Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಗತಕಾಲದ ಜೊತೆ ಸೃಜನಶೀಲ ಮಾತುಕತೆ

Sunday, 08.07.2018, 3:04 AM       No Comments

ತ್ತೀಚೆಗೆ ಷ.ಶೆಟ್ಟರ್ ಜೊತೆ ಆಪ್ತ ಪರಿಸರದಲ್ಲಿ, ವಿನೋದದ ಮಾತುಕತೆಯಲ್ಲಿ ತೊಡಗಿದ್ದಾಗಲೂ ಅವರ ಸ್ವಭಾವದಲ್ಲಿಯೇ ಒಂದು ಬಗೆಯ ಶಿಸ್ತು, ಶ್ರದ್ಧೆ ಅಂತರ್ಗತವಾಗಿದೆ ಅನ್ನಿಸಿತು. ಮಾಡುವ ಕೆಲಸ ಯಾವುದೇ ಆಗಿರಬಹುದು, ಅದರಲ್ಲಿ ತಮ್ಮ ವ್ಯಕ್ತಿತ್ವವನ್ನು ಇಡಿಯಾಗಿ ತೊಡಗಿಸಿಕೊಳ್ಳುವುದು ಅವರ ಸಹಜ ಗುಣ. ಅವರದು ತಲರ್ಸ³ ಅಧ್ಯಯನ. ಒಮ್ಮೆ ಶೆಟ್ಟರ್ ಯಾವುದೇ ವಿಷಯವನ್ನು ಅಧ್ಯಯನ ಮಾಡಿದರೆಂದರೆ ಮತ್ತೆ ಆ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಮಾತು ಹೇಳಲು ಹರಸಾಹಸ ಪಡಬೇಕಾಗುತ್ತದೆ ಎಂಬುದು ಬಲ್ಲವರಿಗೆ ಗೊತ್ತು. ವಿಷಯದ ಎಲ್ಲ ಸಾಧ್ಯತೆಗಳನ್ನೂ ಅವರು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ. ಗತಕಾಲದ ಜೊತೆ ಅವರದು ಸೃಜನಶೀಲ ಮಾತುಕತೆ. ಹೀಗಾಗಿಯೇ ಅವರು ಕಟ್ಟಿಕೊಡುವ ಇತಿಹಾಸಕ್ಕೆ ಅನೇಕ ಆಯಾಮಗಳಿವೆ.

ಶೆಟ್ಟರ್​ದು ಮೂಲತಃ ಸೃಜನಶೀಲ ಪ್ರತಿಭೆ. ಆರಂಭದಲ್ಲಿ ಅವರು ‘ದೇವಾನಾಂಪ್ರಿಯ’ ಎಂಬ ಹೆಸರಿನಲ್ಲಿ ಕತೆಗಳನ್ನು ಬರೆಯುತ್ತಿದ್ದರು. ಲಿಮರಿಕ್ಸ್ ಗಳನ್ನೂ ಬರೆದಿದ್ದುಂಟು. ಹಾಗೆ ನೋಡಿದರೆ ಅವರಿಗೆ ಸಾಹಿತ್ಯವನ್ನು ಓದಬೇಕೆಂಬ ಅಪೇಕ್ಷೆಯಿತ್ತು. ಅದೇ ಆಶಯದಿಂದ ಮೈಸೂರಿಗೆ ಬಂದರು. ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಿಗೆ ಕಾಯುತ್ತಾ ನಿಂತಿದ್ದಾಗ ಭೇಟಿಯಾದವರು ಇತಿಹಾಸದ ಪ್ರಾಧ್ಯಾಪಕರಾದ ಎಂ.ವಿ.ಕೃಷ್ಣರಾಯರು. ಪರಿಣಾಮವಾಗಿ ಇತಿಹಾಸದ ವಿದ್ಯಾರ್ಥಿಯಾದರು, ಮುಂದೆ ಸಂಶೋಧನೆ ಅವರ ಆಸಕ್ತಿಯ ವಲಯವಾಯಿತು. ಆದರೆ ಸಾಹಿತ್ಯದ ಒಲವು ಮರೆಯಾಗಲಿಲ್ಲ. ಇದರಿಂದಾಗಿ ಅವರ ಸಂಶೋಧನೆ ಸಾಂಸ್ಕೃತಿಕ ನೆಲೆ ಪಡೆದುಕೊಂಡಿತು; ನಿರೂಪಣಾ ವಿಧಾನದಲ್ಲಿ ಕಥನದ ಅಂಶ ಸೇರಿಕೊಂಡಿತು.

