ಆಂಡ್ರೆ ರಸೆಲ್​ ಅಬ್ಬರದಾಟ: ಕೋಲ್ಕತ ನೈಟ್​ರೈಡರ್ಸ್​ಗೆ 6 ವಿಕೆಟ್​ ಜಯ

ಕೋಲ್ಕತ: ಆಂಡ್ರೆ ರಸೆಲ್​ (49*) ಅಬ್ಬರದಾಟ ಮತ್ತು ನಿತೀಶ್​ ರಾಣಾ (68) ಗಳಿಸಿದ ಅರ್ಧಶತಕದ ನೆರವಿನಿಂದ ಕೋಲ್ಕತ ನೈಟ್​ರೈಡರ್ಸ್​ ತಂಡ ಸನ್​ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 6 ವಿಕೆಟ್​ಗಳ ಜಯ ದಾಖಲಿಸಿದೆ.

182 ರನ್​ ಗುರಿ ಬೆನ್ನತ್ತಿದ ಕೆಕೆಆರ್​ ತಂಡ 19.4 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 183 ರನ್​ ಗಳಿಸಿತು. ಇನಿಂಗ್ಸ್​ ಆರಂಭಿಸಿದ ಕೆಕೆಆರ್​ಗೆ ಆರಂಭದಲ್ಲೇ ಆಘಾತ ಎದುರಾಯಿತು. ಕ್ರಿಸ್​ ಲ್ಯಾನ್​ 7 ರನ್​ ಗಳಿಸಿ ಔಟಾದರು. ನಂತರ ಜತೆಯಾದ ಕನ್ನಡಿಗ ರಾಬಿನ್​ ಉತ್ತಪ್ಪ (35) ಮತ್ತು ನಿತೀಶ್​​ ರಾಣಾ ಎರಡನೇ ವಿಕೆಟ್​ಗೆ ಉತ್ತಮ ಜತೆಯಾಟವಾಡಿದರು. ಇವರಿಬ್ಬರೂ ಔಟಾದ ನಂತರ ಕ್ರೀಸ್​ಗೆ ಬಂದ ಆಂಡ್ರೆ ರಸೆಲ್​ ತಂಡವನ್ನು ಜಯದ ದಡ ಸೇರಿಸಿದರು.

ಇದಕ್ಕೂ ಮುನ್ನ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಮಾಜಿ ಚಾಂಪಿಯನ್ ಸನ್​ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 181 ರನ್​ ಗಳಿಸಿತ್ತು. ಮುಂದಿನ ವಾರ ಅಂತಾರಾಷ್ಟ್ರೀಯ ಕ್ರಿಕೆಟ್ ನಿಷೇಧ ಶಿಕ್ಷಾವಧಿ ಪೂರ್ಣಗೊಳಿಸಲಿರುವ ಆಸ್ಟ್ರೇಲಿಯಾದ ತಾರಾ ಆಟಗಾರ ಡೇವಿಡ್ ವಾರ್ನರ್ (85) ಐಪಿಎಲ್​ನ ಈ ಸೀಸನ್​ನ ಮೊದಲ ಪಂದ್ಯದಲ್ಲಿ ಗಳಿಸಿದ ಭರ್ಜರಿ ಅರ್ಧ ಶತಕ ಗಳಿಸಿ ತಂಡ ಸವಾಲಿನ ಮೊತ್ತ ಗಳಿಸಲು ನೆರವಾಗಿದ್ದರು. ಉಳಿದಂತೆ ಹೈದರಾಬಾದ್​ ಪರ ಜಾನಿ ಬೇರ್ಸ್ಟೊವ್ 39 ಮತ್ತು ವಿಜಯ್​ ಶಂಕರ್​ 40* ರನ್​ ಗಳಿಸಿದರು.