More

    ವಿದ್ಯಾರ್ಥಿಗೆ ಸುಖ ಇಲ್ಲ; ಸುಖಾರ್ಥಿಗೆ ವಿದ್ಯೆ ಇಲ್ಲ!

    ವಿದ್ಯಾರ್ಥಿಗೆ ಸುಖ ಇಲ್ಲ; ಸುಖಾರ್ಥಿಗೆ ವಿದ್ಯೆ ಇಲ್ಲ!“ವಿದ್ಯಾತುರಾಣಾಂ ನ ಸುಖಾಂ, ನ ನಿದ್ರಾಂ; ಕಾಮಾತುರಾಣಾಂ ನ ಭಯಂ ನ ಲಜ್ಜಾಂ” ಎಂಬುದು ಒಂದು ಅರ್ಥಪೂರ್ಣವಾದ, ಸಾರ್ವಕಾಲಿಕ ಸುಭಾಷಿತ. ಹೌದು, ವಿದ್ಯಾರ್ಜನೆಯ ಹಿಂದೆ ಹೋದವರಿಗೆ, ಸುಖ-ನಿದ್ದೆಗಳ ಪರಿವೆ ಇರೋದಿಲ್ಲ; ಅಂತೆಯೇ ಕಾಮಾಂಧರಿಗೆ ಯಾರ ಭಯವೂ ಇರೋದಿಲ್ಲ; ಯಾವ ಲಜ್ಜೆಯೂ ಇರೋದಿಲ್ಲ. ಕಟ್ಟುನಿಟ್ಟಿನ ವಿದ್ಯಾರ್ಜನೆಯ ಗುಣಲಕ್ಷಣವೇ ಹಾಗೇ! ವಿದ್ಯಾಭ್ಯಾಸವೆಂದರೆ, ಒಂದು ಆರಾಧನೆ ಇದ್ದಂತೆ: ತಪಸ್ಸು ಇದ್ದಂತೆ! ಈ ತಪಸ್ಸನ್ನು ತಲ್ಲೀನತೆಯಿಂದ ಗೈಯಬೇಕಾದರೆ, ಕಠಿಣ ಪರಿಶ್ರಮದ ಜತೆ, ಇಂದ್ರಿಯ ನಿಗ್ರಹವೂ (control over body and mind) ಇರಬೇಕು.

    ಇಂದ್ರಿಯ ನಿಗ್ರಹದಿಂದಲೇ ಏಕಾಗ್ರತೆಯನ್ನು (Concentration) ಪಡೆಯಲು ಸಾಧ್ಯ. ಕಾರಣ, ವಿದ್ಯಾಭ್ಯಾಸ ಮಾಡುವ ಶಾಲಾ-ಕಾಲೇಜು ದಿನಗಳಲ್ಲಿ, ಪ್ರೌಢರಾಗುತ್ತಿದ್ದಂತೆ, ಮಕ್ಕಳಲ್ಲಿ ಅಧಿಕ ಪ್ರಮಾಣದಲ್ಲಿ ಸುರಿಸಲ್ಪಡುವ ರಸ ವಿಶೇಷಗಳಿಂದ (Harmones) ಶಾರೀರಿಕ, ಮಾನಸಿಕ ಮತ್ತು ಲೈಂಗಿಕ ಬೆಳವಣಿಗೆಗಳು ನಡೆಯುತ್ತಿರುತ್ತವೆ. ಪರಿಣಾಮವಾಗಿ, ಚಂಚಲ ಮನಸ್ಸು, ಏನೇನೋ ಕನಸುಗಳು, ಭ್ರಮೆಗಳು, ಕದ್ದು ಕಾಡುವ ಲೈಂಗಿಕಾಸಕ್ತಿಗಳು, ಆಸಕ್ತಿ-ಆಸೆ, ಆಶಯಗಳು, ಕುತೂಹಲ-ಗೊಂದಲಗಳು ಸರ್ವೇ ಸಾಮಾನ್ಯ ಹಾಗೂ ಸಹಜ ಸ್ವಾಭಾವಿಕ.

