ಬೇಕಾದ ಕನ್ನಡ’ ಎಂಬ ಸಂಚಿಕೆಯಲ್ಲಿ ‘ಶ್ರೀ’ ಅವರ ಈ ಲೇಖನ ಪ್ರಕಟವಾಗಿತ್ತು. ಆ ಸಂಚಿಕೆಯ ಮುಂದಿನ ಭಾಗವೆಂಬಂತೆ ಈ ಸಂಚಿಕೆ ರೂಪುಗೊಂಡಿದೆ.

ಆ ಸಂಚಿಕೆಯಲ್ಲಿ ಸಂಪಾದಕರಾದ ನ. ರವಿಕುಮಾರ್ ಹೇಳಿದ್ದರು- ‘ಕನ್ನಡವನ್ನು ಕೇಂದ್ರವಾಗಿಟ್ಟುಕೊಂಡು ಮಾಡಿದ ಭಾಷಣಗಳನ್ನು ಇಲ್ಲಿ ಸಂಕಲಿಸಿದೆ. ಮುಂದಿನ ಸಂಚಿಕೆಯಲ್ಲಿ ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಸಾಮಾಜಿಕವಾಗಿ ತಮ್ಮ ಜೀವನವನ್ನು ತೊಡಗಿಸಿಕೊಂಡ ಕೆಲವು ಚಿಂತಕರ/ವ್ಯಕ್ತಿಗಳ ಭಾಷಣಗಳನ್ನು ಸಂಪಾದಿಸಲಾಗುತ್ತದೆ. ಅದರ ಮುಂದಿನ ಸಂಚಿಕೆಯಾಗಿ ಮಾನವೀಯತೆಯನ್ನು ಎತ್ತಿಹಿಡಿದ ಪ್ರಪಂಚದ ಪ್ರಮುಖ ಭಾಷಣಗಳನ್ನು ಅನುವಾದಿಸುವ/ಸಂಗ್ರಹಿಸುವ ಕೆಲಸವೂ ಸಾಗಿದೆ’.

ಈ ಸಂಪುಟದಲ್ಲಿ ಆಧುನಿಕ ಕಾಲಘಟ್ಟದಲ್ಲಿ ತಮ್ಮ ಸಾಮಾಜಿಕ ಕಾಳಜಿಯಿಂದ ಹಲವರನ್ನು ಸಮಾಜದ ಮುನ್ನೆಲೆಗೆ ತಂದ ರಾಮಾನುಜರ ಒಂದು ಮಂತ್ರ/ಮಾತು; ನಡೆ ನುಡಿ ಒಂದಾಗಿ ನಡೆದ ಜಗತ್ತಿನ ಮಹಾ ಆಂದೋಲನದ ಪ್ರತೀಕವಾದ ವಚನ ಚಳವಳಿಯ ಷಣ್ಮುಖಸ್ವಾಮಿಯ ವಚನ; ಸರ್ ಸಿ.ವಿ. ರಾಮನ್ ನೊಬೆಲ್ ಪಾರಿತೋಷಕ ಪಡೆದ ಸಂದರ್ಭದಲ್ಲಿ ಮಾಡಿದ ಭಾಷಣ; ಮೊದಲ ಮಹಾಯುದ್ಧ ಪ್ರಾರಂಭವಾದಾಗ ಸರ್ ಎಂ. ವಿಶ್ವೇಶ್ವರಯ್ಯನವರು ಕೌನ್ಸಿಲ್ ಸಭೆಯಲ್ಲಿ ಮಾಡಿದ ಭಾಷಣ; ಭಗತ್​ಸಿಂಗ್ ಲಾಹೋರ್ ಹೈಕೋರ್ಟಿನಲ್ಲಿ ಸಲ್ಲಿಸಿದ ಕೊನೆಯ ಅಹವಾಲು; ಜವಾಹರಲಾಲ್ ನೆಹರು ಭಾರತದ ಮೊದಲ ಸ್ವಾತಂತ್ರ್ಯದಿನದಂದು ಮಾಡಿದ ಭಾಷಣ; ಬಿ.ಆರ್. ಅಂಬೇಡ್ಕರ್ ಶಾಸನಸಭೆಯಲ್ಲಿ ಮಾಡಿದ ಭಾಷಣ; ಷ. ಶೆಟ್ಟರ್ ಅಖಿಲ ಭಾರತ ಇತಿಹಾಸ ಕಾಂಗ್ರೆಸ್​ನ ಅಧಿವೇಶನದಲ್ಲಿ ಮಾಡಿದ ಭಾಷಣ; ಮೇಧಾ ಪಾಟ್ಕರ್ ‘ರೈಟ್ ಲೈವ್ಲಿ ಹುಡ್’ ಪ್ರಶಸ್ತಿ ಸ್ವೀಕಾರ ಭಾಷಣ; ವಿಶಾಲ ಪ್ರಕರಣವೆಂದು ಖ್ಯಾತಿ ಪಡೆದ ಸುಪ್ರೀಂ ಕೋರ್ಟಿನ ತೀರ್ಪಿನ ಮುಖ್ಯಾಂಶ- ಇವೆಲ್ಲ ಇಲ್ಲಿವೆ.

ಇದೊಂದು ಭಾಷಣಗಳ ಸಂಕಲನ. ರವಿಕುಮಾರರ ಈ ಪರಿಕಲ್ಪನೆಯೇ ನನಗೆ ವಿಶಿಷ್ಟವೆನ್ನಿಸಿತು. ಮಾರ್ಕೆಸ್ ನೊಬೆಲ್ ಪ್ರಶಸ್ತಿ ಸ್ವೀಕಾರ ಮಾಡಿದಾಗ ಮಾಡಿದ ಭಾಷಣವನ್ನು ನಾನು ಗಮನಿಸಿದ್ದಾಗ ಇಂತಹ ಭಾಷಣಗಳ ಸಂಕಲನ ಅಗತ್ಯವೆಂದು ಅನ್ನಿಸಿತ್ತು. ‘ಹಿಸ್ಟಾರಿಕ್ ಸ್ಪೀಚಸ್’ ಎಂಬ ಕೃತಿಯನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಸುಮಾರು 150 ಪ್ರಮುಖರ ಭಾಷಣಗಳು ಆ ಸಂಕಲನದಲ್ಲಿವೆ. ‘ಪ್ರಪಂಚ ಬದಲಿಸಿದ ಭಾಷಣಗಳು’, ‘ಪ್ರಪಂಚದ ಅತ್ಯುತ್ತಮ ಭಾಷಣಗಳು’ ಮೊದಲಾದ ಸಂಪುಟಗಳೂ ನೆನಪಾಗುತ್ತಿವೆ. ಇವೆಲ್ಲ ಇಂಗ್ಲಿಷಿನಲ್ಲಿವೆ. ಕನ್ನಡದಲ್ಲಿ ಇಂತಹ ಪ್ರಯತ್ನಗಳು ವಿರಳ. ವಿಚಾರಸಂಕಿರಣಗಳ ಉಪನ್ಯಾಸಗಳನ್ನು ಸಂಕಲಿಸುವ ಪರಂಪರೆಯೊಂದು ನಮ್ಮಲ್ಲಿದೆ. ಸಮ್ಮೇಳನಾಧ್ಯಕ್ಷರ ಭಾಷಣಗಳು ಸಂಕಲನ ರೂಪದಲ್ಲಿ ಸಿಗುತ್ತವೆ. ಆದರೆ ಹೀಗೆ ಐತಿಹಾಸಿಕ, ಸಾಂಸ್ಕೃತಿಕ ಮಹತ್ವದ ಭಾಷಣಗಳನ್ನು ಸಂಕಲನ ರೂಪದಲ್ಲಿ ತರುವುದರ ಮೂಲಕ ರವಿಕುಮಾರ್ ಕನ್ನಡದಲ್ಲಿ ಹೊಸ ಹಾದಿಯೊಂದನ್ನು ಹಾಕಿಕೊಟ್ಟಂತೆ ತೋರುತ್ತದೆ. ಹಾಗೆ ನೋಡಿದರೆ ಕನ್ನಡದ ಸಂದರ್ಭದಲ್ಲಿ ನ. ರವಿಕುಮಾರ ಹೊಸತನದ ಅನೇಕ ಪ್ರಯೋಗಗಳನ್ನು ಮಾಡುತ್ತಿರುವ ಸೂಕ್ಷ್ಮಮನಸ್ಸಿನ ದೂರದೃಷ್ಟಿಯ ಚಿಂತಕ.

ಇದು ಅಭಿನವ ಚಾತುರ್ವಸಿಕದ 24-25ನೇ ಸಂಪುಟದ 3-1ನೇ ಸಂಯುಕ್ತ ಸಂಚಿಕೆ. ಅಂದರೆ 25 ವರ್ಷಗಳಿಂದ ಈ ಚಾತುರ್ವಸಿಕ ಪ್ರಕಟವಾಗುತ್ತಿದೆ. ಇಷ್ಟು ದೀರ್ಘಕಾಲ ಸಾಹಿತ್ಯಕ ಪತ್ರಿಕೆಯೊಂದು ಪ್ರಕಟವಾಗುತ್ತಿರುವುದು ಗಮನಿಸಬೇಕಾದ ಸಂಗತಿ. ಇದು ಚಾತುರ್ವಸಿಕವಾದರೂ ನಿಯತವಾಗಿ ಪ್ರಕಟವಾದಂತಿಲ್ಲ. ಕೆಲವೊಮ್ಮೆ ಒಂದೆರಡು ವರ್ಷಗಳೇ ಪತ್ರಿಕೆ ಹೊರಬಂದಿರಲಿಲ್ಲ. 2006ರ ಸಮಯದಲ್ಲಿ ನಾವು ಈ ಪತ್ರಿಕೆಗಾಗಿ ದೀರ್ಘಕಾಲ ಕಾದಿದ್ದೆವು. ಅನೇಕ ಸಾಹಿತ್ಯ ಪತ್ರಿಕೆಗಳಂತೆ ಕೊನೆಯುಸಿರೆಳೆಯಿತೆಂದು ಭಾವಿಸಿದ್ದೆವು. ಒಂದು ದಿನ ಮತ್ತೆ ಪುನರವತರಿಸಿತು. ಕೆಲವೊಮ್ಮೆ ಇದು ಸಂಯುಕ್ತ ಸಂಚಿಕೆಗಳ ರೂಪ ತಾಳಿರುವುದೂ ಉಂಟು. ಕುಂಟುತ್ತ, ತೆವಳುತ್ತ, ಕೆಲವೊಮ್ಮೆ ದಾಪುಗಾಲಿಡುತ್ತ ಸಾಗಿಬಂದ ಪತ್ರಿಕೆ ಇತ್ತೀಚೆಗೆ ತಾರುಣ್ಯದ ಬಲ ಪಡೆದಂತೆ ತೋರುತ್ತಿದೆ. ನಿಯತವಾಗಿ ಕೈ ಸೇರುತ್ತಿದೆ.

ಅಭಿನವ ಚಾತುರ್ವಸಿಕ ಎಲ್ಲ ಪತ್ರಿಕೆಗಳಂತಲ್ಲ. ಜಗತ್ತಿನ ಜ್ಞಾನ ಕನ್ನಡದಲ್ಲಿ ಒದಗಬೇಕೆಂಬ ಮಹದಾಸೆಯ ಹಂಬಲವಿರುವ ವಿಚಾರಪ್ರಧಾನ ಪತ್ರಿಕೆ. ಒಂದೊಂದು ಸಂಚಿಕೆಯೂ ಯಾವುದಾದರೂ ಒಂದು ಸಮಕಾಲೀನ ಪ್ರಮುಖ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ರ್ಚಚಿಸುತ್ತದೆ. ಆ ವಿಷಯದ ಬಗ್ಗೆ ತಜ್ಞರ ಆಳ ಅಧ್ಯಯನ ಅಲ್ಲಿರುತ್ತದೆ. ಪ್ರತಿ ಸಂಚಿಕೆಯೂ ಒಂದು ಆಕರಗ್ರಂಥವಾಗುವ ರೀತಿಯಲ್ಲಿ ರೂಪಿಸಲ್ಪಟ್ಟಿರುತ್ತದೆ. ಓದಿ ಮರೆಯುವಂಥದಲ್ಲ, ಚಿಂತನೆಗೆ ಹಚ್ಚುವಂಥದು, ನಮ್ಮ ಅರಿವಿನ ವ್ಯಾಪ್ತಿಯನ್ನು ವಿಸ್ತರಿಸುವಂಥದು.

ಸಂಚಿಕೆಗಳ ಸ್ವರೂಪವನ್ನು ಗಮನಿಸಿ- ವೋಲೆ ಷೊಯೆಂಕಾ, ಗಾಲಿಬ್, ನೋಮ್ ಚಾಮ್್ಕ ಆನಂದಕುಮಾರಸ್ವಾಮಿ, ಪುತಿನ, ರಾಜರತ್ನಂ, ದೇವನೂರ ಮಹಾದೇವ, ಬೆಳಗೆರೆ, ಘೊರ್ಪಡೆ, ಕೆ.ಟಿ. ಶಿವಪ್ರಸಾದ್, ಹೊಸ್ತೋಟ ಮಂಜುನಾಥ ಭಾಗವತ ಮೊದಲಾದವರ ಬಗ್ಗೆ ಸಂಚಿಕೆಗಳನ್ನು ರೂಪಿಸಲಾಗಿದೆ. ಇವುಗಳ ಆಶಯ, ಇವರೆಲ್ಲರ ಚಿಂತನೆ ಈ ಹೊತ್ತು ಹೇಗೆ ಪ್ರಸ್ತುತ ಎಂದು ಪರಿಶೀಲಿಸುವುದಾಗಿದೆ. ಜತೆಗೆ ಜಾಗತಿಕ ನೆಲೆಯಲ್ಲಿ ಸ್ಥಳೀಯ ಚಿಂತನೆಗಳನ್ನಿಟ್ಟು ನೋಡುವ ಗಂಭೀರ ಪ್ರಯತ್ನವೂ ಇಲ್ಲಿದೆ. ಈ ಎಲ್ಲ ಸಂಚಿಕೆಗಳನ್ನೂ ಒಟ್ಟಿಗಿಟ್ಟು ತೌಲನಿಕವಾಗಿ ಅಧ್ಯಯನ ಮಾಡಿದರೆ ನಮ್ಮ ಕಾಲದ ಅನೇಕ ತಲ್ಲಣಗಳಿಗೆ ಪರಿಹಾರ ಸಾಧ್ಯತೆಗಳನ್ನು ನೀಡುವ ಅನೇಕ ಒಳನೋಟಗಳು ನಮಗಿಲ್ಲಿ ಸಿಗುತ್ತವೆ.

ಬುದ್ಧಿಜೀವಿಗಳ ಬೌದ್ಧಿಕ ಜವಾಬ್ದಾರಿಯನ್ನು ಕುರಿತು ಚಾಮ್್ಕ ಆಡುವ ಮಾತುಗಳನ್ನು ಒಂದು ಸಣ್ಣ ನಿದರ್ಶನವನ್ನಾಗಿ ನಾವಿಲ್ಲಿ ಗಮನಿಸಬಹುದು. ಬುದ್ಧಿಜೀವಿಗಳು ಎಂದರೆ ಯಾರು? ಮಾನವೀಯ ಕಾಳಜಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಂಭೀರವಾಗಿ ಆಲೋಚಿಸುವ, ಆಧಾರಗಳ ಸಮೇತ ಅದನ್ನು ಪುನರ್​ವೌಲ್ಯಮಾಪನ ಮಾಡುವ, ಅವರ ನಿರ್ಣಯಗಳನ್ನು ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿ ಹೇಳುವ ವ್ಯಕ್ತಿಗಳು ಎಂದು ವಿವರಿಸಿಕೊಳ್ಳಬಹುದು. ಇವರ ಜವಾಬ್ದಾರಿಯೆಂದರೆ- ‘ಅಧಿಕಾರಕ್ಕೆ ಸತ್ಯವನ್ನು ತಿಳಿಯಹೇಳುವುದು’. ನಮ್ಮ ಬುದ್ಧಿಜೀವಿಗಳ ಜವಾಬ್ದಾರಿಯನ್ನು ಇದಕ್ಕಿಂತ ಸೂತ್ರಪ್ರಾಯವಾಗಿ ಹೇಳುವುದು ಕಷ್ಟ. ಮುಂದುವರಿದು, ಮನುಕುಲದ ಮಾತುಗಾರನಾದ ಚಾಮ್್ಕ ಹೇಳುತ್ತಾನೆ- ‘ಸದ್ಯದ ಸ್ಥಿತಿಯಲ್ಲಿ ಏನಾದರೂ ಬದಲಾವಣೆ ತರಬಲ್ಲ ಶಕ್ತಿ ಇರುವ ಜನರಿಗೆ, ಮನುಷ್ಯರ ಬದುಕಿಗೆ ಸಂಬಂಧಿಸಿದ ವಾಸ್ತವಿಕ ಸತ್ಯಗಳನ್ನು ತಿಳಿಸುವ ನೈತಿಕ ಮಧ್ಯವರ್ತಿಯಾಗಿ ಕೆಲಸ ಮಾಡುವುದು ಬರಹಗಾರರ ಮತ್ತು ಬುದ್ಧಿಜೀವಿಗಳ ಜವಾಬ್ದಾರಿ. ದುರದೃಷ್ಟವಶಾತ್ ನಮ್ಮ ಪರಿಸ್ಥಿತಿ ಹೀಗಿಲ್ಲ.’ ‘ಅಧಿಕಾರಕ್ಕೆ ಸತ್ಯ ಹೇಳುವ’ ಬದಲು ‘ಅಧಿಕಾರವನ್ನು ಓಲೈಸುವುದು’, ಪ್ರಾಥಮಿಕ ನೈತಿಕ ತತ್ತ್ವವನ್ನು ಮರೆತು ಭಾವಾವೇಶಕ್ಕೆ ಒಳಗಾಗಿ ಪ್ರಚೋದನಕಾರಿಯಾಗುವುದು ಇಂದಿನ ಬುದ್ಧಿಜೀವಿಗಳ ಕಾರ್ಯವೈಖರಿಯಾಗಿರುವಂತೆ ತೋರುತ್ತದೆ ಎಂಬ ಅವನ ಮಾತುಗಳು ವಾಸ್ತವಕ್ಕೆ ಕನ್ನಡಿ ಹಿಡಿಯುತ್ತವೆ.

ಹೀಗೆ ನಮ್ಮನ್ನು ಎಚ್ಚರಿಸುವ ಇಂತಹ ಅನೇಕ ಚಿಂತನೆಗಳು ಅಭಿನವ ಚಾತುರ್ವಸಿಕದ ಪ್ರತಿ ಸಂಚಿಕೆಯಲ್ಲಿಯೂ ಇವೆ. ‘ಗೊಂದಲಪುರ’ ‘ಹೇ ರಾಮ್ ‘ಭಕ್ತಿಯ ಬೆರಗು’, ‘ಭಕ್ತಿಕಂಪಿತ’- ಹೀಗೆ ಯಾವ ಸಂಚಿಕೆಯನ್ನು ಕೈಗೆತ್ತಿಕೊಂಡರೂ ಚರ್ಚೆಗೆ ಅವಕಾಶವಿದೆ. ವಾಗ್ವಾದ ಬೆಳೆಸಲು ಸಾಕಷ್ಟು ವಿಚಾರಗಳಿವೆ. ಭಕ್ತಿ ಕುರಿತ ಸಂಚಿಕೆಗಳಂತೂ ಕನ್ನಡ ಸಾಹಿತ್ಯ ಪರಂಪರೆಯನ್ನು ಹೊಸ ರೀತಿಯಲ್ಲಿ ನೋಡಲು ನಮ್ಮನ್ನು ಒತ್ತಾಯಿಸುವಂತಿವೆ. ಸೋದರ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ ಸಾಹಿತ್ಯದ ಬಗೆಗೂ ಸಂಚಿಕೆಗಳಿವೆ. ದ್ರಾವಿಡ ಕಾವ್ಯ ಚಿಂತನೆಯ ಬಗ್ಗೆ ಚಿಂತಿಸಲು ಇವು ನಮ್ಮನ್ನು ಪ್ರೇರೇಪಿಸುತ್ತವೆ. ಭಾರತೀಯ ಕಾವ್ಯ ಚಿಂತನೆಗೆ ಪರ್ಯಾಯವೆನ್ನುವ ರೀತಿಯಲ್ಲಿ ದ್ರಾವಿಡ ಚಿಂತನೆಯಿದೆ. ದೇಶೀ ಚಿಂತನೆಯ ಸ್ವರೂಪ ಇಲ್ಲಿ ಹೇಗೆ ಅಭಿವ್ಯಕ್ತಿ ಪಡೆದಿದೆ ಎಂಬುದು ಕುತೂಹಲಕಾರಿ. ಇದನ್ನು ವಿಸ್ತರಿಸುವಂತೆ ‘ದೇಶೀ ದರ್ಶನ’ಗಳನ್ನೇ ಕುರಿತು ಒಂದು ಸಂಚಿಕೆಯಿದೆ. ಸಿನಿಮಾ, ಸಂಗೀತ, ಯಕ್ಷಗಾನ, ತಾಳಮದ್ದಲೆ, ಚಿತ್ರಕಲೆ- ಹೀಗೆ ಭಿನ್ನ ಕಲಾಪ್ರಕಾರಗಳ ಬಗ್ಗೆ ರವಿಕುಮಾರ್ ಸಂಚಿಕೆಗಳನ್ನು ರೂಪಿಸಿದ್ದಾರೆ. ಬಹುಶಿಸ್ತೀಯ ಚಿಂತನೆ ಇಂದಿನ ಸಾಂಸ್ಕೃತಿಕ ಅಗತ್ಯ. ಇಂತಹ ಸಂಚಿಕೆಗಳು ಆ ಅಗತ್ಯವನ್ನು ತುಂಬಿಕೊಡುವಂತಿವೆ. ‘ನೆಲಕ್ಕೆ ಬಿದ್ದ ನಕ್ಷತ್ರಗಳು’ ಹೂವನ್ನು ಕುರಿತ ವಿಶಿಷ್ಟ ಸಂಚಿಕೆ. ಎ.ಎನ್. ಮೂರ್ತಿರಾಯರು ಹೂಗಳನ್ನು ‘ಭೂದೇವಿಯ ಕವನ’ ಎಂದು ಕರೆಯುತ್ತಾರೆ. ಇಂತಹ ಭೂದೇವಿಯ ಕವನವನ್ನು ಈ ಸಂಚಿಕೆ ಭಿನ್ನ ನೆಲೆಗಳಲ್ಲಿ ವ್ಯಾಖ್ಯಾನಿಸುತ್ತದೆ. ‘ಎಲ್ಲರ ಮೂಗಿನ ಕತೆ’ ಇಂಥದೇ ಇನ್ನೊಂದು ವಿಶಿಷ್ಟ ಸಂಚಿಕೆ. ‘ಮಹಾರಾಜ ಕಾಲೇಜು’ ಕುರಿತ ಸಂಚಿಕೆಗೆ ಐತಿಹಾಸಿಕ, ಸಾಂಸ್ಕೃತಿಕ ಮಹತ್ವವಿದೆ. ‘ಕದಳೀವನ ಕರ್ಪರ’ ಪರಿಸರವನ್ನು ಕುರಿತ ಅತ್ಯಂತ ಮಹತ್ವದ ಸಂಚಿಕೆ. ಸಾಹಿತ್ಯ, ಸಂಗೀತ, ಶಿಕ್ಷಣ, ಪರಿಸರ, ಚಿತ್ರಕಲೆ, ಸಿನಿಮಾ, ಯಕ್ಷಗಾನ, ತಾಳಮದ್ದಲೆ, ಉಪಭೋಗವಾದ, ದ್ರಾವಿಡಚಿಂತನೆ, ರಾಜಕೀಯ, ಭಾಷೆ- ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ಅಭಿನವ ಚಾತುರ್ವಸಿಕ ಗಂಭೀರವಾಗಿ ರ್ಚಚಿಸುತ್ತದೆ. ವಾಗ್ವಾದವನ್ನು ಹುಟ್ಟುಹಾಕುತ್ತದೆ. ರೂಢಿಯ ಸಿದ್ಧಮಾದರಿಗಿಂತ ಭಿನ್ನವಾಗಿ ಚಿಂತಿಸಲು ವೇದಿಕೆ ಒದಗಿಸುತ್ತದೆ.

ಕನ್ನಡದಲ್ಲಿ ಅತ್ಯಂತ ಸೊರಗಿರುವ ಕ್ಷೇತ್ರವೆಂದರೆ ವಿಚಾರ ಸಾಹಿತ್ಯ. ಎಚ್.ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ‘ವಿಚಾರ ಸಾಹಿತ್ಯ’ ಎಂಬ ಪಠ್ಯವನ್ನೇ ರೂಪಿಸಿ ತರಗತಿಗಳಲ್ಲಿ ಅದನ್ನು ಕಡ್ಡಾಯವಾಗಿ ಬೋಧಿಸುವುದನ್ನು ಜಾರಿಗೆ ತಂದಿದ್ದರು. ಕುವೆಂಪು ಅವರಂತೂ ಯುವ ಮನಸ್ಸುಗಳಿಗೆ ‘ವಿಚಾರ ಕ್ರಾಂತಿಗೆ ಆಹ್ವಾನ’ ನೀಡಿದ್ದರು. ಆದರೆ ನಮ್ಮಲ್ಲಿ ವಿಚಾರ ಸಾಹಿತ್ಯದ ಒಂದು ಪ್ರಕಾರ ಉಜ್ವಲವಾಗಿ ಬೆಳೆದುಬರಲೇ ಇಲ್ಲ. ವೈಜ್ಞಾನಿಕದೃಷ್ಟಿ ಹಾಗೂ ವಿಚಾರಬುದ್ಧಿ ಎಲ್ಲಿ ಬೆಳೆಯಬೇಕೋ ಅಂತಹ ವಿಶ್ವವಿದ್ಯಾಲಯಗಳಲ್ಲೇ ಅದು ಅವಜ್ಞೆಗೊಳಗಾಗಿದೆ. ಇಲ್ಲಿಯ ಆಯ್ದ ಕೆಲವು ಲೇಖನಗಳು ನಮ್ಮ ಶಾಲಾ ಕಾಲೇಜುಗಳಲ್ಲಿ ಪಠ್ಯವಾದರೆ ವಿದ್ಯಾರ್ಥಿಗಳ ಚಿಂತನಶಕ್ತಿ ನಿಶಿತವಾಗಬಹುದು. ನಮ್ಮ ವಿಶ್ವವಿದ್ಯಾಲಯದ ಮಂದಿ ಇವುಗಳನ್ನು ಗಮನಿಸಬೇಕಲ್ಲ? ಹಾಗೆ ನೋಡಿದರೆ ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸವನ್ನು ‘ಅಭಿನವ ಚಾತುರ್ವಸಿಕ’ ಮಾಡುತ್ತಿದೆ.

ಸಾಮಾನ್ಯವಾಗಿ ಸಾಹಿತ್ಯಕ ಪತ್ರಿಕೆಯ ಎಲ್ಲ ಮುದ್ರಿತ ಪ್ರತಿಗಳು ಖರ್ಚಾಗುವುದು ಅಪರೂಪ ಅಥವಾ ಚಂದಾದಾರರ ಸಂಖ್ಯೆಯನ್ನು ಗಮನಿಸಿ ಅಷ್ಟನ್ನು ಮುದ್ರಿಸುವುದು ರೂಢಿ. ಆದರೆ ‘ಅಭಿನವ ಚಾತುರ್ವಸಿಕ’ದ ಕೆಲವು ಸಂಚಿಕೆಗಳು ಪುನಮುದ್ರಣಗೊಂಡಿವೆ. ಇದಂತೂ ಕನ್ನಡ ಪತ್ರಿಕಾ ಇತಿಹಾಸದಲ್ಲಿ ಒಂದು ದಾಖಲೆಯೆಂದೇ ಹೇಳಬೇಕು.

ಅಭಿನವ ಚಾತುರ್ವಸಿಕದ ಸಂಪಾದಕರಾದ ನ. ರವಿಕುಮಾರ್ ಪ್ರತಿ ಸಂಚಿಕೆಗೂ ಅಧ್ಯಯನಪೂರ್ಣ, ವಿಶ್ಲೇಷಣಾತ್ಮಕ ಸಂಪಾದಕೀಯ ಬರೆದಿದ್ದಾರೆ. ಅವುಗಳನ್ನೇ ಸಂಕಲಿಸಿದರೆ ಒಂದು ಅತ್ಯುತ್ತಮ ಪುಸ್ತಕವಾಗುತ್ತದೆ. ಕೆಲವು ಸಂಚಿಕೆಗಳನ್ನು ಸಿದ್ಧಪಡಿಸಲು ಅವರು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ‘ಪಾರ್ಟಿಷನ್ ಬಗ್ಗೆ ಬಂದಿರುವ ಪುಸ್ತಕಗಳು, ವರದಿಗಳು, ಪೋಟೋಗಳನ್ನೆಲ್ಲ ಹೆಕ್ಕಿ ತೆಗೆಯಲು ತೆಗೆದುಕೊಂಡ ಸಮಯ ಸುಮಾರು 7 ತಿಂಗಳು. ಮಾಡಿದ ಖರ್ಚು ಸುಮಾರು 16,800 ರೂಪಾಯಿ’- ಇದು ‘ಹೇ ರಾಮ್ ಸಂಚಿಕೆಯ ಬಗ್ಗೆ ರವಿಕುಮಾರ್ ನೀಡಿರುವ ಮಾಹಿತಿ. ಇದರರ್ಥ ಸಂಚಿಕೆಯ ಸಂಪಾದನೆಯೆಂದರೆ ಲೇಖನಗಳ ಸಂಗ್ರಹ ಮಾತ್ರವಲ್ಲ, ಜವಾಬ್ದಾರಿಯುತ ಅಧ್ಯಯನ. ಇವರ ಈ ಕೆಲಸದಲ್ಲಿ ಪ್ರತಿಭಾವಂತ ಲೇಖಕಿ ಪಿ.ಚಂದ್ರಿಕಾ ಅವರೂ ನೆರವಾಗಿದ್ದಾರೆ. ಕೆಲವು ಸಂಚಿಕೆಗಳನ್ನು ‘ಅತಿಥಿ ಸಂಪಾದಕರು’ ರೂಪಿಸಿದ್ದಾರೆ.

ಇಲ್ಲಿಯ ಲೇಖಕ ಬಳಗವನ್ನು ಗಮನಿಸಿದಾಗ ಸಂಪಾದಕರ ಶ್ರಮ ಹಾಗೂ ಜವಾಬ್ದಾರಿಯ ಅರಿವಾಗುತ್ತದೆ. ನಮ್ಮ ಕಾಲದ ಪ್ರಮುಖ ಚಿಂತಕರೆಲ್ಲ ಇಲ್ಲಿದ್ದಾರೆ. ಭಿನ್ನ ಆಲೋಚನಾ ಕ್ರಮದ ಚಿಂತಕರನ್ನೆಲ್ಲ ಪರಸ್ಪರ ಮುಖಾಮುಖಿಯಾಗಿಸುವ ಕ್ರಮದಲ್ಲಿಯೇ ಬಹುಮುಖೀ ಸಂಸ್ಕೃತಿಯನ್ನು ಕಟ್ಟಿಕೊಡುವ ಪ್ರಯತ್ನವಿದೆ. ಏಕಾಕೃತಿಯತ್ತ ಸಾಗುತ್ತಿರುವ ನಮ್ಮ ಕಾಲದಲ್ಲಿ ಇಂತಹ ಪ್ರಯತ್ನಗಳೇ ಭರವಸೆಯ ಬೆಳ್ಳಿಗೆರೆ.

ಪ್ರಜಾಪ್ರಭುತ್ವದ ಜೀವಾಳವೇ ಜನಮಾನಸದಲ್ಲಿ ಚಿಂತನೆಯನ್ನು ಉದ್ದೀಪಿಸಿ, ಅವರನ್ನು ಜವಾಬ್ದಾರಿ ಪ್ರಜೆಗಳನ್ನಾಗಿ ರೂಪಿಸುವುದು. ‘ಅಭಿನವ ಚಾತುರ್ವಸಿಕ’ ಈ ಬಗೆಯ ಸಾಮಾಜಿಕ ಸಾಂಸ್ಕೃತಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top