ಕೋಲ್ಕತಾ: ಕೇಂದ್ರ ಸರ್ಕಾರದಿಂದ ನಿನ್ನೆಯಷ್ಟೇ (ಜ.26) ಘೋಷಣೆಯಾಗಿದ್ದ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದ ಖ್ಯಾತ ಗಾಯಕಿ ಸಂಧ್ಯಾ ಮುಖರ್ಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಧ್ಯಾ ಅವರಂಥ ಸುಪ್ರಸಿದ್ಧ, ಲೆಜೆಂಡರಿ ಕಲಾವಿದೆಗೆ 90ನೇ ವಯಸ್ಸಿನಲ್ಲಿ ಪ್ರಶಸ್ತಿಯನ್ನು ನೀಡುವುದು ನಿಜಕ್ಕೂ ಅವಮಾನವಾಗಿದೆ. ಹೀಗಾಗಿ ಅವರು ಪ್ರಶಸ್ತಿಯನ್ನು ನಿಕಾರಿಸಿದ್ದಾರೆ ಎಂದು ಅವರ ಪುತ್ರಿ ಹೇಳಿದ್ದರು. ಇದರಿಂದ ಅವರು ಪ್ರಶಸ್ತಿಯನ್ನು ವಾಪಸ್ ಮಾಡುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದರು.
ಇದಾದ ಮಾರನೆಯ ದಿನವೇ ಅಂದರೆ ಇಂದು ಸಂಧ್ಯಾ ಅವರು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಧ್ಯಾ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ ತೀವ್ರ ಅಸ್ವಸ್ಥರಾದ ಜತೆಗೆ ಉಸಿರಾಟದ ತೊಂದರೆ ಸಹ ಕಾಣಿಸಿಕೊಂಡಿದ್ದರಿಂದ ಕೋಲ್ಕತಾದ ಎಸ್ಎಸ್ಕೆಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಕ್ಷಣವೇ ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸುವ ಮುಖರ್ಜಿ ಅವರ ನಿರ್ಧಾರವು ರಾಜಕೀಯ ಪ್ರೇರಿತವಲ್ಲ. ನಮ್ಮ ತಾಯಿ ರಾಜಕೀಯವನ್ನು ಮೀರಿದವರು. ಇದರಲ್ಲಿ ರಾಜಕೀಯ ಕಾರಣ ಹುಡುಕುವ ಪ್ರಯತ್ನ ಮಾಡಬೇಡಿ. ಅವರು ಅವಮಾನಿತರಾಗಿದ್ದಾರಷ್ಟೇ ಎಂದು ಸೌಮಿ ಸೆಂಗುಪ್ತಾ ಸ್ಪಷ್ಟನೆ ನೀಡಿದ್ದಾರೆ.
ಸಂಧ್ಯಾ ಮುಖರ್ಜಿ ಅವರನ್ನು 60 ಮತ್ತು 70ರ ದಶಕದ ಸುಮಧುರವಾದ ಧ್ವನಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರು ಬಂಗಾಳಿ ಮತ್ತು ಸುಮಾರು ಹನ್ನೆರಡು ಇತರ ಭಾಷೆಗಳಲ್ಲಿ ಸಾವಿರಾರು ಹಾಡುಗಳಲ್ಲಿ ಹಿನ್ನೆಲೆ ಧ್ವನಿ ನೀಡಿದ್ದಾರೆ. 2011ರಲ್ಲೇ, ಸಂಧ್ಯಾ ಮುಖರ್ಜಿ ಅವರು ಪಶ್ಚಿಮ ಬಂಗಾಳ ಸರ್ಕಾರವು ನೀಡುವ ಅತ್ಯುನ್ನತ ನಾಗರಿಕ ಗೌರವವಾದ ಬಂಗಾ ಬಿಭೂಷಣವನ್ನು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಹಾಲಿವುಡ್ ಕ್ಲಾಸಿಕ್ ‘ಸೌಂಡ್ ಆಫ್ ಮ್ಯೂಸಿಕ್’ ನ ಬಂಗಾಳಿ ರಿಮೇಕ್ ಆದ ‘ಜಯ್ ಜಯಂತಿ’ ಗಾಗಿ 1970 ರಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಅವರಿಗೆ ನೀಡಲಾಗಿದೆ.
VIDEO: ಮಾಸ್ಕ್ ಹಾಕಿಕೊಂಡೇ ಊಟ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ- ವಿಡಿಯೋ ವೈರಲ್
VIDEO: ರಾಷ್ಟ್ರಗೀತೆ ಹಾಡುತ್ತಲೇ ಪ್ರಾಣ ತ್ಯಜಿಸಿದ ಹಿರಿಯ ಪತ್ರಕರ್ತ- ಚಿಕ್ಕೋಡಿಯಲ್ಲೊಂದು ದುರಂತ