ಅತೃಪ್ತ ಪ್ರೇತದ ಸಮಾಧಾನಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬಿಜೆಪಿ ಬುಡಮೇಲಾಗಿಸಿದೆ: ವಿಶ್ವನಾಥ್​ ವಿರುದ್ಧ ಸಾ.ರಾ. ಮಹೇಶ್​ ಕಿಡಿ

ಮೈಸೂರು: ಅನರ್ಹ ಶಾಸಕ ಎಚ್​. ವಿಶ್ವನಾಥ್ ಬೇಡಿಕೆ ಮೇರೆಗೆ ಮೈಸೂರು ಭಾಗದವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಅತೃಪ್ತ ಪ್ರೇತಕ್ಕೆ ಅವಕಾಶ ನೀಡುವ ಉದ್ದೇಶದಿಂದ ಹಿರಿಯರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್​ ಕಿಡಿಕಾರಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ಯಾರು ಸಭೆ ಸೇರಿದ್ದರು. ಮುಖ್ಯಮಂತ್ರಿಯನ್ನು ಭೇಟಿಯಾಗಿ ಯಾವ ಬೇಡಿಕೆ ಮುಂದಿಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದಿನ ಹಂತದಲ್ಲಿ ನಾನು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ತಿಳಿಸಿದರು.

ಮೈಸೂರಿನಲ್ಲೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರು ಇದ್ದಾರೆ. ನಾಳೆ ದಸರಾ ಗಜಪಯಣ ಆರಂಭವಾಗಬೇಕಿದೆ. ಬೆಂಗಳೂರು ಮೂಲದವರು ಬಂದು ಗಜಪಯಣಕ್ಕೆ ಪೂಜೆ ಮಾಡಲಿದ್ದಾರೆ. ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಯಾವೊಬ್ಬರೂ ಸಂಪುಟದಲ್ಲಿ ಇಲ್ಲ. ಅತೃಪ್ತ ಪ್ರೇತಕ್ಕೆ ಅವಕಾಶ ನೀಡುವ ಉದ್ದೇಶದಿಂದ ಹಿರಿಯರಿಗೆ ಸಚಿವ ಸ್ಥಾನ ನೀಡಿಲ್ಲ. ಅತೃಪ್ತ ಪ್ರೇತವನ್ನು ಸಮಾಧಾನ ಮಾಡೋಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬಿಜೆಪಿ ಬುಡಮೇಲು ಮಾಡಿದೆ ಎಂದು ಹರಿಹಾಯ್ದರು.

ಕೊಡಗು ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿ ಇದೆ. ಬೇರೆಯವರು ಬಂದು ಅದನ್ನು ಹೇಗೆ ನಿರ್ವಹಿಸುತ್ತಾರೆ? ಅಪ್ಪಚ್ಚು ರಂಜನ್ ಅಥವಾ ಕೆ.ಜಿ.ಬೋಪಯ್ಯ ಪೈಕಿ ಒಬ್ಬರನ್ನಾದರೂ ಸಚಿವರನ್ನಾಗಿ ಮಾಡಿಕೊಳ್ಳಬಹುದಿತ್ತು. ಪ್ರವಾಹ ಸಂದರ್ಭದಲ್ಲಿ 135 ಕಿ.ಮೀ. ದೂರ ಪ್ರಯಾಣ ಮಾಡಿ ಸಚಿವರನ್ನು ಭೇಟಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾ.ರಾ.ಮಹೇಶ್ ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​​)