ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಗ್ಯದಲ್ಲಿ ವಿಪರೀತ ಏರುಪೇರಾಗಿರುವ ಹಿನ್ನೆಲೆಯಲ್ಲಿ ಐಸಿಯುಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ.
ಶ್ರೀಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬೆಳಗ್ಗೆ ಜೈಲಿನ ಸಿಬ್ಬಂದಿ ಉಪಾಹಾರಕ್ಕೆಂದು ಉಪ್ಪಿಟ್ಟು ಮತ್ತು ಹಾಲನ್ನು ನೀಡಿದ್ದರು. ಹಾಲನ್ನಷ್ಟೇ ಸೇವನೆ ಮಾಡಿದ ಶ್ರೀಗಳು ಉಪ್ಪಿಟ್ಟನ್ನು ನಿರಾಕರಿಸಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಅವರ ಆರೋಗ್ಯದಲ್ಲಿ ಏರುಪೇರಾಗಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಜೈಲಿನ ಸಿಬ್ಬಂದಿ ಜಿಲ್ಲಾ ಶಸಸ್ತ್ರ ಮೀಸಲು ಪೊಲೀಸ್ ಪಡೆ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋದರು.
ಇಂದು ನಸುಕಿನ 3 ಗಂಟೆ ಸುಮಾರಿಗೆ ಅವರು ಜೈಲಿಗೆ ಬಂದಿದ್ದ ಕಾರಣ ಸರಿಯಾಗಿ ನಿದ್ದೆ ಮಾಡಿರಲಿಲ್ಲ, ಇದರಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗುತ್ತಿದೆ. ಮುರುಘಾ ಶ್ರೀಗಳಿಗೆ ವೈದ್ಯರು ಮೇಲಿಂದ ಮೇಲೆ ಇಸಿಜಿ ಹಾಗೂ ಎಕೋ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣದಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲು ತಯಾರಿ ನಡೆಸಲಾಗುತ್ತಿದೆ.
ಸದ್ಯ ವೈದ್ಯರಾದ ರೂಪಾ, ಹೆರಿಗೆ ತಜ್ಞರಾ ಡಾ ಶಿವಕುಮಾರ್ ಸೇರಿ ಮೂವರು ವೈದ್ಯರ ನೇತೃತ್ವದಲ್ಲಿ ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಶ್ರೀಗಳಿಗೆ ಉಸಿರಾಟದ ತೊಂದರೆಯೂ ಕಂಡುಬಂದಿರುವುದಾಗಿ ತಿಳಿದಿದೆ. ಹೆಚ್ಚಿನ ಅಗತ್ಯ ಬಿದ್ದರೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸ್ಥಳಾಂತರ ಮಾಡಬಹುದು ಎನ್ನಲಾಗುತ್ತಿದೆ.
ಲೈಂಗಿಕ ದೌರ್ಜನ್ಯ ಆರೋಪ: ಮುರುಘಾಮಠದ ಶ್ರೀಗಳಿಗೆ 14 ದಿನಗಳ ನ್ಯಾಯಾಂಗ ಬಂಧನ
ಬಸವರಾಜನ್ ದಂಪತಿಗೆ ಷರತ್ತುಬದ್ಧ ಜಾಮೀನು: ಮಠದ ಆಡಳಿತಾಧಿಕಾರಿ ಹುದ್ದೆಯಿಂದ ಎಸ್ಕೆಬಿ ಔಟ್