More

    ಸಮ್ಮತಿ ಕಾಯ್ದೆ ರೂವಾರಿ ರುಕ್ಮಾಬಾಯಿ

    ಗಂಡನನ್ನಾದರೂ ಬಿಟ್ಟೇನು, ಜೈಲಿಗಾದರೂ ಹೋದೇನು, ಶಿಕ್ಷಣ ಬಿಡೆನು ಎಂದು ನ್ಯಾಯಾಧೀಶರೆದುರು ವಾದಿಸಿ, ಇಡೀ ದೇಶವೇ ನಿಬ್ಬೆರಗಾಗುವಂತೆ ಮಾಡಿ ಮದುವೆಗೆ ಹೆಣ್ಣಿನ ಸಮ್ಮತಿಯೂ ಮುಖ್ಯ ಎಂಬ ಕಾನೂನನ್ನು ಜಾರಿಯಾಗುವಂತೆ ಮಾಡಿದ ಭಾರತದ ಮೊದಲ ಮಹಿಳಾ ವೈದ್ಯೆ ರುಕ್ಮಾಬಾಯಿ. ಮಹಿಳೆ ಎಂದರೆ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರಬೇಕೆನ್ನುವ ಕಾಲಘಟ್ಟದಲ್ಲಿಯೇ ಅವರನ್ನು ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡಿದ ಪ್ರಥಮ ಮಹಿಳಾ ಹಕ್ಕು ಪ್ರತಿಪಾದಕಿ ರಮಾಬಾಯಿ ರಾನಡೆ. ಜನವರಿ 25 ರಮಾಬಾಯಿಯವರ ಹುಟ್ಟುಹಬ್ಬವಾದರೆ, ‘ಸಮ್ಮತಿಯ ಕಾಯ್ದೆ’ ಜನ್ಮ ತಳೆದ ತಿಂಗಳಿದು. ಈ ನಿಮಿತ್ತ ಇಬ್ಬರು ಮಹಾ ವನಿತೆಯರ ಜೀವನದ ನೋಟ…

    1891. ಬಾಂಬೆ ಹೈಕೋರ್ಟ್​ನ ಮೇಲೆ ಇಡೀ ದೇಶದ ಕಣ್ಣು ನೆಟ್ಟಿತ್ತು. ಕಾರಣ, ಅಂದು ಕೋರ್ಟ್​ನಲ್ಲಿ ನಡೆದದ್ದು ಗಂಡ-ಹೆಂಡತಿಯ ವಾಗ್ಯುದ್ಧ. ಹೆಂಡತಿ ತಮ್ಮ ಜತೆ ಬಂದು ನೆಲೆಸಬೇಕು ಎಂದು ಗಂಡ ಕೇಸ್ ಹಾಕಿದ್ದರೆ, ನನಗೆ ಗಂಡ ಬೇಡ, ಶಿಕ್ಷಣ ಬೇಕು ಎಂದು ಹೆಂಡತಿ ಪಟ್ಟು ಹಿಡಿದಿದ್ದಳು. ‘ಗಂಡ ಬೇಡದಿದ್ದರೆ, ಜೈಲಿಗೆ ಹೋಗಬೇಕಾಗುತ್ತದೆ’ ಎಂದು ನ್ಯಾಯಮೂರ್ತಿಗಳು ಖಡಕ್ ವಾರ್ನಿಂಗ್ ಕೊಡುತ್ತಿದ್ದರೆ, ‘ಜೈಲಿಗಾದರೂ ಹೋದೇನು, ಶಿಕ್ಷಣ ಬಿಡೆನು’ ಎಂದು ಈ ಹೆಣ್ಣುಮಗಳು ಪಟ್ಟುಹಿಡಿದಿದ್ದಳು…! ಈ ಪ್ರಕರಣವನ್ನು ದಿನನಿತ್ಯ ಪತ್ರಿಕೆಗಳು ವರದಿ ಮಾಡುತ್ತಿದ್ದವು. ಕೊನೆಯ ಹೆಣ್ಣುಮಗಳು ಜಯ ಸಾಧಿಸಿದ್ದು ಮಾತ್ರವಲ್ಲದೇ, ಇಡೀ ದೇಶವೇ ನಿಬ್ಬೆರಗಾಗುವಂತೆ ಹೊಸ ಕಾನೂನು ರೂಪಿಸುವಂತೆ ಮಾಡಿದ್ದಳು.

    ಹೌದು. ಆ ಹೆಣ್ಣು ಮಗಳೇ, ಸ್ವಾತಂತ್ರ್ಯಪೂರ್ವದ ಭಾರತದಲ್ಲಿ ವೈದ್ಯ ವೃತ್ತಿ ನಡೆಸಿದ ಪ್ರಥಮ ಮಹಿಳೆ ಎಂಬ ಖ್ಯಾತಿ ಗಳಿಸಿದ ರುಕ್ಮಾಬಾಯಿ. ಮದುವೆಗೆ ಹುಡುಗ- ಹುಡುಗಿಯ ಸಮ್ಮತಿಯೂ ಬೇಕು ಎಂಬ ‘ಸಮ್ಮತಿಯ ವಯಸ್ಸು ಕಾಯ್ದೆ’ಯ ರೂವಾರಿ ಇವರು.

    ರುಕ್ಮಾಬಾಯಿ… 1875ರಲ್ಲಿ ಈಕೆಯಿನ್ನೂ 11 ವರ್ಷದ ಪುಟ್ಟ ಬಾಲೆ. ಕಣ್ತುಂಬ ಶಿಕ್ಷಣದ ಕನಸು. ಮನೆ ಮಗಳನ್ನು ಹೊರಗೆ ಬಿಡಲು ಪ್ರತಿರೋಧ ಒಡ್ಡುತ್ತಿದ್ದ ದಿನಗಳಲ್ಲಿಯೇ ಈ ಬಾಲೆಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹುಚ್ಚು ಹಂಬಲ. ಆದರೆ ದಾದಾಜಿ ಭಿಕಜಿ ಎಂಬ 19 ವರ್ಷದ ಬಾಲಕನೊಡನೆ ಈಕೆಯ ಮದುವೆ ಮಾಡಿಬಿಟ್ಟರು. ಪತ್ನಿಯ ಓದುವ ಹಂಬಲಕ್ಕೆ ಗಂಡನ ಆಕ್ಷೇಪ. ಈಕೆ ಕೇಳುತ್ತಾಳೆಯೇ? ಓದಲು ಕೊಡದ ಗಂಡನನ್ನೇ ತ್ಯಜಿಸಿ ತವರು ಸೇರಿದಳು! ಊಹಿಸಿಕೊಳ್ಳಿ… ಅದು 18ನೇ ಶತಮಾನ!

    ಇತ್ತ ದಾದಾಜಿ, ಹೆಂಡತಿ ವಾಪಸ್ ಬರಬೇಕೆಂದು ಕೇಳಿ ಕೋರ್ಟ್​ನಲ್ಲಿ ಕೇಸು ಹಾಕಿದ. ಶಿಕ್ಷಣ ಮುಂದುವರಿಸಲು ಕೊಡುವುದಾದರೆ ಮಾತ್ರ ವಾಪಸ್ ಬರುವುದಾಗಿ ಹೇಳಿದಳು ರುಕ್ಮಾಬಾಯಿ. ಅದು ಸಾಧ್ಯವಿಲ್ಲ ಎಂದ ಗಂಡ. ಹೈಕೋರ್ಟ್ ನ್ಯಾಯಮೂರ್ತಿಗಳು ಕೂಡ ‘ಗಂಡನ ಜತೆಗೆ ಹೋಗಬೇಕು ಇಲ್ಲವಾದರೆ ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟುಬಿಟ್ಟರು! ಬಾಲಕಿ ರುಕ್ಮಾಬಾಯಿಗೆ ಅದೆಲ್ಲಿಂದ ಶಕ್ತಿ ಬಂತೋ ಏನೋ… ‘ಮದುವೆಯ ಸಂದರ್ಭದಲ್ಲಿ ನನಗೆ ಸಮ್ಮತಿ ನೀಡುವ ವಯಸ್ಸು ಆಗಿರಲಿಲ್ಲ. ಆದ್ದರಿಂದ ನನ್ನನ್ನು ಬಲವಂತ ಮಾಡುವಂತಿಲ್ಲ’ ಎಂದು ದಿಟ್ಟ ದನಿಯಿಂದ ಹೇಳಿದರು. ಇದನ್ನು ಕೇಳಿ ನ್ಯಾಯಮೂರ್ತಿಗಳು ಬೆಕ್ಕಸಬೆರಗಾಗಿ ಹೋದರು. ಕೊನೆಗೂ ದಂಪತಿ ನಡುವೆ ರಾಜಿಸಂಧಾನ ಮಾಡಿ ವಿವಾಹವನ್ನು ಕೊನೆಗೊಳಿಸಲಾಯಿತು. ಇಲ್ಲದೇ ಹೋಗಿದ್ದರೆ ಆಗಿನ ನಿಯಮದ ಅನುಸಾರ ರುಕ್ಮಾಬಾಯಿ ಜೈಲಿಗೆ ಹೋಗಬೇಕಿತ್ತು! ಕೋರ್ಟ್​ನಲ್ಲಿ ಇವರು ಮಾಡಿದ ವಾದ ಅದೆಷ್ಟು ಪ್ರಭಾವ ಬೀರಿತ್ತೆಂದರೆ, ‘ಸಮ್ಮತಿ ವಯಸ್ಸು ಕಾಯ್ದೆ’ ಅನ್ನು ಸರ್ಕಾರ 1891ರ ಜನವರಿಯಲ್ಲಿ ಜಾರಿಗೆ ತಂದಿತು!

    ಎರಡನೇ ಅಧ್ಯಾಯ ಆರಂಭ: ಇಲ್ಲಿಂದಲೇ ರುಕ್ಮಾಬಾಯಿಯ ಎರಡನೇ ಅಧ್ಯಾಯ ಶುರುವಾದದ್ದು. ತನ್ನ ಕನಸಿನ ವೈದ್ಯ ವೃತ್ತಿಯನ್ನು ಮಾಡಲು ಅವರು ಪಣತೊಟ್ಟರು. ಇಂಗ್ಲಿಷ್ ಭಾಷಾ ಕೋರ್ಸ್ ಸೇರಿಕೊಂಡರು. ವೈದ್ಯಕೀಯ ಕೋರ್ಸ್ ಪಡೆಯಲು ಲಂಡನ್​ಗೆ ತೆರಳಿದರು. ಅಲ್ಲಿ ವೈದ್ಯೆಯಾಗುವ ಮೂಲಕ ‘ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ’ ಎನಿಸಿಕೊಂಡರು. ಸೂರತ್​ನ ಮೊದಲ ಮುಖ್ಯ ವೈದ್ಯಾಧಿಕಾರಿ ಹುದ್ದೆ ಸಿಕ್ಕಿತು. ಮಹಿಳೆಯೆಂಬ ಕಾರಣಕ್ಕೆ ರುಕ್ಮಾಬಾಯಿ ಅಲ್ಲಿ ಅವಮಾನ ಎದುರಿಸಿದ್ದರೂ ಇದೆ. ಆದರೆ ಯಾವುದಕ್ಕೂ ಈ ಹೆಣ್ಣು ಜಗ್ಗಲಿಲ್ಲ, ಬಗ್ಗಲಿಲ್ಲ.

    ಅದೇ ವೇಳೆ ರಕ್ಷಣಾ ಸಮಿತಿಯನ್ನೂ ಶುರು ಮಾಡಿದರು. ಬಾಲ್ಯ ವಿವಾಹದ ವಿರುದ್ಧ ದನಿ ಎತ್ತಿದರು. ಮುಸ್ಲಿಂ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಹಲವಾರು ಲೇಖನಗಳನ್ನು ಬರೆದ ಅವರು, ‘ಪರ್ದಾ’ ಪದ್ಧತಿ ವಿರುದ್ಧವೂ ದನಿ ಎತ್ತಿದರು. 35 ವರ್ಷ ಸೂರತ್, ರಾಜಕೋಟ್ ಹಾಗೂ ಮುಂಬೈನಲ್ಲಿ ವೈದ್ಯ ವೃತ್ತಿ ಕೈಗೊಂಡರು. ಕೊನೆಯ ತನಕ ಒಂಟಿಯಾಗಿಯೇ ಉಳಿದು 1955ರ ಸೆ.25ರಂದು ಕೊನೆಯುಸಿರೆಳೆದರು.

    ಮಹಿಳಾ ಹಕ್ಕಿಗೆ ನಾಂದಿ ಹಾಡಿದ ರಮಾಬಾಯಿ

    ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ ಹೆಣ್ಣು, ಸಮಾಜದ ಮುಖ್ಯವಾಹಿನಿಗೆ ಬಂದು, ತನಗೂ ಹಕ್ಕಿದೆ ಎಂದು ಘಂಟಾಘೋಷವಾಗಿ ಇಂದು ಹೇಳಬಲ್ಲಳು ಎಂದರೆ ಅದರ ಹಿಂದಿರುವ ಶಕ್ತಿ ರಮಾಬಾಯಿ ರಾನಡೆ. 19ನೇ ಶತಮಾನದಲ್ಲಿಯೇ ಮೊದಲ ಬಾರಿಗೆ ಮಹಿಳಾ ಹಕ್ಕನ್ನು ಪ್ರತಿಪಾದಿಸಿದ ಚೇತನ ಇವರು. 1863ರ ಜ.25ರಂದು ಜನಿಸಿದ ರಮಾಬಾಯಿ ಅವರು 11ನೇ ವಯಸ್ಸಿಗೆ ಮಹಾದೇವ ಗೋವಿಂದ ರಾನಡೆ ಅವರ ಜತೆ ಮದುವೆಯಾಗುವಾಗ ಅಕ್ಷರ ಜ್ಞಾನವೇ ಇರಲಿಲ್ಲ. ಆದರೆ ಮಹಾದೇವ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಮೊದಲ ಶ್ರೇಣಿಯಲ್ಲಿ ಪದವಿ ಪಡೆದ ಖ್ಯಾತ ವಕೀಲರು! ತಮ್ಮ ಗಂಡನಿಗೆ ಸರಿಸಮಾನಳಾಗಿ ನಿಲ್ಲಬೇಕೆಂಬ ಛಲ ಹೊಂದಿದ್ದ ಈ ಬಾಲಕಿಗೆ ನೆರವಾಗಿದ್ದು ಆಕೆಯ ಪತಿಯೇ. ಹೆಣ್ಣಿಗೇಕೆ ಶಿಕ್ಷಣ ಎಂಬ ಗೊಡ್ಡು ಸಂಪ್ರದಾಯದ ನಡುವೆಯೂ, ಹೆಂಡತಿಗೆ ಅಕ್ಷರಾಭ್ಯಾಸ ಮಾಡಿಸಿದರು. ರಮಾಬಾಯಿ ಗಂಡನಿಂದಲೇ ಮರಾಠಿ ಸಾಹಿತ್ಯ, ಇತಿಹಾಸ, ಭೂಗೋಳ ಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್​ನಲ್ಲಿ ಪರಿಣತರಾದರು! ಮುಂದೆ ಆರ್ಯ ಮಹಿಳಾ ಸಮಾಜವನ್ನು ಸ್ಥಾಪಿಸಿದರು. ಮುಂಬೈನಲ್ಲಿ ಮೊದಲ ಹಿಂದೂ ಲೇಡೀಸ್ ಕ್ಲಬ್ ಸ್ಥಾಪಿಸಿ, ಅಲ್ಲಿ ಮಹಿಳೆಯರಿಗೆ ಶಿಕ್ಷಣ, ಟೈಲರಿಂಗ್ ತರಬೇತಿ ನೀಡಿದರು. ಪುಣೆಯಲ್ಲಿ ಬಾಲಕಿಯರ ಶಾಲೆ ತೆರೆದು ಬಾಲಕಿಯರಿಗೆ ಅಕ್ಷರಾಭ್ಯಾಸ ಮಾಡಿಸಿದರು. 1901ರಲ್ಲಿ ಪತಿ ತೀರಿಕೊಂಡಾಗ, ಹೆಣ್ಣುಮಕ್ಕಳಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟರು. ಅನಿಷ್ಠ ಎಂದೇ ಬಿಂಬಿತರಾಗಿದ್ದ ವಿಧವೆಯರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಿ, ಅವರಿಗೂ ಅಕ್ಷರಾಭ್ಯಾಸ ಮಾಡಿಸಿದರು. ಅವರು ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡಲು ವಿವಿಧ ತರಬೇತಿಗಳನ್ನೂ ಕೊಡಿಸಿದರು. 61ನೇ ವಯಸ್ಸಿನಲ್ಲಿ ನಿಧನರಾದ ರಮಾ, ಕೊನೆತನಕ ಮಹಿಳೆಯರ ಹಕ್ಕಿಗಾಗಿ ಹೋರಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts