More

    ಭಾರತಕ್ಕೆ ಎಸ್- 400 ರಕ್ಷಣಾ ಕವಚ

    ನವದೆಹಲಿ: ಭಾರತದ ಜತೆ ಒಪ್ಪಂದ ಮಾಡಿಕೊಂಡಿರುವಂತೆ ಅತ್ಯಾಧುನಿಕ ಎಸ್-400 ಟ್ರಯಂಫ್ ಕ್ಷಿಪಣಿ ನಿರೋಧಕ ವ್ಯವಸ್ಥೆ ತಯಾರಿಕೆ ಆರಂಭವಾಗಿದ್ದು, 2025ರ ವೇಳೆಗೆ ಹಸ್ತಾಂತರಿಸಲಾಗುತ್ತದೆ ಎಂದು ರಷ್ಯಾದ ರಾಜತಾಂತ್ರಿಕ ಅಧಿಕಾರಿ ರೋಮನ್ ಬಾಬುಷ್ಕಿನ್ ಶುಕ್ರವಾರ ಮಾಹಿತಿ ನೀಡಿದ್ದಾರೆ.

    37 ಸಾವಿರ ಕೋಟಿ ರೂಪಾಯಿ ಮೊತ್ತದ ಎಲ್ಲ ಐದು ಎಸ್-400 ಟ್ರಯಂಫ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು 2025ರ ವೇಳೆಗೆ ಹಸ್ತಾಂತರಿಸುತ್ತೇವೆ. ಈಗಾಗಲೇ ಭಾರತದಲ್ಲಿ ಅವುಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ರಷ್ಯಾ ವಿಶ್ವದಲ್ಲೇ ಅತ್ಯುತ್ತಮ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ಇದು ಭಾರತದ ರಕ್ಷಣಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಬಾಬುಷ್ಕಿನ್ ಹೇಳಿದ್ದಾರೆ. ಎಸ್-400 ಮೂಲಕ ಭಾರತೀಯ ಸೇನೆಗೆ ಭಾರಿ ಬಲ ದೊರೆಯಲಿದ್ದು, ಪಾಕಿಸ್ತಾನ ಆತಂಕ ಮತ್ತಷ್ಟು ಉಲ್ಬಣಗೊಂಡಿದೆ.

    ರಷ್ಯಾದ ಸರ್ಕಾರಿ ಕಂಪನಿ ಅಲ್ಮಾಜ್-ಆಂಟಿ ನಿರ್ವಿುಸುವ ಎಸ್-400 ಟ್ರಯಂಫ್ ಕ್ಷಿಪಣಿ ನಿರೋಧಕ ವ್ಯವಸ್ಥೆ ಈ ಮೊದಲು ರಷ್ಯಾಗೆ ಮಾತ್ರ ಸೀಮಿತವಾಗಿತ್ತು. 2014ರ ಬಳಿಕ ವಿದೇಶಗಳಿಗೆ ಇದನ್ನು ಮಾರಾಟ ಮಾಡಲು ಪ್ರಾರಂಭಿಸಲಾಯಿತು. ಚೀನಾ, ರಷ್ಯಾದಿಂದ ಈ ರಕ್ಷಣಾ ವ್ಯವಸ್ಥೆ ಪಡೆದುಕೊಂಡ ಮೊದಲ ರಾಷ್ಟ್ರವಾಗಿದೆ. 2018ರ ಅಕ್ಟೋಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುತಿನ್ ಜತೆ ಚರ್ಚೆ ನಡೆಸಿ, ಭಾರತಕ್ಕೆ ಎಸ್-400 ರಕ್ಷಣಾ ವ್ಯವಸ್ಥೆ ಖರೀದಿಗೆ ಹಸಿರುನಿಶಾನೆ ತೋರಿದ್ದರು.

    ಕಾಶ್ಮೀರ ದ್ವಿಪಕ್ಷೀಯ ವಿಷಯ

    ಜಮ್ಮು- ಕಾಶ್ಮೀರ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ವಿಷಯ. ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್​ಎಸ್​ಸಿ) ಮುಂದೆ ತರುವುದಕ್ಕೆ ರಷ್ಯಾ ಎಂದೂ ಸಹಮತ ವ್ಯಕ್ತಪಡಿಸಿಲ್ಲ ಎಂದು ರಷ್ಯಾದ ಭಾರತ ರಾಯಭಾರಿ ನಿಕೋಲೆ ಖುದುಶೇವ್ ಹೇಳಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿದೇಶಿ ರಾಯಭಾರಿಗಳ ತಂಡದ ಜತೆ ಬರಲು ಭಾರತ ಆಮಂತ್ರಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕಾಶ್ಮೀರದ ಬಗ್ಗೆ ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ಅನುಮಾನ ಇರುವವರು ಅಲ್ಲಿಗೆ ಹೋಗಬಹುದು. ಆದರೆ ನಮಗೆ ಯಾವುದೇ ಅನುಮಾನಗಳಿಲ್ಲ. ಹೀಗಾಗಿ ಅಲ್ಲಿಗೆ ಹೋಗಿ ಪರಿಶೀಲನೆ ನಡೆಸುವ ಅವಶ್ಯಕತೆಯಿಲ್ಲ. ಕಾಶ್ಮೀರ ಭಾರತದ ಆಂತರಿಕ ವಿಷಯವಾಗಿದ್ದು, ಪಾಕ್ ಜತೆಗಿರುವ ವಿವಾದ ಅವರ ದ್ವಿಪಕ್ಷೀಯ ವಿಚಾರ. ಕಾಶ್ಮೀರದಲ್ಲಿನ ಕ್ರಮಗಳ ಬಗ್ಗೆ ಹಾಗೂ ಅಲ್ಲಿನ ಸಮಸ್ಯೆಗಳನ್ನು ನಂಬುವವರು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಬಹುದು. ಭಾರತ ನನ್ನನ್ನು ಆಹ್ವಾನಿಸಿದರೆ ನಾನು ಹೋಗುತ್ತೇನೆ, ಆದರೆ ಸ್ನೇಹಿತನಾಗಿ ಮಾತ್ರ’ ಎಂದು ನಿಕೋಲೆ ತಿಳಿಸಿದ್ದಾರೆ.

    ಪಾಕ್​ಗೆ ನಡುಕ

    ಭಾರತದ ಮೇಲೆ ಪದೇ ಪದೆ ಪರಮಾಣು ದಾಳಿ ಬೆದರಿಕೆ ಒಡ್ಡುವ ಪಾಕಿಸ್ತಾನಕ್ಕೆ ಭಾರತ ಎಸ್-400 ರಕ್ಷಣಾ ವ್ಯವಸ್ಥೆ ಖರೀದಿಸುತ್ತಿರುವುದರಿಂದ ನಡುಕ ಶುರುವಾಗಿದೆ. ಈಗಾಗಲೇ ಭಾರತೀಯ ಸೇನೆ ಅತ್ಯಂತ ಅಪಾಯಕಾರಿಯಾದ ಚಿನೂಕ್ ಹೆಲಿಕಾಪ್ಟರ್​ಗಳನ್ನು ಪಾಕ್ ಬಳಿಯ ಮುಂಚೂಣಿ ನೆಲೆಗಳಲ್ಲಿ ನಿಯೋಜಿಸಿದೆ. ಅತ್ಯಾಧುನಿಕ ರಫೇಲ್ ಯುದ್ಧವಿಮಾನಗಳು 2022ರ ವೇಳೆಗೆ ಭಾರತಕ್ಕೆ ಬಂದಿಳಿಯಲಿದ್ದು, ವಾಯುಪಡೆ ಬಲವನ್ನು ಮತ್ತಷ್ಟು ಹೆಚ್ಚಿಸಲಿವೆ.

    ಅತ್ಯಂತ ಪ್ರಬಲ ವ್ಯವಸ್ಥೆ ಎಸ್-400 ಟ್ರಯಂಫ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ವಿಶ್ವದಲ್ಲೇ ಅತ್ಯಂತ ಬಲಿಷ್ಠ ಮತ್ತು ಶಕ್ತಿಶಾಲಿ ರಕ್ಷಣಾ ವ್ಯವಸ್ಥೆ ಎಂದು ಪರಿಗಣಿಸಲಾಗುತ್ತದೆ. ಈ ಹಿಂದಿನ ಎಸ್-300 ಉನ್ನತೀಕರಿಸಿ ಎಸ್-400 ಎಂಬ ಆಕ್ರಮಣಕಾರಿ ರಕ್ಷಣಾ ವ್ಯವಸ್ಥೆಯನ್ನು ರಷ್ಯಾ ತಯಾರಿಸಿದೆ. ಇದರ ಮೂಲಕ ಸುಮಾರು 400 ಕಿಮೀ ದೂರದಲ್ಲಿರುವ ಶತ್ರುಪಡೆಯ ವಿಮಾನಗಳು, ಕ್ಷಿಪಣಿ ಹಾಗೂ ಪರಮಾಣು ಕ್ಷಿಪಣಿಗಳನ್ನೂ ಹೊಡೆದುರುಳಿಸಬಹುದಾಗಿದೆ. ಇದರಲ್ಲಿ ಮಿಸೈಲ್ ಲಾಂಚರ್, ರೆಡಾರ್ ಮತ್ತು ಕಮಾಂಡ್ ಸೆಂಟರ್ ಇರುತ್ತದೆ. ಅತ್ಯಾಧುನಿಕ ರೆಡಾರ್ ವ್ಯವಸ್ಥೆಯಿಂದಾಗಿ 400 ಕಿಮೀ ದೂರದಿಂದಲೇ ಆಕಾಶದಲ್ಲಿರುವ ವಸ್ತು ಯಾವುದು ಎಂಬುದನ್ನು ಪತ್ತೆಹಚ್ಚಬಹುದು. ಎಂಥದ್ದೇ ಅತ್ಯಾಧುನಿಕ ಯುದ್ಧವಿಮಾನವಾದರೂ ಎಸ್-400 ರಕ್ಷಣಾ ವ್ಯವಸ್ಥೆಯನ್ನು ಎದುರಿಸಲು ಅಸಮರ್ಥವಾಗಿರುತ್ತದೆ. ಶತ್ರುಪಡೆಗಳು ವಾಯು ಮಾರ್ಗದ ಮೂಲಕ ಯಾವುದೇ ರೀತಿಯಲ್ಲಿ ದಾಳಿಗೆ ಯತ್ನಿಸಿದರೂ ಕೂಡ ಈ ವ್ಯವಸ್ಥೆ ಅವುಗಳೆಲ್ಲವನ್ನೂ ನಿಷ್ಕ್ರಿಯಗೊಳಿಸುತ್ತದೆ. ಎಸ್-400ನಲ್ಲಿರುವ ಮಿಸೈಲ್ ಲಾಂಚರ್ ಮೂಲಕ ಪ್ರತಿ ದಾಳಿ ನಡೆಸಬಹುದಾಗಿದೆ.

    ಅಮೆರಿಕದಿಂದ ನಿರ್ಬಂಧ ಭೀತಿ

    ರಷ್ಯಾದ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಲು ಭಾರತಕ್ಕೆ ಅಮೆರಿಕದ ನಿರ್ಬಂಧ ಭೀತಿಯೂ ಇದೆ. ರಷ್ಯಾದಿಂದ ಈ ವ್ಯವಸ್ಥೆ ಖರೀದಿಸುವುದು ಅಮೆರಿಕ-ಭಾರತ ನಡುವಿನ ರಕ್ಷಣಾ ಸಂಬಂಧಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ ಎಂದು ಈ ಹಿಂದೆಯೇ ಟ್ರಂಪ್ ಆಡಳಿತ ಎಚ್ಚರಿಕೆ ನೀಡಿತ್ತು. ಅಲ್ಲದೇ ರಷ್ಯಾ ಜತೆಗಿನ ಎಸ್-400 ಟ್ರಯಂಫ್ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿ ಒಪ್ಪಂದದ ಬದಲಾಗಿ ಪರ್ಯಾಯ ಮಿಲಿಟರಿ ವ್ಯವಸ್ಥೆ ನೀಡಲು ಸಿದ್ಧವಿದ್ದೇವೆ ಎಂದು ಅಮೆರಿಕ ಕೂಡ ಹೇಳಿತ್ತು. ರಷ್ಯಾ ಒಪ್ಪಂದದಿಂದ ಹಿಂದೆ ಸರಿಯುವಂತೆ ಭಾರತದ ಮೇಲೆ ನಾವು ಒತ್ತಡ ಹೇರುತ್ತಿಲ್ಲ. ಆದರೆ ಎಸ್-400ಗಿಂತ ಬಲಶಾಲಿ ಮತ್ತು ಅಧಿಕ ಸಾಮರ್ಥ್ಯದ ವ್ಯವಸ್ಥೆ ನೀಡಲು ಸಿದ್ಧರಿದ್ದೇವೆ ಎಂದಿತ್ತು. ಅಮೆರಿಕದಲ್ಲಿನ ಲಾಕ್​ಹೀಡ್ ಮಾರ್ಟಿನ್ ಕಂಪನಿಯಲ್ಲಿ ನಿರ್ವಣಗೊಂಡಿರುವ ‘ಥಾಡ್’ವ್ಯವಸ್ಥೆ (ಅತಿ ಎತ್ತರದಲ್ಲಿಯೇ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ) ಮತ್ತು ರೇಯ್ಥಿಯೋನ್​ನ ಪ್ಯಾಟ್ರಿಯಾಟ್ ವ್ಯವಸ್ಥೆಗಳನ್ನು ಭಾರತಕ್ಕೆ ನೀಡಲು ಅಮೆರಿಕ ಪ್ರಸ್ತಾವನೆ ನೀಡಿತ್ತಾದರೂ, ಭಾರತ ರಷ್ಯಾದೊಂದಿಗಿನ ಒಪ್ಪಂದವನ್ನು ಮುಂದುವರಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts