
ತೆಲಂಗಾಣ: ತೆಲಂಗಾಣದ 15 ಮಂದಿ ಎಸ್‌ಬಿಐ ಗ್ರಾಹಕರ ಅಕೌಂಟ್‌ಗೆ ತಲಾ 10 ಲಕ್ಷ ರೂಪಾಯಿ ಅಂದರೆ ಒಟ್ಟು 1.5 ಕೋಟಿ ರೂಪಾಯಿ ಜಮೆ ಆಗಿ ತಲ್ಲಣ ಸೃಷ್ಟಿಸಿರುವ ಘಟನೆ ನಡೆದಿದೆ. ಇವರ ಪೈಕಿ ಹೆಚ್ಚಿನವರು ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಅಕೌಂಟ್‌ಗೆ ಹಣವನ್ನು ಹಾಕಿದ್ದಾರೆಂದು ನಂಬಿ ಕುಣಿದಾಡಿದ್ದಾರೆ.
ಆದರೆ ಈ ಹಣ ಪಡೆದವರ ಪೈಕಿ ಒಬ್ಬ ಗ್ರಾಹಕ ಮಾತ್ರ ದೊಡ್ಡ ಪೇಚಿಗೆ ಸಿಲುಕಿಬಿಟ್ಟಿದ್ದು, ತಮ್ಮದಲ್ಲದ ತಪ್ಪಿಗೆ ತಲೆ ಮರೆಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಈ ಎಲ್ಲಾ ಗ್ರಾಹಕರ ಬ್ಯಾಂಕ್‌ಗೆ ತಲಾ 10 ಲಕ್ಷ ರೂಪಾಯಿ ಬಂದಿರುವುದು ನಿಜ. ಆದರೆ ಅಸಲಿಗೆ ಆಗಿದ್ದೇನೆಂದರೆ, ಎಸ್‌ಬಿಐ ಸಿಬ್ಬಂದಿ ಏನೋ ಟೈಪ್ ಮಾಡುವಾಗ ಮಾಡಿದ ಎಡವಟ್ಟೇ ಇದಕ್ಕೆ ಕಾರಣವಾಗಿದೆ. ಸರ್ಕಾರದ ದಲಿತ ಬಂಧು ಯೋಜನೆಗಾಗಿ ಇರಿಸಲಾಗಿದ್ದ ಹಣ ಈ ರೀತಿ ತಪ್ಪಾಗಿ ವರ್ಗಾಯಿಸಲಾಗಿದೆ. ಹಣವನ್ನು ಜಮೆ ಮಾಡುವಾಗ ಏನನ್ನೋ ಟೈಪ್ ಮಾಡಲು ಹೋಗಿ ಇನ್ನೇನೋ ಟೈಪ್ ಮಾಡಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು, 15 ಮಂದಿ ಅಕೌಂಟ್‌ಗೆ ತಲಾ 10 ಲಕ್ಷ ರೂಪಾಯಿ ಹೋಗಿಬಿಟ್ಟಿದೆ.
ಒಂದೆರಡು ದಿನಗಳಲ್ಲಿ ಈ ತಪ್ಪಿನ ಅರಿವಾದದ್ದೇ ತಡ, ಎಲ್ಲಾ ಗ್ರಾಹಕರನ್ನೂ ಸಂಪರ್ಕಿಸಿ ಹಣವನ್ನು ವಾಪಸ್ ಕೊಡುವಂತೆ ಬ್ಯಾಂಕ್ ಕೋರಿಕೊಂಡಿದೆ. ತಮ್ಮ ಬ್ಯಾಂಕ್ ಅಕೌಂಟ್‌ಗೆ ಪ್ರಧಾನಿ ಮೋದಿಯವರೇ ಹಣ ಕಳುಹಿಸಿದ್ದಾರೆ ಎಂದು ನಂಬಿದ್ದ ಬಹುತೇಕ ಗ್ರಾಹಕರು ತುಂಬಾ ನಿರಾಸೆಯಿಂದ ಹಣವನ್ನು ವಾಪಸ್ ಕೊಟ್ಟಿದ್ದಾರೆ. ಈ ಹಣದಿಂದ ತಾವು ಏನೇನು ಮಾಡಬಹುದು ಎಂದು ಕನಸು ಕಂಡಿದ್ದ ಗ್ರಾಹಕರಿಗೆ ದೊಡ್ಡ ಶಾಕ್ ಎದುರಾದರೂ ಆ ದುಡ್ಡು ಕಣ್ತಿಪ್ಪಿನಿಂದ ಬಂದದ್ದು ಎಂದು ತಿಳಿದು ವಾಪಸ್ ಕೊಟ್ಟರು.
14 ಮಂದಿಯೇನೋ ಹಣವನ್ನು ವಾಪಸ್ ಮಾಡಿದರು. ಆದರೆ ಓರ್ವ ಗ್ರಾಹಕ ಮಾತ್ರ ಈ ಹಣವನ್ನು ತಮ್ಮ ವೈಯಕ್ತಿಕ ಸಾಲ ತೀರಿಸಲು ಬಳಸಿಕೊಂಡು ಬಿಟ್ಟಿದ್ದಾರೆ. ಮಹೇಶ್ ಎಂಬುವವರು ಇಂಥದ್ದೊಂದು ಕೃತ್ಯ ಮಾಡಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿಯಿಂದ ಕರೆ ಬಂದಾಗ ಅವರಿಗೆ ಶಾಕ್ ಆಗಿದೆ. ಬ್ಯಾಂಕ್‌ನವರು ಹಣವನ್ನು ವಾಪಸ್ ಮಾಡುವಂತೆ ಒತ್ತಾಯ ಮಾಡಿದ್ದರಿಂದ ಇನ್ನೆಲ್ಲೋ ಸಾಲ ಮಾಡಿ ಆರು ಲಕ್ಷ ರೂಪಾಯಿಯನ್ನು ಮಹೇಶ್ ಬ್ಯಾಂಕ್‌ಗೆ ಮರಳಿಸಿದ್ದಾರೆ. ಆದರೆ ಉಳಿದ ಹಣ ವಸೂಲಿಗೆ ಅವರು ಯಾರ ಸಂಪರ್ಕಕ್ಕೂ ಸಿಗದೇ ತಲೆಮರೆಸಿಕೊಂಡಿದ್ದು, ಬ್ಯಾಂಕ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೆಲ ತಿಂಗಳ ಹಿಂದೆ ಬಿಹಾರದ ವ್ಯಕ್ತಿಯೊಬ್ಬರ ಅಕೌಂಟ್‌ಗೆ ಇದೇ ರೀತಿ ಮಿಸ್ ಆಗಿ ಐದೂವರೆ ಲಕ್ಷ ರೂಪಾಯಿ ಜಮೆಯಾಗಿತ್ತು. ಅವರು ಕೂಡ ಮೋದಿಯವರೇ ಹಾಕಿದ್ದರೆಂದು ತಿಳಿದು ಖರ್ಚು ಮಾಡಿ ಭಾರಿ ಸುದ್ದಿಯಾಗಿದ್ದರು.
ಮೈಸೂರಿನ ನಾಟಿ ವೈದ್ಯನ ಬರ್ಬರ ಕೊಲೆ ರಹಸ್ಯ ಬಯಲು! ದರೋಡೆ ಕೇಸ್ ದಾಖಲಿಸಲು ಬಂದು ಸಿಕ್ಕಿಬಿದ್ದ ಕೊಲೆಗಾರ
ಮದುವೆ ಖುಷಿಯಲ್ಲಿದ್ದ ತುಮಕೂರು ಪ್ರೇಮಿಗಳ ಬಾಳಲ್ಲಿ ಜವರಾಯನ ಅಟ್ಟಹಾಸ: ಅಲ್ಲಿ ಅಪಘಾತ, ಇಲ್ಲಿ ಆತ್ಮಹತ್ಯೆ!
ಆಕಾಶದಿಂದ ಧರೆಗುರುಳಿದ ಭಾರಿ ಗಾತ್ರದ ಚೆಂಡುಗಳು: ಬೆಚ್ಚಿಬಿದ್ದ ಜನ, ವಿಜ್ಞಾನಿಗಳಿಂದ ಪರಿಶೀಲನೆ