ನಮಗೆ ಇತಿಹಾಸದ ಪರಿಕಲ್ಪನೆ ಬಂದುದೇ ಪಾಶ್ಚಾತ್ಯರಿಂದ. ಇಂದಿಗೂ ನಮ್ಮ ಇತಿಹಾಸದ ಪ್ರಾಧ್ಯಾಪಕರು ಅದೇ ಹಾದಿಯಲ್ಲಿ ಸಾಗಿದ್ದಾರೆ. ಆದರೆ ಭಾರತೀಯ ಸಂದರ್ಭದಲ್ಲಿ ಇತಿಹಾಸವೆಂದರೆ ಕೇವಲ ದಾಖಲೆಗಳ ಮೊತ್ತವಲ್ಲ. ನಮ್ಮ ಇತಿಹಾಸದ ಪರಿಕಲ್ಪನೆ ಪಾಶ್ಚಾತ್ಯರಿಗಿಂತ ಭಿನ್ನವಾದದ್ದು. ಅದಕ್ಕೆ ಸಾಂಸ್ಕೃತಿಕ ಸಾಂಗತ್ಯವಿದೆ. ಹೀಗಾಗಿಯೆ ಶೆಟ್ಟರ್ ಹೇಳುವಂತೆ ನಮ್ಮ ಸಂಶೋಧನೆಗಳು ಆಸಕ್ತಿಕರವಾಗಿರುವುದು ಸಾಹಿತ್ಯದ ವಿದ್ಯಾರ್ಥಿಗಳಿಂದಲೇ ಹೊರತು ಇತಿಹಾಸಕಾರರಿಂದಲ್ಲ. ಶೆಟ್ಟರ್​ಗೆ ಇದರ ಅರಿವಿರುವುದರಿಂದಲೇ ಅವರಿಗೆ ನಮ್ಮ ಇತಿಹಾಸವನ್ನು ಪಾಶ್ಚಾತ್ಯ ಪರಿಕಲ್ಪನೆಗಿಂತ ಭಿನ್ನವಾಗಿ ಗ್ರಹಿಸಲು, ರೂಪಿಸಲು ಸಾಧ್ಯವಾಗಿರುವುದು.

ಇತಿಹಾಸಕ್ಕೆ ಎರಡು ನೆಲೆಗಳಿವೆ. ಒಂದು ದಾಖಲಾದ ಚರಿತ್ರೆ. ಇದು ಗೆದ್ದವರ ಇತಿಹಾಸ. ರಾಜವಂಶದ ವಿಜೃಂಭಣೆಯ ವಿವರ. ಯಾರು ವಿಜಯಶಾಲಿಗಳೋ ಅವರು ಇತಿಹಾಸ ಬರೀತಾರೆ. ಸೋತವರು ಬರೆಯೋದಿಲ್ಲ. ಆದರೆ ಹೀಗೆ ದಾಖಲಾಗದ ಸೋತವರ, ದಮನಕ್ಕೊಳಗಾದವರ ಚರಿತ್ರೆ ಎಲ್ಲೋ ಒಂದು ಕಡೆ ಮೌಖಿಕವಾಗಿ ಉಳಿದುಬಂದಿರುತ್ತದೆ. ಹೀಗೆ ದಾಖಲಾಗದ ಚರಿತ್ರೆ ತನ್ನದೇ ಆದ ಜಾನಪದೀಯ ಮೂಲಗಳಿಂದ ಅನೇಕ ವಿವರಗಳನ್ನು ಬಿಟ್ಟುಕೊಡುತ್ತಿರುತ್ತದೆ. ಕೆಲವೊಮ್ಮೆ ಮೌಖಿಕ ಮಹಾಕಾವ್ಯಗಳು ಇಂತಹ ವಿವರಗಳನ್ನು ಹಿಡಿದಿಟ್ಟಿರುತ್ತವೆ. ಈ ಎಲ್ಲವನ್ನೂ ಪರಿಶೀಲಿಸಿ ಇತಿಹಾಸ ರೂಪಿಸಬೇಕಾಗುತ್ತದೆ. ಹೀಗಾಗಿಯೆ ದಾಖಲೆ ಮಾತ್ರ ಇತಿಹಾಸವಾಗುವುದಿಲ್ಲವೆನ್ನುವ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಶೆಟ್ಟರ್ ತಮ್ಮ ಸಂಶೋಧನೆಯ ವಿನ್ಯಾಸವನ್ನು ರೂಪಿಸಿಕೊಂಡಿದ್ದಾರೆ. ಆದ್ದರಿಂದಲೇ ಅವರಿಗೆ ಇತಿಹಾಸವೆಂದರೆ ರಾಜರ ಕತೆಯಲ್ಲ, ಒಂದು ಸಂಸ್ಕೃತಿಯ ಚರಿತ್ರೆ.

ಶೆಟ್ಟರ್ ಅನೇಕ ರೂಢಿಯ ಪರಿಕಲ್ಪನೆಗಳನ್ನು ಮರುವ್ಯಾಖ್ಯಾನಕ್ಕೊಳಪಡಿಸಿ ಹೊಸ ಬಗೆಯ ಚಿಂತನೆಗೆ ಅವಕಾಶ ಕಲ್ಪಿಸುವುದರಿಂದ ನಮ್ಮ ಕಾಲದ ಅತ್ಯಂತ ಮಹತ್ವದ ಸಂಶೋಧಕರಾಗಿದ್ದಾರೆ. ಕೆಲವು ಸಂಗತಿಗಳನ್ನು ನಾವು ಗಮನಿಸಬಹುದು:

ಶೆಟ್ಟರ್ ತಮ್ಮ ಸಂಶೋಧನೆಗೆ ಪ್ರಮುಖವಾಗಿ ಶಾಸನಗಳನ್ನು ಮೂಲ ಆಕರವಾಗಿ ಬಳಸುತ್ತಾರೆ. ಅನಂತಮೂರ್ತಿಯವರು ನಮ್ಮ ಕಾಲದ ಆಚಾರ್ಯ ಕೃತಿ ಎಂದು ಕರೆದ ಶೆಟ್ಟರ್ ಅವರ ‘ಶಂಗಂ ತಮಿಳಗಂ ಮತ್ತು ಕನ್ನಡ ನುಡಿ’ ಅನೇಕ ಕಾರಣಗಳಿಂದಾಗಿ ಗಮನ ಸೆಳೆಯುತ್ತದೆ. ಕನ್ನಡ ಲಿಪಿ ತಮಿಳು ಲಿಪಿಗಿಂತ ಪ್ರಾಚೀನವೆಂದು ಶೆಟ್ಟರ್ ಇಲ್ಲಿ ಸಾಧಾರವಾಗಿ ವಾದಿಸುತ್ತಾರೆ. ಲಿಪಿನಕಾಶೆಯಲ್ಲಿ ಮೊದಲು ಸೇರಿಕೊಂಡದ್ದು ಕರ್ನಾಟಕ. ಅದನ್ನು ರೂಪಿಸಿದವನು ಅಶೋಕ. ಅದೇ ಬ್ರಾಹ್ಮೀಲಿಪಿ. ಇದನ್ನು ತಮಿಳರು ಪ್ರಬಲವಾಗಿ ವಿರೋಧಿಸುತ್ತಾರೆ. ಕನ್ನಡಿಗರು ಹಾಗೂ ತೆಲುಗರು ಬ್ರಾಹ್ಮಿಯನ್ನು ಬಳಸಿಕೊಂಡು ತಮ್ಮ ಲಿಪಿಯನ್ನು ರೂಪಿಸಿಕೊಂಡರೆ, ತಮಿಳರು ಅದನ್ನು ವಿರೋಧಿಸಿ ಮೌಖಿಕ ಪರಂಪರೆಗೆ ಮೊರೆ ಹೋಗುತ್ತಾರೆ. ಹೀಗಾಗಿ ಮೊದಲು ಲಿಪಿ ಸಿಕ್ಕಿದ್ದು ಕನ್ನಡಕ್ಕೇ ಹೊರತು ತಮಿಳಿಗಲ್ಲ. ಕನ್ನಡದ ಲಿಪಿ ಐದನೆಯ ಶತಮಾನದಲ್ಲಿ ಬಂದರೆ, ತಮಿಳು ಲಿಪಿ ರೂಪುಗೊಂಡದ್ದು ಏಳನೆಯ ಶತಮಾನದಲ್ಲಿ. ಆದರೆ ತಮಿಳರು ಇದನ್ನು ಒಪ್ಪುವುದಿಲ್ಲ. ಪೂರ್ವದಲ್ಲಿ ತಮಿಳಿಗೆ ಒಂದು ಲಿಪಿ ಇತ್ತು, ಅದು ಅಳಿದು ಹೋಗಿತ್ತು ಎಂದು ವಾದಿಸುತ್ತಾರೆ. ಇದು ಕೇವಲ ಪ್ರತಿಷ್ಠೆಯ ವಾದವೇ ಹೊರತು ಸತ್ಯಸಮೀಪವಾದುದಲ್ಲವೆಂದು ಶೆಟ್ಟರ್ ಹೇಳುತ್ತಾರೆ. ಇವರ ಈ ಅಧ್ಯಯನ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಗುವಲ್ಲಿಯೂ ಒಂದು ಪ್ರಮುಖ ಆಕರವಾಗಿತ್ತು.

ವಸಾಹತೋತ್ತರ ಚಿಂತನೆಯಲ್ಲಿ ಹೊಸ ಹೊಳಹುಗಳನ್ನು ಶೆಟ್ಟರ್ ನೀಡಿದ್ದು ಯಜಮಾನ ಸಂಸ್ಕೃತಿ ಹಾಗೂ ಪ್ರಜಾಸಂಸ್ಕೃತಿಯನ್ನು ವ್ಯಾಖ್ಯಾನಿಸಿದ ರೀತಿಯಲ್ಲಿ. ದೇಶೀಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವವಿರುವಂತೆ ಸಂಸ್ಕೃತವನ್ನು ದೇಶೀಭಾಷೆಗಳು ಪ್ರಭಾವಿಸಿವೆ ಎಂಬುದನ್ನು ನಾವು ಗಣನೆಗೇ ತೆಗೆದುಕೊಂಡಿಲ್ಲವೆಂದು ಸುಮಾರು ಎರಡು ಸಾವಿರಕ್ಕೂ ಹೆಚ್ಚು ದಾಖಲೆಗಳ ಮೂಲಕ ದೇಶೀ ಸಂಸ್ಕೃತಿಯ ಪ್ರಭಾವವನ್ನು ನಮ್ಮ ಗಮನಕ್ಕೆ ತರುತ್ತಾರೆ.

ಭಾಷಾಶಾಸ್ತ್ರಜ್ಞರಿಂದ ಮೊದಲ್ಗೊಂಡು ಸಮಾಜಶಾಸ್ತ್ರಜ್ಞರವವರೆಗೆ ಎಲ್ಲರೂ ಸಂಸ್ಕೃತೀಕರಣದ ಬಗ್ಗೆ ಹೇಳುತ್ತಲೇ ಬಂದಿದ್ದಾರೆ. ಶೆಟ್ಟರ್ ಇದು ಏಕಮುಖ ಪ್ರಕ್ರಿಯೆಯಲ್ಲವೆಂದು ವಾದಿಸುತ್ತಾರೆ. ಸಂಸ್ಕೃತ ದೇಸೀ ಭಾಷೆಗಳನ್ನು ಪ್ರಭಾವಿಸಿದೆ ಎಂಬುದು ರೂಢಿಯ ತಿಳುವಳಿಕೆ. ಆದರೆ ದೇಶೀ ಭಾಷೆಗಳು ಸಂಸ್ಕೃತವನ್ನೂ ಪ್ರಭಾವಿಸಿವೆ ಎಂಬುದು ಶೆಟ್ಟರ್ ಸಂಶೋಧನೆಯ ಫಲ. ಬ್ರಾಹ್ಮಣೀಕರಣ ಹಾಗೂ ಸಂಸ್ಕೃತೀಕರಣ ಒಂದೇ ನಾಣ್ಯದ ಎರಡು ಮುಖಗಳು ಎಂಬ ಪ್ರಚಲಿತ ನಿಲುವನ್ನೂ ಶೆಟ್ಟರ್ ತಮ್ಮ ಅಧ್ಯಯನದ ಮೂಲಕ ಅಲ್ಲಗಳೆಯುತ್ತಾರೆ. ವೈದಿಕರಿಗೂ ಸಂಸ್ಕೃತ ವ್ಯವಹಾರಕ್ಕೂ ಇದ್ದ ಸಂಬಂಧ ನಾವು ನಂಬಿರುವಂತೆ ಗಾಢವಾಗಿರಲಿಲ್ಲ ಎಂಬುದು ಕುತೂಹಲಕರ ಸಂಗತಿ. ಇದಕ್ಕೆ ಆಧಾರ ಆಗಿನ ಸಂಸ್ಕೃತ ಭಾಷಾ ವ್ಯವಹಾರ ಲಿಖಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದ ಆಚಾರ್ಯರು, ತ್ವಷ್ಟರು, ವಿಶ್ವಕರ್ವಿುಗಳೆಂಬ ಬ್ರಾಹ್ಮಣೇತರ ದ್ವಿಜರ ವಶದಲ್ಲಿದ್ದು ವೈದಿಕರ ವಶದಲ್ಲಿರಲಿಲ್ಲವೆಂಬ ವಾಸ್ತವ. ಬರವಣಿಗೆಯ ಮಾಧ್ಯಮವನ್ನು ರೂಢಿಸಿಕೊಳ್ಳಲು ಎಂದೂ ಆಸಕ್ತಿ ತೋರದ ವೈದಿಕರು ಇದರ ಬಗ್ಗೆ ಹೆಚ್ಚು ಗಮನ ಕೊಡದೆ ವೈದಿಕ ವ್ಯವಹಾರದ ಕಡೆಗೆ ಮತ್ತು ಆ ಮೂಲದ ಸಂಪಾದನೆ ಕಡೆಗೆ ಹೆಚ್ಚು ಗಮನ ನೀಡಿದ್ದನ್ನು ಆಕರಗಳು ಸ್ಪಷ್ಟಪಡಿಸುತ್ತವೆ. ಅವರದು ಶ್ರುತಿಜ್ಞಾನ. ಕುತೂಹಲಕರ ಸಂಗತಿಯೆಂದರೆ ಈ ಪ್ರಧಾನ ಕಾಲಘಟ್ಟದಲ್ಲಿ ಕವಿಗಳಾಗಿ, ಸಾಹಿತಿಗಳಾಗಿ, ವಿಚಾರವಂತರಾಗಿ ವೈದಿಕರಾರೂ ಪ್ರಖ್ಯಾತರಾಗಿರಲಿಲ್ಲ. ಕ್ರಿಶ ಎಂಟನೇ ಶತಮಾನದ ವೇಳೆಗೆ ವೈದಿಕ ವ್ಯವಸ್ಥೆ ಕುಸಿದು ಬಿದ್ದಾಗ ಈ ಸ್ಥಾನವನ್ನು ತುಂಬಲು ಮುಂದೆ ಬಂದವರು ಪೌರಾಣಿಕರು ಹಾಗೂ ಶೂದ್ರರು. ಈ ಕಾಲದಲ್ಲಿ ಕೆಲವು ರಾಜಮನೆತನಗಳು ವೈದಿಕರಿಂದ ದೂರ ಸರಿದು ಉಳಿದ ಸಮಾಜ ವರ್ಗಗಳನ್ನು ಪೋಷಿಸತೊಡಗಿದ್ದನ್ನೂ ಶೆಟ್ಟರ್ ಗಮನಿಸುತ್ತಾರೆ. ಈ ವಿಷಯದ ಬಗ್ಗೆ ಶೆಟ್ಟರ್ ಮಂಡಿಸುವ ಸಂಗತಿಗಳು ನಮ್ಮ ಸಾಮಾಜಿಕ ರಚನೆಯ ವಿನ್ಯಾಸದ ಬಗ್ಗೆ ಮರುಚಿಂತನೆ ಮಾಡಲು ನಮ್ಮನ್ನು ಒತ್ತಾಯಿಸುತ್ತವೆ.

ಇತ್ತೀಚೆಗೆ ಪ್ರಕಟವಾದ ಶೆಟ್ಟರ್ ಅವರ ‘ಪ್ರಾಕೃತ ಜಗದ್ವಲಯ’ ದಕ್ಷಿಣ ಭಾರತದ ಭಾಷಾಸ್ವರೂಪವನ್ನು ವಿವರಿಸುತ್ತದೆ. ಆ ಮೂಲಕ ಸಮಾಜ, ಧರ್ಮ, ರಾಜಕೀಯ ಹಾಗೂ ಭಾಷೆ ಇವುಗಳಿಗಿರುವ ಸಂಬಂಧವನ್ನೂ ವಿಶ್ಲೇಷಿಸುತ್ತದೆ.

ದಕ್ಷಿಣ ಭಾರತದ ಮೊತ್ತಮೊದಲ ಬರಹ ಭಾಷೆಯಾದ ಪ್ರಾಕೃತವು ಕ್ರಿಪೂ ಮೂರನೆಯ ಶತಮಾನದಿಂದ ಕ್ರಿಶ ಮೂರನೆಯ ಶತಮಾನದವರೆಗೆ ಏಕಸ್ವಾಮ್ಯವನ್ನು ಮೆರೆದು, ಆನಂತರ ಸಂಸ್ಕೃತ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಅನುವು ಮಾಡಿಕೊಟ್ಟು, ಕ್ರಿಶ ನಾಲ್ಕನೆಯ ಶತಮಾನದ ವೇಳೆಗೆ ಕಣ್ಮರೆಯಾದ ಚರಿತ್ರೆಯನ್ನು ಶೆಟ್ಟರ್ ತಿಳಿಸುತ್ತಾ, ಪ್ರಾಕೃತ ಸಂಸ್ಕೃತ ಹಾಗೂ ದೇಶೀಭಾಷೆಗಳ ಸಂಬಂಧದ ಹೆಣಿಗೆಯನ್ನೂ ವಿವರಿಸುತ್ತಾರೆ. ಲಿಪಿ ಬದಲಾವಣೆ, ಬೌದ್ಧ ಜೈನರ ಭಾಷಾನೀತಿ, ಭಾಷಾ ಅನುಸಂಧಾನ, ಪ್ರಭಾವ ಮೊದಲಾದ ಸಂಗತಿಗಳೂ ಈ ಅಧ್ಯಯನದ ಫಲಿತಗಳಾಗಿವೆ.

ದಕ್ಷಿಣ ಭಾರತವನ್ನು ಪ್ರವೇಶಿಸಿದ ಬೌದ್ಧರು ಹಾಗೂ ಜೈನರು ಆರಂಭಕಾಲದಲ್ಲಿ ತಮ್ಮ ತಮ್ಮ ಮತಪ್ರವರ್ತಕರ ಆದೇಶದಂತೆ ಜನಭಾಷೆಯಾದ ಪ್ರಾಕೃತಗಳಲ್ಲಿ ಬಹುಕಾಲ ವ್ಯವಹರಿಸಿದ್ದರು. ಮುಂದೆ ಬೌದ್ಧರು ದಕ್ಷಿಣ ಭಾರತಕ್ಕೆ ಬಂದಾಗಲೂ ತಮ್ಮ ಭಾಷಾನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಪ್ರಾಕೃತವನ್ನೇ ಬಳಸಿದರು. ಆದರೆ ಜೈನರು ಇದಕ್ಕೆ ಭಿನ್ನವಾಗಿ ದಕ್ಷಿಣಕ್ಕೆ ಬಂದಾಗ ಪ್ರಾಕೃತಕ್ಕೆ ಬದಲಾಗಿ ಸಂಸ್ಕೃತದತ್ತ ವಾಲಿದರು. ಮುಂದೆ ಇನ್ನಷ್ಟು ಮಾರ್ಪಾಟು ಮಾಡಿಕೊಂಡು ಕಲ್ಬರಹಕ್ಕೆ ಪ್ರಾಕೃತವನ್ನೆಲ್ಲೂ ಬಳಸದೆ ಮೊದಲು ಸಂಸ್ಕೃತದಲ್ಲಿ, ನಂತರ ದೇಶೀ ಭಾಷೆಗಳಲ್ಲಿ ಬರೆಸಿದರು. ಇದರಿಂದಾಗಿ ಜನಾಂಗ ಭಾಷೆ ಎಂದರೆ ಉತ್ತರದ ಪ್ರಾಕೃತ ಮಾತ್ರವಲ್ಲ, ದಕ್ಷಿಣದ ಪ್ರಾದೇಶಿಕ ಭಾಷೆಗಳೂ ಆಗಬಹುದೆಂದಾಯಿತು. ಹೀಗಾಗಿ ದೇಶೀ ಭಾಷಾ ಬೆಳವಣಿಗೆಯಲ್ಲಿ ಜೈನರ ಪಾತ್ರ ಪ್ರಮುಖವಾಗಿರುವುದನ್ನು ನಾವು ಗಮನಿಸಬಹುದು. ಅದರಲ್ಲೂ ಕನ್ನಡಕ್ಕೆ ಸಂಬಂಧಿಸಿದಂತೆ ಆರಂಭ ಕಾಲದ ಕನ್ನಡ ಸಾಹಿತ್ಯವನ್ನು ರೂಪಿಸಿದ ಶ್ರೇಯಸ್ಸು ನಿಸ್ಸಂದೇಹವಾಗಿ ಜೈನರಿಗೆ ಸಲ್ಲುತ್ತದೆ. ಬೌದ್ಧರಂತೆ ಜೈನರೂ ಉತ್ತರದ ಪ್ರಾಕೃತಗಳಿಗೆ ಮಾತ್ರ ಬದ್ಧರಾಗಿ ದಕ್ಷಿಣದಲ್ಲಿ ವ್ಯವಹರಿಸಿದ್ದರೆ, ಕನ್ನಡ ಭಾಷಾ ಇತಿಹಾಸವೇ ಬದಲಾಗುತ್ತಿತ್ತೇನೋ! ಅಥವಾ ಬೌದ್ಧರಂತೆ ಜೈನರೂ ಈ ನೆಲದಿಂದ ಮರೆಯಾಗುವ ಸಾಧ್ಯತೆ ಉಂಟಾಗುತ್ತಿತ್ತೇನೋ!

ಜೈನರ ಈ ನಡೆ ಕರ್ನಾಟಕದಲ್ಲಿ ಒಂದು ಕಡೆ ಸಂಸ್ಕೃತವನ್ನು ನಿಯಂತ್ರಿಸಲು ನೆರವಾದರೆ ಮತ್ತೊಂದು ನೆಲೆಯಲ್ಲಿ ಕನ್ನಡದ ಬೆಳವಣಿಗೆಗೆ ಕಾರಣವಾಯಿತು. ಶೆಟ್ಟರ್ ಅವರ ಈ ವಿಶ್ಲೇಷಣೆ ಪ್ರಾಕೃತ -ಸಂಸ್ಕೃತ-ಕನ್ನಡ ಸಂಬಂಧದ ಸಂಕೀರ್ಣ ವಿನ್ಯಾಸವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.

ಶೆಟ್ಟರ್​ರು ಶಾಸನಗಳನ್ನು ಆಕರವಾಗಿಟ್ಟುಕೊಂಡು ನಡೆಸುತ್ತಿರುವ ಈ ಅಧ್ಯಯನದ ಪ್ರಸ್ತುತತೆಯಾದರೂ ಏನು? ಅವರ ಇದುವರೆಗಿನ ಅಧ್ಯಯನದ ಪರಿಣಾಮವೇನು? ಸರಳವಾಗಿ ಹೇಳುವುದಾದರೆ ಹಳಗನ್ನಡ ಅಧ್ಯಯನಕ್ಕೆ ಇದು ಮರುಚಾಲನೆ ನೀಡಿದ್ದು ಮಾತ್ರವಲ್ಲ, ಹೊಸಹೊಳಹುಗಳನ್ನೂ ನೀಡಿತೆಂಬುದು ಈಗಾಗಲೇ ಗೊತ್ತಿರುವ ಪರಿಚಿತ ಸಂಗತಿ. ಆದರೆ ಇದಕ್ಕಿಂತ ಮಹತ್ವದ್ದು ನಾವು ಬದುಕುತ್ತಿರುವ ಕಾಲ ಜಾಗತೀಕರಣದ ಹೆಸರಿನಲ್ಲಿ ಬಹುಸಂಸ್ಕೃತಿಯನ್ನು ನಾಶ ಮಾಡಿ ಏಕಾಕೃತಿಯತ್ತ ಜಗತ್ತು ಸಾಗುತ್ತಿರುವ ಕಾಲಘಟ್ಟ. ಇಂತಹ ಹೊತ್ತಿನಲ್ಲಿ ಶೆಟ್ಟರ್ ತಮ್ಮ ಅಧ್ಯಯನದ ಮೂಲಕ ಬಹುತ್ವ ಭಾರತವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿರುವುದು ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ್ದು. ‘ಜಗದ್ವಲಯ’ ಎಂಬ ಪರಿಕಲ್ಪನೆಯೇ ಅವರ ಅಧ್ಯಯನದ ಸ್ವರೂಪವನ್ನು ಸೂಚಿಸುತ್ತದೆ. ಇದು ಶಶಿಕುಮಾರ್ ಸೂಚಿಸುವಂತೆ ಶೆಲ್ಡನ್ ಪೊಲಾಕ್ ಅವರ ಸಂಸ್ಕೃತ ‘ವಿಶ್ವಾತ್ಮಕತೆ’ಗೆ ಪರ್ಯಾಯವಾಗಿ ಶೆಟ್ಟರ್ ಕಟ್ಟಿಕೊಡುವ ‘ಪ್ರಾಕೃತ ಜಗದ್ವಲಯ’.

ಶೆಟ್ಟರ್ ಪ್ರಾಕೃತ ಕನ್ನಡ ಸಂಬಂಧದ ಬಗ್ಗೆ ಹೇಳುವಾಗ ಚಾವುಂಡರಾಯ ಹಾಗೂ ಶಿವಕೋಟ್ಯಾಚಾರ್ಯರನ್ನು ಪ್ರಸ್ತಾಪಿಸುತ್ತಾರೆ. ನನಗೆ ಇಲ್ಲಿ ನಾಗಚಂದ್ರನೂ ನೆನಪಾಗುತ್ತಾನೆ. ಈತನ ‘ರಾಮಚಂದ್ರಚರಿತ ಪುರಾಣ’ ವಿಮಲಸೂರಿಯ ಪ್ರಾಕೃತ ಗ್ರಂಥ ‘ಪಉಮಚರಿಯ’ದಿಂದ ಪ್ರಭಾವಿತವಾಗಿರುವಂಥದು. ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾದ ಈ ಪರಂಪರೆಯ ಅಧ್ಯಯನ ಬಹುತ್ವಭಾರತದ ಸ್ವರೂಪವನ್ನು ನಮಗೆ ಪರಿಚಯಿಸುತ್ತದೆ. ವಿಮಲಸೂರಿಯ ‘ಪಉಮಚರಿಯ’ದ ಆರಂಭದಲ್ಲಿಯೇ ಒಂದು ಪ್ರಸಂಗವಿದೆ. ಶ್ರೇಣಿಕ ಮಹಾರಾಜನಿಗೆ ರಾಮಾಯಣದ ಕತೆ ಕೇಳಿದಾಗ ಕೆಲವು ಸಂದೇಹಗಳು ಬರುತ್ತವೆ. ಆಗ ಗೌತಮಗಣಧರ ರಾಮಾಯಣವನ್ನು ತಿದ್ದಿ ಹೇಳುತ್ತಾನೆ. ಹೀಗೆ ಸಂಸ್ಕೃತ ವಾಲ್ಮೀಕಿ ರಾಮಾಯಣಕ್ಕೆ ಪ್ರತಿಯಾಗಿ ರೂಪುಗೊಂಡದ್ದೇ ಪ್ರಾಕೃತ ರಾಮಾಯಣ. ಇದು ಪ್ರಧಾನ ಸಂಸ್ಕೃತಿಗೆ ಪ್ರತಿಭಟನೆಯಾಗಿ ರೂಪುಗೊಂಡ ಪರ್ಯಾಯ ಸಂಸ್ಕೃತಿಯ ಕಥನವೂ ಹೌದು. ಕನ್ನಡವು ಸಂಸ್ಕೃತವನ್ನು ಹೀಗೆ ಪ್ರಾಕೃತದ ಮೂಲಕ ಎದುರಿಸಿತೇ? ಇಲ್ಲಿ ನನಗೆ ರಾಮಾನುಜನ್ ನೆನಪಾಗುತ್ತಾರೆ.

ಪರ್ಯಾಯ ಚಿಂತನೆಗೆ ಅವಕಾಶ ಕಲ್ಪಿಸುವ ಶೆಟ್ಟರ್ ಅವರ ಈ ಎಲ್ಲ ಪುಸ್ತಕಗಳನ್ನೂ ಪ್ರಕಟ ಮಾಡಿದವರು ಅಭಿನವ ಪ್ರಕಾಶನ. ‘ಪ್ರಾಕೃತ ಜಗದ್ವಲಯ’ ಅಭಿನವದ ಐದುನೂರನೆಯ ಪುಸ್ತಕ. ಅವರ ಎಲ್ಲ ಪ್ರಕಟಣೆಗಳನ್ನೂ ಗಮನಿಸಿದರೆ ಸಿದ್ಧ ಜಾಡಿನ ರೂಢಿಯ ರೀತಿಗಿಂತ ಪರ್ಯಾಯ ಸಂಸ್ಕೃತಿ ಚಿಂತನೆಯಲ್ಲಿ ಅಭಿನವದ ಪಾತ್ರವೂ ಅತ್ಯಂತ ಮಹತ್ವದ್ದು ಅನ್ನಿಸುತ್ತದೆ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top