ಗಾಳಿಬೋರೆಯ ಪ್ರಕೃತಿ ಮಡಿಲಿನಲ್ಲೊಂದು ದಿನ

ದಿನನಿತ್ಯದ ಬದುಕಿಗೆ ನವೋಲ್ಲಾಸ ನೀಡುವ ಚೈತನ್ಯದಾಯಕ ಸಂಗತಿಗಳಲ್ಲಿ ಪ್ರವಾಸಕ್ಕೆ ಮೊದಲ ಸ್ಥಾನ. ಪಾಶ್ಚಾತ್ಯರಲ್ಲಿ ಸಾಮಾನ್ಯವಾಗಿ ಇದು ವೀಕೆಂಡ್​ನ ಪ್ರಮುಖ ಕಾರ್ಯಕ್ರಮ. ಅವರು ವಾರದಲ್ಲಿ ಐದು ದಿನ ಬಿಡುವಿಲ್ಲದೆ ದುಡಿಯುತ್ತಾರೆ. ಶನಿವಾರ ಭಾನುವಾರ ಆರಾಮವಾಗಿ ಕಾಲ ಕಳೆಯಲು ವಿವಿಧ ಬಗೆಯ ಯೋಜನೆ ರೂಪಿಸಿಕೊಳ್ಳುತ್ತಾರೆ. ಅವುಗಳಲ್ಲಿ ಪ್ರವಾಸ ಅವರ ಮೊದಲ ಆದ್ಯತೆ. ನಮ್ಮಲ್ಲಿ ಪ್ರವಾಸವೆಂದರೆ ಪ್ರಧಾನವಾಗಿ ದೇವಸ್ಥಾನಗಳಿಗೆ ಹೋಗುವುದು. ಅದನ್ನು ನಾವು ಪ್ರವಾಸ ಎನ್ನುವುದಿಲ್ಲ, ಯಾತ್ರೆ ಎಂದು ಕರೆಯುತ್ತೇವೆ. ನಿಖರವಾಗಿ ಹೇಳಬೇಕೆಂದರೆ ‘ತೀರ್ಥಯಾತ್ರೆ’. ನಮ್ಮ ಪ್ರವಾಸಿತಾಣಗಳ ಪಟ್ಟಿ ಗಮನಿಸಿ. ಬಹುತೇಕ ಅವು ತೀರ್ಥಕ್ಷೇತ್ರಗಳೇ ಆಗಿರುತ್ತವೆ. ಅದಕ್ಕೆ ಕಾರಣವೂ ಇದೆ. ಹಿಂದೆ ನಮ್ಮ ದೇವಸ್ಥಾನಗಳೆಲ್ಲ ಬಹುಮಟ್ಟಿಗೆ ಬೆಟ್ಟದ ಮೇಲೆ ಅಥವಾ ನದೀತೀರದಲ್ಲಿ, ಪ್ರಶಾಂತ ವಾತಾವರಣದಲ್ಲಿ ಇರುತ್ತಿದ್ದವು. ಈಗ ನಾವು ಆಕರ್ಷಕ ಪ್ರವಾಸಿ ತಾಣಗಳೆಂದು ಹೇಳುವ ಹಿಲ್​ಸ್ಟೇಷನ್ ಅಥವಾ ರಿವರ್​ಸೈಡ್ ಒಂದು ಕಾಲಕ್ಕೆ ನಮ್ಮ ದೇವಸ್ಥಾನಗಳೇ ಆಗಿರುತ್ತಿದ್ದವು. ಅಲ್ಲಿ ಹೋದರೆ ದಿನನಿತ್ಯದ ಜಂಜಡದಿಂದ ಬಿಡುಗಡೆ ದೊರಕಿ ಬದುಕಿಗೆ ಹೊಸ ಚೈತನ್ಯ ಸಿಗುತ್ತಿತ್ತು. ನಮ್ಮ ಹಳ್ಳಿಗಳಲ್ಲೂ ಸಾಮಾನ್ಯವಾಗಿ ದೇವಸ್ಥಾನಗಳು ಊರ ಹೊರಗೆ ತೋಪಿನಲ್ಲಿ ಇರುತ್ತಿದ್ದವು. ಊರ ಬಾಗಿಲಲ್ಲಿ ಮಾರಿಗುಡಿ, ಉಳಿದ ದೇವಾಲಯಗಳನ್ನು ಹೊರವಲಯದ ಪ್ರಶಾಂತ ವಾತಾವರಣದಲ್ಲಿ ನಿರ್ಮಿಸುತ್ತಿದ್ದರು. ದೇವಸ್ಥಾನಗಳ ಬಳಿ ಕಡ್ಡಾಯವಾಗಿ ಕಟ್ಟೆ ಕಟ್ಟಿದ ಅರಳೀಮರ ಬೇವಿನಮರಗಳಿರುತ್ತಿದ್ದವು. ಅಲ್ಲಿ ಕಟ್ಟೆಯ ಮೇಲೆ ಕುಳಿತು ದಟ್ಟವಾಗಿ ಹರಡಿದ್ದ ಮರದ ನೆರಳಿನಲ್ಲಿ ಹರಟೆ ಹೊಡೆಯುತ್ತ ವಿಶ್ರಾಂತಿ ಪಡೆಯುವುದು ದೇಹ ಮಾತ್ರವಲ್ಲ, ಮನಸ್ಸಿಗೂ ಆಹ್ಲಾದ ನೀಡುತ್ತಿತ್ತು.

ಈಗ ಕಾಲ ಬದಲಾಗಿದೆ. ನಮ್ಮ ಬಹುಪಾಲು ದೇವಸ್ಥಾನಗಳು ವಾಣಿಜ್ಯಕೇಂದ್ರಗಳಾಗಿವೆ. ಭಕ್ತಿಯೆಂಬುದು ಮಾರಾಟದ ಸರಕಾಗಿದೆ. ಪ್ರಶಾಂತ ವಾತಾವರಣ ಮಾಯವಾಗಿ ದೇವಸ್ಥಾನಗಳು ಗದ್ದಲದ ಗೂಡುಗಳಾಗಿವೆ. ಆದರೂ ನಮ್ಮ ಜನರಿಗೆ ಇಂದಿಗೂ ಇಂತಹ ‘ಯಾತ್ರೆ’ಗಳಲ್ಲಿ ನಂಬಿಕೆ. ಬಹುಪಾಲು ಜನರು ಕುಟುಂಬ ಸಮೇತರಾಗಿ ವರ್ಷಕ್ಕೊಂದು ಬಾರಿ ಇಂತಹ ‘ತೀರ್ಥಯಾತ್ರೆ’ ಕೈಗೊಳ್ಳುತ್ತಾರೆ.

ಆಧುನಿಕ ಬದುಕಿನಲ್ಲಿ ಪ್ರವಾಸದ ಪರಿಕಲ್ಪನೆ ಬದಲಾಗಿದೆ. ಹೊಸ ತಲೆಮಾರಿಗೆ ಪ್ರವಾಸವೆಂದರೆ ಉಲ್ಲಾಸ, ಮನರಂಜನೆ. ದಿನನಿತ್ಯದ ಯಾಂತ್ರಿಕ ಬದುಕಿನಿಂದ ಬಿಡುಗಡೆ ಪಡೆಯುವ ಸಾಧ್ಯತೆ. ಆದರೆ ಇಂತಹ ಮನೋಭಾವ ಭಾರತೀಯ ಪರಿಸರದಲ್ಲಿ ಇನ್ನೂ ಹೊಸದು. ಬಹುಪಾಲು ದೇಶಗಳಲ್ಲಿ ಪ್ರವಾಸ ಒಂದು ‘ಉದ್ಯಮ’ವಾಗಿ ರೂಪಾಂತರವಾಗಿದೆ. ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಪ್ರವಾಸ ಬಹುದೊಡ್ಡ ಪಾತ್ರ ವಹಿಸುತ್ತಿದೆ. ನಮ್ಮಲ್ಲಿಯೂ ‘ಪ್ರವಾಸೋದ್ಯಮ’ ಇಲಾಖೆ ಇದೆ. ಆದರೆ ಅದು ಪ್ರವಾಸವನ್ನು ಒಂದು ‘ಉದ್ಯಮ’ವಾಗಿ ರೂಪಿಸುವ, ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗುವಂತೆ ಅಭಿವೃದ್ಧಿಪಡಿಸುವ ಯಾವ ಗಂಭೀರ ಪ್ರಯತ್ನಗಳನ್ನೂ ಮಾಡಿದಂತೆ ತೋರುತ್ತಿಲ್ಲ. ನಮ್ಮ ಕರ್ನಾಟಕದಲ್ಲಿಯೇ ಜಾಗತಿಕ ಪ್ರವಾಸಿಗರನ್ನು ಆಕರ್ಷಿಸುವ ಅನೇಕ ಪ್ರವಾಸಿತಾಣಗಳಿವೆ. ಆದರೆ ಅವುಗಳ ಪರಿಚಯ ನಮಗೇ ಇದ್ದಂತಿಲ್ಲ. ಆ ತಾಣಗಳೆಲ್ಲ ‘ಅದೃಶ್ಯ ದೇವತೆ’ಗಳ ರೂಪದಲ್ಲಿವೆ. ಪ್ರವಾಸಿತಾಣಗಳೆಂದು ಗುರ್ತಿಸಲ್ಪಟ್ಟ ಪ್ರದೇಶಗಳಲ್ಲೂ ಮೂಲಭೂತ ಸೌಲಭ್ಯಗಳ ಕೊರತೆಯಿದೆ.

ಇತ್ತೀಚೆಗೆ ನನ್ನ ಮಗಳು ಸಹನಾ ನಮ್ಮ ಕುಟುಂಬ ಸ್ನೇಹಿತರಾದ ಉಮಾರಾಜಣ್ಣ ಅವರ ಸಲಹೆಯಂತೆ ನಮ್ಮೆಲ್ಲರನ್ನೂ ಗಾಳಿಬೋರೆ ಪ್ರವಾಸಿತಾಣಕ್ಕೆ ಕರೆದುಕೊಂಡು ಹೋಗಿದ್ದಳು. ಬೆಂಗಳೂರಿಗೆ ಸನಿಹದಲ್ಲಿರುವ ಇಂತಹ ತಾಣವೊಂದು ಇದುವರೆಗೆ ನಮಗೆ ಯಾಕೆ ಗೊತ್ತಿರಲಿಲ್ಲ ಎಂದು ನನಗೆ ಆಶ್ಚರ್ಯವಾಯಿತು. ನಾವು ಆ ಬಗ್ಗೆ ತಿಳಿದುಕೊಂಡಿಲ್ಲ ಎನ್ನುವುದು ಸರಳ ಉತ್ತರ. ಜನಸಮುದಾಯದಲ್ಲಿ ಅದು ಜನಜನಿತವಾಗಿಲ್ಲ ಏಕೆ ಎಂಬ ಪ್ರಶ್ನೆಯನ್ನು ಕೇಳಿಕೊಂಡಾಗ ನಮ್ಮ ಪ್ರವಾಸೋದ್ಯಮದ ಪರಿಕಲ್ಪನೆಯ ಬಗೆಗೆ ಚಿಂತಿಸುವಂತಾಗುತ್ತದೆ.

ಗಾಳಿಬೋರೆ ಬೆಂಗಳೂರಿನಿಂದ ಸುಮಾರು 90 ಕಿ.ಮೀ.ನಷ್ಟು ಸನಿಹದಲ್ಲಿದೆ. ಕನಕಪುರಕ್ಕೆ ಹೋಗಿ ಅಲ್ಲಿಂದ ಸಂಗಮಕ್ಕೆ ಹೋಗುವ ದಾರಿ ಹಿಡಿಯಬೇಕು. ದೊಡ್ಡಾಲಹಳ್ಳಿ, ಉಯ್ಯಂಬಳ್ಳಿ ಮೊದಲಾದ ಊರುಗಳನ್ನು ದಾಟಿದರೆ ಸಂಗಮ ಸಿಗುತ್ತದೆ. ಅರ್ಕಾವತಿ ಹಾಗೂ ಕಾವೇರಿ ನದಿಗಳು ಕೂಡುವ ಜಾಗವದು. ಸಂಗಮದಿಂದ 9 ಕಿ.ಮೀ. ದೂರ ಮಣ್ಣಿನ ಕಚ್ಚಾರಸ್ತೆಯಲ್ಲಿ ಕ್ರಮಿಸಿದರೆ ಗಾಳಿಬೋರೆ ನೇಚರ್ ಕ್ಯಾಂಪ್ ಸಿಗುತ್ತದೆ. ಸಂಗಮದವರೆಗೆ ರಸ್ತೆ ಅಡ್ಡಿಯಿಲ್ಲ, ಚೆನ್ನಾಗಿದೆ. ಬೆಂಗಳೂರಿನಿಂದ ಸುಮಾರು ಒಂದೂವರೆ ಅಥವಾ ಎರಡು ಗಂಟೆಯ ಅವಧಿಯಲ್ಲಿ ಸಂಗಮ ತಲುಪಬಹುದು. ಆದರೆ ಅಲ್ಲಿಂದ ಗಾಳಿಬೋರೆಗೆ ಹೋಗಲು ಸಾಕಷ್ಟು ಸಮಯ ಬೇಕಾಗುತ್ತದೆ. ನಮ್ಮ ವೇಗಕ್ಕೆ ಕಡಿವಾಣ ಬೀಳುತ್ತದೆ. ಅದೊಂದು ರೀತಿ ಒಳ್ಳೆಯದೇ. ಅಲ್ಲಿಂದಲೇ ನಮಗೆ ಭಿನ್ನ ಪರಿಸರದ ಅನುಭವವಾಗುತ್ತದೆ. ಕುರುಚಲು ಕಾಡು, ನಡುವೆ ಸಿಗುವ ಒಂದೆರಡು ಮನೆಗಳು, ನಿಶ್ಶಬ್ದದ ವಾತಾವರಣ, ಜನವಿಹೀನ ಪರಿಸರ, ಪಕ್ಕದಲ್ಲಿ ಹರಿಯುವ ಕಾವೇರಿ- ಇವೆಲ್ಲದರ ನಡುವೆ ಸಾಗಿದರೆ ಗಾಳಿಬೋರೆ ಸಿಗುತ್ತದೆ. ಇದೊಂದು ರೀತಿ ವೆಹಿಕಲ್ ಟ್ರೆಕಿಂಗ್​ನ ಅನುಭವ ನೀಡುತ್ತದೆ.

ಗಾಳಿಬೋರೆ ಪ್ರವಾಸಿಧಾಮದ ಪರಿಕಲ್ಪನೆ ಇತ್ತೀಚಿನದು. ಇದನ್ನು ‘ಇಕೋ ಟೂರಿಸಂ’ ಎನ್ನುತ್ತಾರೆ. ಕಳೆದ ಶತಮಾನದ 70ರ ದಶಕದಲ್ಲಿ ಹೆಕ್ಟರ್ ಕ್ಯಾಬಲಸ್ ಈ ಪರಿಕಲ್ಪನೆಯನ್ನು ಬಳಕೆಗೆ ತಂದ. ಆತನೇ ಇದನ್ನು ‘ಇಕೋ ಟೂರಿಸಂ’ ಎಂದು ಕರೆದು ಇದರ ಆಶಯ ಸ್ವರೂಪಗಳನ್ನು ವಿವರಿಸಿದ. ಆತನ ಪ್ರಕಾರ ಇಕೋ ಟೂರಿಸಂನಲ್ಲಿ ಪ್ರಧಾನವಾಗಿ ಮೂರು ಅಂಶಗಳಿರುತ್ತವೆ. ಅದರಲ್ಲಿ ಮೊದಲನೆಯದು ಅಲ್ಲಿನ ಸಹಜ ಪರಿಸರವನ್ನು ಹಾಳುಮಾಡಬಾರದು. ಸಾಮಾನ್ಯವಾಗಿ ನಮ್ಮ ಪ್ರವಾಸಿ ತಾಣಗಳಲ್ಲಿ ಮೊದಲು ಹಾಳಾಗುವುದು ಅಲ್ಲಿನ ಸಹಜ ಪರಿಸರ. ಆ ಬಗ್ಗೆ ಎಚ್ಚರ ವಹಿಸಬೇಕೆಂಬುದು ಇಲ್ಲಿನ ಮೊದಲ ನಿಬಂಧನೆ. ಎರಡನೆಯದು ಇಲ್ಲಿ ಬರುವ ಪ್ರವಾಸಿಗರು ಪ್ರಕೃತಿಯನ್ನು ಆಸ್ವಾದಿಸಲು ತಕ್ಕ ವಾತಾವರಣ ನಿರ್ಮಿಸಬೇಕು. ಅದಕ್ಕೆ ಬೇಕಾದ ಅನುಕೂಲ ಕಲ್ಪಿಸಬೇಕು. ಪ್ರವಾಸದ ಪ್ರಮುಖ ಆಶಯವೇ ಪ್ರಕೃತಿ ಆಸ್ವಾದನೆ. ಮೂರನೆಯದು ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಮೂಲಕ ಅವರನ್ನೂ ಒಳಗೊಳ್ಳಬೇಕು.

1978ರಲ್ಲಿ ಆರ್. ಗುಂಡೂರಾವ್ ಪ್ರವಾಸೋದ್ಯಮ ಸಚಿವರಾಗಿದ್ದಾಗ ನೇಪಾಳದಲ್ಲಿ ನಡೆದ ‘ಪೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್’ನ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಆಗ ಅವರಿಗೆ ಚಿತಗಾನ್​ನ ನ್ಯಾಷನಲ್ ಪಾರ್ಕ್​ನ ‘ಟೈಗರ್ ಟಾಪ್ ಜಂಗಲ್ ರೆಸಾರ್ಟ್’ನಲ್ಲಿ ವಾಸ್ತವ್ಯ ಕಲ್ಪಿಸಲಾಗಿತ್ತು. ಆ ಪರಿಸರದ ಗಾಢ ಪ್ರಭಾವಕ್ಕೊಳಗಾದ ಗುಂಡೂರಾವ್ ಕರ್ನಾಟಕದಲ್ಲಿಯೂ ಅಂತಹ ರೆಸಾರ್ಟ್ ರೂಪಿಸಬೇಕೆಂದು ಅಲ್ಲಿಯೇ ನಿರ್ಧರಿಸಿ, ಸರ್ಕಾರದ ಸಹಯೋಗದೊಂದಿಗೆ ಯೋಜನೆ ರೂಪಿಸಲು ‘ಟೈಗರ್ ಟಾಪ್’ ಸಂಸ್ಥೆಯನ್ನು ಆಹ್ವಾನಿಸಿದರು. ಸಂಸ್ಥೆ ಯೋಜನೆ ಸಿದ್ಧಪಡಿಸಿತು. ಅದರ ಫಲವೇ ನಾಗರಹೊಳೆ ಸಮೀಪ ರೂಪುಗೊಂಡಿರುವ ‘ಕಬಿನಿ ರಿವರ್ ಲಾಡ್ಜ್.’ ಇದರ ಆರ್ಕಿಟೆಕ್ಟ್ ಜಾನ್ ಸ್ಯಾಂಡಿ. ಅಲ್ಲಿದ್ದ ಮಹಾರಾಜರ ಬಂಗಲೆ, ವೈಸ್​ರಾಯ್ ಬಂಗಲೆಯನ್ನು ಬಳಸಿಕೊಂಡು ಸೊಗಸಾದ ವಿನ್ಯಾಸದಲ್ಲಿ ಇದು ರೂಪುಗೊಂಡಿದೆ. ಇದು ಟ್ಯಾಟಲ್ ಟ್ರಾವೆಲ್ ಗೈಡ್ ಪ್ರಕಾರ ಜಗತ್ತಿನ ಪ್ರಮುಖ ಐದು ವೈಲ್ಡ್​ಲೈಫ್ ರೆಸಾರ್ಟ್​ಗಳಲ್ಲಿ ಒಂದು. ಮುಂದೆ ಟೈಗರ್ ಟಾಪ್ ಸಂಸ್ಥೆ ಸಹಯೋಗದಿಂದ ಹಿಂದೆ ಸರಿಯಿತು. ಈಗ ಇದು ‘ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ಸ್’ ಹೆಸರಿನ ಕರ್ನಾಟಕ ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆ. ಕ್ರಮೇಣ ಈ ಸಂಸ್ಥೆ ರಾಜ್ಯದ ಅನೇಕ ಭಾಗಗಳಲ್ಲಿ ರೆಸಾರ್ಟ್ ಗಳನ್ನು ಸ್ಥಾಪಿಸಿತು. ಅವುಗಳಲ್ಲಿ ‘ಗಾಳಿಬೋರೆ’ಯೂ ಒಂದು.

ನಾವು ಗಾಳಿಬೋರೆ ತಲುಪಿದಾಗ ಹನ್ನೆರಡರ ಆಸುಪಾಸು. ನಾವು ಕಾರು ನಿಲ್ಲಿಸಿದ ಕ್ಷಣವೇ ಗೋವಿಂದ ಎನ್ನುವವರು ಬಂದು ಪರಿಚಯಿಸಿಕೊಂಡು, ಆಪ್ತವಾಗಿ ಕುಶಲ ವಿಚಾರಿಸಿ, ನಮ್ಮನ್ನು ಸ್ವಾಗತಕೊಠಡಿಗೆ ಕರೆದುಕೊಂಡು ಹೋದರು. ನಾವು ಅಲ್ಲಿರುವವರೆಗೂ ಇವರೇ ನಮ್ಮ ಬೇಕು ಬೇಡಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಅಲ್ಲಿಯ ಫಾರ್ವ್ಯಾಲಿಟೀಸ್ ಮುಗಿಸಿದ ನಂತರ ಟೆಂಟ್ ಮಾದರಿಯಲ್ಲಿದ್ದ ರೂಮಿಗೆ ಕರೆದುಕೊಂಡು ಹೋದರು. ಹೊರನೋಟಕ್ಕೆ ಟೆಂಟ್ ರೀತಿ ಕಂಡರೂ ಒಳಗೆ ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆಯಿತ್ತು. ಜಗಲಿಯಂತಹ ಅಂಗಳದಲ್ಲಿ ಕುಳಿತು ಜ್ಯೂಸ್ ಕುಡಿಯುತ್ತಿದ್ದಾಗ ಅಲ್ಲಿಗೆ ಬಂದ ಬಾಣಸಿಗ ಬಾಬು ‘ಅಡುಗೆ ಏನು ಮಾಡಲಿ’ ಎಂದು ವಿಚಾರಿಸಿದರು. ‘ಏನು ಹೇಳಿದರೂ ಮಾಡುವಿರೋ?’ ಎಂದು ನಗೆಚಾಟಿಕೆಯಲ್ಲಿ ಕೇಳಿದೆ. ಅವರು ಗಂಭೀರವಾಗಿಯೇ ‘ಹೇಳಿ ಸರ್, ಮಾಡುತ್ತೇನೆ’ ಎಂದರು. ಮಾತ್ರವಲ್ಲ, ನಾವು ಅಲ್ಲಿರುವವರೆಗೆ ನಮಗೆ ಬೇಕಾದ ತಿಂಡಿ ತಿನಿಸುಗಳನ್ನು ಬೇಸರಿಸದೆ ಪ್ರೀತಿಯಿಂದ ಮಾಡಿಕೊಟ್ಟರು. ರುಚಿಯಾಗಿಯೂ ಇತ್ತು. ನಿಜ ಹೇಳಬೇಕೆಂದರೆ ಅಮ್ಮನ ಕೈರುಚಿಯನ್ನು ನೆನಪಿಸಿತು. ಜಂಗಲ್ ರೆಸಾರ್ಟ್​ನ ಪ್ಲಸ್ ಪಾಯಿಂಟ್​ಗಳಲ್ಲಿ ರುಚಿಯಾದ ವೈವಿಧ್ಯಮಯ ಅಡುಗೆಯೂ ಒಂದು.

ಎದುರಿಗೆ ಜುಳುಜುಳು ಹರಿಯುತ್ತಿರುವ ಕಾವೇರಿ ನದಿ. ದಡದಲ್ಲಿ ಮರಳ ಅಂಗಳ. ನದಿಯಾಚೆಗೆ ಹಸುರಿನಿಂದಾವೃತವಾದ ಎತ್ತರದ ಬೆಟ್ಟ. ಈಚೆ ಆಟದಬಯಲಿನಂತಹ ವಿಸ್ತಾರವಾದ ನೆಲಹಾಸು. ಪಕ್ಕದಲ್ಲಿ ಆಕಾಶದೆತ್ತರಕ್ಕೆ ಬೆಳೆದುನಿಂತ ಮರಗಳು. ಅವುಗಳಿಗೆ ಕಟ್ಟಿದ ಹಗ್ಗದುಯ್ಯಾಲೆ. ನೆರಳು ಬೆಳಕಿನಾಟದ ಅಂಗಳದಲ್ಲಿ ಹಗ್ಗದಲ್ಲಿ ಹೆಣೆದ ಬಲೆಯ ತೂಗುಮಂಚ. ಅದರಲ್ಲಿ ಮಲಗಿ ಆಕಾಶದತ್ತ ಕಣ್ಣು ಚಾಚಿದರೆ ಮರಗಳ ನಡುವೆ ತೂರಿಬರುವ ಸೂರ್ಯಕಿರಣದ ಬಣ್ಣಬೆಳಕಿನಾಟ. ಹಕ್ಕಿಗಳ ಇಂಪಾದ ಕಲರವ. ಅಲ್ಲಿಯೇ ಹತ್ತಿರದಲ್ಲಿ ಕುಳಿತು ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದ ಕೋತಿಗಳ ಕುಟುಂಬ.

ರಜನಿಯವರು ಮೊಮ್ಮಗಳೊಡನೆ ಉಯ್ಯಾಲೆಯಾಡಲು ಹೊರಟರು. ಮಗಳು ಸಹನಾ ತನ್ನ ಇನ್ನೊಬ್ಬ ಮಗಳೊಡನೆ ತೂಗುಮಂಚವೇರಿದಳು. ನಾನು ಅಲ್ಲಿಯೇ ಸಾಲಾಗಿ ನಿಲ್ಲಿಸಿದ್ದ ಬೈಸಿಕಲ್​ಗಳಲ್ಲಿ ಒಂದನ್ನು ತೆಗೆದುಕೊಂಡು ಹೊರಟೆ. ಅನೇಕ ದಿನಗಳ ನಂತರದ ಸೈಕಲ್ ಸವಾರಿ ತಾರುಣ್ಯದ ದಿನಗಳನ್ನು ನೆನಪಿಸಿತು. ನಮ್ಮ ಕಾಲದಲ್ಲಿ ರ‍್ಯಾಲಿ ಸೈಕಲ್ ಎಂದರೆ ಈಗಿನ ಬಿಎಂಡಬ್ಲು್ಯ ಕಾರಿದ್ದಂತೆ.

ಅಷ್ಟರಲ್ಲಿ ಊಟಕ್ಕೆ ಕರೆಬಂದಿತು. ಸೊಗಸಾದ ಹದರುಚಿಯ ವೈವಿಧ್ಯಮಯ ತಿನಿಸುಗಳು. ನಂತರ ವಿಶ್ರಾಂತಿ. ಸಂಜೆಯಾಗುತ್ತಿದ್ದಂತೆ ಟೀ ಕುಡಿದು ತೆಪ್ಪದಲ್ಲಿ ಹೊರಟೆವು. ಸಂಜೆಸೂರ್ಯನ ಬೆಳಕಿನಲ್ಲಿ ಪ್ರಕೃತಿ ಹೊಸಮೆರುಗು ಪಡೆದಿದ್ದಳು. ನದಿಯಲ್ಲಿ ಮೊಸಳೆಗಳಿರುವುದರಿಂದ ಭಯಮಿಶ್ರಿತ ಉಲ್ಲಾಸದಲ್ಲಿಯೇ ಸುತ್ತುಹಾಕಿದೆವು. ಆಚೆ ದಡದಲ್ಲಿ ಜಿಂಕೆ, ಸೀಳುನಾಯಿಗಳು ನೀರು ಕುಡಿಯಲು ಬಂದಿದ್ದವು. ನೀರ ನಡುವೆ ಬಂಡೆಯ ಮೇಲೆ ಮಲಗಿದ್ದ ಮೊಸಳೆ ನಿಧಾನ ನೀರಿಗಿಳಿಯಿತು. ಒಂದು ಕ್ಷಣ ಜೀವ ಬಾಯಿಗೆ ಬಂದಿತು. ಜತೆಗಿದ್ದ ಗೋವಿಂದ ನಿರಾತಂಕವಾಗಿದ್ದು ಧೈರ್ಯ ತುಂಬಿದರು. ಅನೇಕ ಬಗೆಯ ಹಕ್ಕಿಗಳ ಹಾರಾಟ, ಕಲರವ ಕಣ್ಣುಕಿವಿ ತುಂಬಿತ್ತು.

ದಡಕ್ಕೆ ಬಂದಾಗ ನದೀತೀರದ ನಮ್ಮ ‘ಪಾರ್ಟಿ’ಗೆ ಸಿಬ್ಬಂದಿ ಸಿದ್ಧತೆ ನಡೆಸಿದ್ದರು. ಕತ್ತಲಾಗುತ್ತಿದ್ದಂತೆ ಆಕಾಶದಲ್ಲಿ ನಕ್ಷತ್ರಲೋಕ. ಸುತ್ತ ಭಯ ಹುಟ್ಟಿಸುವ ನಿಗೂಢ ಕತ್ತಲು. ನೀರವ ಪರಿಸರ. ದೂರದಲ್ಲಿ ಯಾವುದೋ ಪ್ರಾಣಿಯ ಹೊಳೆಯುವ ಕಣ್ಣುಗಳು. ಹತ್ತಿರದಲ್ಲಿ ಮರಳ ರಾಶಿಯ ಮೇಲೆ ಹಾಕಿದ ಕಟ್ಟಿಗೆಯ ಬೆಂಕಿಯ ಕೆಂಬೆಳಕು. ಬೆಂಕಿಯಲ್ಲಿ ಹದವಾಗಿ ಬೇಯಿಸಿ ಕೊಡುತ್ತಿದ್ದ ತಿನಿಸುಗಳು. ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಅನುಭವ.

ಮಾರನೆಯ ದಿನ ಬೆಳಗಿನ ಜಾವ ಎಲ್ಲರೂ ಒಂದು ಸಣ್ಣ ಟ್ರೆಕಿಂಗ್ ಹೊರಟೆವು. ವಿವಿಧ ಜಾತಿಯ ಪಕ್ಷಿಗಳ ವೀಕ್ಷಣೆ. ನದೀತೀರದಲ್ಲಿ ನೀರಿನಾಟ. ಐದು ವರ್ಷದ ನಮ್ಮ ಆದ್ಯಳಂತೂ ನೀರಿನಲ್ಲಿ ಅವರ ಅಮ್ಮಮ್ಮನೊಡನೆ ಆಟವಾಡುತ್ತ ಹೊರಬರಲು ನಿರಾಕರಿಸುತ್ತಿದ್ದಳು. ಒಂದು ವರ್ಷದ ಅವನಿ ಮರಳಿನಲ್ಲಿ ಆಟವಾಡುತ್ತ ಸುಮ್ಮನೇ ನಗುತ್ತಿದ್ದಳು. ನದೀತೀರದ ನೇರಳೆ ಮರಗಳಲ್ಲಿ ಕರಡಿಗಳು ಹಣ್ಣು ತಿನ್ನಲು ಬರುತ್ತವೆ ಎಂಬುದು ಗೋವಿಂದ ಉವಾಚ. ಈಗ ಮರಗಳಲ್ಲಿ ಹಣ್ಣುಗಳಿರಲಿಲ್ಲ. ಉಪಾಹಾರ ಮುಗಿಸಿ ಅಲ್ಲಿಂದ ಹೊರಟಾಗ ಸಿಬ್ಬಂದಿಯೆಲ್ಲರೂ ನಮ್ಮನ್ನು ಮನೆಮಂದಿಯಂತೆ ಆಪ್ತವಾಗಿ ಬೀಳ್ಕೊಟ್ಟರು. ಅಲ್ಲಿನ ಇನ್​ಚಾರ್ಜ್ ಮ್ಯಾನೇಜರ್ ರವೀಂದ್ರನಾಥರಿಂದ ಮೊದಲ್ಗೊಂಡು ಬಾಬು, ಗೋವಿಂದ, ರಾಜು, ಸಿದ್ದು, ಶ್ರೀನಿವಾಸ, ಚಿಕ್ಕರಾಜು ಎಲ್ಲರ ಒಡನಾಟ ಹಿತವಾಗಿತ್ತು. ಪ್ರವಾಸವೆಂದರೆ ಕೇವಲ ಸುತ್ತಾಟವಲ್ಲ, ನಿಸರ್ಗ ವಿಶ್ವವಿದ್ಯಾಲಯದ ಹೊಸ ಅನುಭವ ಜಗತ್ತಿಗೆ ಪ್ರವೇಶವೆಂಬುದನ್ನು ನಾವು ಈ ಪ್ರವಾಸದಲ್ಲಿ ಕಂಡುಕೊಂಡೆವು.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *