ಪಾಟೀಲರದ್ದು ಸಾರ್ಥಕ ಸಾಧನೆ

ಬೀಳಗಿ: ಪ್ರತಿಯೊಬ್ಬರ ಬೆಳವಣಿಗೆಯಲ್ಲಿ ಹೆತ್ತವರು, ಗುರು ಹಾಗೂ ಅನ್ನ ನೀಡುವ ಅನ್ನದಾತರ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು.

ಬಾಡಗಂಡಿ ಎಸ್​ಆರ್​ಪಿ ಶಿಕ್ಷಣ ಪ್ರತಿಷ್ಠಾನ ಬಾಪೂಜಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾರ್ಥಕ ಸಂಭ್ರಮ, ವಾರ್ಷಿಕ ಸ್ನೇಹ ಸಮ್ಮೇಳನ, ಸಾರ್ಥಕ ನುಡಿ ನಮನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಬ್ಬೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶೋಷಿತರ ಬದುಕಿಗೆ ಬಣ್ಣ ಕೊಟ್ಟ ಬಸವಣ್ಣನ ನಾಡಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣದ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆ, ಸಹಕಾರ, ಕೈಗಾರಿಕೆ, ಕೃಷಿ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಎಸ್.ಆರ್. ಪಾಟೀಲರು ತಮಗೆ ಜನ್ಮ ನೀಡಿದ ತಂದೆ-ತಾಯಿ, ಗುರುಗಳಿಗೆ, ಹುಟ್ಟೂರಿಗೆ ಹೆಸರು ತಂದ ಸಾರ್ಥಕ ಮಗನಾಗಿದ್ದಾರೆ ಎಂದು ಶ್ಲಾಘಿಸಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಗ್ರಾಮೀಣಾಭಿವೃದ್ಧಿ ಚಿಂತನೆಗಳು ಡಾ. ಕಲಾಂ ಅವರ ಪುರ ಕಲ್ಪನೆಗಳ ಚಿಂತನೆಗಳನ್ನು ಆಧರಿಸಿ ಪಟ್ಟಣಗಳು ಹಳ್ಳಿಗಳ ಕಡೆಗೆ ಮುಖ ಮಾಡುವಂತಹ ವಾತಾವರಣವನ್ನು ಹುಟ್ಟೂರಲ್ಲಿ ಪ್ರಾರಂಭಿಸಿದ್ದೇನೆ. ಇದಕ್ಕೆ ನನ್ನ ಹೆತ್ತವರ ಪ್ರೇರಣೆ ತುಂಬ ದೊಡ್ಡದು. ಕೃಷಿ ಆರಾಧಿಸುವ ತಂದೆ ಹೆಸರಿನಲ್ಲಿ ಉತ್ತಮ ಕೃಷಿಕ ಪ್ರಶಸ್ತಿ, ತಾಯಿ ಹೆಸರಿನಲ್ಲಿ ಅಬ್ಬೆ ಪ್ರಶಸ್ತಿಗಳನ್ನು ಸಾಧಕರಿಗೆ ನೀಡಿ ಗೌರವಿಸುವುದು ನನ್ನ ಪಾಲಿಗೆ ಅತ್ಯಂತ ಸಂತೃಪ್ತ ಭಾವವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ ಸಾಮಾಜಿಕ ಜವಾಬ್ದಾರಿ ರೂಢಿಸಿಕೊಂಡರೆ ಎಸ್.ಆರ್. ಪಾಟೀಲರ ರೀತಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಂಸ್ಥೆಯ ಆಡಳಿತಾಧಿಕಾರಿ ಎಚ್.ಬಿ. ಧರ್ಮಣ್ಣವರ, ಬೊಮ್ಮೇಗೌಡ, ಪಿಯು ಕಾಲೇಜು ಪ್ರಾಚಾರ್ಯ ಡಾ. ವೆಂಕಟೇಶ್. ಜಿ., ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್.ಎಸ್. ದುಡ್ಯಾಳ ಇತರರಿದ್ದರು.