ಜೆಡಿಎಸ್​ ಅಭ್ಯರ್ಥಿ ಆಯ್ಕೆ ನೋವು ತಂದಿದೆ, ಆದರೂ ಹೈಕಮಾಂಡ್​ ನಿರ್ಧಾರ ಗೌರವಿಸುವೆ ಎಂದ ಆರ್​.ವಿ.ದೇಶಪಾಂಡೆ

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್​ನ ಆನಂದ್​ ಅಸ್ನೋಟಿಕರ್​ ಅವರಿಗೆ ಟಿಕೆಟ್​ ನೀಡಿದ್ದರ ಬಗ್ಗೆ ಒಳಗೊಳಗೇ ಅಸಮಾಧಾನಗೊಂಡಿರುವ ಕಂದಾಯ ಸಚಿವ ಆರ್​. ವಿ.ದೇಶಪಾಂಡೆ ಮತ್ತು ಕೈ ಕಾರ್ಯಕರ್ತರ ಮನವೊಲಿಕೆಗೆ ಜೆಡಿಎಸ್​ ಮುಂದಾಗಿದೆ.

ಶಿರಸಿಯಲ್ಲಿ ಇಂದು ಕಾಂಗ್ರೆಸ್​ನೊಂದಿಗೆ ಸಭೆ ನಡೆಸಿದ ಜೆಡಿಎಸ್​ ಮುಖಂಡರು, ಕಾರ್ಯಕರ್ತರು ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದರು. ಈ ಜಿಲ್ಲೆಯಲ್ಲಿ ಬಲವಾಗಿ ಬೇರೂರಿರುವ ಕಾಂಗ್ರೆಸ್​ನ ಬೆಂಬಲ ಸಂಪೂರ್ಣವಾಗಿ ಜೆಡಿಎಸ್​ಗೆ ನೀಡಿ ಎಂದು ಕಂದಾಯ ಸಚಿವ ಆರ್​.ವಿ.ದೇಶಪಾಂಡೆ, ಶಾಸಕ ಶಿವರಾಮ ಹೆಬ್ಬಾರ್​ ಬಳಿ ವಿನಂತಿ ಮಾಡಿಕೊಂಡಿದ್ದಾರೆ.

ನನಗೆ ನೋವಾಗಿದೆ, ಹೆಚ್ಚೇನೂ ಹೇಳುವುದಿಲ್ಲ
ಆದರೂ ಈ ಬಾರಿ ಲೋಕಸಭಾ ಚುನಾವಣೆ ಟಿಕೆಟ್​ ಕೈತಪ್ಪಿದ್ದಕ್ಕೆ ನನಗೆ ನೋವಾಗಿದೆ ಎಂದು ಆರ್​. ವಿ.ದೇಶಪಾಂಡೆ ಹೇಳಿದ್ದಾರೆ.

ಮೊದಲು ನಡೆದ ಕಾಂಗ್ರೆಸ್​ ಸಭೆಯಲ್ಲಿ ಮಾತನಾಡಿದ ಅವರು, ನಾನು ಈ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುತ್ತೇನೆ ಎಂದು ಸಾರ್ವಜನಿಕರಿಗೆ ಮಾತುಕೊಟ್ಟಿದ್ದೆ. ಆದರೆ, ಹೈಕಮಾಂಡ್​ ನಿರ್ಧಾರವನ್ನು ಗೌರವಿಸಲೇಬೇಕು. ಹಾಗಂತ ನಮ್ಮ ಪಕ್ಷದ ಯಾವೊಬ್ಬ ಕಾರ್ಯಕರ್ತನಿಗೆ ನೋವಾದರೂ ಸಹಿಸುವುದಿಲ್ಲ ಎಂದರು.

ಬಿಜೆಪಿಯನ್ನು ಸೋಲಿಸುವ ಶಕ್ತಿ ಕಾಂಗ್ರೆಸ್​ಗೆ ಇದೆ ಎಂಬುದು ಸತ್ಯ. ಸಾಕಷ್ಟು ರಾಜಕೀಯ ಮಾಡಿದ್ದರೂ ಇಂಥ ಸಂದಿಗ್ಧ ಸ್ಥಿತಿ ಬಂದಿರಲಿಲ್ಲ. ಬೇರೇ ಏನೂ ಹೇಳುವ ಮನಸು ಇಲ್ಲ. ಮನಸ್ಥಿತಿಯಲ್ಲೂ ನಾನಿಲ್ಲ. ಈ ವಿಚಾರವಾಗಿ ಸಾರ್ವಜನಿಕರ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *