ದನಿ ಕೇಳಿಯೇ ಲವ್​ ಆಯ್ತು ಎಂದು ರಾತ್ರಿಯಿಡೀ ನಿದ್ದೆಗೆಡಿಸುತ್ತಾನೆ- ಅವನ ಮನಸ್ಸು ತಿಳಿಯುವುದು ಹೇಗೆ?

ದನಿ ಕೇಳಿಯೇ ಲವ್​ ಆಯ್ತು ಎಂದು ರಾತ್ರಿಯಿಡೀ ನಿದ್ದೆಗೆಡಿಸುತ್ತಾನೆ- ಅವನ ಮನಸ್ಸು ತಿಳಿಯುವುದು ಹೇಗೆ?ನಾನು ಬಿ.ಇ ಓದುತ್ತಿರುವ ವಿದ್ಯಾರ್ಥಿನಿ. ಈಗ್ಗೆ ಎರಡು ತಿಂಗಳ ಹಿಂದೆ ನನ್ನ ಮೊಬೈಲ್​ಗೆ ಒಂದು ಕಾಲ್ ಬಂತು. ನಂತರ ಅದು ಯಾರಿಂದಲೋ ಬಂದ ಮಿಸ್ಡ್ ಕಾಲ್ ಎಂದು ತಿಳಿಯಿತು. ಮತ್ತೆ ಅದೇ ನಂಬರಿನಿಂದ ಕರೆ ಬಂತು. ಹೀಗೇ ಪದೇ ಪದೇ ಆಗಿ ಆ 21ವರ್ಷದ ಹುಡುಗ ನನ್ನ ಫ್ರೆಂಡ್ ಆದ. ಈ ನಮ್ಮ ಸ್ನೇಹ, ಮೆಸೇಜ್​ಗಳಲ್ಲಿ ಮುಂದುವರಿಯಿತು. ನಾವಿಬ್ಬರೂ ಇನ್ನೂ ಭೇಟಿಯೇ ಮಾಡಿಲ್ಲ. ಒಂದು ರಾತ್ರಿ ಆ ಹುಡುಗ ಫೋನ್ ಮಾಡಿ ಮೊದಲ ಬಾರಿ ನಿನ್ನ ವಾಯ್ಸ್ ಕೇಳಿದಾಗಲೇ ನನಗೆ ನಿನ್ನ ಮೇಲೆ ಪ್ರೀತಿ ಹುಟ್ಟಿತು. ನೀನು ನನ್ನನ್ನು ಮದುವೆಯಾಗುತ್ತೀಯಾ ? ಅಂತ ಕೇಳಿದ. ನಾನು ಏನೂ ಹೇಳಲಿಲ್ಲ.


ಮತ್ತೆ ಅವನೇ ಬೆಳಗ್ಗೆ ಫೋನ್ ಮಾಡಿ ರಾತ್ರಿ ನನ್ನ ಮೂಡ್ ಹಾಳಾಗಿತ್ತು. ಅದಕ್ಕೇ ಏನೇನೋ ಮಾತಾಡಿಬಿಟ್ಟೆ. ನನಗೇನೂ ನಿನ್ನ ಕಂಡರೆ ಅಂಥ ಯಾವ ಭಾವನೆಗಳೂ ಇಲ್ಲ ಎಂದ. ನಾನು ಅವನನ್ನು ಕೇವಲ ನನ್ನ ಗೆಳೆಯನೆಂದೇ ಭಾವಿಸಿದೆ. ಮತ್ತೆ ಕೆಲವು ದಿನದ ನಂತರ ರಾತ್ರಿ ಹೊತ್ತು ಅದೇ ರೀತಿ ಮದುವೆಯ ಮಾತೆತ್ತಿದ. ಮರುದಿನ ರಾತ್ರಿ ಮೂಡ್ ಸರಿಯಿರಲಿಲ್ಲವೆಂದ! ನನಗೀಗ ಇವನದೇ ಚಿಂತೆಯಾಗಿದೆ. ಅವನೇನು ನನ್ನನ್ನು ಪ್ರೀತಿಸುತ್ತಾನೋ ಇಲ್ಲವೋ ಗೊತ್ತಾಗುತ್ತಿಲ್ಲ. ಅದನ್ನು ಹೇಗೆ ತಿಳಿಯಲಿ?

ಉತ್ತರ: ನಾನು ಇಂಥಾ ಹಲವಾರು ಪತ್ರಗಳಿಗೆ ಇದೇ ಅಂಕಣದಲ್ಲಿ ಉತ್ತರಿಸಿದ್ದೇನೆ. ಆದರೂ ಮತ್ತೆ ಮತ್ತೆ ಉತ್ತರಿಸುತ್ತೇನೆ. ಏಕೆಂದರೆ ಇಂದಿನ ಯುವ ಪೀಳಿಗೆಯಲ್ಲಿ ಈ ಫೋನುಗಳ ಕಾರಣದಿಂದ ಉಂಟಾಗುತ್ತಿರುವ ಕ್ಷೋಭೆ ದಿನದಿನಕ್ಕೂ ಹೆಚ್ಚುತ್ತಿದೆೆ. ನಾನು ಪದೇ ಪದೇ ಲೈಫ್ ಸ್ಕಿಲ್ ಬಗ್ಗೆಯೂ ಬರೆಯುತ್ತಿರುತ್ತೇನೆ. ಇಂದಿನ ವಿದ್ಯಾಭ್ಯಾಸದ ಕ್ರಮದಲ್ಲಿ ಮೆದುಳೊಂದು ಮಾಹಿತಿ ಕೇಂದ್ರವಾಗುತ್ತಿದೆಯೇ ವಿನಾ ಕಾಮನ್​ಸೆನ್ಸ್ ಎನ್ನುವುದನ್ನು ಬೆಳೆಸುತ್ತಿಲ್ಲ. ಇಂದಿನ ಯುವ ಪೀಳಿಗೆಯೂ ತಮ್ಮದೇ ಸ್ವಾರ್ಥದಲ್ಲಿ ಮುಳುಗಿ ಹೊರ ಜಗತ್ತಿನಲ್ಲಿನ ವ್ಯವಹಾರಗಳನ್ನು ಗಮನಿಸುತ್ತಾ ಕಾಮನ್​ಸೆನ್ಸ್ ಬೆಳೆಸಿಕೊಳ್ಳುತ್ತಿಲ್ಲ. ಈ ಕಾರಣದಿಂದಲೇ ದಿಕ್ಕುದೆಸೆಯಿಲ್ಲದೇ ಹೈರಾಣಾಗುತ್ತಿದೆ. ಗಹನವಾಗಿ ಯೋಚಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿದೆ. ಈ ವಯಸ್ಸಿನಲ್ಲಿ ಹೀಗಾಗುತ್ತದೆ ಎಂದು ನಾನು ಹೇಳುತ್ತೇನೆಂದು ನೀವು ಬರೆದಿದ್ದೀರಿ. ಖಂಡಿತಾ ನಾನು ಹಾಗೆ ಹೇಳುವುದಿಲ್ಲ. ಬದಲಾಗಿ ಈ ವಯಸ್ಸಿನಲ್ಲಿ ಹೀಗೆಲ್ಲಾ ಆಗಬಾರದು, ನಿಮಗೆ ಕಾಮನ್​ಸೆನ್ಸ್ ಇಲ್ಲದಿದ್ದರೆ ಮಾತ್ರ ಹೀಗಾಗುತ್ತದೆ ಎಂದೇ ಹೇಳುತ್ತೇನೆ. ಈಗ ನಿಮ್ಮದೇ ಪತ್ರವನ್ನು ಉದಾಹರಣೆಯಾಗಿಟ್ಟುಕೊಂಡು ನಿಮ್ಮ ಕಾಮನ್​ಸೆನ್ಸ್ ಕೆಲಸಮಾಡಬೇಕಾದ ಕಡೆಯೆಲ್ಲಾ ಕೆಲಸವನ್ನೇ ಮಾಡದೇ ಹೇಗೆ ಮಲಗಿಬಿಟ್ಟಿದೆಯೆಂದು ಹೇಳುತ್ತೇನೆ ಕೇಳಿ. ನೀವು ಬಿ.ಇ ಓದುತ್ತಿರುವ ಹುಡುಗಿ. ಅಂದರೆ ಜಾಣೆಯೆಂದೇ ನನ್ನ ಲೆಕ್ಕ.

ನೀವು ಕಣ್ಣಿನಿಂದಲೂ ನೋಡದ ಒಬ್ಬ ಮನುಷ್ಯ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದ ಮಾತ್ರಕ್ಕೆ ನೀವು ಹೇಗೆ ನಂಬಿದಿರಿ?
ನಿಮಗೆ ಫೋನ್ ಮಾಡುತ್ತಿರುವವರು ಹುಡುಗನೆಂದೇ ಹೇಗೆ ನಂಬುತ್ತೀರಿ? ಏಕೆಂದರೆ ಪ್ರತಿ ವ್ಯಕ್ತಿಗೂ ಮೂರು ರೀತಿಯ ವಯಸ್ಸು ಇರುತ್ತದೆ. ಒಂದು ದೇಹಕ್ಕಾಗುವ ವಯಸ್ಸು, ಎರಡು ಮನಸ್ಸಿನ ವಯಸ್ಸು, ಮೂರು ಕಂಠದ ವಯಸ್ಸು. ದೇಹಕ್ಕೆ 50 ವಯಸ್ಸಾಗಿದ್ದರೂ ಕಂಠಕ್ಕೆ 20ರ ಬನಿ ಇರಬಹುದು. ಖ್ಯಾತ ಚಲನಚಿತ್ರ ಗಾಯಕಿ ಬಿ.ಆರ್.ಛಾಯಾ ಅವರ ಕಂಠ ಕೇಳಿದ್ದೀರಾ? ಅವರು ಸಣ್ಣ ಹುಡುಗಿಗಾಗಿ ‘ಉಪಾಸನೆ’ ಚಿತ್ರದಲ್ಲಿ ಸಂಪಿಗೆ ಮರದ ಚಿಗುರೆಲೆ ನಡುವೆ ಕೋಗಿಲೆ ಹಾಡಿತ್ತು ಎನ್ನುವ ಹಾಡನ್ನು ಹಾಡಿದ್ದಾರೆ. ನಿಮ್ಮ ಈ ಗೆಳೆಯ 50ರ ಆಸುಪಾಸಿನವನಾಗಿದ್ದು ನಿಮ್ಮ ಜತೆ ಆಟವಾಡುತ್ತಿರಬಹುದಲ್ಲವೇ?

ರಾತ್ರಿ ಮೂಡು ಕೆಡುತ್ತದೆ, ಬೆಳಗ್ಗೆ ಸರಿಹೋಗುತ್ತದೆ ಎಂದು ಹುಚ್ಚುಚ್ಚಾಗಿ ಫೋನ್ ಮಾಡುವವನನ್ನು ಮಾನಸಿಕವಾಗಿ ಆರೋಗ್ಯವಂತನೆಂದು ಹೇಗೆ ನಂಬಿದಿರಿ? ತಲೆ ಕೆಟ್ಟಾಗ ಒಂದು ರೀತಿ ತಲೆ ಸರಿಯಿದ್ದಾಗ ಒಂದು ರೀತಿ ಮಾತಾಡುವವನನ್ನು ಯಾರಾದರೂ ಪ್ರೀತಿಸುತ್ತಾರೆಯೇ?
ಅವನು ನನ್ನನ್ನು ಪ್ರೀತಿಸುತ್ತಾನೋ ಇಲ್ಲವೋ ಎಂದು ತಿಳಿದುಕೊಳ್ಳಬೇಕಾಗಿದೆ ಎಂದು ಬರೆಯುತ್ತೀರಲ್ಲ? ಈ ಕಾಮನ್​ಸೆನ್ಸ್ಗೆ ಏನು ಹೇಳಲಿ? ಕಣ್ಣಿಂದ ನೋಡದ, ತಲೆಕೆಟ್ಟಂತೆ ಮಾತಾಡುವವನು ಪ್ರೀತಿಸಿದರೆಷ್ಟು ಬಿಟ್ಟರೆಷ್ಟು? ನಿಮ್ಮಂಥಾ ಜಾಣೆಯರು ಇಂಥಾ ಸ್ನೇಹಗಳನ್ನು ನಿವಾರಿಸಿಕೊಂಡು ಮುಕ್ತರಾಗುವ ಬಗ್ಗೆ ಯೋಚಿಸ ಬೇಕು. ಅದೇ ನಿಮ್ಮ ಸೇಫ್ಟಿ. ಅದು ಬಿಟ್ಟು ಪ್ರೀತಿಸುತ್ತಾನೋ ಇಲ್ಲವೋ ಎಂದು ತಳಮಳ ಪಡುವುದು ನಿಮಗೆ ಮಾನಸಿಕವಾಗಿಯೂ ಸೇಫ್ಟಿ ಅಲ್ಲ.

ಈಗ ಜಾಣತನದಿಂದ ಮುಂದಿನ ಹೆಜ್ಜೆಗಳನ್ನು ಇಡಿ. ಮತ್ತೊಮ್ಮೆ ಅವನು ಫೋನ್ ಮಾಡಿದಾಗ ವಾಟ್ಸ್​ಆಪ್​ನ ಮೂಲಕ ಕ್ಯಾಮರಾ ಆನ್ ಮಾಡಿ ಮಾತಾಡಲು ತಿಳಿಸಿ. ಅವನ ಮೋರೆಯನ್ನಷ್ಟು ನೋಡಿ. ಅವನು ಮುದುಕನೋ ಹುಡುಗನೋ ಪತ್ತೆ ಮಾಡಿ. ಅವನು ನಿಜಕ್ಕೂ ಹುಡುಗನಾಗಿದ್ದರೂ ರಾತ್ರಿಯೊಂದು ರೀತಿ, ಬೆಳಗ್ಗೆ ಒಂದು ರೀತಿ ಮಾತಾಡುವ ನಿನ್ನ ಸ್ನೇಹವೂ ನನಗೆ ಬೇಡವೆಂದು ತಿಳಿಸಿ. ಅವನಿಗಿನ್ನೂ 21 ವರ್ಷವೆಂದು ಬರೆದಿದ್ದೀರಿ. ಈ ವಯಸ್ಸಿಗೆ ಗಂಡುಮಕ್ಕಳಿಗೆ ಇನ್ನೂ ಬುದ್ಧಿ ಪ್ರೌಢವಾಗಿರುವುದಿಲ್ಲ. ಮಕ್ಕಳಂತಾಡುವ ಇಂಥವರನ್ನು ಕಟ್ಟಿಕೊಂಡು ಬದುಕುವುದು ಕಷ್ಟ. ನಿಮ್ಮ ವಯಸ್ಸೂ ಚಿಕ್ಕದಿದೆ. ನಿಮ್ಮ ಮುಂದೆ ವಿದ್ಯಾಭ್ಯಾಸದ ಗುರಿಯಿದೆ. ಅದರ ಕಡೆ ಗಮನ ಹರಿಸಿ. ನಿಮಗಿನ್ನೂ ಬದುಕು ವಿಶಾಲವಾಗಿ ತೆರೆದಿದೆ. ಈಗಿನಿಂದಲೇ ಏಕೆ ಸ್ನೇಹ, ಸಖ, ಪ್ರಿಯಕರ ಎಂದೆಲ್ಲಾ ಹಲಬುತ್ತೀರಿ? 30ವರ್ಷದ ನಂತರ ಓದುವುದು ಕಷ್ಟವಾಗುತ್ತದೆ. ಆದರೆ ಆಗ ಸಖನನ್ನೋ, ಪ್ರಿಯಕರನನ್ನೋ ಖಂಡಿತಾ ಪಡೆಯಬಹುದು. ಇಂಗ್ಲಿಷಿನ ಒಂದು ಸಣ್ಣ ನರ್ಸರಿ ರೈಮ್ ಕೇಳಿದ್ದೀರಾ? work while you work, play while you play, that is the game of happy and gay ಎಂದಿದ್ದಾನೆ ಕವಿ. ಯಾವಯಾವ ವಯಸ್ಸಿನಲ್ಲಿ ಏನೇನು ಮಾಡಬೇಕೋ ಅದನ್ನಷ್ಟೆ ಮಾಡಿದರೆ ಬದುಕು ಎನ್ನುವ ಈ ಆಟದಲ್ಲಿ ಸುಖ ಸಂತೋಷಗಳು ಹೆಚ್ಚುತ್ತವೆ. ನೀವೀಗ ನಿಮ್ಮವಿದ್ಯೆಯ ಕಡೆ ನಂತರ ಉದ್ಯೋಗದ ಕಡೆ ಗಮನ ಕೊಡಿ ಸಾಕು. ಮಿಕ್ಕಿದ್ದೆಲ್ಲಾ ಮುಂದೆ ತಾನಾಗಿಯೇ ಲಭಿಸುತ್ತದೆ.

ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಕ್ಲಿಕ್ಕಿಸಿ:

https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

ಪತಿಗೆ ಬ್ಲೂಫಿಲಂ ನೋಡುವ ಚಟ- ಮಧ್ಯರಾತ್ರಿಯೂ ಎದ್ದು ವೀಕ್ಷಿಸುತ್ತಾರೆ, ಇದನ್ನು ತಪ್ಪಿಸುವುದು ಹೇಗೆ?

ಅವನಿಗೆ ಅರ್ಪಿಸಿಕೊಂಡಿರುವೆ, ಮನೆಯವರಿಗೆ ತಿಳಿದರೆ ಕೊಂದೇ ಬಿಡುತ್ತಾರೆ, ಓಡಿ ಹೋಗಲೆ?

ಪತ್ನಿ ತುಂಬಾ ಚೆಲ್ಲುಚೆಲ್ಲು, ಹುಟ್ಟುವ ಮಗುವಿನ ಡಿಎನ್​ಎ ಪರೀಕ್ಷೆ ಮಾಡಿಸಬಹುದಾ?

ಒಂದೆಡೆ ಮಾಜಿ ಗಂಡ, ಇನ್ನೊಂದೆಡೆ ಪ್ರೇಮಿ, ಮತ್ತೊಂದೆಡೆ ಕುಟುಂಬದವರು… ಯಾರನ್ನು ಆರಿಸಲಿ?

ಅವಳ ಕೈಬಿಡಲಾರೆ, ಆದ್ರೆ ಮದ್ವೆಯಾದರೆ ಸಾಯ್ತೇನೆ ಅಂತಿದ್ದಾರೆ ಅಮ್ಮ- ಪ್ಲೀಸ್​ ಪರಿಹಾರ ಹೇಳಿ…

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…