ಪರೇಶ್​ ಮೇಸ್ತಾನದ್ದು ಕೊಲೆಯಲ್ಲ: ವರದಿಗೆ ಕಾಂಗ್ರೆಸ್​ನಿಂದ ಸಂಭ್ರಮ- ಬಿಜೆಪಿ ಕೆಂಡಾಮಂಡಲ; ನಾಯಕರು ಹೇಳ್ತಿರೋದೇನು?

2 Min Read
ಪರೇಶ್​ ಮೇಸ್ತಾನದ್ದು ಕೊಲೆಯಲ್ಲ: ವರದಿಗೆ ಕಾಂಗ್ರೆಸ್​ನಿಂದ ಸಂಭ್ರಮ- ಬಿಜೆಪಿ ಕೆಂಡಾಮಂಡಲ; ನಾಯಕರು ಹೇಳ್ತಿರೋದೇನು?

ಕಾರವಾರ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಬ್ಯೂರೋ ಆಫ್ ಇನ್​ವೆಸ್ಟಿಗೇಷನ್​ (ಸಿಬಿಐ) ಹೊನ್ನಾವರ ನ್ಯಾಯಾಲಯಕ್ಕೆ ನಿನ್ನೆ (ಸೋಮವಾರ) ವರದಿ ಸಲ್ಲಿಸಿ, ಪರೇಶ್ ಮೇಸ್ತಾನದ್ದು ಹತ್ಯೆಯಲ್ಲ ಆಕಸ್ಮಿಕ ಸಾವು ಎಂದು ಹೇಳಿದೆ.

2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ಗಲಭೆ ವೇಳೆ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಬಳಿಕ ಡಿಸೆಂಬರ್ 8ರಂದು ಹೊನ್ನಾವರದ ಶೆಟ್ಟಿಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಮುಸ್ಲಿಮರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಗರು ಆರೋಪಿಸಿದ್ದರು.

ಈತನನ್ನು ಹಿಂದು ಸಂಘಟನೆಗಳು ಹಿಂದು ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಈ ಪ್ರಕರಣ ಕೋಮುಸಂಘರ್ಷಕ್ಕೆ ಕಾರಣವಾಗಿತ್ತು. ಪರಿಣಾಮವಾಗಿ ಅಂದಿನ ಸಿದ್ದರಾಮಯ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಐದು ಜನರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ನಾಲ್ಕೂವರೆ ವರ್ಷದ ನಂತರ ಇಂದು ಸಿಬಿಐ ವರದಿ ಸಲ್ಲಿಸಿದೆ.

ಈ ವರದಿಯ ಬಗ್ಗೆ ಜನಸಾಮಾನ್ಯರು ಹಾಗೂ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರು ಮಾತ್ರ ವರದಿಯನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.

ಪರೇಶ್​ನದ್ದು ಕೊಲೆಯಲ್ಲ, ಸಾವು ಎಂದು ವರದಿ ಬಂದ ತಕ್ಷಣ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ‘ಹೊನ್ನಾವರದ ಪರೇಶ್ ಮೇಸ್ತಾ ಅವರದ್ದು ಹತ್ಯೆ ಅಲ್ಲ, ಆಕಸ್ಮಿಕ‌ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ – ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು. ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತಾನಂತಹ ಅಮಾಯಕ ಯುವಕರ ರಕ್ತ ಇದೆ. ರಾಜ್ಯ ಬಿಜೆಪಿ ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ’ ಎಂದು ಹೇಳಿದ್ದಾರೆ.

See also  ವಿಶ್ವವಿದ್ಯಾಲಯ ಒಂದರಲ್ಲಿ ಗುಂಡಿನ ದಾಳಿ; 15 ಮಂದಿ ಸಾವು

ಪರೇಶ್​ ಮೇಸ್ತಾನದ್ದು ಕೊಲೆಯಲ್ಲ: ವರದಿಗೆ ಕಾಂಗ್ರೆಸ್​ನಿಂದ ಸಂಭ್ರಮ- ಬಿಜೆಪಿ ಕೆಂಡಾಮಂಡಲ; ನಾಯಕರು ಹೇಳ್ತಿರೋದೇನು?

ಆದರೆ ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಸಿದ್ದರಾಮಯ್ಯನವರ ಸರ್ಕಾರವೇ ಇದಕ್ಕೆ ಕಾರಣ ಎಂದು ಆರೋಪ ಹೊರಿಸಿದೆ. ‘ಸಿಬಿಐ ತನಿಖಾ ವರದಿ ಸಲ್ಲಿಕೆ ಮಾಡಿದ ಪ್ರಕರಣ ಸಂಬಂಧ ಬಿಜೆಪಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯಗಳನ್ನು ನಾಶ ಮಾಡಿದೆ. ಹಾಗಾಗಿ ಸಿದ್ದರಾಮಯ್ಯ ಅವರೇ ರಾಜೀನಾಮೆ ಕೊಡಬೇಕು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ.

‘ಪರೇಶ್ ಮೇಸ್ತಾನದ್ದು ಕೊಲೆಯೇ, ಇದರಲ್ಲಿ ಎರಡು ಮಾತಿಲ್ಲ. ಇದನ್ನು ಅವರ ತಂದೆಯೇ ಹೇಳಿದ್ದಾರೆ. ಇದಕ್ಕೆ ಪಿಎಫ್ಐ ಸಂಘಟನೆಯವರೇ ಕಾರಣ ಎಂದೂ ತಂದೆ ಹೇಳಿದ್ದಾರೆ. ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಕೋರ್ಟ್ ಗೆ ಕೊಟ್ಟಿದ್ದಾರೆ. ಆದರೆ, ಅದರ ಸಂಪೂರ್ಣ ವಿವರ ನಮಗೆ ಗೊತ್ತಿಲ್ಲ, ಕೋರ್ಟ್​ನಿಂದ ಸಂಪೂರ್ಣ ತನಿಖಾ ವರದಿ ಬರಲಿ’ ಎಂದು ಹೇಳಿದರು. ಪಿಎಫ್​ಐ ಮೇಲಿನ 1600 ಕೇಸ್​ಗಳನ್ನು ಸಿದ್ದರಾಮಯ್ಯನವರು ವಾಪಸ್​ ಪಡೆದಿರುವ ಬಗ್ಗೆ ನಿನ್ನೆಯಷ್ಟೇ ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಇದರಂತೆಯೇ ಪರೇಶ್​ ಮೇಸ್ತಾನ ಸಾವಿಗೆ ಕಾರಣವಾಗಿರುವ ಪಿಎಫ್​ಐ ವಿರುದ್ಧದ ಸಾಕ್ಷ್ಯ ನಾಶ ಮಾಡಿದ್ದು ಇದೇ ಸಿದ್ದರಾಮಯ್ಯ ಎಂದು ಬಿಜೆಪಿ ಈಗ ಆರೋಪಿಸುತ್ತಿದೆ.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಇದು ಖಂಡಿತವಾಗಿಯೂ ಕೊಲೆ ಎಂದು ಅವರ ತಂದೆಯವರೇ ಹೇಳಿದ್ದಾರೆ. ಅವರ ತಂದೆಯವರಿಗಿಂತ ಸಿದ್ದರಾಮಯ್ಯನವರಿಗೆ ಗೊತ್ತಾ..? ರಕ್ತದ ಮಡುವಿನಲ್ಲಿ ಅವನು ಸತ್ತಿದ್ದಾನೆ. ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಅಲ್ವಾ..? ಕೊಲೆಗೆ ಇದ್ದ ಪುರಾವೆಗಳನ್ನು ನಾಶ ಮಾಡಿ, ಬಚಾವ್ ಆಗಿದ್ದೀರಿ’ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. (ಏಜೆನ್ಸೀಸ್​)

ಡಿಜಿಪಿಯ ಆದೇಶವನ್ನೇ ಉಲ್ಲಂಘಿಸಿ ಪಿಎಫ್​ಐ ಮೇಲಿನ 1600 ಕೇಸ್​ ವಾಪಸ್​ ಮಾಡಿದ್ದ ಸಿದ್ದರಾಮಯ್ಯ?

‘ಪ್ರೀತಿಯ ಸಾವೇ.. ನನ್ನ ಜೀವನದಲ್ಲಿ ಬಾ’; ಐಪಿಎಸ್​ ಅಧಿಕಾರಿಯ ಹತ್ಯೆಗೆ ಟ್ವಿಸ್ಟ್​- ಆರೋಪಿ ಡೈರಿಯಲ್ಲಿ ವಿಚಿತ್ರ ಬರಹ

ಅಕ್ರಮ ಹಣ ವರ್ಗಾವಣೆ: ಮಾಜಿ ಸಚಿವ ದೇಶ್​ಮುಖ್​ಗೆ ಜಾಮೀನು- ಆದರೂ ಇಲ್ಲ ಬಿಡುಗಡೆಯ ಭಾಗ್ಯ!

Share This Article