    ಬೆಳವಣಿಗೆಯ ಈ ವಯಸ್ಸು ತುಂಬಾ ಸೂಕ್ಷ್ಮವಾದುದು. ಈ ವಯಸ್ಸಿನಲ್ಲಿ, ಲೈಂಗಿಕಾಸಕ್ತಿಯನ್ನು ಕೆರಳಿಸುವ ಚಿತ್ರಗಳಿಂದ ಜಾಹೀರಾತುಗಳಿಂದ, ವೇಷ ಭೂಷಣಗಳಿಂದ, ಮೊಬೈಲ್, ಇಂಟರ್​ನೆಟ್​ಗಳಲ್ಲಿ  ಸುಲಭವಾಗಿ ಮತ್ತು ಧಾರಾಳವಾಗಿ ಸಿಗಬಲ್ಲ ವಿಡಿಯೋಗಳಿಂದ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಮಕ್ಕಳ ಮನಸ್ಸು ವಿಚಲಿತಗೊಳ್ಳೋದು ಹಾಗೂ ಸುಖವನ್ನೇ ಬಯಸೋದು ಸರ್ವೇ ಸಾಮಾನ್ಯ. ಬಲವಂತವಾಗಿ, ಮಕ್ಕಳನ್ನು ಇವುಗಳಿಂದ ದೂರವಿಟ್ಟಷ್ಟು ಅವರ ಆಸಕ್ತಿಯು ಇನ್ನಷ್ಟು ಹೆಚ್ಚಾಗಿ, ಕದ್ದೂ ಕದ್ದೂ ಇವುಗಳನ್ನು ಅನುಭವಿಸುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ.

    ಒಂದು ಕಡೆಯಿಂದ ಸುಖ ಸಂತೋಷಗಳನ್ನು ತ್ಯಾಗಮಾಡಿ, ಕಷ್ಟಪಟ್ಟು ರೂಪಿಸಿಕೊಳ್ಳಬೇಕಾದ ಭವ್ಯಭವಿಷ್ಯ; ಇನ್ನೊಂದು ಕಡೆಯಿಂದ ಸಹಜ ಸ್ವಾಭಾವಿಕವಾದ ಹಾಗೂ ಸುಲಭವಾಗಿ ಮಾರುಹೋಗಬಲ್ಲ ಆಕರ್ಷಣೆಗಳು. ಇಂತಹ ಪರಿಸ್ಥಿತಿಯನ್ನು ನಿಭಾಯಿಸಬಲ್ಲ, ಸಂಭಾಳಿಸಬಲ್ಲ, ಹುಡುಗ-ಹುಡುಗಿಯರಿಬ್ಬರಿಗೂ ಸಮಾನ ರೀತಿಯಲ್ಲಿ ಅನ್ವಯವಾಗಬಲ್ಲ ಏಕೈಕ ಮಾರ್ಗವೆಂದರೆ “ಬ್ರಹ್ಮಚರ್ಯ” ಪಾಲನೆ!

    ವಯಸ್ಸಿಗನುಸಾರವಾಗಿ, ಮನುಷ್ಯನ ಜೀವನವನ್ನು, ಶೈಶವಾವಸ್ಥೆ (Infancy), ಬಾಲ್ಯಾವಸ್ಥೆ (Child hood), ತಾರುಣ್ಯಾವಸ್ಥೆ (Youth) ಮತ್ತು ವೃದ್ಧಾಪ್ಯಗಳೆಂದು(Old age) ವಿಭಾಗಿಸಲ್ಪಟ್ಟರೂ, ಆಯಾಯ ವಯಸ್ಸಿನಲ್ಲಿ ಗೈಯಬೇಕಾದ ಕರ್ತವ್ಯ, ನಿರ್ವಹಿಸಬೇಕಾದ ಜವಾಬ್ದಾರಿ ಮತ್ತು ಹೊಂದಿರಬೇಕಾದ ಮನೋಸ್ಥಿತಿಗಳಿಗನುಸಾರವಾಗಿ ಜೀವನವನ್ನು ಬ್ರಹ್ಮಚರ್ಯ-ಗೃಹಸ್ಥಾಶ್ರಮ-ವಾನಪ್ರಸ್ಥ ಮತ್ತು ಸನ್ಯಾಸಗಳೆಂಬ 4 ಹಂತಗಳಾಗಿ ವಿವರಿಸಲಾಗಿದೆ.

    ಇದನ್ನೇ “ಆಶ್ರಮ ಧರ್ಮ”ವೆಂದು ಕರೆಯಲಾಗಿದೆ. ಜೀವನವನ್ನು ಇಷ್ಟೊಂದು ಅರ್ಥಪೂರ್ಣವಾಗಿ ವಿಂಗಡಿಸಿ, ವಿವರಿಸಿದ ರೀತಿ, ಬಹುಶ: ನಮ್ಮ ಸನಾತನ ಧರ್ಮದ ಹೊರತಾಗಿ ಜಗತ್ತಿನ ಇನ್ಯಾವುದೇ ಧರ್ಮದಲ್ಲಿ ಲಭ್ಯವಿಲ್ಲ. ಇವನ್ನು ಸರಿಯಾಗಿ ಅರ್ಥೈಸಿಕೊಂಡು ಜೀವನದಲ್ಲಿ ಪಾಲಿಸಿದ್ದೇ ಆದರೆ, ಜೀವನ ಸಾರ್ಥಕಗೊಳ್ಳೋದರಲ್ಲಿ ಯಾವ ಸಂಶಯವೂ ಇಲ್ಲ!

    “ಬ್ರಹಚರ್ಯ”ವೆಂಬುದು, ಬಾಲ್ಯಾವಸ್ಥೆಯಿಂದ – ಪ್ರೌಢಾವಸ್ಥೆ, ಪ್ರೌಢಾವಸ್ಥೆಯಿಂದ ಗೃಹಸ್ಥಾಶ್ರಮದ ಆರಂಭದವರೆಗಿನ ಜೀವನಾವಧಿ. ಈ ಅವಧಿಯಲ್ಲಿ, ವಿದ್ಯಾರ್ಜನೆ ಮತ್ತು ಜ್ಞಾನಾರ್ಜನೆಯೊಂದೇ ವ್ಯಕ್ತಿಯ ಕೆಲಸ. ಇದಕ್ಕೆ ಅನುಕೂಲವಾಗಲೆಂದೇ, ಬ್ರಹ್ಮಚರ್ಯವೆಂಬ ವ್ರತವನ್ನು ಹಾಗೂ ಅದಕ್ಕೆ ಸಂಬಂಧಿಸಿದ ಹಲವಾರು ನೀತಿ-ನಿಯಮಾವಳಿಗಳನ್ನು ರೂಪಿಸಲಾಯಿತು.

    ಹಿಂದಿನ ಕಾಲದಲ್ಲಿ ಪ್ರಚಲಿತವಾಗಿದ್ದ “ಗುರುಕುಲ ಪದ್ಧತಿ” ಬ್ರಹ್ಮಚರ್ಯ ಪಾಲನೆಗೆ ಹೇಳಿ ಮಾಡಿಸಿದಂತಿತ್ತು. ಬಾಲ್ಯಾವಸ್ಥೆ ಆರಂಭವಾಗುತ್ತಿದ್ದಂತೆ, ಹೆತ್ತವರು ಮಕ್ಕಳನ್ನು, ಜ್ಞಾನಾರ್ಜನೆಗೆಂದು ಗುರುಕುಲದಲ್ಲಿ ಗುರುಗಳ ಬಳಿ ಬಿಡುತ್ತಿದ್ದರು. ಹೆತ್ತವರ ಆರೈಕೆ-ಪ್ರೀತಿ-ಒಲುಮೆ-ವಾತ್ಯಲ್ಯಗಳಿಂದ ಹೊರಬಂದವನು, ಗುರುಗಳ ಆಶ್ರಯದಲ್ಲಿ ಅವರ ಆದೇಶ-ಮಾರ್ಗದರ್ಶನದಂತೆ ಆಶ್ರಮದ ರೀತಿ-ನೀತಿಗಳನ್ನು ಪಾಲಿಸುತ್ತಾ ಜತೆಗೆ ಜ್ಞಾನ, ಕರಕುಶಲತೆಗಳನ್ನು ಗಳಿಸುತ್ತಾ ತನ್ನ ವಿದ್ಯಾಭ್ಯಾಸವನ್ನು ಪೂರೈಸುತ್ತಿದ್ದ.

    ವರುಷಗಳ ಕಠಿಣಪರಿಶ್ರಮ ಮತ್ತು ಅಭ್ಯಾಸದ ನಂತರ, ವಿದ್ಯಾವಂತನೂ, ಸಕಲ ಗುಣ ಸಂಪನ್ನನೂ ಆದ ಬಳಿಕ “ಸಹನಾವವತು, ಸಹನೌಭುವಕ್ತು , ಸಹವೀರ್ಯಂ ಕರವಾವಹೈ, ತೇಜಸ್ವಿನಾವಧೀತಮಸ್ತು, ಮಾವಿದ್ವಿಷಾವಹೈ; ಓಂ ಶಾಂತಿ, ಶಾಂತಿ, ಶಾಂತಿ:. ಅರ್ಥಾತ್ ಗುರು ಶಿಷ್ಯರೂ ಸೇರಿದಂತೆ, ಎಲ್ಲರ ರಕ್ಷಣೆ ಆಗಲಿ, ಪೋಷಣೆ ಆಗಲಿ, ಇಬ್ಬರೂ ಜತೆಗೂಡಿ, ದಕ್ಷತೆಯಿಂದ ಕಾರ್ಯನಿರ್ವಹಿಸುವಂತಾಗಲಿ, ಎಲ್ಲರ ಜ್ಞಾನ-ವಿದ್ವತ್ತುಗಳು ಬೆಳಗಲಿ, ಯಾರ ನಡುವೆಯೂ ಯಾವುದೇ ರೀತಿಯ ದ್ವೇಷಭಾವನೆ, ಭಿನ್ನಾಭಿಪ್ರಾಯಗಳುಂಟಾಗದಿರಲಿ, ಎಲ್ಲೆಲ್ಲೂ ಶಾಂತಿ ಇರಲಿ” ಎಂಬ ಆದೇಶ ಉಪದೇಶದೊಂದಿಗೆ, ಆಶೀರ್ವದಿಸಿ, ಅನುಗ್ರಹಿಸಿ, ಗುರುವು ವಟುವನ್ನು ಅವನ ಹೆತ್ತವರಿಗೆ ಹಸ್ತಾಂತರಿಸುತ್ತಾನೆ. ಮುಂದೆ ಈತ ಗೃಹಸ್ಥಾಶ್ರಮವನ್ನು ಸ್ವೀಕರಿಸಲು ಉದ್ಯುಕ್ತನಾಗುತ್ತಾನೆ.

    ಬ್ರಹಚರ್ಯವು ಶಿಸ್ತನ್ನು, ಏಕಾಗ್ರತೆಯನ್ನು, ಸ್ಮರಣಾಶಕ್ತಿಯನ್ನು, ಇಂದ್ರಿಯ ನಿಗ್ರಹವನ್ನು, ಶಾಂತಿಯನ್ನು, ಸಂಯಮತೆಯನ್ನು, ಸಮಯ ಪರಿಪಾಲನೆಯನ್ನು, ತ್ಯಾಗ-ತಾಳ್ಮೆಗಳೆಂಬ ಮನೋಭಾವವನ್ನು ಬೆಳೆಸಿಕೊಳ್ಳುವಲ್ಲಿ ನೆರವಾಗುತ್ತದೆ. ಬ್ರಹ್ಮಚರ್ಯವನ್ನು ಪಾಲಿಸುವ ಕಾಲದಲ್ಲಿ ಜೀರ್ಣವಸ್ತ್ರ  ಗಳಿರಬೇಕೆಂದು ಹೇಳಲಾಗಿದೆ. ಯಾವುದೇ ರೀತಿಯ ಅಲಂಕಾರ, ವಸ್ತ್ರಾಭರಣಗಳ ಧಾರಣೆಗೆ ಈ ಕಾಲದಲ್ಲಿ ಅವಕಾಶವಿಲ್ಲ. ಕಾರಣ ತಾನು ಇತರರನ್ನು ಆಕರ್ಷಿಸಬಾರದು.

    ಅಂತೆಯೇ ತನ್ನಿಂದ ಇತರರೂ ಆಕರ್ಷಿತರಾಗಬಾರದು; ಆಕರ್ಷಿತರಾಗಿ ಸಂಯಮವನ್ನು ಕಳೆದುಕೊಳ್ಳಬಾರದೆಂಬುದೇ ಇದರ ಉದ್ದೇಶ. ಅಂತೆಯೇ ಅಲ್ಪ ಆಹಾರವಿರಬೇಕೆಂದು ತಿಳಿಸಲಾಗಿದೆ. ಕಾರಣ ಅತಿಯಾದ ಹಾಗೂ ತಮೋ ಗುಣಗಳುಳ್ಳ ಆಹಾರ ಸೇವನೆಯಿಂದ, ಕಾಮನೆಗಳು ಹೆಚ್ಚಾಗಿ, ನಿದ್ದೆಗೆ ಜಾರುವ ಸಂದರ್ಭಗಳು ಜಾಸ್ತಿ ಅಲ್ಲವೇ?. ಅದೇ ರೀತಿ ಶ್ವಾನನಿದ್ರಾ (minimum sleep) ಬಕಧ್ಯಾನ, ಕಾಕದೃಷ್ಟಿ (sharp sight), ಬ್ರಹ್ಮಚರ್ಯದ ಲಕ್ಷಣಗಳು. ಮಾತ್ರವೇ ಅಲ್ಲ, ಸ್ತ್ರೀಯರ ವೀಕ್ಷಣೆ, ಅವರ ಜತೆ ಸರಸ ಸಲ್ಲಾಪ, ಚಕ್ಕಂದ, ಚಲ್ಲಾಟಗಳು ಬ್ರಹ್ಮಚಾರಿಗಳಿಗೆ ನಿಷಿದ್ಧ.

    ಹೀಗೆ ಬ್ರಹ್ಮಚರ್ಯವು, ವಿದ್ಯಾರ್ಥಿಗಳ ಶಾರೀರಿಕ, ಬೌದ್ಧಿಕ ಮತ್ತು ನೈತಿಕ ಬೆಳವಣಿಗೆಗೆ ನೆರವಾಗಿ, ವಿದ್ಯಾರ್ಜನೆಗೆ ಅತ್ಯಂತ ಅನುಕೂಲಕಾರಿ ಎನ್ನಲಾಗಿದೆ. ಈಗಿನ ಕಾಲದಲ್ಲಿ, ಗುರುಕುಲ ಪದ್ಧತಿಯೇ ಇಲ್ಲವಾದರೂ, ಬ್ರಹ್ಮಚರ್ಯವನ್ನು ಪಾಲಿಸಲು, ವಿದ್ಯಾರ್ಥಿಗಳಿಗೆ ಯಾವ ಅಡತಡೆಯೂ ಇಲ್ಲ. ಒಟ್ಟಿನಲ್ಲಿ ಮನೋ ಸಂಕಲ್ಪವೊಂದು ಇರಬೇಕು ಅಷ್ಟೆ. ಯಾವುದೇ ಶಿಸ್ತು, ನಿಯಮ, ನಿರ್ಬಂಧಗಳಿಲ್ಲದ ಸ್ವಚ್ಛಂದ, ಸ್ವಾತಂತ್ರ್ಯಗಳಿಂದ ಜೀವನದಲ್ಲಿ ಉನ್ನತ ಗುರಿಯನ್ನು ಏರಲಾಗದು; ಮಹತ್ತರವಾದುದನ್ನು ಸಾಧಿಸಲಾಗದು.

    “Anybody can become anybody, but if you want to become somebody – you need to be extraordinary and this extra can be achieved only by practicing celebacy” ಎಂಬ ಮಾತಿನಂತೆ, ಬ್ರಹ್ಮಚರ್ಯ ಪಾಲನೆಯಿಂದಲೇ, ಸಾಧಕರಾಗಲು ಸಾಧ್ಯ. ಈಗಿನ ಕಾಲದಲ್ಲಿ ಕೆಲವು ವಿದ್ಯಾರ್ಥಿಗಳಲ್ಲಿ ಕಾಣಬರುವ ಅಶಿಸ್ತು, ಅವಿಧೇಯತನ, ಬೇಜವಾಬ್ದಾರಿತನ, ಹಿಂಸಾ ಮನೋಪ್ರವೃತ್ತಿ, ಅನೈತಿಕ ಕೆಲಸಗಳು, ಮಾದಕ ವಸ್ತುಗಳ ಚಟ-ಮುಂತಾದ ದುರ್ಗುಣಗಳಿಗೆ, ದುಷ್ಕೃತ್ಯಗಳಿಗೆ ಮೂಲಕಾರಣ ಬ್ರಹ್ಮಚರ್ಯದ ಹಾಗೂ ಸಂಸ್ಕಾರದ ಕೊರತೆ.

    ಹಲವರು ವಿದ್ಯಾರ್ಥಿಗಳು ‘ಪ್ರೇಮವೆಂಬ ಜ್ವರಕ್ಕೆ ತುತ್ತಾಗಿ, ಓದನ್ನೇ ಮರೆಯುತ್ತಾರೆ. “Ranks and romance will never go together”ಎಂಬಂತೆ, ಕಾಮ ಮತ್ತು ಜ್ಞಾನ-ಪರಿಜ್ಞಾನಗಳು ಎಂದೂ ಜತೆಗೆ ಇರದು. “ಕಾಮದಿಂದ ಕ್ರೋಧ-ಕ್ರೋಧದಿಂದ ಮೋಹ-ಮೋಹದಿಂದ ಬುದ್ಧಿ ನಾಶ” ಎಂಬ ಭಗವದ್ಗೀತೆಯ ಉಪದೇಶ ಎಷ್ಟೊಂದು ನಿಜವಲ್ಲವೇ?. ವಿದ್ಯಾರ್ಥಿಗಳಿಗೆ ಪ್ರೇಮಿಗಳು ಇಲ್ಲದಿರೋದರಿಂದ ಆಗುವ ಲಾಭಗಳೆಂದರೆ – ಸಮಯದ ಮತ್ತು ಹಣದ ಉಳಿತಾಯ; ವಿದ್ಯಾಭ್ಯಾಸಕ್ಕೆ ಅಧಿಕ ಸಮಯ ಲಭ್ಯ, ಒಳ್ಳೆಯ ನಿದ್ರೆ ಇತ್ಯಾದಿ ಮಾತ್ರವೇ ಅಲ್ಲ, ಹೆತ್ತವರಿಗೆ, ಗುರುಗಳಿಗೆ ಇಲ್ಲದ ಸುಳ್ಳುಗಳನ್ನು ಹೇಳಬೇಕಾದ ಪ್ರಮೇಯಗಳುಂಟಾಗೋದಿಲ್ಲ; ಹಾಗೂ ಕ್ಲಾಸುಗಳಿಗೆ ಚಕ್ಕರ್ ಕೊಡಬೇಕಾಗಿಲ್ಲ.

    ಇಷ್ಟಕ್ಕೂ ಅಂತಹ ಅವಸರ ಏಕೆ? ತಾಳ್ಮೆ ಇರಲಿ; ತ್ಯಾಗಗಳಿರಲಿ! ನಿಗದಿತ ಸಮಯದಲ್ಲಿ, ಒಳ್ಳೆಯ ಅಂಕಗಳೊಂದಿಗೆ ವಿದ್ಯಾಭ್ಯಾಸವನ್ನು ಪೂರೈಸಿ, ಮುಂದೆ ನೌಕರಿ ಸಿಕ್ಕ ಮೇಲೆ, ತಮಗೆ ಇಷ್ಟವಾದವರನ್ನು ಪ್ರೀತಿಸಿ, ಮದುವೆ ಮಾಡಿಕೊಂಡು ಸುಖವಾಗಿರಬಹುದಲ್ಲ? ಓದಿನ ಹಿಂದೆ ಹೋಗಬೇಕಾದವರು ಸುಖದ ಹಿಂದೆ ಏಕೆ ಹೋಗಬೇಕು? ಪಾಶ್ಚಾತ್ಯರಲ್ಲಿರುವಂತಹ ಡೇಟಿಂಗ್​, ಲಿವಿಂಗ್​ ಟುಗೆದರ್​ ಪದ್ಧತಿ, ನಮ್ಮ ಸಂಸ್ಕೃತಿಗೆ ಒಲ್ಲದ ಒಗ್ಗದ ವಿಷಯ. ಒಟ್ಟಿನಲ್ಲಿ ಬ್ರಹ್ಮಚರ್ಯ ಪಾಲಿಸಬೇಕಾದ ಕಾಲದಲ್ಲಿ ಗೃಹಸ್ಥಾಶ್ರಮದ ಸುಖ ಸಂತೋಷಗಳನ್ನು ಅನುಭವಿಸಬಾರದು. ಅಂತೆಯೇ, ಗೃಹಸ್ಥಾಶ್ರಮದಲ್ಲಿ ಬ್ರಹ್ಮಚಾರಿಗಳಂತಿರಬಾರದು. ಯಾವ ಯಾವ ಕಾಲದಲ್ಲಿ ಏನನ್ನು ಮಾಡಬೇಕೋ ಅದನ್ನು ಮಾಡಿದರೇನೇ ಚೆನ್ನ. ಎಲ್ಲದಕ್ಕೂ ಸಕಾಲವೆಂಬುದೊಂದಿದೆ. ಈ ನಿಟ್ಟಿನಲ್ಲಿ ಪೋಷಕರು ನೀಡಬೇಕಾದ ಸಂಸ್ಕಾರ ಮತ್ತು ಶಿಕ್ಷಕರು ಮಾಡಬೇಕಾದ ಮಾರ್ಗದರ್ಶನ ಅತ್ಯವಶ್ಯಕ!

                                                                                        ಪ್ರತಿಕ್ರಿಯಿಸಿ:[email protected]

    Web Exclusive: ನೀವು ಯಾವ ರೀತಿಯ ಪಾಲಕರು ಚೆಕ್ ಮಾಡ್ಕೊಳ್ಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts