ತುಕ್ಕು ಹಿಡಿಯುತ್ತಿವೆ ಹೊಗೆ ದೋಣಿಗಳು

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸದ್ಯಕ್ಕೆ ಮರೀಚಿಕೆ. ಒಂದೊಮ್ಮೆ ಮರಳುಗಾರಿಕೆ ಪರವಾನಗಿ ನೀಡಿದರೂ ಕೂಡ ಲಕ್ಷಾಂತರ ರೂ. ವೆಚ್ಚದ ದೋಣಿಗಳು ನಾನಾ ಪೊಲೀಸ್ ಸ್ಟೇಷನ್‌ನಲ್ಲಿ, ನದಿ ತೀರದಲ್ಲಿ ಗೆದ್ದಲು, ತುಕ್ಕು ಹಿಡಿದು ಬಿದ್ದಿರುವುದರಿಂದ ವಹಿವಾಟು ವೇಗ ಪಡೆಯುವುದು ಕಷ್ಟ.

ಎರಡು ವರ್ಷದಿಂದ ಮರಳುಗಾರಿಕೆ ವಿಷಯದಲ್ಲಿ ಹಸಿರು ಪೀಠ, ರಾಜಕೀಯ ಕೆಸರೆರಚಾಟ ಸೇರಿದಂತೆ ಹಲವಾರು ಕಾರಣದಿಂದ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ದೋಣಿಗಳನ್ನು ಮುಟ್ಟುಗೋಲು ಹಾಕಿ ಎಲ್ಲೆಂದರಲ್ಲಿ ಇರಿಸಿದ್ದಾರೆ. ಕೋಟ, ಮಲ್ಪೆ, ಶಂಕರನಾರಾಯಣ, ಕಾಪು, ಕಾರ್ಕಳ, ಗಂಗೊಳ್ಳಿ, ಕಂಡ್ಲೂರು, ಬ್ರಹ್ಮಾವರ, ಹೆಬ್ರಿ, ಪೊಲೀಸ್ ಠಾಣೆಗಳಲ್ಲಿ ಮುಟ್ಟುಗೋಲು ಹಾಕಿದ ದೋಣಿಗಳಿವೆ. ಹಾಗೆಯೇ ಕೆಲಸ ಇಲ್ಲದೆ ನದಿ ತೀರ ಭಾಗವಾದ ನೀಲಾವರ, ಮಾಬುಕಳ, ಉಪ್ಪೂರು ಸೇರಿದಂತೆ ಹಲವೆಡೆ ದೋಣಿಗಳು ಅನಾಥವಾಗಿ ಬಿದ್ದಿವೆ.

ಸಾಂಕ್ರಾಮಿಕ ರೋಗ ಹರಡುವ ಭೀತಿ: ಕೆಲವೇ ದಿನದಲ್ಲಿ ಮಳೆಗಾಲ ಆರಂಭವಾಗಲಿದ್ದು, ತೆರೆದ ದೋಣಿಗಳಲ್ಲಿ ನೀರು ತುಂಬಿ, ಅದರಿಂದ ಹಲವಾರು ಸಾಂಕ್ರಾಮಿಕ ರೋಗಗಳು ಉಂಟಾಗುವ ಸಾಧ್ಯತೆ ಇದೆ. ಕಳೆದ ವರ್ಷ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವಸತಿ ಗೃಹ ಬಳಿ ಇರಿಸಲಾದ ದೋಣಿಯಲ್ಲಿ ನೀರು ತುಂಬಿ ಹಲವಾರು ಜೀವ ಜಂತುಗಳು ಹುಟ್ಟಿಕೊಂಡು ಆತಂಕ ಸೃಷ್ಟಿಸಿದ್ದನ್ನು ‘ವಿಜಯವಾಣಿ’ ವರದಿ ಮಾಡಿತ್ತು. ಬಳಿಕ ಅಂದಿನ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ದೋಣಿಯನ್ನು ಮಗುಚಿ ಹಾಕುವಂತೆ ಆದೇಶ ನೀಡಿದ್ದರು. ಬೃಹತ್ ದೋಣಿ ಮಗುಚಿ ಹಾಕಲು ನಾಲ್ಕಾರು ಮಂದಿಗೆ ಅಸಾಧ್ಯವಾದುದರಿಂದ ರಂಧ್ರ ಕೊರೆದು ನೀರನ್ನು ಹೊರಹಾಕಿದ ಘಟನೆ ಕೂಡ ಕೆಲವು ಠಾಣೆಗಳಲ್ಲಿ ನಡೆದಿದೆ. ಈ ರೀತಿಯಲ್ಲೂ ದೋಣಿಗಳಿಗೆ ಹಾನಿಯಾಗಿದೆ.

ಕೆಲವು ಮಂದಿ ದೋಣಿಯನ್ನು ಠಾಣೆಯಿಂದ ಕೆಲವು ಕರಾರಿನ ಮೇಲೆ ಹಣ ನೀಡಿ ಕೊಂಡು ಹೋದವರು ಇದ್ದಾರೆ. ಪರವಾನಗಿ ಇದ್ದವರ ದೋಣಿ ಹಾಳಾದ ಕುರಿತು ಸರ್ಕಾರದ ಗಮನ ಸೆಳೆದು ಕಾನೂನು ತಿದ್ದುಪಡಿ ಮಾಡಲು ಒತ್ತಾಯಿಸುತ್ತೇವೆ.
ಸತ್ಯರಾಜ್ ಬಿರ್ತಿ ಉಪಾಧ್ಯಕ್ಷರು ಉಡುಪಿ ಜಿಲ್ಲಾ ಹೊಗೆ ದೋಣಿ ಕಾರ್ಮಿಕರ ಸಂಘ