ಒಂದು ಶಬ್ದ ಬದಲಾಯಿಸಲು ಫೋನ್​ ಮಾಡಿ ಕೇಳಿದ್ದರು… ಅಬ್ಬಾ! ನೆನೆಸಿಕೊಂಡರೆ ರೋಮಾಂಚನವಾಗುತ್ತೆ…

ದೇಶ ಕಂಡ ಅಪರೂಪದ ಗಾಯಕ ಎಸ್​.ಪಿ.ಬಾಲಸುಬ್ರಹ್ಮಣ್ಯಂ. ಅವರ ಕಂಠದಷ್ಟೇ ಮಧುರವಾದದ್ದು ಅವರ ಮೃದು ಸ್ವಭಾವ. ವಿಶ್ವಖ್ಯಾತಿ ಗಳಿಸಿದ ಕಲಾವಿದನಾದರೂ ಅಹಂ ಎನ್ನುವುದನ್ನು ಹತ್ತಿರವೂ ಸುಳಿಯಗೊಡದೆ ಅತ್ಯಂತ ಕಿರಿಯ ಕಲಾವಿದರನ್ನೂ ಹೇಗೆ ಗೌರವಿಸುತ್ತಿದ್ದರು ಎಂಬ ಬಗ್ಗೆ ಕುತೂಹಲದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ ಸಂಭಾಷಣೆಕಾರ, ಗೀತ ಸಾಹಿತಿ ಮಳವಳ್ಳಿ ಸಾಯಿಕೃಷ್ಣ. ಸೆ.25 ಎಸ್​ಪಿಬಿ ಅವರ 2ನೇ ಪುಣ್ಯಸ್ಮರಣೆ ನಿಮಿತ್ತ ಈ ಲೇಖನ…

‘ಅದು 2016. ಮಿಸ್ಟರ್​ ಮೊಮ್ಮಗ ಚಿತ್ರೀಕರಣ ನಡೆಯುತ್ತಿತ್ತು. ಉಮೇಶ್ ರೆಡ್ಡಿ ಜೀವನಾಧಾರಿತ `ಖತರ್ನಾಕ್’ ಸೇರಿದಂತೆ ಎಕ್ಸ್​​​​ಕ್ಯೂಸ್ ಮಿ, ಕಲರ್ಸ್, ಜೋಗಿ, ಸತ್ಯ ಇನ್ ಲವ್, ನೀಲಕಂಠ, ಹುಡುಗಾಟ, ಬಿಂದಾಸ್​​​ ಸೇರಿದಂತೆ ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿರುವ ನಾನು ‘ಮಿಸ್ಟರ್​ ಮೊಮ್ಮಗ’ ಚಿತ್ರಕ್ಕೆ ಸಂಭಾಷಣೆ ಜತೆಗೆ ಆ ಚಿತ್ರದ ‘ಆಕಾಶ ಚಂದ್ರಮ…’ ಎಂಬ ಹಾಡಿಗೆ ಸಾಹಿತ್ಯ ಕೂಡ ಬರೆದಿದ್ದೆ. ಈ ಹಾಡಿಗೆ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರೇ ಹಿನ್ನೆಲೆ ಗಾಯಕರಾಗಿದ್ದರು.

ಈ ಹಾಡಿನ ರೆಕಾರ್ಡಿಂಗ್​​​ ಚೆನ್ನೈನಲ್ಲಿ ಇರುವ ಬಾಲಸುಬ್ರಹ್ಮಣ್ಯಂ ಅವರ ಮನೆ ಬಳಿ ಇರುವ ಸ್ಟುಡಿಯೋದಲ್ಲಿ ನಡೆದಿತ್ತು. ಸಾಮಾನ್ಯವಾಗಿ ಯಾವುದೇ ಹಾಡಿನ ರೆಕಾರ್ಡಿಂಗ್​ ಮಾಡುವಾಗ ತಾವು ಹಿನ್ನೆಲೆ ಗಾಯನ ನೀಡುವ ಹಾಡಿನ ಸಾಹಿತ್ಯ ಬರೆದವರು ಸಮೀಪವೇ ಇರಬೇಕು ಎಂದು ಎಸ್​ಪಿಬಿ ಬಯಸುತ್ತಿದ್ದರು. ಕೆಲವೊಮ್ಮೆ ಅವರಿಗೆ ಸಂದೇಹ ಬಂದರೆ ಅಲ್ಲಿಯೇ ಬಗೆಹರಿಸಿಕೊಂಡು ಹಾಡಲು ಅನುಕೂಲ ಆಗುತ್ತದೆ ಎನ್ನುವ ಕಾರಣಕ್ಕೆ ಅವರು ಹೀಗೆ ಬಯಸುತ್ತಿದ್ದರು.

ಆದರೆ ಅಂದು ನಾನು ಬೇರೆ ಕಡೆ ಇದ್ದೆ. ತುರ್ತಾಗಿ ಬೇರೊಂದು ಕೆಲಸ ಇದ್ದ ಹಿನ್ನೆಲೆಯಲ್ಲಿ ರೆಕಾರ್ಡಿಂಗ್​ ನಡೆಯುವ ಸ್ಥಳಕ್ಕೆ ಅಂದರೆ ಚೆನ್ನೈಗೆ ಹೋಗಲು ಆಗಲಿಲ್ಲ. ‘ಆಕಾಶ ಚಂದ್ರಮ…’ ಹಾಡಿನಲ್ಲಿದ್ದ ಒಂದು ಪದ ಯಾಕೋ ಎಸ್​ಪಿಬಿ ಅವರ ಗಾಯನಕ್ಕೆ ಅಷ್ಟು ಸರಿಹೊಂದುತ್ತಿರಲಿಲ್ಲ. ಆ ಶಬ್ದವನ್ನು ಸಲೀಸಾಗಿ ಹಾಡಲು ಸಾಧ್ಯವಾಗಲಿಲ್ಲ ಅವರಿಗೆ. ಎಸ್​ಪಿಬಿಯಂಥ ಮಹಾ ಕಲಾವಿದನ ಜಾಗದಲ್ಲಿ ಬೇರೆ ಗಾಯಕರು ಇದ್ದಿದ್ದರೆ ಬಹುಶಃ ಆ ಶಬ್ದಕ್ಕೆ ಪರ್ಯಾಯವಾಗಿ ಇನ್ನೊಂದು ಶಬ್ದವನ್ನು ಹಾಕಿ ಹಿನ್ನೆಲೆ ಗಾಯನ ನೀಡುತ್ತಿದ್ದರೇನೋ. ಏಕೆಂದರೆ ಹಾಗೆ ಮಾಡುವುದು ಮಹಾ ತಪ್ಪು ಅಲ್ಲ, ಹಿನ್ನೆಲೆ ಗಾಯನಕ್ಕೆ ಸರಿಹೊಂದುವಂಥ ಶಬ್ದ ಹೊಂದಿಸಿಕೊಳ್ಳುವ ಅವಕಾಶ ಹಿನ್ನೆಲೆ ಗಾಯಕರಿಗೆ ಇದ್ದೇ ಇದೆ. ಅಷ್ಟೇ ಅಲ್ಲದೇ, ತುರ್ತಾಗಿ ಅಂದೇ ‘ಆಕಾಶ ಚಂದ್ರಮ…’ ರೆಕಾರ್ಡಿಂಗ್​ ನಡೆಸಬೇಕಿದ್ದ ಕಾರಣದಿಂದ ಮನಸ್ಸು ಮಾಡಿದ್ದರೆ ಬಾಲಸುಬ್ರಹ್ಮಣ್ಯಂ ಅವರೂ ಹೀಗೆಯೇ ಬೇರೆ ಶಬ್ದ ಹಾಕಬಹುದಿತ್ತು. ಅದಕ್ಕೆ ನಾನಂತೂ ಖಂಡಿತಾ ತಕರಾರು ಮಾಡುತ್ತಿರಲಿಲ್ಲ.

ಆದರೆ ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡರೆ ಇಂದಿಗೂ ಕಣ್ಣುಗಳು ತೇವಗೊಳ್ಳುತ್ತವೆ. ಆ ಒಂದೇ ಒಂದು ಶಬ್ದ ಬದಲಾಯಿಸಿ ತಾವು ಬೇರೊಂದು ಶಬ್ದ ಹಾಕಬಹುದೇ ಎಂದು ಕೇಳುವುದಕ್ಕಾಗಿ ಎಸ್​ಪಿಬಿ ಅವರು ನನಗೆ ಕರೆ ಮಾಡಿದರು. ‘ನೀವು ಅನುಮತಿ ನೀಡಿದರೆ ನಾನು ಒಂದೇ ಒಂದು ಪದವನ್ನು ಬದಲಾವಣೆ ಮಾಡಬಹುದೇ’ ಎಂದು ಕೇಳಿದರು.

ಎಸ್​ಪಿಬಿ ಅಂಥ ಗಾಯಕ ನನ್ನಂಥ ಕಿರಿಯ ಕಲಾವಿದನಿಗೆ ಒಂದು ಶಬ್ದದ ಬದಲಾವಣೆಗಾಗಿ ಕರೆ ಮಾಡಿದ್ದರು ಎಂದರೆ ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಅಂದು ಅವರ ಮಾತು ಕೇಳಿ ನಾನು ಶಾಕ್​ ಆದೆ. ‘ಖಂಡಿತ ಸರ್​, ಅದನ್ನು ನೀವು ನನಗೆ ಕೇಳುವ ಅಗತ್ಯವೇ ಇಲ್ಲ’ ಎಂದೆ. ಆದರೆ ಅವರ ಸೌಜನ್ಯದ ಮಾತುಗಳು ನನ್ನ ಕಣ್ಣನ್ನು ತೇವಗೊಳಿಸಿದವು. ‘ನಿಮಗೆ ಹೇಗೆ ಅನಿಸುತ್ತದೆಯೋ ಹಾಗೆ ಬದಲಿಸಿಕೊಳ್ಳಿ ಸರ್​’ ಎಂದೆ. ಆದರೆ ಅವರು ಏನಂದರು ಗೊತ್ತಾ? ‘ಅದ್ಹೇಗೆ ಬದಲಿಸಲು ಸಾಧ್ಯ? ಈ ಹಾಡು ಬರೆದವರು ನೀವು. ನಿಮ್ಮ ಅನುಮತಿ ಪಡೆಯದೆ ಒಂದು ಸಣ್ಣ ಬದಲಾವಣೆ ಮಾಡಿದರೂ ಅದು ಸಾಹಿತ್ಯ ಬರೆದ ಕಲಾವಿದರನ್ನು ಅವಮಾನ ಮಾಡಿದಂತಲ್ಲವೆ’ ಎಂದು ಪ್ರಶ್ನಿಸಿದರು. ಅವರ ಈ ಮಾತಿನ ಮುಂದೆ ನನಗೆ ಮಾತುಗಳೇ ಹೊರಳಲಿಲ್ಲ. ಅಂಥ ಕಲಾವಿದ ಅವರು…

ಅವರು ಇನ್ನಿಲ್ಲ ಎಂದ ಸುದ್ದಿ ಕೇಳಿದಾಗ ನನಗೆ ಆದ ಆಘಾತ ಅಷ್ಟಿಷ್ಟಲ್ಲ. ಆ ಘಟನೆ ನೆನೆಪಿಸಿಕೊಂಡರೂ ಈಗಲೂ ಕಣ್ಣೀರು ಬರುತ್ತದೆ, ಇಂದಿಗೂ ರೋಮಾಂಚನವಾಗುತ್ತದೆ. ಅವರನ್ನು ಕಳೆದುಕೊಂಡಿರುವುದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ನಾನು ಬರೆದ ‘ಮಿ.ಮೊಮ್ಮಗ’ ಹಾಗೂ ‘ಕಾಲೇಜ್ ಕಾಲೇಜ್’ ಸಾಹಿತ್ಯ ಅವರ ಕಂಠದಲ್ಲಿ ಮೂಡಿ ಬಂದಿದ್ದೇ ನನ್ನ ಬದುಕಿನ ಪುಣ್ಯ’…

ನಾನು ಆಕಸ್ಮಿಕ ಗಾಯಕ… ಎಂದು ಹೇಳಿಕೊಳ್ಳುತ್ತಿದ್ದ ಎಸ್​ಪಿಬಿ! ಸುಗಮವಾಗಿರಲಿಲ್ಲ ಗಾನ ಗಾರುಡಿಗನ ಗಾಯನದ ಹಾದಿ…

ಎಸ್​ಪಿಬಿ ಹಾಡಿದ ಕೊನೆಯ ಹಾಡು ಯಾವ ಹೀರೋಗೆ? ನೀವೇ ನೋಡಿ …

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…