ಎಸ್.ಮೂರ್ತಿ ವಿರುದ್ಧದ ತನಿಖೆ ಚುರುಕು

ಬೆಂಗಳೂರು: ಸುಳ್ಳು ಪ್ರಮಾಣ ಪತ್ರ ನೀಡಿ ಸರ್ಕಾರಕ್ಕೆ ವಂಚಿಸಿರುವ ಆರೋಪ ಎದುರಿಸುತ್ತಿರುವ ರಾಜ್ಯ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ಚುರುಕುಗೊಳಿಸಿದ್ದಾರೆ.

ದುರ್ನಡತೆ ಆರೋಪದಲ್ಲಿ ಎಸ್.ಮೂರ್ತಿ ಅಮಾನತುಗೊಂಡಿದ್ದ ಸಂದರ್ಭದಲ್ಲಿ ಮ್ಯಾಗ್ನಾಕಾರ್ಟ ಹೆಸರಿನ ಸಂಸ್ಥೆ ಆರಂಭಿಸಿ, ಪರಿಶಿಷ್ಟ ಹಾಸ್ಟೆಲ್​ಗಳಿಗೆ ಆಹಾರ ಪೂರೈಕೆ ಮಾಡಿದ್ದಾರೆ. ಆದರೆ ಸೇವೆಗೆ ಮರಳಿದ ಬಳಿಕ ಈ ವಿಚಾರ ಗೌಪ್ಯವಾಗಿಟ್ಟು, ಸರ್ಕಾರಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ವಜಾಗೊಂಡ 7 ವರ್ಷದ ಅವಧಿಯ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಎಸ್.ಮೂರ್ತಿ ವಿರುದ್ಧ ಆರ್​ಟಿಐ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ನ್ಯಾ.ಪಿ. ವಿಶ್ವನಾಥ್ ಶೆಟ್ಟಿ ಪ್ರಕರಣದ ವಿಚಾರಣೆ ನಡೆಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದರು.

ಪ್ರಕರಣ ಏನು?: ಎಸ್. ಮೂರ್ತಿ ವಿಧಾನಸಭೆ ನೌಕರರಾಗಿದ್ದ ವೇಳೆ ದುರ್ವರ್ತನೆ ಆರೋಪದಡಿ ಅವರನ್ನು ವಜಾಗೊಳಿಸಲಾಗಿತ್ತು. ಆದರೆ, ಮೂರ್ತಿ ಹೈಕೋರ್ಟ್ ಮೊರೆ ಹೋಗಿ 2012ರಲ್ಲಿ ಮತ್ತೆ ಸೇವೆಗೆ ಸೇರಿಕೊಂಡಿದ್ದರು. ಈ ಅವಧಿಯಲ್ಲಿ ಮ್ಯಾಗ್ನಾಕಾರ್ಟ ಹೆಸರಿನ ಸಂಸ್ಥೆ ಆರಂಭಿಸಿ, ವಿದ್ಯಾರ್ಥಿ ನಿಲಯಗಳಿಗೆ ಆಹಾರ ಪದಾರ್ಥ ಮತ್ತು ಬೇಳೆ ಕಾಳುಗಳನ್ನು ಪೂರೈಸಿದ್ದರು. ಸರ್ಕಾರಿ ನೌಕರರ ಕುಟುಂಬ ಸದಸ್ಯರು ವ್ಯಾಪಾರ ಅಥವಾ ವ್ಯವಹಾರದಲ್ಲಿ ತೊಡಗಿದರೆ ನಾಗರಿಕ ಸೇವಾ ನಿಯಮದನ್ವಯ ಸರ್ಕಾರಕ್ಕೆ ತಿಳಿಸಬೇಕು. ಆದರೆ, ಎಸ್.ಮೂರ್ತಿ 2012ರಲ್ಲಿ ಮ್ಯಾಗ್ನಾಕಾರ್ಟ ಪತ್ನಿ ಒಡೆತನಕ್ಕೆ ಸೇರಿದ್ದು ಎಂದು ಸರ್ಕಾರಕ್ಕೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಕೈತಪ್ಪಿದ ಅಧಿವೇಶನದ ಕರ್ತವ್ಯ?

ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ನ.16ರಿಂದ 26ರವರೆಗೆ ರಜೆ ಮೇಲೆ ಕಳಿಸಲಾಗಿದ್ದು, ಪ್ರಭಾರಿ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರೇ ಡಿಸೆಂಬರ್ 10ರಂದು ಆರಂಭವಾಗಲಿರುವ ಬೆಳಗಾವಿ ವಿಧಾನಸಭೆ ಅಧಿವೇಶನ ಕುರಿತಂತೆ ನೋಟಿಸ್ ಜಾರಿ ಮಾಡಿದ್ದಾರೆ. ಈ ತನಕ ಹಣಕಾಸು ಹಾಗೂ ಆಡಳಿತಾತ್ಮಕ ಅಧಿಕಾರಗಳನ್ನು ಮಾತ್ರ ಹಿಂದಕ್ಕೆ ಪಡೆದು ಜಂಟಿ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ವಹಿಸಲಾಗಿತ್ತು. ಇದೀಗ ಶಾಸನಸಭೆ ಕರ್ತವ್ಯಗಳನ್ನು ಸಹಿತ ಮೂರ್ತಿ ಅವರಿಂದ ಕಿತ್ತುಕೊಳ್ಳಲಾಗಿದ್ದು, ಎಲ್ಲ ಜವಾಬ್ದಾರಿಗಳು ಕೈತಪ್ಪಿದಂತಾಗಿದೆ. ಹೀಗಾಗಿ ಡಿಸೆಂಬರ್ 10ರಿಂದ 21ರವರೆಗೆ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಕಾರ್ಯದರ್ಶಿ ಮೂರ್ತಿ ಪಾಲ್ಗೊಳ್ಳುವರೆ? ಪಾಲ್ಗೊಂಡರೆ ಯಾವ ಜವಾಬ್ದಾರಿಗಳನ್ನು ನಿರ್ವಹಿಸುವರು ಎಂಬ ಕುತೂಹಲ ಉಂಟಾಗಿದೆ. ಮೂರ್ತಿ ಅಧಿಕಾರವನ್ನು ಹಠಾತ್ ವಾಪಸ್ ಪಡೆದಿರುವುದು ಹಾಗೂ ವಿಧಾನಸಭೆ ಸಚಿವಾಲಯದಲ್ಲಿ ಇತ್ತೀಚಿನ ಬೆಳವಣಿಗೆಗಳು ಭಾರಿ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಸಭೆ ನಡೆಸಿ, ಸಚಿವಾಲಯದಲ್ಲಿನ ಬೆಳವಣಿಗೆಗಳ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡದಂತೆ ತಾಕೀತು ಮಾಡಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.