ಕ್ಯಾಸ್ಟಿಂಗ್ ಕೌಚ್: ಪುರುಷಪ್ರಧಾನ ಸಮಾಜದ ಪಿಡುಗು

ತ್ತೀಚೆಗೆ ತೆಲುಗು ನಟಿ ಶ್ರೀರೆಡ್ಡಿ ಅವರು ಚಿತ್ರೋದ್ಯಮದಲ್ಲಿ ಹೆಣ್ಣನ್ನು ಭೋಗವಸ್ತುವಂತೆ ಬಳಸುತ್ತಿದ್ದಾರೆಂದು ಅರೆನಗ್ನರಾಗಿ ಪ್ರತಿಭಟಿಸಿದ ನಂತರ ಕ್ಯಾಸ್ಟಿಂಗ್ ಕೌಚ್ ಬಗ್ಗೆ ನಾಡಿನಾದ್ಯಂತ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸ್ತ್ರೀ ಲೋಕದಿಂದಲೇ ಎರಡು ರೀತಿಯ ಪ್ರತಿಕ್ರಿಯೆ ವ್ಯಕ್ತವಾಯಿತು. ಮೊದಲನೆಯದು ಸಂಸದೆ ರೇಣುಕಾ ಚೌಧರಿ ಹೇಳಿದ ಮಾತು: ‘ಕ್ಯಾಸ್ಟಿಂಗ್ ಕೌಚ್ ಎಂಬುದು ಕಹಿ ಸತ್ಯ. ಇದು ಚಿತ್ರರಂಗವಷ್ಟೇ ಅಲ್ಲದೆ ಸಂಸತ್ ಸೇರಿದಂತೆ ಉದ್ಯೋಗದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿದೆ. ಇದರ ವಿರುದ್ಧ ಇಡೀ ದೇಶವೇ ಎದ್ದು ನಿಂತು ಪ್ರತಿಭಟಿಸಬೇಕಿದೆ’. ಮತ್ತೊಂದು ಖ್ಯಾತ ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರ ಪ್ರತಿಕ್ರಿಯೆ: ‘ಈ ವಿದ್ಯಮಾನ ಹೊಸದೇನೂ ಅಲ್ಲ, ಹುಡುಗಿಯರ ಸ್ನೇಹ ಸಂಪಾದಿಸಲು ಎಲ್ಲರೂ ಪ್ರಯತ್ನಿಸುತ್ತಾರೆ. ಸರ್ಕಾರಿ ಅಧಿಕಾರಿಗಳೂ ಸೇರಿದಂತೆ ಎಲ್ಲರೂ ಇದರಲ್ಲಿ ಇದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಇದು ನೆಲೆಯೂರಿದ್ದರೂ ಚಿತ್ರರಂಗವನ್ನು ಮಾತ್ರ ಯಾಕೆ ದೂಷಿಸಲಾಗುತ್ತದೆ. ಚಿತ್ರೋದ್ಯಮದಲ್ಲಿ ಇದರಿಂದ ಉದ್ಯೋಗವಾದರೂ ಸಿಗುತ್ತಿದೆ. ಇದು ಹುಡುಗಿಯರಿಗೆ ಬಿಟ್ಟದ್ದು, ಅವಳಿಗೆ ಹೇಗೆ ಬೇಕೋ ಹಾಗೆ ನಡೆದುಕೊಳ್ಳಬಹುದು, ನೀವು ಇದಕ್ಕೆ ಯಾಕೆ ತಲೆ ಹಾಕುತ್ತೀರಿ?’ ಎಂದು ಒಂದು ರೀತಿ ಕ್ಯಾಸ್ಟಿಂಗ್ ಕೌಚ್​ನ್ನು ಸಮರ್ಥಿಸಿ ಮಾತನಾಡಿದ್ದಾರೆ.

ಇದರ ಬಗ್ಗೆ ರ್ಚಚಿಸುವ ಮೊದಲು ‘ಕ್ಯಾಸ್ಟಿಂಗ್ ಕೌಚ್-’ ಹೀಗಂದರೇನು? ಯಾವ ಕ್ಷೇತ್ರದಲ್ಲೇ ಆಗಲೀ ಯಾವ ರೀತಿಯಲ್ಲಾದರೂ ಅನುಕೂಲ ಕಲ್ಪಿಸಿಕೊಡುವುದಕ್ಕೆ ಪ್ರತಿಯಾಗಿ ಹೆಣ್ಣನ್ನು ಲೈಂಗಿಕವಾಗಿ ಬಳಸಿಕೊಳ್ಳುವುದನ್ನು ಕ್ಯಾಸ್ಟಿಂಗ್ ಕೌಚ್ ಎನ್ನುತ್ತಾರೆ. ಇದು ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಪರಿಭಾವಿಸುತ್ತಿರುವ ಮನೋಭಾವವನ್ನೂ ಸೂಚಿಸುತ್ತದೆ. ಪುರುಷನಿಗೆ ಹೆಣ್ಣು ಭೋಗವಸ್ತು ಮಾತ್ರ. ಆತನ ಸುಖಕ್ಕಾಗಿ ಹೆಣ್ಣು ಇರುವಂಥವಳು ಎಂಬುದು ಇದರ ಹಿಂದಿನ ಕಹಿಸತ್ಯ. ಅವಳಿಗೂ ಒಂದು ವ್ಯಕ್ತಿತ್ವವಿದೆ, ಅವಳು ಸುಖಸಾಧನ ಮಾತ್ರವಲ್ಲ ಎಂಬುದನ್ನು ಇದು ಅಲ್ಲಗಳೆಯುತ್ತದೆ. ಜೊತೆಗೆ ಹೆಣ್ಣಿನ ‘ದೇಹಸಿರಿ’ ಮಾತ್ರ ಮುಖ್ಯವಾಗಿ, ಅವಳ ‘ವ್ಯಕ್ತಿತ್ವ’ ವನ್ನು ಇದು ನಿರಾಕರಿಸುತ್ತದೆ. ಇಲ್ಲಿ ಪುರುಷ ಸಮಾಜದ ‘ಹಸಿವಿ’ಗೆ ಹೆಣ್ಣು ‘ಆಹಾರ’ ಮಾತ್ರವಾಗಿ ಬಳಕೆಯಾಗುತ್ತಾಳೆ.

ಮಾನವ ಇತಿಹಾಸವನ್ನು ಅವಲೋಕಿಸಿದರೆ ಮೊದಲು ಮಾತೃಪ್ರಧಾನ ಕುಟುಂಬ ರೂಢಿಯಲ್ಲಿತ್ತು. ಮನೆಯ ಹೊರಗಿನ ಹಾಗೂ ಒಳಗಿನ ದುಡಿಮೆಗೆ ಸಮಾನ ಗೌರವ ಇದ್ದುದರಿಂದ ಸ್ತ್ರೀ ಪುರುಷರಲ್ಲಿ ಸಮಾನ ಗೌರವವಿತ್ತು. ಆದರೆ ಉತ್ಪಾದನಾ ಕ್ರಮದಲ್ಲಿ ಪಲ್ಲಟವುಂಟಾದಂತೆ ಸಂಸಾರದಲ್ಲಿ ಹೆಂಗಸಿನ ಪ್ರಾಧಾನ್ಯತೆ ಕಡಿಮೆಯಾಗಿ, ಗಂಡಸು ‘ಯಜಮಾನ’ನಾದ. ಇದಕ್ಕೆ ಮೂಲ ಕಾರಣ ‘ಆಸ್ತಿ’ಯ ಪರಿಕಲ್ಪನೆ. ಪರಿಣಾಮವಾಗಿ ಮಾಲೀಕ, ಗುಲಾಮರ ವರ್ಗ ಸೃಷ್ಟಿಯಾಗಿ ‘ಅಧಿಕಾರ’ದ ಚಲಾವಣೆ ಆರಂಭವಾಯಿತು. ಮನೆಯಲ್ಲಿ ದುಡಿಯುವ ಹೆಂಗಸು ‘ಗುಲಾಮ’ಳಾಗಿ ಗಂಡಸಿನ ‘ಆಸ್ತಿ’ಯಾದಳು. ಪುರುಷನ ಕಾಮ ಪೂರೈಕೆಗೆ ಹೆಣ್ಣು ಒಂದು ‘ವಸ್ತು’ವಾದಳು. ಅವಳ ಅಲಂಕಾರವೂ ಗಂಡಿನ ಕಣ್ಣಿಗೆ ಅವಳು ಚಂದವಾಗಿ, ಕಾಮೋತ್ತೇಜಕವಾಗಿ ಕಾಣಬೇಕು ಎಂಬ ಉದ್ದೇಶದಿಂದಲೇ ಇರುತ್ತಿತ್ತು. ಈಗಲೂ ಪರಿಸ್ಥಿತಿ ಭಿನ್ನವೇನಲ್ಲ. ಹೆಣ್ಣಿನ ಮನೋಭಾವವನ್ನು ಹಾಗೆಯೇ ರೂಪಿಸಲಾಗಿದೆ. ಅವಳಿಗೆ ತನ್ನ ‘ವ್ಯಕ್ತಿತ್ವ’ಕ್ಕಿಂತ ತನ್ನ ‘ಚೆಲುವೇ’ ಪ್ರಧಾನ ಎಂಬಂತೆ ಬಿಂಬಿಸಲಾಗಿದೆ. ಹೆಣ್ಣಿಗೆ ‘ದೇಹಸಿರಿ’ಯೇ ಮುಖ್ಯ ಎಂಬ ಸಮಾಜದ ಈ ಮನೋಭಾವವೇ ಪ್ರಶ್ನಾರ್ಹ. ಮೊದಲ ಸಲ ಇದನ್ನು ಪ್ರತಿಭಟಿಸಿದವಳು ಅಕ್ಕಮಹಾದೇವಿ.

ಹನ್ನೆರಡನೆಯ ಶತಮಾನದ ವಚನ ಚಳವಳಿಯಲ್ಲಿ ದೇಹವನ್ನು ‘ದೇಗುಲ’ವೆಂದು ಕರೆದದ್ದು ಒಂದು ಪ್ರಮುಖ ಪರಿಕಲ್ಪನೆ. ‘ಉಳ್ಳವರು ಶಿವಾಲಯವ ಮಾಡುವರು/ ನಾನೇನ ಮಾಡುವೆ? ಬಡವನಯ್ಯಾ/ ಎನ್ನ ಕಾಲೇ ಕಂಬ, ದೇಹವೇ ದೇಗುಲ/ ಸಿರ ಹೊನ್ನ ಕಳಸವಯ್ಯಾ / ಕೂಡಲಸಂಗಮದೇವ, ಕೇಳಯ್ಯಾ/ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ/’ ಎಂದು ಬಸವಣ್ಣ ಹೇಳಿದರೆ, ‘ದೇಹದೊಳಗೆ ದೇವಾಲಯವಿದ್ದು/ ಮತ್ತೆ ಬೇರೆ ದೇವಾಲಯವೇಕೆ?’ ಎಂದು ಅಲ್ಲಮ ಕೇಳುತ್ತಾನೆ. ದೇವಸ್ಥಾನ ಒಂದು ವ್ಯವಸ್ಥೆ. ಅಲ್ಲಿ ಎಲ್ಲ ಬಗೆಯ ಶೋಷಣೆಗೆ ಅವಕಾಶವಿದೆ. ಈ ‘ವ್ಯವಸ್ಥೆ’ಯ ನಿರಾಕರಣೆಯ ನೆಲೆಯಲ್ಲಿ ‘ದೇಹವೇ ದೇಗುಲ’ ಎಂಬ ಪರಿಕಲ್ಪನೆಯನ್ನು ಶರಣರು ಬಳಕೆಗೆ ತಂದರು. ಆದರೆ ವಚನ ಚಳವಳಿಯ ಪ್ರಮುಖರಲ್ಲಿ ಒಬ್ಬಳಾದ ಅಕ್ಕನ ದೇಹದ ಬಗೆಗಿನ ನಿಲವೇ ಬೇರೆ. ‘ಕಾಯ ಕರ್ರನೆ ಕಂದಿದರೇನಯ್ಯ?/ ಕಾಯ ಮಿರ್ರನೆ ಮಿಂಚಿದರೇನಯ್ಯ?/ ಅಂತರಂಗ ಶುದ್ಧವಾದ ಬಳಿಕ/ ಚೆನ್ನಮಲ್ಲಿಕಾರ್ಜುನನೊಲಿದ ಬಳಿಕ ಕಾಯ/ ಎಂತಾದಡೆಮಗೇನಯ್ಯ?/’ ಇಲ್ಲಿ ಅಕ್ಕ ದೇಹಕ್ಕೆ ಪುರುಷ ಪ್ರಧಾನ ಸಮಾಜ ನೀಡಿದ ಪ್ರಾಮುಖ್ಯತೆಯನ್ನು ನಿರಾಕರಿಸುತ್ತಿದ್ದಾಳೆ. ದೇಹದ ಬಯಕೆಯನ್ನು ಅವಳು ‘ತಾಯಿ ರಕ್ಕಸಿಯಾದಂತೆ ಕಾಯವಿಕಾರವು’ ಎನ್ನುತ್ತಾಳೆ. ಸಾಮಾನ್ಯವಾಗಿ ‘ಹೆಣ್ಣು ಮಾಯೆ’ ಎಂಬುದು ರೂಢಿಯ ಮಾತು. ಆದರೆ ಅಕ್ಕ ‘ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ/’ ಎನ್ನುವಲ್ಲಿ ಪುರುಷನನ್ನೂ ‘ಮಾಯೆ’ ಎಂದು ಕರೆದಿರುವುದು ಗಮನಿಸಬೇಕಾದ ಸಂಗತಿ. ಆದರೆ ಸಮಾಜ ಹೆಣ್ಣನ್ನು ‘ಮಾಯೆ’ ಎನ್ನುತ್ತದೆಯೇ ಹೊರತು ಗಂಡನ್ನಲ್ಲ. ಸಾಧನೆ ಮಾಡುವವರು ಗಂಡಸರು ತಾನೇ! ಎಂಬ ಪುರುಷ ದುರಹಂಕಾರವೂ ಇದಕ್ಕೆ ಕಾರಣವಿರಬೇಕು. ಈ ದುರಹಂಕಾರಕ್ಕೆ ಅಕ್ಕ ಸಮರ್ಥ ಎದಿರೇಟು! ಲೋಹಿಯಾ ಹೇಳುವಂತೆ-‘ವೈರಾಗ್ಯ, ದರ್ಶನ ಇತ್ಯಾದಿಗಳಲ್ಲಿ ಗಂಡಸು ಕೊನೆಯ ಎತ್ತರದ ತನಕ ತಲುಪಿ ವಿರಕ್ತನಾಗುವಂತೆ, ಹೆಣ್ಣಾದ ತಾನೂ ಆ ಎತ್ತರಕ್ಕೆ ಯಾಕೆ ಏರಲು ಸಾಧ್ಯವಿಲ್ಲ ಎಂದು ಅಕ್ಕಮಹಾದೇವಿ ಪ್ರಶ್ನಿಸಿದಳು. ಬಯಲಾಗುವುದೆನ್ನಿ, ಅಥವಾ ಇನ್ನಾವ ಶಬ್ದವನ್ನಾದರೂ ಬಳಸಿ, ಗಂಡಸು ಅಷ್ಟು ವಿರಕ್ತನಾದ, ಅಷ್ಟು ಎತ್ತರಕ್ಕೆ ಏರಿದ, ಬಟ್ಟೆಬರೆಗಳನ್ನು ತ್ಯಜಿಸಿ ನಿರ್ವಿಕಾರನಾದ ಎಂದರೆ ಅದು ಹೆಂಗಸಿಗೇಕೆ ಸಾಧ್ಯವಿಲ್ಲ ಎಂದು ಅಕ್ಕ ತಾನೂ ಬಟ್ಟೆಬರೆಗಳನ್ನು ವರ್ಜಿಸಿದಳು, ವಿವಸ್ತ್ರಳಾದಳು. ಇಂತಹ ಒಂದು ಶಕ್ತಿಯುತವಾದ ಚರಿತ್ರೆ ಭಾರತದಲ್ಲಿ ಸಂಭವಿಸಿದೆ ಎಂಬುದನ್ನು ನಾವು ಮರೆಯಬಾರದು’. ಉಟ್ಟಂಥ ಉಡುಗೆ ತೊಡಿಗೆಯನೆಲ್ಲ ಸೆಳೆದುಕೊಳಬಹುದಲ್ಲದೆ/ ಮುಚ್ಚಿ ಮುಸುಕಿದ ನಿರ್ವಾಣವ ಸೆಳೆದುಕೊಳಬಹುದೆ?/ ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ/ ಉಡುಗೆ ತೊಡುಗೆಯ ಹಂಗೇಕೆ?

ಹೆಣ್ಣನ್ನು ಪುರುಷನು ಮಾರಬಹುದಾಗಿತ್ತು, ದಾನ ಕೊಡಬಹುದಾಗಿತ್ತು, ಪ್ರಾಣಿಗಳ ರೀತಿ ವಿಕ್ರಯ ಮಾಡಬಹುದಿತ್ತು ಎಂಬ ಸಂಗತಿಯೇ ಪುರುಷ ಪ್ರಧಾನ ಸಮಾಜ ಹೆಣ್ಣನ್ನು ಪರಿಭಾವಿಸುತ್ತಿದ್ದ ರೀತಿಯನ್ನು ಸೂಚಿಸುತ್ತದೆ.

ಮಹಾಭಾರತದಲ್ಲಿ ಬರುವ ಮಾಧವಿಯ ಪ್ರಸಂಗ ನನಗಿಲ್ಲಿ ನೆನಪಾಗುತ್ತಿದೆ. ಮಾಧವಿ ಯಯಾತಿಯ ಮಗಳು. ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಳ್ಳುವ ಮಾಧವಿ ತಂದೆಯ ಅನಾದರಕ್ಕೆ ಗುರಿಯಾಗಿ, ಮಲತಾಯಂದಿರ ತಾತ್ಸಾರದ ನಡುವೆ ದಾಸಿಯರ ಆರೈಕೆಯಲ್ಲಿ ಬೆಳೆಯುತ್ತಾಳೆ. ಗಾಲವ ವಿಶ್ವಾಮಿತ್ರನ ಶಿಷ್ಯ. ವಿದ್ಯೆ ಮುಗಿದ ಮೇಲೆ ಗುರುಕಾಣಿಕೆ ನೀಡಬೇಕೆಂದು ಬಯಸಿದಾಗ ವಿಶ್ವಾಮಿತ್ರ ಬೇಡವೆನ್ನುತ್ತಾನೆ. ಗಾಲವ ಹಟ ಮಾಡುತ್ತಾನೆ, ಆಗ ವಿಶ್ವಾಮಿತ್ರ ಸಿಟ್ಟಿನಿಂದ ಮೈಯೆಲ್ಲ ಬೆಳ್ಳಗಿರುವ ಒಂದು ಕಿವಿ ಮಾತ್ರ ಕಪ್ಪಗಿರುವ ಎಂಟುನೂರು ಕುದುರೆಗಳನ್ನು ಕೊಡು ಎನ್ನುತ್ತಾನೆ. ಗಾಲವ ಅಂತಹ ಕುದುರೆಗಳನ್ನು ಹುಡುಕಿಕೊಂಡು ಯಯಾತಿಯ ಬಳಿ ಬರುತ್ತಾನೆ. ಆತನ ಬಳಿ ಅಂತಹ ಲಕ್ಷಣದ ಕುದುರೆಗಳಿರುವುದಿಲ್ಲ. ಆಗ ಯಯಾತಿ ಕುದುರೆಗಳ ಬದಲಾಗಿ ಹರಯದ ತನ್ನ ಚೆಲುವಾದ ಮಗಳು ಮಾಧವಿಯನ್ನೇ ಗಾಲವನಿಗೆ ದಾನ ಮಾಡಿ ಅವಳನ್ನು ಯಾರಿಗಾದರೂ ಕೊಟ್ಟು ಕುದುರೆಗಳನ್ನು ಪಡೆ ಎನ್ನುತ್ತಾನೆ. ಗಾಲವ ಮುಂದೆ ಮಾಧವಿಯನ್ನು ಹರ್ಯಶ್ವ, ಉಶೀನರ, ದಿವೋದಾಸ ಮೊದಲಾದ ರಾಜರ ಬಳಿ ಕೆಲವು ಕಾಲ ಬಿಟ್ಟು ಪ್ರತಿಯಾಗಿ ಕುದುರೆಗಳನ್ನು ಪಡೆಯುತ್ತಾನೆ. ಅವರೆಲ್ಲರೂ ಅವಳೊಡನೆ ‘ಸುಖಿಸಿ’ ಮಕ್ಕಳನ್ನೂ ಪಡೆಯುತ್ತಾರೆ. ನಂತರ ಅವಳನ್ನು ದೂರ ಮಾಡುತ್ತಾರೆ. ಮಾಧವಿ ಅವರಿಗೆ ಭೋಗದ ಸಾಧನವಷ್ಟೆ. ಅವರೆಲ್ಲರಿಗೂ ಅವಳ ದೇಹ ಬೇಕು. ಮನಸ್ಸು? ಆ ಬಗ್ಗೆ ಅವರು ಯಾರೂ ಚಿಂತಿಸುವುದೇ ಇಲ್ಲ. ಕಡೆಗೆ ಎರಡುನೂರು ಕುದುರೆಗಳು ಸಾಲದೇ ಬಂದಾಗ ಗಾಲವ ಅವುಗಳ ಬದಲಿಗೆ ವಿಶ್ವಾಮಿತ್ರನಿಗೇ ಮಾಧವಿಯನ್ನು ಒಪ್ಪಿಸುತ್ತಾನೆ. ಹೀಗೆ ಮಾಧವಿ ಒಂದು ರೀತಿ ‘ಮಾರಾಟ’ದ ಸರಕಾಗುತ್ತಾಳೆ. ಇದು ಪುರಾಣದ ಕತೆ. ಅಂದರೆ ಪುರಾಣದ ಕಾಲದಿಂದಲೂ ಹೆಣ್ಣಿನ ‘ದೇಹ’ವನ್ನು ಹೀಗೆ ಮತ್ತೇನನ್ನೋ ಪಡೆಯಲು ಪ್ರತಿಯಾಗಿ ಬಳಸುವುದು ರೂಢಿಯಲ್ಲಿದ್ದಂತೆ ತೋರುತ್ತದೆ.

ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿ: ದಕ್ಷಿಣ ಆರ್ಕಾಟ್ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಜನ ತಮಗೆ ಹಣ ಬೇಕಾದಾಗ ಹೆಂಡತಿಯನ್ನು ಬಯಲು ಪ್ರದೇಶದ ಲೇವಾದೇವಿಗಾರರ ಬಳಿ ಗಿರವಿ ಇಡುತ್ತಿದ್ದರು. ಹಣ ಪಾವತಿಯಾಗುವವರೆಗೆ ಹೆಂಡತಿ ಲೇವಾದೇವಿಗಾರನ ಜನಾನದಲ್ಲಿ ಇರಬೇಕಾಗಿತ್ತು. ಗಿರವಿ ಇಟ್ಟುಕೊಂಡ ಕಾಲದಲ್ಲಿ ಹುಟ್ಟಿದ ಮಕ್ಕಳನ್ನು ಸಾಲಗಾರನ ವಶಕ್ಕೆ ಒಪ್ಪಿಸಲಾಗುತ್ತಿತ್ತು. ಆದರೆ ಹೆಂಗಸರು ಮಾತ್ರ ಸಾಲ ತೀರುವವರೆಗೆ ಲೇವಾದೇವಿಗಾರನ ಬಳಿಯೇ ಇರುತ್ತಿದ್ದರು. ಇದು ಪುರಾಣದ ಕತೆಯಲ್ಲ. ನಮ್ಮ ಕಾಲದ ಚರಿತ್ರೆ.

ಇದು ಪುರುಷ ಪ್ರಧಾನ ಸಮಾಜ ಹೆಣ್ಣನ್ನು ನಡೆಸಿಕೊಳ್ಳುತ್ತಿರುವ ಕೆಲ ಮಾದರಿಗಳು. ಈಗ ಇದು ‘ಕ್ಯಾಸ್ಟಿಂಗ್ ಕೌಚ್’ ಹೆಸರಿನಲ್ಲಿ ಕಾಣಿಸಿಕೊಂಡದ್ದು ಸುದ್ದಿಯಾಗಿದೆ. ಸುದ್ದಿಯಾಗದ ಇಂತಹ ಅನೇಕ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇವೆ. ದುಡಿಯುವ ಹೆಣ್ಣು ಹೊರಜಗತ್ತಿನಲ್ಲಿ ಇಂತಹ ಸನ್ನಿವೇಶವನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ಒಮ್ಮೆ ನಾವು ಕೆಲವು ಲೇಖಕರು ಜೊತೆಯಲ್ಲಿದ್ದಾಗ ನಮ್ಮ ಕಾಲದ ಪ್ರಸಿದ್ಧ ಸಾಹಿತಿಯೊಬ್ಬರು ‘ಏನಯ್ಯ, ನಾನು ಓದುತ್ತಿದ್ದ ಪುಸ್ತಕವನ್ನು ಈಗ ಅವನು ಓದುತ್ತಿದ್ದಾನಂತೆ’ ಎಂದರು. ನನಗೆ ಅರ್ಥವಾಗಲಿಲ್ಲ. ಜೊತೆಯಲ್ಲಿದ್ದ ಹಿರಿಯ ಗೆಳೆಯರು ಅವರ ‘ಓದುವಿಕೆ’ಯನ್ನು ನಂತರ ವಿವರಿಸಿದರು. ಅವರೊಡನೆ ಸಲಿಗೆಯಿಂದಿದ್ದ ಹೆಣ್ಣೊಬ್ಬಳು ಈಗ ಬೇರೊಬ್ಬರ ಜೊತೆ ಸಲಿಗೆಯಿಂದಿರುವುದನ್ನು ಅವರು ‘ಸಾಹಿತ್ಯ ಭಾಷೆ’ಯಲ್ಲಿ ಹೇಳಿದ್ದರು. ಸಂವೇದನಾಶೀಲರೆನ್ನಿಸಿಕೊಂಡ ಪುರುಷರೂ ಹೆಣ್ಣನ್ನು ಪರಿಭಾವಿಸುವ ಪರಿಯಿದು. ಇಂತಹ ‘ತಮಾಷೆ’ಯನ್ನು ಗಂಡಿನ ಬಗ್ಗೆ ನಾನು ಕೇಳಿಲ್ಲ.

ತನ್ನ ಇಪ್ಪತೆôದರ ಹರಯದಲ್ಲೇ ಜಗತ್ತಿನ ಅತ್ಯಧಿಕ ಸಂಭಾವನೆ ಪಡೆಯುವ ನಟಿಯಾಗಿ ಎರಡು ವರ್ಷಗಳ ಕಾಲ ಹಾಲಿವುಡ್ ಆಳಿದ ಜೆನ್ನಿಫರ್ ಲಾರೆನ್ಸ್ ಸಂದರ್ಶನವೊಂದರಲ್ಲಿ ಹೇಳಿದಳು: ‘ಹಾಲಿವುಡ್​ನ ಕೆಲವು ನಿರ್ವಪಕರು ಹೀರೋಯಿನ್​ಗಳನ್ನು ಆಯ್ಕೆ ಮಾಡುವ ಮುನ್ನ ಪೂರ್ತಿ ನಗ್ನವಾಗಿ ಪರೇಡ್ ಮಾಡಿಸುತ್ತಾರೆ. ಅದಕ್ಕಿಂತ ದುಃಖ ಉಕ್ಕುವ ಕ್ಷಣಗಳು ಬೇರೊಂದಿಲ್ಲ. ನಾನೂ ಅದಕ್ಕೆ ಹೊರತಲ್ಲ. ಹದಿನಾರರ ಹರಯದಲ್ಲಿ ನನ್ನನ್ನೂ ಹೀಗೆ ನೋಡಿದ ನಿರ್ವಪಕರಿದ್ದಾರೆ’. ಇದನ್ನೂ ಮೀರಿದ ಅನೇಕ ಕಹಿ ಅನುಭವಗಳನ್ನು ಹಾಲಿವುಡ್ ನಟಿಯರು ಇತ್ತೀಚೆಗೆ ‘ಮಿ ಟೂ’ ಎಂಬ ಅಭಿಯಾನದ ಮೂಲಕ ಹೇಳಲಾರಂಭಿಸಿದ್ದಾರೆ, ಭಾರತದಲ್ಲಿಯೂ.

‘ಅತ್ಯಾಚಾರ’ದ ಬಗ್ಗೆ ಈಗ ದೇಶವೇ ಮಾತನಾಡುತ್ತಿದೆ. ಕೆಲವರು ‘ಇದು ಹುಡುಗಿಯರಿಗೆ ಬಿಟ್ಟದ್ದು’ ಎಂದು ಹೇಳುತ್ತ ಹೆಣ್ಣನ್ನೇ ಇದಕ್ಕೆ ಹೊಣೆಗಾರರನ್ನಾಗಿ ಮಾಡುತ್ತಿರುವುದು ಸನ್ನಿವೇಶದ ಅರಿವಿಲ್ಲದೆ ಬೇಜವಾಬ್ದಾರಿತನದಿಂದ ಹೇಳುವ ಮಾತುಗಳಾಗಿವೆ. ಒಮ್ಮೆ ಅತ್ಯಾಚಾರಕ್ಕೊಳಗಾದ ಹೆಣ್ಣೊಬ್ಬಳನ್ನು ನ್ಯಾಯಾಧೀಶರು ವಿಚಾರಣೆ ನಡೆಸುತ್ತ, ‘ನಿನ್ನ ಸಹಕಾರವಿಲ್ಲದೆ ಹೇಗೆ ಅತ್ಯಾಚಾರ ಮಾಡಲು ಸಾಧ್ಯ’ ಎಂದು ಪ್ರಶ್ನಿಸುತ್ತಾರೆ. ಆಗ ಆ ಹೆಣ್ಣುಮಗಳು ಒಂದು ಸೂಜಿ ದಾರ ತರಿಸಿ, ನ್ಯಾಯಾಧೀಶರ ಕೈಯಲ್ಲಿ ಸೂಜಿ ಕೊಟ್ಟು, ‘ನೀವು ನಾನು ದಾರ ಪೋಣಿಸದ ಹಾಗೆ ಸೂಜಿಯನ್ನು ಅಳ್ಳಾಡಿಸುತ್ತಿರಿ’ ಎನ್ನುತ್ತಾಳೆ. ನ್ಯಾಯಾಧೀಶರು ಜೋಷಿನಿಂದಲೇ ಕೈ ಅಲ್ಲಾಡಿಸುತ್ತಿರುತ್ತಾರೆ. ಕೆಲಹೊತ್ತು ದಾರ ಪೋಣಿಸಲು ಆಗುವುದಿಲ್ಲ. ಆದರೆ ಎಷ್ಟು ಹೊತ್ತು ಕೈ ಅಲ್ಲಾಡಿಸಲು ಸಾಧ್ಯ? ಯಾವುದೋ ಒಂದುಕ್ಷಣ ಸುಸ್ತಾಗಿ ನ್ಯಾಯಾಧೀಶರು ಕೈಅಲ್ಲಾಡಿಸುವುದನ್ನು ನಿಲ್ಲಿಸುತ್ತಾರೆ. ಆಗ ಅವಳು ಸೂಜಿಯಲ್ಲಿ ದಾರ ಪೋಣಿಸಿಬಿಡುತ್ತಾಳೆ. ಈ ರೂಪಕದ ಅರ್ಥವನ್ನು ವಿವರಿಸುವ ಅಗತ್ಯವಿಲ್ಲ. ಅಧಿಕಾರ, ಹಣ, ಪದವಿ- ಇವುಗಳ ಬಲದಿಂದ ಸಮಾಜದ ಎಲ್ಲ ವಲಯಗಳಲ್ಲೂ ಹೆಣ್ಣಿನ ದೇಹದ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ಸುದ್ದಿಗಳು ನಾಗರಿಕ ಸಮಾಜ ತಲೆತಗ್ಗಿಸುವಂಥದು.

ಹೆಣ್ಣು ಎಂದರೆ ಭೋಗಸಾಧನ ಮಾತ್ರವೆನ್ನುವ ಈ ಧೋರಣೆಯ ಬಗ್ಗೆ ಪ್ರಜ್ಞಾವಂತ ಸಮುದಾಯ ಸಿಡಿದು ನಿಲ್ಲಬೇಕಿದೆ. ನಮ್ಮ ಕಾಲದ ದುರಂತವೆಂದರೆ ಎಲ್ಲವೂ ನಮಗೆ ಓದಿ, ನೋಡಿ ಅಥವಾ ಕೇಳಿ ಮರೆಯುವ ಸಂಗತಿಗಳಾಗುತ್ತಿರುವುದು. ಐ ಎ ರಿಚರ್ಡ್ಸ್ ಹೇಳುವಂತೆ-ಆತಂಕ ಹುಟ್ಟಿಸುವ ಗಂಭೀರ ಸಂಗತಿಗಳೂ ಸಮೂಹ ಮಾಧ್ಯಮದ ಮಾರುಕಟ್ಟೆಯ ಸರಕುಗಳಾಗಿ ರೂಪಾಂತರವಾಗುತ್ತಿವೆ. ಶೃಂಗಾರವನ್ನು ಅಶ್ಲೀಲವಾಗಿ ರೂಪಾಂತರಿಸುತ್ತಿರುವ ಇಂತಹ ‘ಕೊಳಕು’ ಮನಸ್ಸುಗಳ ವಿರುದ್ಧ ಪ್ರತಿಭಟನಾ ಚಳವಳಿಯೊಂದು ರೂಪುಗೊಳ್ಳಬೇಕಿದೆ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *