More

    Web Exclusive: ನೀವು ಯಾವ ರೀತಿಯ ಪಾಲಕರು ಚೆಕ್ ಮಾಡ್ಕೊಳ್ಳಿ…

    Web Exclusive: ನೀವು ಯಾವ ರೀತಿಯ ಪಾಲಕರು ಚೆಕ್ ಮಾಡ್ಕೊಳ್ಳಿ...ಯಾವತ್ತೂ ಹೆತ್ತವರು ತಮ್ಮ ಮಕ್ಕಳ ಹಿತ ಚಿಂತಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಮಕ್ಕಳನ್ನು Handle ಮಾಡುವ ರೀತಿ ಕೆಲವು ಹೆತ್ತವರಿಗೆ ಗೊತ್ತಿರೋದಿಲ್ಲ. ಕೆಲವರು ತಮ್ಮ ಮಕ್ಕಳನ್ನು ಅತಿಯಾಗಿ ಮುದ್ದು ಮಾಡಿದರೆ, ಕೆಲವರಿಗೆ ಅದರ ಬಗ್ಗೆ ಕಾಳಜೀನೇ ಇರೋದಿಲ್ಲ. ಕೆಲವು ಹೆತ್ತವರು ತಮ್ಮ ಮಕ್ಕಳ ಜೊತೆ friendly ಆಗಿ ಇದ್ದರೆ, ಇನ್ನು ಕೆಲವರು ದೂರ. ಮಕ್ಕಳು ತಪ್ಪು ಮಾಡುತ್ತಿರುತ್ತಾರೆ. ಅದೂ ವಯಸ್ಸಿಗೆ ಬರುತ್ತಿದ್ದಂತೆ ಅಶಿಸ್ತು, ಅವಿಧೇಯತನ, ಬೇಜಾವ್ದಾರಿತನ, ಉದ್ಧಟತನ, ನಿರ್ಲಕ್ಷತನಗಳೇ ಮುಂತಾದ ವಯೋಸಹಜವಾದ ಗುಣ ಸ್ವಭಾವಗಳು ವ್ಯಕ್ತವಾಗುತ್ತಿರುತ್ತವೆ. ಇವರಲ್ಲಿ ಶಿಸ್ತು ಸಮಯಪಾಲನೆಗಳಿರೋದಿಲ್ಲ ಹೇಳಿದ್ದನ್ನು ಕೇಳೋಲ್ಲ. ಇಂತಹ ಮಕ್ಕಳನ್ನು ನಿಭಾಯಿಸುವ ಪೋಷಕರನ್ನು 3 ತೆರನಾಗಿ ವಿಂಗಡಿಸಬಹುದು.

    1. ಮಕ್ಕಳು ಏನೇ ತಪ್ಪು ಮಾಡಿದರೂ, ನೋಡಿಯೂ ನೋಡದಂತಿರುವವರು; ಕೇಳಿಯೂ ಕೇಳದಂತಿರುವವರು. ತುಟಿ ಪಿಟಕ್ಕೆನ್ನದೆ ಎಲ್ಲವನ್ನು ಸಹಿಸಿಕೊಂಡು ಸುಮ್ಮನಿರುವ ಇವರು ಒಂದು ಶಬ್ದ ಬೈದವರಲ್ಲ, ಒಂದು ಏಟು ಕೊಟ್ಟವರಲ್ಲ. ಹೀಗೆ ಮಾಡಲು ಕಾರಣ, ಮಕ್ಕಳ ಮೇಲಿನ ಅತಿಯಾದ ವ್ಯಾಮೋಹ ಮುಂದೆ ಎಲ್ಲವೂ ಸರಿಹೋದೀತೆಂಬ ಕೆಟ್ಟ ವಿಶ್ವಾಸ, ಇಲ್ಲವೇ ಬೈದರೆ, ಹೊಡೆದರೆ, ಎಲ್ಲಿ ಸಿಟ್ಟು ಮಾಡಿಕೊಂಡು ನಮ್ಮಿಂದ ದೂರವಾದರೋ ಎಂಬ ಭಯ. ಒಂದು ದೃಷ್ಟಿಯಲ್ಲಿ ನೋಡಿದರೆ, ಇಂತಹ ಹೆತ್ತವರು, ಮಕ್ಕಳ ಹಿತಶತ್ರುಗಳೇ ಸರಿ. ಕಾರಣ ತಾನು ಮಾಡಿದ್ದೆಲ್ಲಾ ಸರಿ ಎಂದು ತಿಳಿದುಕೊಂಡು ಬೆಳೆದ ಮಗು, ಮುಂದೆ ತಿದ್ದಿ ತೀಡದ ಕಚ್ಚಾ ಒರಟು ವ್ಯಕ್ತಿಯಾಗಿ ಬೆಳೆದು ಬಿಡುತ್ತಾನೆ.

    2. ಇನ್ನು ಕೆಲವು ಹೆತ್ತವರಿಗೆ, ಮಕ್ಕಳು ತಪ್ಪು ಮಾಡಿದಾಗ, ಬೈದರೆ, ಹೊಡೆದರೆ, ಎಲ್ಲಿ ಇನ್ನಷ್ಟು ಮೊಂಡುತನ ಬಂದೀತೋ ಎಂಬ ಭಯ ಒಂದೆಡೆಯಾದರೆ, ದಂಡಿಸದಿದ್ದರೆ, ಎಲ್ಲಿ ಪರಿಸ್ಥಿತಿ ಕೈಮೀರಿ ಹೋದೀತೋ ಎಂಬ ಅಂಜಿಕೆ, ಇನ್ನೊಂದೆಡೆ. ಆದರೂ ತಪ್ಪು ಮಾಡಿದ್ದಲ್ಲಿ, ಮಕ್ಕಳಿಗೆ ಬೈಯ್ಯುವ ಹಾಗೂ ಅಪರೂಪಕ್ಕೆ ಒಂದು ಏಟನ್ನು ಕೊಟ್ಟು ಸರಿಮಾಡುವ ಪದ್ಧತಿಯನ್ನು ಪಾಲಿಸಿರುತ್ತಾರೆ ಕೆಲವು ಹೆತ್ತವರು. ಕಾರಣ, ಮಕ್ಕಳು ತಪ್ಪುಮಾಡಿದರೆ, ಸಾಮ-ದಾನ-ವೇದ-ದಂಡಗಳ ಮೂಲಕವಾದರೂ ಸರಿಯೇ ಅವರನ್ನು ಅಲ್ಲಿಂದಲೇ ಆಗಾಗಲೇ ಸರಿ ಮಾಡಬೇಕೆಂಬ ವಾದ ಇವರದು. ಜೊತೆಗೆ “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ” ಎಂಬ ಸಂಶಯ ಬೇರೆ. ಇಂತಹ ಹೆತ್ತವರ ಬೈಗಳನ್ನಾಗಲೀ ಏಟುಗಳನ್ನಾಗಲೀ, ಗಂಭೀರವಾಗಿ ಪರಿಗಣಿಸದೆ, ನಮ್ಮ ಒಳಿತಿಗೆ ಹೇಳಿದ ಬುದ್ಧಿವಾದಗಳೆಂದು ತಿಳಿದು ಮಕ್ಕಳೂ ಕೂಡಾ ಸುಮ್ಮನಾಗುತ್ತಾರೆ. ಇದನ್ನೂ ಓದಿ: Web Exclusive: ಸ್ಮಾರ್ಟ್ ಸಿಟಿಗಳಲ್ಲಿ ಸೈಕಲ್ ಸವಾರಿ; ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ಡಲ್ಟ್

    3. ಇನ್ನು ವಿನಾಕಾರಣ, ಪ್ರತಿಯೊಂದಕ್ಕೂ ಮಕ್ಕಳನ್ನು ಬೈಯ್ಯುತ್ತಲೇ ಇರುವ ಆಗಾಗ ಹೊಡೆಯುತ್ತಲೇ ಇರುವ ಹೆತ್ತವರೂ ಇದ್ದಾರೆ. ಹೀಗೆ ಮಾಡಿದರೆ ಮಾತ್ರ ಮಕ್ಕಳು ಸರಿಹೋದಾರು ಎಂಬ ಭ್ರಮೆ ಇವರದು. ಹಾಗೂ ತಮ್ಮ ಹಿರಿತನವನ್ನು ಸಾಧಿಸಿದಂತಾಗುತ್ತದೆ ಎಂಬ ತಪ್ಪು ಕಲ್ಪನೆ. ಬಲವಾಗಿ ದಂಡಿಸದಿದ್ದರೆ, ಮಕ್ಕಳು ಕೈಮೀರಿಹೋದಾರು ಹಾಗೂ ಮತ್ತೆ ಮತ್ತೆ ಇದೇ ತಪ್ಪುಗಳನ್ನು ಮಾಡಿಯಾರು ಎಂಬ ಲೆಕ್ಕಾಚಾರ ಇವರದು. ಹೀಗೆ ಬೈದು ಹೊಡೆದವರಲ್ಲಿ ಮತ್ತೆ ಎರಡು ಗುಂಪಿನವರು ಬೈದು ಹೊಡೆದ ಮೇಲೆ ಪಶ್ಚಾತ್ತಾಪ ಪಡುವವರು ಹಾಗೂ ಹೊಡೆಯುವುದು ನನ್ನ ಹಕ್ಕು ಹೊಡೆದದ್ದೇ ಸರಿ ಎನ್ನುತ್ತಾ ತಮ್ಮ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳುವವರು, ಮಕ್ಕಳಲ್ಲಿ ಯಾವಾಗಲೂ ತಪ್ಪುಗಳನ್ನು ಹುಡುಕುತ್ತಾ ಪ್ರತಿಯೊಂದಕ್ಕೂ ಕೆಟ್ಟದ್ದಾಗಿ ಬೈಯ್ಯುವ ಹೊಡೆಯುವ ಹೆತ್ತವರು ಗಮನಿಸಬೇಕಾದ ವಿಷಯಗಳೆಂದರೆ:-

    ನಿಮಗೆ ಎದುರುತ್ತರ ನೀಡಲಾಗದ, ಹಾಗೂ ನಿಮ್ಮ ಹೊಡೆತಗಳಿಂದ ತಪ್ಪಿಸಿಕೊಳ್ಳಲಾಗದ ಚಿಕ್ಕ ವಯಸ್ಸು ಅದು. 3 ಅಡಿ ಎತ್ತರದ ಬಾಲಕನಿಗೆ 6 ಅಡಿ ಎತ್ತರದ ದಢಿಯ ತಂದೆ ಹೊಡೆಯಲಾರಂಭಿಸಿದರೆ, ಆ ಮಗು ತಾನೇ ಏನು ಮಾಡಲು ಸಾಧ್ಯ? ಮಗುವಿನ ಈ ನೋವನ್ನು ಅಸಹಾಯಕತೆಯನ್ನು ಹೆತ್ತವರು ಮೊದಲು ಅರ್ಥಮಾಡಿಕೊಳ್ಳಬೇಕು. |

    ಈ ಅಸಹಾಯಕ ಪರಿಸ್ಥಿತಿಯಲ್ಲಿ ಮಗು ಏನೋ ಸುಮ್ಮನಿದ್ದು ಅಳುತ್ತಾ, ಎಲ್ಲವನ್ನೂ ನುಂಗಿಕೊಳ್ಳುತ್ತದೆ, ಸಹಿಸಿಕೊಳ್ಳುತ್ತದೆ. ಆದರೆ ಮುಂದೆ ನೀವು ಹೊಡೆದ ಕಾರಣವನ್ನು ಮರೆತರೂ ಪಡೆದ ಪೆಟ್ಟನ್ನು ಮರೆಯದು. ಕಾರಣ ಪೆಟ್ಟು ಬಿದ್ದಿದ್ದು, ಅದರ ದೇಹದ ಮೇಲೆ ಮಾತ್ರವಲ್ಲ; ಮನಸ್ಸಿನ ಮೇಲೆ ಕೂಡಾ. ಆದುದರಿಂದ ಮಕ್ಕಳು ಅಂತಹ ಹೆತ್ತವರ ಮೇಲೆ ಗೌರವ, ಕಾಳಜಿಯನ್ನು ಇಟ್ಟುಕೊಳ್ಳೋದಿಲ್ಲ.

    • ಹದಿಹರೆಯದ ಮಕ್ಕಳಿಗೆ, ಸಿಕ್ಕಾಪಟ್ಟೆ ಬೈದರೆ, ಹೊಡೆದರೆ, ಅವರು Rebelಗಳಾಗಬಹುದು. ನಿಮ್ಮ ಮೇಲೂ ಕೈ ಮಾಡಬಹುದು. ಇದಯ ಬೇಕೇ?
    • ಮುಂದೆ ನಿಮ್ಮಿಂದ Distance maintain ಮಾಡ್ತಾರೆ. ನಿಮ್ಮ ಜೊತೆ friendly ಆಗಿ ಇರೋದಿಲ್ಲ. ನೀವು ಅವರ ಒಳಿತಿಗೆಂದು ಏನೇ ಮಾಡಿದ್ದರೂ, ಅವರ ಪಾಲಿಗೆ ನೀವು ವೈರಿಗಳೇ ಆಗಿರುತ್ತೀರ.
    • ಮುಂದಿನ ದಿನಗಳಲ್ಲಿ they might become aggressive, violent, and revengeful.
    • ಬಾಲ್ಯದಲ್ಲಿ ನಿಮ್ಮ ಕೈಯಿಂದ ಏಟು ತಿಂದ ಮಕ್ಕಳು, ದೊಡ್ಡವರಾದ ಮೇಲೆ, ನಿಮ್ಮ ಬಗ್ಗೆ ನಿರ್ಲಕ್ಷತೋರಬಹುದು. ಭಯಸ್ಥರಾಗಬಹುದು, ಇಲ್ಲವೇ ನಿಮ್ಮನ್ನೇ ಮರೆತು ಬಿಟ್ಟು ನಿಮ್ಮಿಂದ ದೂರವಾಗಬಹುದು.

    ಕಿವಿಮಾತು: ಮಕ್ಕಳನ್ನು ಬೈದು, ಹೊಡೆದು ಸರಿದಾರಿಗೆ ತರುವ ವಿಧಾನ, ಸುಶಿಕ್ಷಿತ-ಸುಸಂಕೃತ ಕ್ರಮವಲ್ಲ. ಸಣ್ಣ ವಿಷಯಕ್ಕೆ ಮಕ್ಕಳನ್ನು ಸಾಯುವಂತೆ ಹೊಡೆದು ಬಡಿದು ನಂತರ ಸಂಕಟ ಪಡೋದರಲ್ಲಿ ಅರ್ಥವಿಲ್ಲ. ಹಾಗೂ ಎಲ್ಲಾ ಮುಗಿಸಿ, ಅವರನ್ನು ಸಮಾಧಾನಪಡಿಸೋದರಲ್ಲಿ ಇಲ್ಲವೇ ಪ್ರೀತಿ ತೋರಿಸೋದರಲ್ಲೂ ಅರ್ಥವಿಲ್ಲ. ಉದಾಹರಣೆಗೆ ಊಟದ ಗಾಜಿನ ಪ್ಲೇಟು ಕೈಯಿಂದ ಜಾರಿಬಿದ್ದರೂ, ಮಕ್ಕಳಿಗೆ ಹೊಡೆಯುವವರಿದ್ದಾರೆ. ಅದು ಹೊಡೆಯುವಷ್ಟು ನಡೆದು ಹೋದ ಅಪರಾಧವೇ? ಯಾರು ಕೂಡಾ ಬೇಕೆಂದು ಬೀಳಿಸೋದಿಲ್ಲ ತಾನೇ! ನಮ್ಮ ಕೈಯಿಂದಲೂ ಹೀಗೆ ಗಾಜಿನ ವಸ್ತುಗಳ ಬಿದ್ದು ಒಡೆದು ಹೋಗಿಲ್ಲವೇ? ಅಂದ ಮೇಲೆ ಈ ಚಿಕ್ಕ ತಪ್ಪನ್ನೇ ದೊಡ್ಡದು ಮಾಡಿ ಹೊಡೆಯೋದರಲ್ಲಿ ಅರ್ಥವಿಲ್ಲ. ಹೊಡೆಯದಿದ್ದರೆ ನಮ್ಮ ಮಾತೆಲ್ಲಿ ಕೇಳುತ್ತಾರೆ ಎಂಬುದು ಕೆಲವರ ವಾದ. ಹೊಡೆಯುವುದು ಬೇರೆ ಗದರಿಸೋದು ಬೇರೆ. ನಿಧಾನವಾಗಿ ತಿಳಿಹೇಳಬೇಕಾದಲ್ಲಿ ಗದರಿಸಬಾರದು, ಗದರಿಸಬೇಕಾದಲ್ಲಿ ಹೊಡೆಯಬಾರದು. ಮುಂದೆ ಮುಂಜಾಗ್ರತೆ ವಹಿಸುವಂತೆ ಬುದ್ದಿಹೇಳಿ. ಹೊಡೆದರೆ ಅವರ ಮನಸ್ಸು ಬಂಡೆಕಲ್ಲಾಗಿತ್ತದೆ. ಈ ಹಿನ್ನೆಲೆಯಲ್ಲಿ ಹೆತ್ತವರು ಕೂಡಾ ಕೆಲವು ಸೂತ್ರಗಳನ್ನು ಪಾಲಿಸಬೇಕಾಗುತ್ತದೆ.

    ನಿಮ್ಮ ಕೋಪ ಅತಿಯಾಗಿದ್ದಲ್ಲಿ, ಅದನ್ನು ನಿಯಂತ್ರಿಸಿಕೊಳ್ಳಬೇಕಾದ್ದದ್ದು ನಿಮ್ಮ ಮೊದಲನೆಯ ಕೆಲಸ.

    ಹಾಗೆಂದು ಅವರು ತಪ್ಪು ಕೆಲಸ ಮಾಡಿದಾಗಲೂ, ಅಸಭ್ಯವಾಗಿ ವರ್ತಿಸಿದಾಗಲೂ, ಸುಮ್ಮನಿರೋದು ಸರಿಯಲ್ಲ. ಅವರ ತಪ್ಪುಗಳನ್ನು ಸರಿಪಡಿಸಬೇಕು. ಆದರೆ ನೀಡುವ ಶಿಕ್ಷೆ ಕಠಿಣವಾಗಬಾರದು. ಹೊಡೆಯುವುದಂತೂ ಶಿಕ್ಷೆಯ ಭಾಗವೇ ಅಲ್ಲ. ಕೆಲಕಾಲ ಅವರ ಜೊತೆ ಮಾತನಾಡದೇ, ಮೌನವಾಗಿರೋದರ ಮೂಲಕವೇ ಇಲ್ಲವೇ ಸಂಜ್ಞೆಗಳ ಮೂಲಕವೋ ಹಾವಭಾವಗಳ ಮೂಲಕವೋ ನಿಮ್ಮ ಕೋಪವನ್ನು ವ್ಯಕ್ತಪಡಿಸಬಹುದು. ಒಟ್ಟಿನಲ್ಲಿ ತಪ್ಪು ಮಾಡಿದರೆ ಶಿಕ್ಷೆ ಕಾದಿದೆ ಎನ್ನುವ ವಿಚಾರ ಅವರಿಗೆ ಮನವರಿಕೆಯಾಗುವ ರೀತಿಯಲ್ಲಿ ಅವರ ತಪ್ಪುಗಳನ್ನು ತಿಳಿ ಹೇಳಿ.

    ಎಂದೂ ಸಿಟ್ಟಾಗದ ತಂದೆ , ಒಂದು ಬೇಸರದ ಮಾತು ಎಂದರೆ ಸಾಕು, ಮಾತೆಂದರೆ ಸಾಕುಮಕ್ಕಳ ಮನಸ್ಸಿಗೆ ಚುರಕ್ ಎನ್ನುತ್ತದೆ, ದಿನಾ ಮಾತನಾಡುವ ಅಮ್ಮ ಮಾತು ಬಿಟ್ಟರೆ, ಮಕ್ಕಳಿಂದ ಹೆಚ್ಚು ಕಾಲ ಸಹಿಸಿಕೊಳ್ಳೋಕೆ ಆಗೋದಿಲ್ಲ. ಆದುದರಿಂದ ಇಂತಹ ಸಣ್ಣಪುಟ್ಟ ಶಿಕ್ಷೆಗಳು ಸಾಕು; ಜೀವನದಲ್ಲಿ ಅವರು ಮರೆಯಲಾಗದ ದಂಡನೆಗಳು ಬೇಡ.

    ಸದಾ ಬೈಯ್ಯುತ್ತಿರುವ ಅಪ್ಪನಿಗೆ ಮಕ್ಕಳು ಬೆಲೆಯನ್ನೇ ಕೊಡೋದಿಲ್ಲ. “ಇದೆಲ್ಲಾ ಇದ್ದಿದ್ದೇ” ಎಂದು ಸುಮ್ಮನಾಗುತ್ತಾರೆ. ಹೊಡೆದ ಮಾತ್ರಕ್ಕೆ ಮಕ್ಕಳು ಕೆಟ್ಟ ಕೆಲಸ ಮಾಡೋದನ್ನ ಶಾಶ್ವತವಾಗಿ ನಿಲ್ಲಿಸಿಬಿಡುತ್ತಾರೆ ಎಂಬುದು ಹೆತ್ತವರ ಭ್ರಮೆ. ಹೊಡೆತ ಮಕ್ಕಳಲ್ಲಿ ಭಯವನ್ನು ಹುಟ್ಟುಸುತ್ತದೆಯೋ ಹೊರತು ಗೌರವವನ್ನು ಅಲ್ಲ’ ಪರಿಹಾರವನ್ನೂ ಅಲ್ಲ. ಪರಿಹಾರ ಸಿಗಬೇಕಾದರೆ ಅವರಲ್ಲೇ ಪರಿವರ್ತನೆಯಾಗಬೇಕು.

    1. ಕೆಲವು ಹೆತ್ತವರು, ತಮ್ಮಮೇಲಿರುವ ಒತ್ತಡಗಳನ್ನು ಮಕ್ಕಳನ್ನು ಬೈಯ್ಯೋದರ, ದೂಷಿಸೋದರ ಇಲ್ಲವೇ ಹೊಡೆಯೋದರ ಮೂಲಕ ತೀರಿಸಿಕೊಳ್ಳುತ್ತಾರೆ. ಇದು ತರವಲ್ಲ.
    2. ಸತ್ಯಾಂಶವನ್ನು ತಿಳಿದುಕೊಳ್ಳದೇನೇ ಕೆಲವು ಹೆತ್ತವರು ಮಕ್ಕಳನ್ನು ಶಿಕ್ಷಿಸೋದುಂಟು, ಇದು ಸಾಧುವಲ್ಲ.
    3. ಶಿಕ್ಷೆ ಇಲ್ಲವೆ ದಂಡನೆಯ ವಿಧಾನ ಮತ್ತು ಪ್ರಮಾಣ ಕೂಡಾ ಹೆತ್ತವರಿಗೆ ತಿಳಿದಿರಬೇಕು. ಸಣ್ಣ ತಪ್ಪಿಗೆ ದೊಡ್ಡ ಶಿಕ್ಷೆ ತರವಲ್ಲ. ಆದರೆ ಕಳ್ಳತನ, ಕುಡಿತ, ಸುಳ್ಳು ಹೇಳೋದನ್ನೆಲ್ಲಾ ಸಣ್ಣ ತಪ್ಪೆಂದು ಪರಿಗಣಿಸುವಂತೆಯೂ ಇಲ್ಲ.
    4. ಇನ್ನೂ “ಮಕ್ಕಳಿಗೇಕೆ ಮರ್ಯಾದೆ” ಎನ್ನದಿರಿ. ಅವರಿಗೂ ಅವರದೇ ಆದ ಆತ್ಮಾಭಿಮಾನವಿರುತ್ತದೆ.
    5. ಪರಸ್ಪರ ಪ್ರೀತಿ ಇಲ್ಲದೆ, ಮಕ್ಕಳಾಗಲೀ, ಹೆತ್ತವರಾಗಲೀ, ಹೆಚ್ಚುಕಾಲ ಇರಲಾರರು. ಆದುದರಿಂದ ಆಗಿಹೋದ ತಪ್ಪನ್ನು ಮರೆತು ಬಿಡಬೇಕು. (Forget and Forgive)
    6. ಮಕ್ಕಳಲ್ಲಿರುವ ಒಳ್ಳೆಯ ಗುಣಗಳನ್ನು ಮೊದಲು ಹೇಳಿ, ನಂತರ ತಪ್ಪುಗಳನ್ನು ತಿಳಿ ಹೇಳೋದು ಜಾಣತನವಾದೀತು.
    7. ಅಂತೆಯೇ ಮೊದಲು ಬೈದು ಹೊಡೆದು, ನಂತರ ಮುದ್ದು ಮಾಡೋದು ಕೂಡಾ ಸರಿಹೋಗದು. ಶಿಕ್ಷೆಯ ಕಾರಣವನ್ನು ವಾತ್ಸಲ್ಯದಿಂದ ವಿವರಿಸಿ ಹೇಳಿದರೆ, ಮಕ್ಕಳಲ್ಲಿ ಶಿಸ್ತು ಬೆಳೆಯುತ್ತದೆ. ಈ ಕೆಲಸವನ್ನು ತಾಯಿ ತಂದೆ, ಜೊತೆ ಜೊತೆಯಾಗಿ ಮಾಡಬೇಕು. ಅಪ್ಪ ಬುದ್ಧಿವಾದ ಹೇಳಿ, ಅಮ್ಮ ಮುದ್ದು ಮಾಡಿದರೆ, ಅಪ್ಪನೇ ಕೆಟ್ಟವನೆಂಬ ತಪ್ಪು ಸಂದೇಶ ರವಾನೆಯಾಗುತ್ತದೆ.
    8. ನಾನು ನಿನ್ನ ತಪ್ಪನ್ನು ಇಷ್ಟಪಟ್ಟಿಲ್ಲವೇ ಹೊರತು, ನಿನ್ನನ್ನಲ್ಲ, ನಿನ್ನ ಮೇಲಿನ ಪ್ರೀತಿ ಎಂದೂ ಕಮ್ಮಿಯಾಗೋದಿಲ್ಲ ಮಗೂ” ಎಂಬ ಹೆತ್ತವರ ಸಂದೇಶ ಮಾತ್ರ ಮಕ್ಕಳಿಗೆ ಆಗಾಗ ರವಾನೆಯಾಗುತ್ತಿರುಬೇಕು.

    ಪ್ರತಿಕ್ರಿಯಿಸಿ: [email protected]

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts