ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆ ಜ್ಞಾನ ವೃದ್ಧಿ

ಎನ್.ಆರ್.ಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕೇಂದ್ರದಿಂದಾಗಿ ಇಂದು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ ಎಂದು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಶೃಂಗೇರಿ ಕ್ಷೇತ್ರದ ಸಮನ್ವಯಾಧಿಕಾರಿ ಶಕುಂತಲಾ ಹೇಳಿದರು.

ಅಂಬೇಡ್ಕರ್ ಭವನದಲ್ಲಿ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಸೌಂದರ್ಯ ಜ್ಞಾನ ವಿಕಾಸ ಕೇಂದ್ರದ 8ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಮಹಿಳೆಯೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಕಲ್ಪನೆಯೊಂದಿಗೆ ಮಹಿಳೆಯರಿಗೆ ಅಗತ್ಯ ವಿಷಯ ಹಾಗೂ ಸಾಮಾಜಿಕ ಜ್ಞಾನದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ಮಹಿಳೆಯರಿಗೆ ಯೋಜನೆ ಮೂಲಕ ನೀಡಲಾಗುತ್ತಿದೆ. ಇದರಿಂದ ಅವರ ಪ್ರತಿಭೆಗನುಗುಣವಾಗಿ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು.

ಈ ಉದ್ದೇಶದಿಂದಾಗಿ ಹೇಮಾವತಿ ಅಮ್ಮನವರು ಸುಮಾರು 2,600 ಜ್ಞಾನ ವಿಕಾಸ ಮಹಿಳಾ ಕೇಂದ್ರಗಳನ್ನ ಸ್ಥಾಪನೆ ಮಾಡಿದ್ದಾರೆ. ಇದರಲ್ಲಿ 4 ರಿಂದ 5 ಸಂಘಗಳ ಸುಮಾರು 50 ಜನರನ್ನು ಸೇರಿಸಿ ಒಂದು ಜ್ಞಾನ ವಿಕಾಸ ಕೇಂದ್ರವಾಗಿ ಸ್ಥಾಪಿಸಲಾಗಿದೆ. ಹೆಚ್ಚಿನ ಸಂಘಗಳು ಗ್ರಾಮ ಮಟ್ಟದಲ್ಲಿಯೇ ಸ್ಥಾಪಿತವಾಗಿವೆ. ಗ್ರಾಮೀಣ ಮಹಿಳೆಯರನ್ನು ಸಬಲೀಕರಣ ಮಾಡಿ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ತರಲು ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.